ಉಮಾ ಅನಂತ್
ಇಂಟ್ರೊ: ಮದುವೆ ದಿನ ವಧುವರರಿಬ್ಬರೂ ಅಗ್ನಿಸಾಕ್ಷಿಯಾಗಿ ಸಪ್ತಪದಿ ತುಳಿದು ಜೀವನವನ್ನು ನಂದನವನವನ್ನಾಗಿಸುತ್ತೇವೆ ಎಂಬ ಪ್ರತಿಜ್ಞೆ ಮಾಡುವುದು ಒಂದು ಸುಸಂಸ್ಕೃತ ಆಚರಣೆಯೇ ಆಗಿದೆ.
ಮದುವೆ ಸಂಬಂಧ– ಅನುಬಂಧ ಬೆಳೆಸುವ ಒಂದು ಸಂಸ್ಕಾರ. ಪ್ರತಿಯೊಬ್ಬರ ಬದುಕಿನಲ್ಲೂ ಮದುವೆ ಎಂಬುದು ಮಹತ್ವದ ಘಟ್ಟ. ಈ ಅನುಬಂಧದ ಬಗ್ಗೆಯೇ 1980ರ ದಶಕದಲ್ಲಿ ‘ಸಪ್ತಪದಿ’ ಎಂಬ ಚಲನಚಿತ್ರ ಬಹಳ ಜನಪ್ರಿಯವಾಯಿತು. ಅಂಬರೀಶ್, ರೂಪಿಣಿ ಮತ್ತು ಸುಧಾರಾಣಿ ಅಭಿನಯಿಸಿದ ಈ ಸಿನಿಮಾದಲ್ಲಿ ಮದುವೆ ಮತ್ತು ಏಳು ಜನ್ಮದ ಅನುಬಂಧದ ಬಗ್ಗೆ ಪ್ರಸ್ತಾಪವಿದೆ.
ಸಪ್ತಪದಿ ಎಂದರೆ ಏಳು ಹೆಜ್ಜೆಗಳು ಎಂದು ಅರ್ಥ. ವಧು-ವರರು ಅಗ್ನಿಸಾಕ್ಷಿಯಾಗಿ ಪರಸ್ಪರ ಭಾವನೆ ಭರವಸೆಗಳನ್ನು ಬೆಸೆದು ಏಳು ಹೆಜ್ಜೆಗಳನ್ನು ಹಾಕುತ್ತಾರೆ, ಇದು ಜೀವನದ ಏಳು ಪ್ರತಿಜ್ಞೆಗಳು ಮತ್ತು ಏಳು ಜನ್ಮಗಳ ಸಂಬಂಧವನ್ನು ಸೂಚಿಸುತ್ತದೆ, ಈ ಹೆಜ್ಜೆಗಳು ಪರಸ್ಪರ ಗೌರವ, ಸೌಹಾರ್ದ, ಪ್ರೀತಿ ಸಹಕಾರದಿಂದ ಜೀವನ ಪರ್ಯಂತ ಒಟ್ಟಾಗಿ ನಡೆಯೋಣ ಎಂಬ ಪ್ರತಿಜ್ಞೆಯ ಸಂಕೇತವೂ ಆಗಿದೆ.
ಸಪ್ತಪದಿ ತುಳಿಯುವ ಏಳು ಹೆಜ್ಜೆಗಳು ಏನನ್ನು ಸಾರುತ್ತವೆ?
ಹಿಂದೂ ವಿವಾಹಗಳಲ್ಲಿ ವಧು-ವರರು ಕೈ ಹಿಡಿದು ಅಗ್ನಿ ಕುಂಡಕ್ಕೆ 7 ಸುತ್ತು ಬರುವ ಆಚರಣೆಯು ಇವರ ಜೀವನದ ಆರಂಭವನ್ನು ಸೂಚಿಸುತ್ತದೆ. ಸಪ್ತಪದಿಯ ಮೊದಲ ಹೆಜ್ಜೆಯು ವರನು ವಧುವಿಗೆ– ನಿನ್ನೆಲ್ಲಾ ನೋವಿನಲ್ಲೂ, ನಗುವಿನಲ್ಲೂ ನಿನ್ನೊಂದಿಗಿರುವೆ ಎನ್ನುವ ಪ್ರತಿಜ್ಞೆಯನ್ನು ಮಾಡುತ್ತಾನೆ. ಹೆಂಡತಿ ಮತ್ತು ಮಕ್ಕಳಿಗೆ ಸಂತೋಷ ನೀಡುತ್ತೇನೆ ಎಂಬ ಅರ್ಥವನ್ನು ಬಿಂಬಿಸುತ್ತದೆ.
