ಮದುವೆ ಎಲ್ಲರ ಜೀವನದಲ್ಲೂ ಒಂದು ಸುಂದರ ಕ್ಷಣ. ಅದನ್ನು ಸದಾ ನೆನಪಿನಲ್ಲಿ ಉಳಿಯುವಂತೆ ವಿಭಿನ್ನವಾಗಿ ಆಚರಿಸಿಕೊಳ್ಳಲು ಪ್ರತಿಯೊಬ್ಬರೂ ಬಯಸುತ್ತಾರೆ. ಮೊದಲೆಲ್ಲ ಶಾಸ್ತ್ರ, ಸಂಪ್ರದಾಯಗಳಲ್ಲೆ ಮುಗಿದು ಹೋಗುತ್ತಿದ್ದ ಮದುವೆ ಸಮಾರಂಭಗಳಲ್ಲೂ ‘ಆಧುನಿಕತೆ’ ಕಾಣುತ್ತಿದ್ದು, ಕೇಕ್ ಕತ್ತರಿಸುವುದು ಇತ್ತೀಚಿನ ಟ್ರೆಂಡ್ ಆಗಿದೆ.
ಮನೆಯ ಹಿರಿಯರೂ ಶಾಸ್ತ್ರ, ಸಂಪ್ರದಾಯ ಆಚರಣೆಗಳಲ್ಲಿ ತೊಡಗಿದ್ದರೆ, ವಧು–ವರರು, ಸ್ನೇಹಿತರು, ಬಂಧುಗಳೊಂದಿಗೆ ಕೇಕ್ ಕತ್ತರಿಸುವ ಮೂಲಕ ತಮ್ಮ ಜೀವನದ ಸುಂದರ ಕ್ಷಣವನ್ನು ಸೆರೆ ಹಿಡಿಯುತ್ತಾರೆ. ವಿಭಿನ್ನ ವಿನ್ಯಾಸವುಳ್ಳ ಕೇಕ್, ಮದುವೆ ಸಮಾರಂಭದ ಮುಖ್ಯ ಆಕರ್ಷಣೆಯೂ ಆಗಿದೆ. ಜೊತೆಗೆ ಸಮಾರಂಭದಲ್ಲಿರು ಅತಿಥಿಗಳ ಗಮನವನ್ನು ಸೆಳೆಯುತ್ತದೆ.
ಇಂಗ್ಲೆಂಡ್‌ನಲ್ಲಿ ತುಂಬ ವರ್ಷಗಳ ಹಿಂದೆ ಮದುವೆ ಸಮಾರಂಭದಲ್ಲಿ ಬಂದಿರುವ ಅತಿಥಿಗಳಿಗೆ ಬ್ರೆಡ್ ಕೇಕ್ ಕತ್ತರಿಸಿ ಸಿಹಿ ರೂಪದಲ್ಲಿ ಹಂಚಲಾಗುತ್ತಿತ್ತು. ಇದು ಅವರ ಆಚರಣೆಯೂ ಆಗಿತ್ತು. ಜೊತೆಗೆ ಬಂದಿರುವ ಅತಿಥಿಗಳನ್ನು ಸೆಳೆಯುತ್ತಿತ್ತು. ಆದರೆ ಎಲ್ಲ ಮದುವೆಗಳಲ್ಲೂ ಇದು ಬಳಕೆಯಲ್ಲಿರಲಿಲ್ಲ. ನಂತರದಲ್ಲಿ ಕೆಲವು ಶ್ರೀಮಂತರು ಮದುವೆ ಸಮಾರಂಭದಲ್ಲಿ ಕೇಕ್ ಕತ್ತರಿಸುತ್ತಿದ್ದರು.
ಆದರೆ ಇಂದಿನ ದಿನಗಳಲ್ಲಿ ಎಲ್ಲ ವರ್ಗದವರು ತಮ್ಮ ಮದುವೆ ಸಮಾರಂಭದ ಖುಷಿ ಹೆಚ್ಚಿಸಲು ಕೇಕ್ ಕತ್ತರಿಸುವುದು ಸಾಮಾನ್ಯವಾಗಿದೆ. ಬಡವ–ಶ್ರೀಮಂತ ಎನ್ನದೇ ಎಲ್ಲರೂ ತಮ್ಮ ಆರ್ಥಿಕತೆಗನುಗಣವಾಗಿ ಕೇಕ್ ಖರೀದಿಸಿ, ಸಂಭ್ರಮಿಸುತ್ತಿದ್ದಾರೆ.
