ಮದುವೆಯ ಶೋಕೇಸ್

ಆಭರಣಗಳ ಪಯಣ... ವಿವಾಹಕ್ಕೆ ಸೂಕ್ತ ಆಯ್ಕೆ

MH-Team

ಮದುವೆಗಳಲ್ಲಿ ಆಭರಣಗಳಿಗೆ ಭಾರೀ ಮಹತ್ವ. ನೆತ್ತಿಯಿಂದ ಉಂಗುಷ್ಟದ ವರೆಗೆ ಆಭರಣಗಳನ್ನು ಧರಿಸುವ ಮದುವಣಗಿತ್ತಿಗೆ ಇವು ಕೇವಲ ಅಲಂಕಾರದ ವಸ್ತುಗಳಲ್ಲ; ಸಂಸ್ಕೃತಿ, ಪರಂಪರೆ ಮತ್ತು ಭಾವನೆಗಳ ಪ್ರತೀಕ. ಭಾರತೀಯ ವಿವಾಹಗಳಲ್ಲಿ ಆಭರಣಗಳಿಗೆ ಅತ್ಯಂತ ಮಹತ್ವ. ಪುರಾತನ ಕಾಲದಿಂದಲೂ ವಿವಾಹವು ಆಭರಣಗಳೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ.

ಕಾಲಕ್ರಮೇಣ ಆಭರಣಗಳ ವಿನ್ಯಾಸ, ತಂತ್ರಜ್ಞಾನ ಮತ್ತು ಆಯ್ಕೆಯ ವಿಧಾನದಲ್ಲಿ ಬಹಳಷ್ಟು ಬದಲಾವಣೆಗಳು ಕಂಡುಬಂದಿದ್ದರೂ, ಅವುಗಳ ಮಹತ್ವ ಮಾತ್ರ ಇಂದಿಗೂ ಕುಂದಿಲ್ಲ. ವಿವಾಹ ಸಮಯದಲ್ಲಿ ವಧುವಿಗೆ ನೀಡಲಾಗುವ ಆಭರಣಗಳು ಅವಳ ಭದ್ರತೆ ಮತ್ತು ಗೌರವದ ಚಿಹ್ನೆಯಾಗಿವೆ, ಸ್ತ್ರೀಧನವಾಗಿದೆ.

ಕಾಲ ಬದಲಾಗುತ್ತಿದ್ದಂತೆ ಆಭರಣಗಳ ಪಯಣವೂ ಹೊಸ ದಿಕ್ಕುಗಳನ್ನು ಪಡೆದಿದೆ. ಇಂದಿನ ಯುಗದಲ್ಲಿ ಚಿನ್ನದ ಜೊತೆಗೆ ವಜ್ರ, ಪ್ಲಾಟಿನಂ, ವೈಟ್ ಗೋಲ್ಡ್, ರೋಸ್ ಗೋಲ್ಡ್ ಸೇರಿದಂತೆ ನವೀನ ಲೋಹಗಳ ಬಳಕೆ ಹೆಚ್ಚಾಗಿದೆ. ವಿನ್ಯಾಸದಲ್ಲಿ ಪರಂಪರೆ ಮತ್ತು ಆಧುನಿಕತೆಯ ಮಿಶ್ರಣ ಕಂಡುಬರುತ್ತಿದೆ. ವಿವಾಹಕ್ಕೆ ಸೂಕ್ತ ಆಭರಣ ಆಯ್ಕೆ ಮಾಡುವಾಗ ವಧುವಿನ ಉಡುಪು, ಮುಖದ ಆಕಾರ, ದೇಹದ ವಿನ್ಯಾಸ ಮತ್ತು ವಿವಾಹದ ಥೀಮ್ ಅನ್ನು ಗಮನದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ.

ವಿವಾಹದ ವಿವಿಧ ವಿಧಿವಿಧಾನಗಳಿಗೆ ವಿಭಿನ್ನ ಆಭರಣಗಳು ಸೂಕ್ತವಾಗುತ್ತವೆ. ಮಾಂಗಲ್ಯಂ ತಂತುನಾನೇನ....

