ಮದುವೆ ಅನುಭೂತಿ

ಬಂಧ ಬಣ್ಣಿಸುವ ಒಡಪುಗಳು

MH-Team

ಸುಷ್ಮಾ ಸವಸುದ್ದಿ

ಉತ್ತರ ಕರ್ನಾಟಕ ಭಾಗದ ಮದುವೆ ಶಾಸ್ತ್ರಗಳ ಮೆರುಗು ಹೆಚ್ಚಿಸುವ ಒಡಪುಗಳು ಈ ಭಾಗದ ಸಂಸ್ಕೃತಿಯ ಪ್ರತೀಕ. ಒಡಪು ಎನ್ನುವುದು ಜನಪದ ಶೈಲಿಯ ಒಗಟುಗಳು. ಮದುವೆಯಲ್ಲಿ ವಧು– ವರರು ಒಗಟಿನ ರೂಪದಲ್ಲಿ ತಮ್ಮ ಸಂಗಾತಿಯನ್ನು ಬಣ್ಣಿಸಿ, ಅವರ ಹೆಸರು ಹೇಳುವುದೇ ಒಡಪುಗಳ ವೈಶಿಷ್ಠ್ಯ. ಇದು ಕಾವ್ಯಾತ್ಮಕವಾಗಿ, ಪ್ರಾಸಬದ್ಧವಾಗಿ ಇದ್ದು, ಕೇಳುವ ಕಿವಿಗೆ ಹಿತ ಎನ್ನಿಸುತ್ತವೆ.

ಈ ಒಡಪುಗಳು ಹೆಣ್ಣು– ಗಂಡಿನ ಬಾಂಧವ್ಯ, ಪ್ರೀತಿ, ಮುನಿಸು, ಹಿರಿಮೆ, ಊರಿನ ಗರಿಮೆಗಳಿಗೆ ಉಪಮೇಯಗಳನ್ನು ಸೇರಿಸಿ ಬಣ್ಣಿಸಲಾಗುತ್ತದೆ.

ವರನನ್ನು ಎದುರುಗೊಳ್ಳುವಾಗ, ಆರತಿ ಮಾಡುವಾಗ, ಮೊದಲ ಬಾರಿಗೆ ವಧು– ವರರು ಮನೆ ಪ್ರವೇಶಿಸುವಾಗ, ಅರಿಶಿನ ಶಾಸ್ತ್ರದಲ್ಲಿ, ಬೀಗರು ಬಂದು ಹೆಸರು ಕೇಳುವಾಗಲೆಲ್ಲ ವಧು– ವರರು ಒಡಪು ಕಟ್ಟಿ ಸಂಗಾತಿಯ ಹೆಸರು ಹೇಳಬೇಕು. ನೆರೆದ ಸ್ನೇಹಿತರು, ಸಂಬಂಧಿಕರು, ಸಮವಯಸ್ಕರು ಒಡಪು ಹೇಳದ ಹೊರತು ಆರತಿ ತಟ್ಟೆ ಕೆಳಗಿಡಲು ಬಿಡವುದಿಲ್ಲ. ಮನೆ ಒಳಗೆ ಪ್ರವೇಶ ಕೊಡದೇ ಸತಾಯಿಸುವುದನ್ನು ನೋಡುವುದೇ ಚಂದ.

ಒಡಪುಗಳು ಮೂಲತಃ ಹಳ್ಳಿಯ ಸೊಗಡಿನ ಭಾಗ. ಬಾಯಿಯಿಂದ ಬಾಯಿಗೆ ರೂಢಿಗತವಾಗಿ ಬಂದವುಗಳು. ಒಡಪುಗಳ ಸಾಹಿತ್ಯ, ಸೃಜನಾತ್ಮಕತೆ ನಮ್ಮ ಜಾನಪದಕ್ಕೆ ಇರುವ ಮೆರುಗನ್ನು ಇಮ್ಮಡಿಗೊಳಿಸುತ್ತವೆ. ಈಗಿನ ಯುವ ಜನಾಂಗಕ್ಕೆ ಒಡುಪುಗಳು ಅಷ್ಟಾಗಿ ಪರಿಚಯವಿಲ್ಲ. ಮದುವೆ ಸಮಯದಲ್ಲಿ ಹಿರಿಯರು ವಧು– ವರರಿಗೆ ಕಲಿಸಿ ಕೊಡುತ್ತಾರೆ.

ವರನನ್ನು ಎದುರುಗೊಳ್ಳುವಾಗ ಹೇಳುವ ಒಡಪೊಂದು ಇಲ್ಲಿದೆ.

