ಮದುವೆ ಯೋಜನೆ - Wedding planning

ಮಿಲನ ಮಹೋತ್ಸವಕ್ಕೆ ಸಿದ್ಧತೆ ಹೇಗೆ

MH-Team

ಕುಟುಂಬ ವ್ಯವಸ್ಥೆಯಲ್ಲಿ ಗಂಡು, ಹೆಣ್ಣಿನ ಜೋಡಿಗೆ ಮಿಲನವೆಂಬ ಕೊಂಡಿ ಇರಲೇಬೇಕು ಎನ್ನುವುದು ನಿಸರ್ಗದ ನಿಯಮ. ಇದಕ್ಕಾಗಿ ಮದುವೆ ಎಂಬ ಬಂಧನ. ಆಕರ್ಷಕ ಉಡುಪು, ಮೆಚ್ಚಿನ ಒಡವೆ, ಚಪ್ಪರ, ಹಾರ, ತುರಾಯಿ, ಊಟ, ನೃತ್ಯಗಳೆಲ್ಲ ಮೇಳೈಸಿದ ಸಂಭ್ರಮ, ಸಡಗರ. ಮದುವೆ ಸಂಭ್ರಮಕ್ಕೆ ಅಗತ್ಯವಿರುವ ವಸ್ತುಗಳ ಖರೀದಿ ಬಹಿರಂಗವಾಗಿಯೇ ನಡೆದರೂ, ಮಿಲನಕ್ಕೆ ಮಾತ್ರ ಗೋಪ್ಯತೆ ಕಾಪಾಡುವಷ್ಟು ನವ ದಂಪತಿಗೆ ನಾಚಿಕೆ. ಕೇಳಲು, ಹೇಳಿಕೊಳ್ಳಲೂ ಸಂಕೋಚ. ಹೀಗಾಗಿ ಅತ್ಯಗತ್ಯ ವಸ್ತುಗಳೊಂದಿಗೆ ಸರಿಯಾಗಿ ಸಿದ್ಧರಾಗಲು ಸಾಧ್ಯವಾಗದೆ ಮುಜುಗರ ಅನುಭವಿಸುವುದೋ ಅಥವಾ ಮಹೋತ್ಸವ ಉತ್ತಮವಾಗಿಲ್ಲ ಎಂಬ ಕೊರಗು ಉಳಿದೇ ಬಿಡುತ್ತದೆ.

ಹೀಗಾಗಿ ಮದುವೆಗೆ ಸಿದ್ಧತೆ ಆರಂಭಿಸುವ ಮೊದಲೇ ಮೊದಲ ರಾತ್ರಿಯ ತಯಾರಿಯನ್ನು ಪೂರ್ಣಗೊಳಿಸುವ ಸಲಹೆಯನ್ನು ಹಲವರು ನೀಡುತ್ತಾರೆ. ವಧು ಹಾಗೂ ವರ ತಮ್ಮ ಮೊದಲ ರಾತ್ರಿಯ ಕಿಟ್ ಅನ್ನು ಮೊದಲೇ ಸಿದ್ಧಪಡಿಸಿಟ್ಟುಕೊಂಡಲ್ಲಿ ಕೊನೆ ಗಳಿಗೆಯ ಗಡಿಬಿಡಿ ಇರದು. ಇದೇನು ಅಂಥ ಗುಟ್ಟಾದ ಕಿಟ್‌ ಏನೂ ಅಲ್ಲ. ಬದಲಿಗೆ ಮೊದಲ ರಾತ್ರಿಯನ್ನು ಇನ್ನಷ್ಟು ಸಂಭ್ರಮಿಸಲು, ಪ್ರಯಣ ಮಹೋತ್ಸವದಲ್ಲಿ ಮಿಂದೇಳಲು, ತುಸು ಕೀಟಲೆ ಮತ್ತು ಆಹ್ಲಾದಕ್ಕೆ ಅಗತ್ಯವಿರುವ ವಸ್ತುಗಳ ಪೆಟ್ಟಿಗೆಯಷ್ಟೇ. 