ಮಂಗಳಸೂತ್ರ, ತಾಳಿ, ಬಳೆಗಳು, ಕಾಲುಂಗುರ, ಮೂಗುತಿ ಮತ್ತು ಕಿವಿಯಾಭರಣಗಳು ಸಂಪ್ರದಾಯದ ಭಾಗವಾಗಿವೆ. ಕನ್ನಡ ವಿವಾಹದಲ್ಲಿ ಪ್ರಮುಖವಾದ ಆಭರಣವೆಂದರೆ ಮಂಗಳಸೂತ್ರ ಅಥವಾ ತಾಳಿ. ಇದು ವಿವಾಹದ ಪವಿತ್ರ ಬಂಧನವನ್ನು ಸೂಚಿಸುವ ಅತ್ಯಂತ ಮುಖ್ಯ ಚಿಹ್ನೆ. ಸುಲಗ್ನದ ಸುಮುಹೂರ್ತದಲ್ಲಿ ವರನು ವಧುವಿನ ಕುತ್ತಿಗೆಗೆ ತಾಳಿ ಕಟ್ಟುವುದು ಸಂಪ್ರದಾಯ. ಕನ್ನಡ ಸಂಸ್ಕೃತಿಯಲ್ಲಿ ತಾಳಿಗೆ ವಿಶೇಷ ಧಾರ್ಮಿಕ ಮಹತ್ವವಿದೆ.

`ಮಂಗಳ' ಎಂದರೆ ಶುಭ, ' ಸೂತ್ರ' ಎಂದರೆ ದಾರ ಅಥವಾ ಬಂಧನ. ಅಂದರೆ ಮಂಗಳಸೂತ್ರವು ಶುಭಬಂಧನವನ್ನು ಸೂಚಿಸುತ್ತದೆ. ಇದು ಪತಿ-ಪತ್ನಿಯ ನಡುವಿನ ಆತ್ಮೀಯ ಸಂಬಂಧವನ್ನು ಪ್ರತಿನಿಧಿಸುವುದರ ಜೊತೆಗೆ, ದಾಂಪತ್ಯದ ಶ್ರೇಯಸ್ಸು, ಆಯುಷ್ಯ ಮತ್ತು ಸುಖಸಮೃದ್ಧಿಗಾಗಿ ಧರಿಸಲಾಗುತ್ತದೆ ಎಂಬ ನಂಬಿಕೆ ಇದೆ.

ಪಾರಂಪರಿಕವಾಗಿ ಮಂಗಳಸೂತ್ರವು ಕಪ್ಪು ಮಣಿಗಳು ಮತ್ತು ಬಂಗಾರದ ತಾಳಿಗಳಿಂದ ಮಾಡಲ್ಪಟ್ಟಿರುತ್ತದೆ. ಕಪ್ಪು ಮಣಿಗಳು ಕೆಟ್ಟ ದೃಷ್ಟಿಯಿಂದ ರಕ್ಷಿಸುತ್ತವೆ ಎಂಬ ನಂಬಿಕೆಯಿದೆ. ಇಂದಿನ ದಿನಗಳಲ್ಲಿ ಸರಳ, ಆಧುನಿಕ, ಡೈಮಂಡ್, ಟೆಂಪಲ್ ಡಿಸೈನ್ ಹಾಗೂ ಮಿನಿಮಲ್ ಶೈಲಿಯ ಮಂಗಳಸೂತ್ರಗಳು ಜನಪ್ರಿಯವಾಗಿವೆ.

ಬಳೆಗಳ ಸಾಮ್ರಾಜ್ಯ...

ಕಂಕಣಗಳು ಅಥವಾ ಬಳೆಗಳಿಗೆ ವಿವಾಹ ಆಭರಣಗಳಲ್ಲಿ ಪ್ರಮುಖ ಸ್ಥಾನ. ಗಾಜಿನ, ಚಿನ್ನದ ಬಳೆಗಳು ವಧುವಿನ ಕೈಗಳಿಗೆ ಅಲಂಕಾರ ನೀಡುತ್ತವೆ. ಉತ್ತರ ಕರ್ನಾಟಕ ಭಾಗದಲ್ಲಿ ಪಾಟ್ಲಿ, ಬಿಲ್ವಾರ, ತೋಡೆ ಬಳೆಗಳು ಸಾಂಪ್ರದಾಯಿಕವಾಗಿ ವಧುವಿನ ಕೈ ಅಲಂಕರಿಸುತ್ತಿದ್ದವು. ಕೊಡಗಿನ ಕೂರ್ಗಿ ಕಡಗ ಇಂದಿಗೂ ಜನಪ್ರಿಯ. ಆಧುನಿಕ ವಧುಗಳಿಗೆ ಕೊರಳಹಾರಕ್ಕೆ ತಕ್ಕ ಮೀನಾಕಾರಿ ಬಳೆಗಳು ಬಲು ಇಷ್ಟ. ದೇಶಾದ್ಯಂತದ ಬಳೆ ಡಿಸೈನ್‌ಗಳು ವಧುಗಳ ಕೈ ಅಲಂಕರಿಸುತ್ತಿವೆ.