ನಿಶ್ಚಿತಾರ್ಥ ಸಂದರ್ಭದಲ್ಲಿ ‘ಗಾಟ್ ಎಂಗೆಜ್ಡ್’(Got Engaged), ಜಸ್ಟ್ ಎಂಗೆಜ್ಡ್(Just Engaged) ಮದುಮಗಳಾಗುವ ಸಂದರ್ಭದಲ್ಲಿ ‘ಬ್ರೈಡ್ ಟು ಬಿ’(Bride to be), ಮದುವೆ ಸಂದರ್ಭದಲ್ಲಿ ಜಸ್ಟ್ ಮ್ಯಾರಿಡ್(Just Married), ಮಿಸ್ಟರ್ ಆ್ಯಂಡ್ ಮಿಸಸ್(Mr & Ms) ಎಂದು ಬರೆದಿರುವ ಕೇಕ್‌ಗಳನ್ನು ಕತ್ತರಿಸುವುದು ಸಾಮಾನ್ಯವಾಗಿದೆ.
ಆಕರ್ಷಕ ವಿನ್ಯಾಸ: ನಿಶ್ಚಿತಾರ್ಥದ ಸಂದರ್ಭವಾಗಿದ್ದರೆ ಕೇಕ್ ಮೇಲೆ ಹುಡುಗ–ಹುಡುಗಿಯರಿಬ್ಬರು ಕೈಯಲ್ಲಿ ಉಂಗುರು ಹಿಡಿದಿರುವುದು, ಎರಡು ರಿಂಗ್‌ಗಳು, ಪ್ರಪೋಸ್ ಮಾಡುವ ರೀತಿ, ಹುಡುಗ–ಹುಡುಗಿ ನೃತ್ಯ ಮಾಡುತ್ತಿರುವುದು, ಹುಡುಗ–ಹುಡುಗಿಗೆ ಚುಂಬಿಸುತ್ತಿರುವ ವಿನ್ಯಾಸವುಳ್ಳ ಕೇಕ್‌ಗಳನ್ನು ಬಳಸುತ್ತಾರೆ.
ಮದುಮಗಳಾಗುವ ಸನ್ನಿವೇಶದಲ್ಲಿ ರಾಜಕುಮಾರಿಯ ಚಿತ್ರವಿರುವ, ಇಲ್ಲವೇ ರಾಣಿ ಕಿರೀಟ ಇರುವ, ಹೃದಯದಾಕಾರ ಇರುವ ಕೇಕ್ ಮೇಲೆ ‘ಬ್ರೈಡ್ ಟು ಬಿ’ ಎಂದು ಬರೆದಿರುವ ವಿವಿಧ ವಿನ್ಯಾಸವುಳ್ಳ ಕೇಕ್‌ಗಳನ್ನು ತಯಾರಿಸಲಾಗುತ್ತಿದೆ.
ಮದುವೆ ಸಮಯದಲ್ಲಿ ವಧು–ವರರು ಕೈ ಹಿಡಿದು ನಡೆಯುತ್ತಿರುವುದು, ರಾಜ–ರಾಣಿ ಕಿರೀಟದ ಮೇಲೆ ಮಿಸ್ಟರ್ ಆ್ಯಂಡ್ ಮಿಸಸ್, ಜಸ್ಟ್ ಮ್ಯಾರಿಡ್ ಸೇರಿದಂತೆ ವಿವಿಧ ಆಕರ್ಷಕ ವಿನ್ಯಾಸದ ಕೇಕ್‌ಗಳು ಲಭ್ಯ ಇವೆ.