ಮೊದಲ ರಾತ್ರಿಯ ಕೊಠಡಿಯನ್ನು ಕುಟುಂಬದವರು ಹಾಗೂ ಸ್ನೇಹಿತರು ಎಷ್ಟೇ ಸಜ್ಜುಗೊಳಿಸಿದರೂ, ನಿಮ್ಮಲ್ಲಿ ಸುಪ್ತವಾಗಿರುವ ಅಭಿರುಚಿಯಂತೆ ನೀವೇ ಸಿದ್ಧಪಡಿಸಿಕೊಳ್ಳುವುದು ಉತ್ತಮ. ಒಂದೊಳ್ಳೆಯ ಸುಗಂಧ, ಸಂಗಾತಿಗೊಂದು ಮೆಚ್ಚಿನ ಉಡುಗೊರೆ, ಮೈಬಿಸಿ ಏರಿಸುವಂತೆ ಆಕರ್ಷಿಸುವ ಉಡುಪು, ಒಳ ಉಡುಪುಗಳು, ತುಸು ಹೆಚ್ಚು ಕಾಲ ಇಬ್ಬರೇ ದಾಂಪತ್ಯ ಜೀವನ ಸವಿಯಲು ಅಗತ್ಯವಿರುವ ಕಾಂಡೊಮ್ ಮತ್ತು ಗರ್ಭನಿರೋಧಕ ಮಾತ್ರೆಗಳು.

ಲಾಂಜುರೇ ಅಥವಾ ಒಳ ಉಡುಪು

ಆ ವಿಶೇಷ ರಾತ್ರಿಯಂದು ಹೇಗೆ ಕಾಣಿಸಬೇಕು ಕುತೂಹಲಕಾರಿ ಲೆಕ್ಕಾಚಾರ ಯುವ ಜೋಡಿಗಳ ಮನಸ್ಸಿನಲ್ಲಿ ಇಣುಕುತ್ತಲೇ ಇರುತ್ತದೆ. ಅದು ಆಕರ್ಷಕವಾಗಿರಬೇಕು. ಸಂಗಾತಿಯ ಗಮನ ಧುತ್ತಲೇ ಆಕರ್ಷಿಸಬೇಕು. ರೊಮ್ಯಾಂಟಿಕ್‌ ಆಗಿರುವುದ ಮಾತ್ರವಲ್ಲ, ತುಸು ಬೋಲ್ಡ್ ಆಗಿದ್ದರೂ ಪರವಾಗಿಲ್ಲ ಎಂಬುದು ಇಂದಿನ ಯುವಜೋಡಿಗಳ ಬಯಕೆ. ಇವುಗಳಲ್ಲಿ ರೇಷ್ಮೆ ನುಣುಪಿನ ಸ್ಯಾಟಿನ್‌ ಬಟ್ಟೆಯ ಒಳ ಉಡುಪು, ಅದಕ್ಕೆ ಲೇಸ್‌ನ ಹೊಳಪು ಹೀಗೆ ಮಾರುಕಟ್ಟೆಯಲ್ಲಿ ಆ ವಿಶೇಷ ಸಂದರ್ಭಕ್ಕಾಗಿಯೇ ಲಭ್ಯವಿರುವ ತರಹೇವಾರಿ ಒಳ ಉಡುಪುಗಳ ಆಯ್ಕೆಗಳೇ ಇವೆ. ಸ್ನೇಹಿತರೊಂದಿಗೋ ಅಥವಾ ತಮ್ಮ ಆಪ್ರೇಷ್ಟರೊಂದಿಗೆ ತೆರಳಿ ಖರೀದಿಸುವ ದೃಶ್ಯಗಳು ಮಹಾನಗರಗಳಲ್ಲಿ ಸಾಮಾನ್ಯ ಎಂಬಂತಾಗಿದೆ.