ಎರಡನೇ ಹೆಜ್ಜೆಯಲ್ಲಿ ವರನು ತನ್ನ ವಧುವಿಗೆ ಜೀವನದಲ್ಲಿ ನಂಬಿಕೆಗೆ ಅರ್ಹನಾಗಿ, ನಿಷ್ಠಾವಂತನಾಗಿ ಇರುತ್ತೇನೆ ಎಂಬ ಭರವಸೆ ನೀಡುತ್ತಾನೆ. ಹೆಂಡತಿಯ ಸಂತೋಷ ಮತ್ತು ದುಃಖ ಎರಡರಲ್ಲೂ ಬೆನ್ನೆಲುಬಾಗಿ ಇರುತ್ತೇನೆಂದು ಹೇಳುವುದು ಸೂಚ್ಯವಾಗಿ ಈ ಹೆಜ್ಜೆ ತಿಳಿಸುತ್ತದೆ.
ಸಪ್ತಪದಿಯ ಮೂರನೇ ಹೆಜ್ಜೆಯಲ್ಲಿ ವಧು ತನ್ನ ಪತ್ನಿಗೆ ತಾನು ಕಷ್ಟಪಟ್ಟು ಕೆಲಸ ಮಾಡುತ್ತೇನೆ. ಹಾಗೂ ಮನೆಯಲ್ಲಿ ಸಿರಿ, ಸಂಪತ್ತು, ಸಮೃದ್ಧಿಯನ್ನು ತರಲು, ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಲು ತನ್ನ ಕೈಲಾದ ಪ್ರಯತ್ನವನ್ನು ಮಾಡುತ್ತೇನೆ ಎಂಬ ಭರವಸೆ ನೀಡಿದರೆ ವಧು ತಾನು ತನ್ನ ಗಂಡನಿಗೆ ನಿಷ್ಠಳಾಗುರುತ್ತೇನೆಂದು ಹೇಳುತ್ತಾಳೆ.
ಸಪ್ತಪದಿಯ ನಾಲ್ಕನೇ ಹೆಜ್ಜೆಯಲ್ಲಿ ವರನು ವಧುವಿಗೆ ತನ್ನ ಜೀವನವನ್ನು ಸುಂದರಗೊಳಿಸಿದ್ದಕ್ಕೆ ಹಾಗೂ ಪರಿಪೂರ್ಣಗೊಳಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸುವ ಬಗ್ಗೆ ಉಲ್ಲೇಖವಿದೆ. ಅದೇ ರೀತಿ ವಧು ಪತಿಗೆ ನಿಷ್ಠಳಾಗಿ ಎಲ್ಲ ನಿರ್ಧಾರಗಳಲ್ಲೂ ಕೈಜೋಡಿಸುವ ಪ್ರತಿಜ್ಞೆ ಮಾಡುತ್ತಾಳೆ. ಸಪ್ತಪದಿಯ ಐದನೇ ಹೆಜ್ಜೆಯಲ್ಲಿ ದಂಪತಿ ಪರಸ್ಪರ ಜೊತೆಯಾಗಿಯೇ ಇರುತ್ತೇವೆ ಮತ್ತು ತಮ್ಮ ಸಂತೋಷ, ದುಃಖಗಳನ್ನು ಇಬ್ಬರೂ ಪರಸ್ಪರ ಹಂಚಿಕೊಳ್ಳುತ್ತೇವೆಂದು ಭರವಸೆಯನ್ನು ನೀಡುತ್ತಾರೆ. ಸಪ್ತಪದಿಯ ಆರನೇ ಹೆಜ್ಜೆಯಲ್ಲಿ ಇಬ್ಬರೂ ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸುತ್ತೇವೆ, ಎಷ್ಟೇ ಕಠಿಣ ಸಂದರ್ಭದಲ್ಲೂ ಜೊತೆಯಾಗಿ ನಿಲ್ಲುತ್ತೇವೆಂದು ಹೇಳುತ್ತಾರೆ.
ಸಪ್ತಪದಿಯ ಏಳನೇ ಹೆಜ್ಜೆಯಲ್ಲಿ ವಧು-ವರರಿಬ್ಬರೂ ತಾವು ಮಾಡಿರುವ ಎಲ್ಲ ಪ್ರತಿಜ್ಞೆಗಳನ್ನು ನಿಯತ್ತಾಗಿ ಪಾಲಿಸುತ್ತಾ ಸೊಗಸಾದ ಜೀವನ ರೂಪಿಸುತ್ತೇವೆ ಎಂದು ಪರಸ್ಪರ ಭರವಸೆ ನೀಡುತ್ತಾರೆ.
ಹೀಗೆ ಜೀವನದಲ್ಲಿ ಒಬ್ಬರು ಮತ್ತೊಬ್ಬರನ್ನು ಅನುಸರಿಸುತ್ತಾ ಸಹಕಾರ ಸಹಬಾಳ್ವೆಯಿಂದ ನಡೆದುಕೊಂಡು ಬಾಳು ಸಾಗಿಸಿದರೆ ಬದುಕು ನಂದನವನವಾಗುವುದರಲ್ಲಿ ಸಂಶಯವಿಲ್ಲ. ಸಹಕಾರ–ಸಹಬಾಳ್ವೆ–ಸಮರಸವೇ ಜೀವನ ಅಲ್ಲವೇ?