ಕಿವಿಯಾಭರಣಗಳು

ಜುಮ್ಕಿಗಳು ಕನ್ನಡ ವಿವಾಹದ ಅವಿಭಾಜ್ಯ ಅಂಗ. ಜುಮ್ಕಿಗಳಲ್ಲಿ ಈಗ ವಿವಿಧ ರೀತಿಯ ವಿನ್ಯಾಸಗಳು ಬರುತ್ತಿವೆ. ಸಾಮಾನ್ಯವಾಗಿ ಕೆಂಪು ಹರಳು ಹಾಗೂ ಪ್ಲೇನ್ ಚಿನ್ನದ ಜುಮ್ಕಿಗಳು ಹೆಚ್ಚು ಧರಿಸಲ್ಪಡುತ್ತಿದ್ದವು. ಈಚಿನ ದಿನಗಳಲ್ಲಿ ದೇವತೆಗಳ ಆಕೃತಿಗಳು, ಹೂವಿನ ವಿನ್ಯಾಸಗಳು ಹಾಗೂ ಹಲವು ಬಣ್ಣದ ಹರಳುಗಳು, ಮುತ್ತು, ಹವಳಗಳ ಜುಮ್ಕಿಗಳು ಜನಪ್ರಿಯವಾಗಿವೆ.

ಜುಮ್ಕಿಗಳಾಚೆಗೂ ವಧುಗಳು ಕಣ್ಣು ಹಾಯಿಸುತ್ತಿದ್ದು, ಚಾಂದ್‌ಬಾಲಿ ಹಾಗೂ ನೆಕ್ಲೇಸ್‌ಗೆ ತಕ್ಕಂತ ದೊಡ್ಡ ಕಿವಿಯೋಲೆಗಳು ಹೆಚ್ಚು ಪ್ರವರ್ಧಮಾನಕ್ಕೆ ಬರುತ್ತಿವೆ. ದೊಡ್ಡ ಸ್ಟಡ್‌ಗಳು, ವಜ್ರದ ಕಿವಿಯೋಲೆಗಳು ಮದುವೆ ಹಾಲ್ ಅನ್ನು ಜಗಮಗಿಸುತ್ತಿವೆ.

ಮೂಗುತಿ (ನಾಸಿಕಾಭರಣ)

ಮೂಗುತಿ ಶೃಂಗಾರದ ಪ್ರತೀಕವಾಗಿದ್ದು, ವಧುವಿನ ಸೌಂದರ್ಯವನ್ನು ಹೆಚ್ಚಿಸುತ್ತದೆ. ಇಂದಿನ ದಿನಗಳಲ್ಲಿ ಸರಳ ವಿನ್ಯಾಸದಿಂದ ಹಿಡಿದು ಭವ್ಯ ವಿನ್ಯಾಸದ ಮೂಗುತಿಗಳು ಲಭ್ಯವಿವೆ.

ಮೂಗಿನ ರಿಂಗ್‌ಗಳು, ಡೈಮಂಡ್ ಹರಳುಗಳ ಮುಗೂತಿಯಷ್ಟೇ ಅಲ್ಲ ದೊಡ್ಡ ವಿನ್ಯಾಸದ ಮೂಗುತಿಗಳನ್ನು ತಮ್ಮ ಇತರ ಆಭರಣಗಳಿಗೆ ಮ್ಯಾಚ್ ಮಾಡುತ್ತಿದ್ದಾರೆ ಆಧುನಿಕ ಯುವತಿಯರು. 

ಹಾರಗಳು ಮತ್ತು ನೆಕ್ಲೆಸ್‌ಗಳು

ವಿವಾಹದ ಆಭರಣಗಳಲ್ಲಿ ಪ್ರಮುಖವಾದದ್ದು ಕೊರಳ ಹಾರಗಳು. ಕಾಸಿನ ಸರ, ಮಾಣಿಕ್ಯ ಹಾರ, ಲಕ್ಷ್ಮೀ ಹಾರ ಮುಂತಾದವು ಶ್ರೀಮಂತಿಕೆ ಮತ್ತು ಸಮೃದ್ಧಿಯ ಸಂಕೇತ ಎಂದು ಪರಿಗಣಿಸಲ್ಪಟ್ಟಿವೆ. ಇವು ಸಾಮಾನ್ಯವಾಗಿ ದೇವತಾ ಲಕ್ಷ್ಮಿಯ ಚಿತ್ರಣ ಅಥವಾ ಪುರಾಣ ಕಥೆಗಳಿಂದ ಪ್ರೇರಿತವಾಗಿರುತ್ತವೆ. ಉದ್ದದ ಲಾಂಗ್ ಚೈನ್, ಕುತ್ತಿಗೆಗೆ ಹತ್ತಿದಂತಿರುವ ಚೋಕರ್, ನೆಕ್ಲೇಸ್‌ಗಳು ಇಂದಿಗೂ ಮಧುಮಗಳ ಆಯ್ಕೆಯಾಗಿ ಮುಂದುವರಿದಿದೆ. 