ಹೂಂ ಅಂದರ ಅರವತ್ತ ಹರದಾರಿ,
ಹಾ ಅಂದರ ಮೂವತ್ತ ಹರದಾರಿ
ಹಾರುವ ಕುದುರೆ ಏರಿ,
ಚೀಲದಾಗ ಅಮೀನಗಡ ಕರದಂಟು,
ಇಳಕಲ್‌ ಸೀರೆ, ಗುಳೇದಗುಡ್ಡದ ಕುಬಸ,
ಬಾಗಲಕೋಟೆ ಬಣ್ಣ, ಬನಶಂಕರಿ ಎಲಿ,
ಒಂದು ತೂತಿನಾಗ ಊದಿದರೆ
ಒಂಭತ್ತು ತೂತಿನಾಗ ಬಂಔ ಅನ್ನುವ
ಭಾಜಾ ತಗೊಂಡು
ಹೈದಾರಾಬಾದಿನ ನಿಜಾಮ, ದಿಲ್ಲಿ ನವಾಬ,
ಕೆರಕಲಮಟ್ಟಿ ನಾಡಗೌಡ, ಹೊನ್ನಾಳ ದೇಸಾಯಿ,
ಅಂಬಲಝೇರಿ ನಾಯಕ, ಹಲಗಲಿ ಸರನಾಯಕರನ್ನು ಕರಕೊಂಡು ಬಂದು
 ದಾರಿ ಉದ್ದಕ್ಕೂ ಮೈಜುಂ ಎನ್ನಿಸುವ ಕೃಷ್ಣಾ ನದಿ,
 ಹೊಳೆಗೆ ಇಳಿಲಿಲ್ಲ. ಮಾರಿ ತೊಳಿಯಲಿಲ್ಲ. ನೀರ ನೋಡಿ ಹೆದರಿದ ಬಪ್ಪರೇ ಭಾವಾ ಇದೆಂಥಾ ವರಾನವ್ವ ...

–ಈ ಒಡಪು ವರ ಬರುವ ದಾರಿಯನ್ನೂ, ಬಾಗಲಕೋಟೆ ಜಿಲ್ಲೆಯ ವೈಶಿಷ್ಠ್ಯವನ್ನೂ ವರ್ಣಿಸುತ್ತದೆ. ಅಲ್ಲಿನ ಪ್ರಮುಖ ದೇವಾಲಯಗಳು, ಅಲ್ಲಿನ ವಿಶಿಷ್ಟಗಳನ್ನು, ಆ ಭಾಗವನ್ನು ಆಳಿದವರನ್ನು, ಆ ನೆಲದ ನದಿಯನ್ನು ಬಣ್ಣಿಸುವ ರೀತಿ ಸ್ವಾರಸ್ಯಕರ. ಹೀಗೆ ಒಡಪುಗಳು ಭಾಂದವ್ಯದ ಜತೆ ಜೆತೆಗೆ ನಮ್ಮ ಸಾಮಾಜಿಕ ನೆಲೆಯೊಂದಿಗೆ ಒಡನಾಟ ಹೊಂದಿವೆ.

ಹೆಂಡತಿಯರು ಗಂಡನಿಗೆ ಹೇಳುವ ಕೆಲ ಒಡಪುಗಳು:

ಉಪ್ಪಿಟ್ಟು ಉದುರು ಭಾಳ
ಉಳ್ಳಾಗಡ್ಡಿ ಪದರು ಭಾಳ
ನನ್ನ ಮ್ಯಾಲ ಪತಿರಾಯನ ನೆದರು ಭಾಳ

ಕರಿಸೀರಿ ಉಟ್ಟು ಕೆರಿ ನೀರಿಗೆ
ಹೋಗುವಾಗ
ವಾರಿಗೆ ಗೆಳತಿಯರು ಸೆರಗು ಹಿಡಿದು
ಕೇಳುವಾಗ
ಇಂತವರ (ತಂದೆಯ ಮನೆತನದ
ಹೆಸರು)ಮಗಳಾದೆ
ಇಂತವರ (ಮಾವನ ಮನೆತನದ ಹೆಸರು)
ಸೊಸೆಯಾದೆ
ಊರಿಗೆ ಉತ್ತಮಳಾದೆ
ನನ್ನವರ ಮನೆಗೆ ಮಹಾಲಕ್ಷ್ಮಿಯಾದೆ
ಪತಿಗೆ ಒಪ್ಪುವ ಸತಿಯಾದೆ (ಪತಿಯ ಹೆಸರು) 