ವಿಭಿನ್ನ ಫ್ಲೇವರ್‌ಗಳು: ವೈಟ್ ಫಾರೆಸ್ಟ್, ರಸಮಲೈ, ಪೈನಾಪಲ್, ಸ್ಟ್ರಾಬೆರ್‍ರಿ, ಬ್ಲ್ಯೂಬೆರ‍್ರಿ, ಚಾಕಲೆಟ್ ಕೇಕ್, ಚಾಕಲೇಟ್ ಚಿಪ್ಸ್, ಚಾಕಲೆಟ್ ಅಲ್ಮಂಡ್, ಚಾಕಲೆಟ್ ಟ್ರಫಲ್, ಡ್ರೈಫ್ರ್ಯೂಟ್ಸ್, ಗುವಾ, ಫ್ರ್ಯೂಟ್ ಕೇಕ್ ಸೇರಿದಂತೆ ಇನ್ನು ಅನೇಕ ಫ್ಲೇವರ್‌ಗಳಲ್ಲಿ ವೆಡ್ಡಿಂಗ್ ಕೇಕ್‌ಗಳು ಲಭ್ಯ.
‘ಕೆಲವು ವರ್ಷಗಳಿಂದ ಮದುವೆ ಸಮಾರಂಭದಲ್ಲಿ ಕೇಕ್ ಕತ್ತರಿಸುವುದನ್ನು ನೋಡುತ್ತಿದ್ದೇವೆ. ಮೂರು ವರ್ಷಗಳಿಂದ ವೆಡ್ಡಿಂಗ್ ಕೇಕ್‌ಗಳಿಗೆ ಬೇಡಿಕೆ ಹೆಚ್ಚಿದೆ. 60ಕ್ಕೂ ಹೆಚ್ಚು ಫ್ಲೇವರ್ ಕೇಕ್‌ಗಳನ್ನು ತಯಾರಿಸುತ್ತೇವೆ. ಸದ್ಯ ರಸಮಲೈ ಫ್ಲೇವರ್ ಕೇಕ್‌ಗೆ ಹೆಚ್ಚು ಬೇಡಿಕೆ ಇದೆ’ ಎನ್ನುತ್ತಾರೆ ಹುಬ್ಬಳ್ಳಿಯ ಕೇಕ್ ಎಂಪೋರಿಯಮ್ ಮಾಲೀಕ ವಿಜಯ ಹುಕ್ಕೇರಿ.
‘ಕನಿಷ್ಠ ಎರಡು ಸ್ಟೆಪ್‌ನಿಂದ ಐದು ಸ್ಟೆಪ್‌ವರೆಗೂ ಕೇಕ್ ತಯಾರಿಸುತ್ತೇವೆ. ಆದರೆ ಎರಡು ಸ್ಟೆಪ್ ಕೇಕ್ ಅನ್ನು ಹೆಚ್ಚು ಜನ ಇಷ್ಟಪಡುತ್ತಾರೆ. ಒಂದು ಅಥವಾ ಎರಡು ದಿನ ಮುಂಚಿತವಾಗಿ ಆರ್ಡರ್ ನೀಡುತ್ತಾರೆ. ₹2,500 ರಿಂದ ಬೆಲೆ ಆರಂಭ. ಗ್ರಾಹಕರು ನೀಡುವ ವಿನ್ಯಾಸ ಹಾಗೂ ತೂಕದ ಮೇಲೆ ಬೆಲೆ ನಿಗದಿ ಮಾಡಲಾಗುತ್ತದೆ’ ಎಂದು ಅವರು ತಿಳಿಸಿದರು.
‘ವಧು–ವರರು ತಮ್ಮದೇ ಫೋಟೊ ನೀಡಿದ್ದಲ್ಲಿ ಕೇಕ್ ಮೇಲೆ ಅವರ ಫೋಟೊವನ್ನೂ ಹಾಕುತ್ತೇವೆ. ಬ್ರೈಡ್ ಟು ಬಿ’, ‘ಗ್ರೂಮ್ ಟು ಬಿ’ ಕೇಕ್‌ಗಳು ಲಭ್ಯ. ಬ್ರೈಡ್ ಟು ಬಿ ಕೇಕ್‌ಗಳು ಹೆಚ್ಚು ಮಾರಾಟವಾಗುತ್ತವೆ ಎನ್ನುತ್ತಾರೆ ಅವರು.
ಫೋಟೊಗಳು
ಕೇಕ್ ಎಂಪೋರಿಯಮ್‌ನಲ್ಲಿ ತಯಾರಿಸಿದ ವಿವಿಧ ವಿನ್ಯಾಸವುಳ್ಳ ಮದುವೆ ಕೇಕ್‌ಗಳು (Wedding cake)