ಮದುವೆ ಅನುಭೂತಿ

ಮೂರುಗಂಟಿಗೆ ನಂಟಾಗುವ ಶಾಸ್ತ್ರಗಳು- ಸಂಪ್ರದಾಯ ವಿಭಾಗ

MH-Team

ಪೂರ್ಣಿಮಾ ಗೊಂದೆನಾಯ್ಕರ

‘ಮದುವೆ’ ಎನ್ನುವ ಈ ಮೂರು ಅಕ್ಷರದಲ್ಲಿಅಡಗಿದೆ ನೂರು ವರ್ಷದ ಸಂಸಾರದ ಗುಟ್ಟು. ಶಾಸ್ತ್ರೋಕ್ತವಾಗಿ ಹುಡುಗ, ಹುಡುಗಿಯರಿಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಡುವ ಮದುವೆಯೆಂಬ ಈ ಸಂಭ್ರಮಕ್ಕೆ ಪ್ರತಿ ಧರ್ಮದಲ್ಲಿಯೂ ವಿಶೇಷ ಮಹತ್ವವಿದೆ. ವಿವಾಹ ಎಂದರೆ ವಧುವನ್ನು ತಂದೆಯ ಮನೆಯಿಂದ ತನ್ನ ಮನೆಗೆ ಕರೆದೊಯ್ಯುವುದು. 

ಹಿಂದಿನ ಕಾಲದಲ್ಲಿ ಮದುವೆಯ ಸಂಪ್ರದಾಯ ಒಂದು ವಾರಗಳ ಕಾಲ ನಡೆಯುತ್ತಿದ್ದವು. ಕಾಲ ಬದಲಾದಂತೆ ಮದುವೆಗೆ ನೀಡುವ ಸಮಯ ಕೂಡ ಬದಲಾಗಿದೆ. ಈಗಲೂ ಮರ‍್ನಾಲ್ಕು ದಿನಗಳ ಕಾಲ ಮದುವೆ ಆಚರಣೆಗಳು ನಡೆಯುತ್ತವೆ. ಮದುವೆ ನಿಮಿತ್ತ ನಡೆಯುವ ಸಂಪ್ರದಾಯಗಳು ಇಲ್ಲಿವೆ ನೋಡಿ. 

ಬಳೆ ಶಾಸ್ತ್ರ: ಮದುಮಗಳಿಗೆ ಬಳೆ ತೊಡೆಸುವುದು ಒಂದು, ಹೆಣ್ಣಿಗೆ ಮುತ್ತೈದೆ ಭಾಗ್ಯದ ಅವಿಭಾಜ್ಯ ಅಂಗ. ಮದುಮಗಳಿಗೆ ಕೈತುಂಬ ಹಸಿರು ಬಳೆ ತೊಡಿಸಲಾಗುವುದು. ಮದುವೆ ನಿಮಿತ್ತ ಮನೆಯವರು, ಸಂಬಂಧಿಕರು ಹಾಗೂ ಊರಿನ ಜನರಿಗೂ ಬಳೆ ತೊಡಿಸುವ ಶಾಸ್ತ್ರ ಮದುವೆಯ ಸಂಭ್ರಮ ಹೆಚ್ಚಿಸುತ್ತದೆ. 

ಹಂದರ ಹಾಲಗಂಬ ಶಾಸ್ತ್ರ:

ಇದು ವರನ ಮನೆ ಕಡೆ ನಡೆಯುವ ಶಾಸ್ತ್ರ. ಮೊದಲೆಲ್ಲ ಕಾಡಿಗೆ ತೆರಳಿ ಕಟ್ಟಿಗೆ ತಂದು ವರನ ಮನೆ ಎದುರು ಚಪ್ಪರ ಹಾಕಲಾಗುತ್ತಿತ್ತು. ತೆಂಗಿನ ಗರಿಯ ಚಪ್ಪರ ಮದುವೆಗೆ ವಿಶೇಷ ಮೆರುಗು ನೀಡುತ್ತಿತ್ತು. ಈ ಶಾಸ್ತ್ರ ನಡೆಯೋದು ವರನ ಸೋದರ ಮಾವನಿಂದ, ಮಾವನನ್ನು ಊರ ಹೊರಗಿನ ಹನುಮಂತನ ದೇವಸ್ಥಾನಕ್ಕೆ ಕರೆದೊಯ್ದು ಅವರಿಗೆ ಪೂಜೆ ಮಾಡಿ, ಮೈ ತುಂಬಾ ಬಣ್ಣ ಹಾಕಿ, ಊರ ತುಂಬಾ ಹಂದರ ಹಾಲಗಂಬದ ಮೆರವಣಿಗೆ ಮೂಲಕ ತಂದು ಹಂದರ ಹಾಕುವ ಮನೆಯ ಬಲಭಾಗದಲ್ಲಿ ನೆಡಸಲಾಗುತ್ತದೆ. ಮದುಮಗನ ಮದುವೆ ಮುಗಿದು ಕಂಕಣ ಬಿಚ್ಚಿದ ಮೇಲೆ ಈ ಕಂಬವನ್ನು ತೆಗೆಯಲಾಗುತ್ತದೆ. 

ಒಳ್ಳಕಲ್ಲು, ಬಿಸುವಕಲ್ಲು ಪೂಜೆ: ಮದುವೆಗೆ ಮೊದಲು ಈ ಶಾಸ್ತ್ರ ಮಾಡಲೇಬೇಕು. ಮನೆಯಲ್ಲಿ ಒಳಕಲ್ಲು, ಬಿಸುವಕಲ್ಲು ಪೂಜೆ ಮಾಡಲಾಗುತ್ತದೆ. ಇವುಗಳನ್ನು ದೇವರ ರೂಪದಲ್ಲಿ ಕಾಣಲಾಗುತ್ತದೆ. ಈ ಸಂಪ್ರದಾಯ ಹಿಂದಿನಿಂದ ರೂಢಿಸಿಕೊಂಡು ಬಂದಿದ್ದು, ಮನೆಯಲ್ಲಿ ಇರದಿದ್ದರೆ ಹೊಸದನ್ನು ಖರೀದಿಸುತ್ತಾರೆ. ಇಲ್ಲವೆ ಅಕ್ಕಪಕ್ಕದ ಮನೆಯವರ ಮನೆಯಿಂದ ತಂದು ಪೂಜೆ ಮಾಡಲಾಗುತ್ತದೆ.

ಶಾವಿಗೆ ಹೊಸೆಯುವ ಶಾಸ್ತ್ರ: ವರನ ಮನೆ ಕಡೆ ಮಾಡುವ ಶಾಸ್ತ್ರಗಳಲ್ಲಿ ಇದು ಒಂದು, ಶಾವಿಗೆ ಹೊಸೆಯುವ ಮಣೆಯ ಮೇಲೆ ಶಾವಿಗೆ ಹೊಸೆಯುತ್ತಾರೆ. ಮದುವೆ ಶಾಸ್ತ್ರಕ್ಕೆಂದೆ ಐದು ಮುತ್ತೈದೆಯರಿಗೆ ಉಡಿ ತುಂಬಿ, ಅವರ ಕಡೆಯಿಂದ ಶಾವಿಗೆ ಹೊಸೆಯುವ ಶಾಸ್ತ್ರ ಮಾಡಿಸುತ್ತಾರೆ.

ಹಳದಿ ಅಥವಾ ಅರಿಶಿನ ಶಾಸ್ತ್ರ:

ಹಿಂದೂ ಧರ್ಮದಲ್ಲಿ ಮದುವೆಗೂ ಎರಡು– ಮೂರು ದಿನಗಳಿಗೂ ಮುನ್ನ ಅರಿಶಿನ ಅಥವಾ ಹಳದಿ ಶಾಸ್ತ್ರವನ್ನು ನೆರವೇರಿಸುವ ಸಂಪ್ರದಾಯವಿದೆ. ಇದು ಧಾರ್ಮಿಕ ಮಹತ್ವವನ್ನು ಹೊಂದಿದೆ. ಈ ಆಚರಣೆಯಲ್ಲಿ ವಿವಾಹ ಮಾಡಿಕೊಳ್ಳಲಿರುವ ವಧು ಮತ್ತು ವರರಿಗೆ ಸಂಪ್ರದಾಯಬದ್ಧವಾಗಿ ಅರಿಶಿನದ ಪುಡಿಯನ್ನು ಕೊಬ್ಬರಿ ಎಣ್ಣೆಯಲ್ಲಿ ಬೆರೆಸಿ ಹಚ್ಚಲಾಗುತ್ತದೆ. ಇದು ವಧು– ವರರ ಮುಖದಲ್ಲಿ ಮದುವೆಯ ಕಳೆಯನ್ನು ತುಂಬುವುದು ಮಾತ್ರವಲ್ಲದೇ ಅವರನ್ನು ನಕಾರಾತ್ಮಕ ಶಕ್ತಿಯಿಂದಲೂ ರಕ್ಷಿಸುತ್ತದೆ ಎನ್ನುವ ನಂಬಿಕೆಯಿದೆ.

ಮೆಹಂದಿ ಸಂಪ್ರದಾಯ:

ವಿವಾಹದ ಹಿಂದನ ದಿನ ವಧು– ವರರು ಕೈಗೆ ಮೆಹಂದಿ ಹಚ್ಚುವ ಸಂಪ್ರದಾಯವಿದೆ. ಅದು ಇತ್ತಿಚಿಗಂತೂ ಟ್ರೆಂಡಿಯಾಗೇ ನಡೆಯುತ್ತಿದೆ. ಇಲ್ಲಿ ನಾವು ಕೇವಲ ವಧುವಿಗೆ ಮಾತ್ರವಲ್ಲದೇ, ವರನಿಗೂ ಮೆಹಂದಿ ಹಚ್ಚುತ್ತೇವೆ. ಈ ಸಂಪ್ರದಾಯ ಆದಿಕಾಲದಿಂದಲೂ ನಡೆದು ಬರುತ್ತಿದೆ. ಹಿಂದೂಗಳಲ್ಲಿ ಮೆಹಂದಿ ವೈವಾಹಿಕ ಜೀವನದ ಆನಂದದ ಸಂಕೇತವಾಗಿ ಪರಿಗಣಿಸಲಾಗುತ್ತದೆ. ಈ ಸಂಪ್ರದಾಯ ವಧು – ವರರ ಸೌಂದರ್ಯವನ್ನು ಹೆಚ್ಚಿಸುವುದು ಮಾತ್ರವಲ್ಲದೇ, ಇದನ್ನು ಅದೃಷ್ಟ, ಪ್ರೀತಿ ಮತ್ತು ಸಮೃದ್ಧಿಯ ಸಂಕೇತವಾಗಿಯೂ ನೋಡಲಾಗುತ್ತದೆ.

ಸಪ್ತಪದಿ:

ಸಪ್ತಪದಿಯೆಂದರೆ, ವಧು– ವರರು ಜೊತೆಯಾಗಿ ಅಗ್ನಿ ದೇವನಿಗೆ ಏಳು ಹೆಜ್ಜೆ ಪ್ರದಕ್ಷಿಣೆ ಹಾಕುವ ಸಂಪ್ರದಾಯವಾಗಿದೆ. ಇಲ್ಲಿ ಅಗ್ನಿಗೆ ಏಳು ಸುತ್ತುಗಳನ್ನು ಸುತ್ತಲಾಗುತ್ತದೆ. ಈ ಏಳು ಸುತ್ತುಗಳಲ್ಲೂ ಅವರು ಏಳು ಪ್ರತಿಜ್ಞೆಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಇದನ್ನೇ ಸಪ್ತಪದಿಯೆಂದು ಕರೆಯಲಾಗುತ್ತದೆ. ಈ ಸಮಯದಲ್ಲಿ, ವಧು ಮತ್ತು ವರರು ಪರಸ್ಪರ ತಮ್ಮ ಪ್ರೀತಿಗೆ ಭರವಸೆಯನ್ನು ನೀಡುತ್ತಾರೆ. ಮೊದಲ ಮೂರು ಸುತ್ತುಗಳಲ್ಲಿ ವಧು ವರನಿಗಿಂತ ಮುಂದೆ ಹೆಜ್ಜೆಯನ್ನು ಇಡುತ್ತಾಳೆ ಮತ್ತು ನಂತರದ ನಾಲ್ಕು ಸುತ್ತುಗಳಲ್ಲಿ ವರ ವಧುವಿಗಿಂತಲೂ ಮುಂದೆ ಹೆಜ್ಜೆಯನ್ನು ಇಡುತ್ತಾರೆ. ಇದು ಹಿಂದೂ ವಿವಾಹದ ಪ್ರಮುಖ ಭಾಗವಾಗಿದೆ. ಸಪ್ತಪದಿ ತುಳಿಯದೇ ವಿವಾಹ ಕಾರ್ಯ ಅಪೂರ್ಣವೆಂದು ಪರಿಗಣಿಸಲಾಗುತ್ತದೆ.

ಕನ್ಯಾದಾನ:

ಕನ್ಯಾದಾನ ಮಹಾದಾನವೆಂದು ಕರೆಯಲಾಗುತ್ತದೆ. ಇದು ಹಿಂದೂ ವಿವಾಹದ ಪ್ರಮುಖ ಭಾಗವಾಗಿದೆ. ಕನ್ಯಾದಾನವನ್ನು ಅತ್ಯಂತ ಪವಿತ್ರ ಹಿಂದೂ ವಿವಾಹ ಆಚರಣೆಗಳಲ್ಲಿ ಒಂದಾಗಿದೆ. ಈ ಆಚರಣೆಯಲ್ಲಿ ಪೋಷಕರು ತಮ್ಮ ಮಗಳನ್ನು ವರನಿಗೆ ಒಪ್ಪಿಸುತ್ತಾರೆ. ಹಿಂದೂ ಧರ್ಮ ಗ್ರಂಥಗಳಲ್ಲಿ ಕನ್ಯಾದಾನವನ್ನು ‘ಮಹಾದಾನ’ ಎಂದು ಉಲ್ಲೇಖಿಸಲಾಗಿದೆ. ಕನ್ಯಾದಾನದಿಂದ ಪಾಪ ಕಳೆದು ಪುಣ್ಯ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆಯಿದೆ.

ಅರುಂಧತಿ ನಕ್ಷತ್ರ ತೋರಿಸುವುದು:

ವಿವಾಹದ ನಂತರ ನವ ವಧು– ವರರಿಗೆ ಅರುಂಧತಿ ನಕ್ಷತ್ರ ತೋರಿಸುವ ಪದ್ಧತಿ ಹಿಂದೂ ಸಂಪ್ರದಾಯದಲ್ಲಿದೆ. ಬ್ರಹ್ಮದೇವರ ಪುತ್ರಿ ಸಂಧ್ಯಾದೇವಿ ವಸಿಷ್ಠರ ಪತ್ನಿ ಅರುಂಧತಿಯಾಗಿ ಪರಿವರ್ತನೆಯಾದ ಕಥೆಯು ಈ ಆಚರಣೆಯ ಹಿಂದಿದೆ. ಇದು ದಂಪತಿಗಳಲ್ಲಿ ತಾಳ್ಮೆ, ಸಹನೆ, ಪ್ರೀತಿ ಮತ್ತು ವಿಶ್ವಾಸ ಬೆಳೆಸಿಕೊಳ್ಳಲು ಪ್ರೇರಣೆ ನೀಡುತ್ತದೆ. ದೀರ್ಘಕಾಲಿಕ ದಾಂಪತ್ಯ ಜೀವನಕ್ಕೆ ಆಶೀರ್ವಾದದ ಸಂಕೇತವಾಗಿದೆ.