ಕಟ್ಟಿ ನೋಡಿದ್ರ ಕಟ್ಟಾಣಿ ಸರ ಅಲ್ಲ
ಇಟ್ಟು ನೋಡಿದ್ರ ಕಿವಿಯ ಬುಗುಡಿ ಅಲ್ಲ
ಏಷ್ಟು ನೋಡಿದ್ರೂ ಸೂರಿಗಿ ನಾಗರ ಸೀರಿ ಅಲ್ಲ
ತೊಟ್ಟ ನೋಡಿದ್ರ ಕುತನಿ ಕುಬುಸ ಅಲ್ಲ
ಖರ್ಜೂರ ಅಲ್ಲ
ಕಲ್ಲಸಕ್ಕರಿ ಪಟ್ನ (ಪೊಟ್ಟಣ)ಅಲ್ಲ
ಬೆಂಡಲ್ಲ -ಬೆತ್ತಾಸಲ್ಲ
ಉಂಡ ಕಡಬ ತಂದು ಉಡಿಯಾಗ ಸುರಿತಾರ
ಕಂಟ್ಯಾನ ಬಾರಿಹಣ್ಣು ತಂದು ಕಡೆತನಕ
ಹಂಗಿಸತಾರ(ಪತಿಯ ಹೆಸರು)

ಪಾಂಡವರು ಅರಗಿನಮನೆಯಿಂದ ಪಾರಾಗಿದ್ದು ಯುಕ್ತಿಯಿಂದ
ಆರತಿ ಮಾಡಿ ರಾಯರ ಹೆಸರು ಹೇಳುವೆನು ಭಕ್ತಿಯಿಂದ(ಗಂಡನ ಹೆಸರು)” 

ಶ್ರೀರಾಮಚಂದ್ರನು ವನವಾಸಕ್ಕೆ ಹೋಗುವಾಗ ಅಯೋಧ್ಯೆಯ ಜನರಿಗೆ ದುಃಖ
ನನ್ನ ಪತಿಯ ಹೆಸರು ಹೇಳತೇನಿ
ಭಾಳ ಕಾಡಬ್ಯಾಡ್ರಿ ಅಕ್ಕ..(ಗಂಡನ ಹೆಸರು) 

ಅಲ್ಲಾವುದ್ದೀನನು ಪದ್ಮಿನಿಯನ್ನು ಕಂಡಿದ್ದು ಗಾಜಿನ ಕನ್ನಡಿಯಲ್ಲಿ
ಶಕುಂತಲೆಯ ಉಂಗುರ ಕಳೆದದ್ದು ನರ್ಮದಾ ನದಿಯಲ್ಲಿ
ನಾನು ಆರತಿ ಮಾಡಿ ಹೆಸರು ಹೇಳತೇನಿ (ಮನೆತನದ ಹೆಸರು) ಮನೆಯಲ್ಲಿ..

ವಧುವನ್ನು ವರೆಸುವ ವರ, ಮದುವೆಯಾದ ಗಂಡಸರೂ ಒಡಪು ಹೇಳಲೇಬೇಕು. ಹೀಗೆ ಗಂಡ ಹೆಂಡತಿಯನ್ನು ಬಣ್ಣಿಸಿ ಹೇಳುವ ಕೆಲ ಒಡಪುಗಳು:

ಹಾಗಲ ಬಳ್ಳಿಗೆ ಹಂದರ ಚಂದ
ದ್ರಾಕ್ಷಿ ಬಳ್ಳಿಗೆ ಗೊಂಚಲು ಚಂದ
ಭೂಮಿಗೆ ಹಸಿರು ಚಂದ
ನನ್ನಾಕಿ ಇನ್ನೂ ಚಂದ (ಹೆಂಡತಿಯ ಹೆಸರು) 

ಹಗ್ಗದಾಗ ಹೊಡೆದ್ರ
ಮಗ್ಗಲದಾಗ ಬರತಾಳ
(ಹೆಂಡತಿಯ ಹೆಸರು) 

ಸ್ನೇಹಿತರ, ಸಂಬಂಧಿಕರ ಸತಾಯಿಸುವ ಪರಿಗೆ ದಂಪತಿಗಳಿಬ್ಬರೂ ನಾಚುತ್ತ, ಒಡಪು ಹೇಳುವ ಸೊಬಗು ಸುತ್ತಲೂ ಸಂಭ್ರಮವನ್ನು ಹಬ್ಬಿಸುವುದರ ಜೊತೆಗೆ ಸಂಬಂಧಗಳನ್ನು ಗಟ್ಟಿಗೊಳಿಸುವ ಸಾರವನ್ನೂ ಹೇಳುತ್ತವೆ.