ಬ್ರೈಡಲ್ ಸೆಟ್

ಈಚಿನ ದಿನಗಳಲ್ಲಿ ಬ್ರೈಡಲ್ ಸೆಟ್ ಎಂದು ವಧುವಿಗೆ ಸಂಪೂರ್ಣ ಆಭರಣದ ಸೆಟ್ ಬರುತ್ತಿದೆ. ಇದು ನೆತ್ತಿಯ ಮೇಲಿನ ಮಾಂಗ್ ಕಾಟೀಕಾ, ಕಿವಿಯೋಲೆ, ಕೆನ್ನೆಸರಪಳಿ, ಚೋಕರ್, ದೊಡ್ಡ ನೆಕ್ಲೇಸ್, ಸೊಂಟಪಟ್ಟಿ, ತೋಳಿಗೆ ಬಾಜುಬಂಧಿ, ದೊಡ್ಡ ಉಂಗುರ, ಕೈಗೆ ಮ್ಯಾಚಿಂಗ್ ಬಳೆಗಳು ಈ ಸೆಟ್‌ನಲ್ಲಿರುತ್ತವೆ. ಇದನ್ನು ಹಾಕಿದ ಸಾಲಂಕೃತ ವಧು ನೋಡಲು ನೂರು ಕಣ್ಣು ಸಾಲದು. 

ಕಾಲುಂಗರಗಳು

ಕಾಲುಂಗರ ವಿವಾಹಿತ ಸ್ತ್ರೀಯ ಸಂಕೇತವಾಗಿದ್ದು, ಅವು ನಡೆಗೆ ಲಾವಣ್ಯವನ್ನು ನೀಡುತ್ತವೆ. ಸಾಮಾನ್ಯವಾಗಿ ಬೆಳ್ಳಿ ಕಾಲುಂಗುರಗಳನ್ನು ಬಳಸಲಾಗುತ್ತದೆ. ಜತೆಗೆ ಬೆಳ್ಳಿ ಗೆಜ್ಜೆ ಮದುವಣಗಿತ್ತಿಯ ಅಲಂಕಾರವನ್ನು ಪೂರ್ಣಗೊಳಿಸುತ್ತದೆ. ಇಂದಿನ ವಧುಗಳು ಭಾರೀ ಆಭರಣಗಳ ಬದಲು ಹಗುರವಾದ, ಆರಾಮದಾಯಕ ಮತ್ತು ಬಹುಮುಖ ವಿನ್ಯಾಸಗಳನ್ನು ಆಯ್ಕೆ ಮಾಡಿಕೊಳ್ಳುವ ಟ್ರೆಂಡ್ ಕಂಡು ಬರುತ್ತಿದ್ದಾರೆ. ನೆನಪಿರಲಿ, ಸರಿಯಾದ ಆಭರಣ ಆಯ್ಕೆ ಮಾಡುವಾಗ ಗುಣಮಟ್ಟ ಮತ್ತು ಶುದ್ಧತೆಯನ್ನು ಪರಿಶೀಲಿಸುವುದು ಅಗತ್ಯ.

ಹಾಲ್‌ಮಾರ್ಕ್ ಹೊಂದಿರುವ ಚಿನ್ನದ ಆಭರಣಗಳು ನಂಬಿಕೆಗೆ ಪಾತ್ರವಾಗಿವೆ. ಆಭರಣಗಳ ಪಯಣವು ಕಾಲ, ಸಂಸ್ಕೃತಿ ಮತ್ತು ಭಾವನೆಗಳೊಂದಿಗೆ ಸಾಗುತ್ತದೆ. ವಿವಾಹಕ್ಕೆ ಸೂಕ್ತವಾದ ಆಭರಣ ಆಯ್ಕೆ ವಧುವಿನ ಸೌಂದರ್ಯ ಹೆಚ್ಚಿಸುವುದಷ್ಟೇ ಅಲ್ಲ, ಆಕ್ಷಣವನ್ನು ಸುಂದರವನ್ನಾಗಿಸುತ್ತದೆ. ಸರಿಯಾದ ಆಯ್ಕೆ, ಪರಂಪರೆಯ ಗೌರವ ಮತ್ತು ಆಧುನಿಕ ಸ್ಪರ್ಶ ವಿವಾಹದ ಆಭರಣಗಳ ಮೆರುಗು ಹೆಚ್ಚಿಸುತ್ತದೆ.