ಮುಖಕ್ಕೆ ಮೇಕಪ್ ಹೇಗಿರಬೇಕು

ಅಂತರಂಗ ಹಾಗೂ ಬಹಿರಂಗ ಅರಿಯುವ ಆ ಮೊದಲ ರಾತ್ರಿಯಲ್ಲಿ ಹೆಚ್ಚು ಆಕರ್ಷಕವಾಗಿ ಕಾಣಬೇಕು ಎಂಬ ತವಕ ಯುವ ಜೋಡಿಗಳಲ್ಲಿರುವುದು ಸಹಜ. ಹೀಗಾಗಿ ಆ ವಿಶೇಷ ಸಂದರ್ಭಕ್ಕಾಗಿ ಅಲಂಕಾರಗೊಳ್ಳುವುದರಲ್ಲಿ ಮೇಕಪ್‌ ಕೂಡಾ ಪ್ರಮುಖ ಸ್ಥಾನ ಹೊಂದಿದೆ. ಇದರಲ್ಲಿ ತಮ್ಮ ತ್ವಚೆಗೆ ಒಪ್ಪುವ ಹಾಗೂ ಆಕರ್ಷಣೆಯನ್ನು ಇನ್ನಷ್ಟು ಹೆಚ್ಚಿಸುವಂತ ಪ್ರಸಾಧನವನ್ನು ಆಯ್ಕೆ ಮಾಡುವುದೇ ಸೂಕ್ತ. ಹಾಗೆಂದ ಮಾತ್ರಕ್ಕೆ ಅದು ತುಸು ಹೆಚ್ಚು ಎನಿಸುವಷ್ಟು ಇರಬಾರದು. ಆದರೆ ಸಹಜವಾಗಿದ್ದುಕೊಂಡು ಕೆನ್ನೆಯ ಕೆಂಪು ರಂಗೇರಿಯೂ ನೈಸರ್ಗಿಕ ಪ್ರಸಾಧನ ಮುಖಕ್ಕೆ ಮೆತ್ತುವುದಂತೂ ಅಂದು ಗ್ಯಾರಂಟಿ.

ಇದರೊಂದಿಗೆ ರೋಲ್ ಆನ್‌, ಮಾಯಿಶ್ಚರೈಸರ್‌ ಹಾಗೂ ಸುಗಂಧ ದ್ರವ್ಯಗಳೂ ಮೊದಲ ರಾತ್ರಿಗಾಗಿಯೇ ವಿಶೇಷವಾಗಿ ಖರೀದಿಸುವ ಜೋಡಿಗಳೂ ಇವೆ. ಆ ಒಂದು ರಾತ್ರಿಗಾಗಿ ಇನ್ನಿಲ್ಲದ ಸಿದ್ಧತೆಯಲ್ಲಿ ತೊಡಗುವುದೇ ಒಂದು ಸಂಭ್ರಮ, ಸಡಗರ. 

ಆಕರ್ಷಕ ಒಳ ಉಡುಪು, ಅಂದಕ್ಕೆ ಒಪ್ಪುವ ಪ್ರಸಾಧನದೊಂದಿಗೆ ಸೂಜಿಗಲ್ಲಿನಂತೆ ಸೆಳೆಯುವ ಸುಗಂಧ ದ್ರವ್ಯವೂ ಅಷ್ಟೇ ಮುಖ್ಯ. ಜತೆಗೆ ಉತ್ತಮ ಮೌತ್‌ ಫ್ರೆಷ್‌ನರ್‌, ಟೂತ್‌ಪೇಸ್ಟ್‌, ಒಂದೊಳ್ಳೆಯ ಶಾಂಪೂ ಹಾಗೂ ಶವರ್ ಜೆಲ್ ಇರಬೇಕಾದ್ದೂ ಅಷ್ಟೇ ಮುಖ್ಯ. ಇದು ಮೈ, ಮನ ಎರಡನ್ನೂ ಹಗುರವನ್ನಾಗಿಸಲು ಸಹಕಾರಿ. ಆದರೆ ಇದರೊಂದಿಗೆ ಬಹುಮುಖ್ಯವಾಗಿ ಟೆಂಪಾನ್ಸ್‌ ಅಥವಾ ಸ್ಯಾನಿಟರಿ ಪ್ಯಾಡ್‌ ಬ್ಯಾಗ್‌ನಲ್ಲಿಟ್ಟಿರುವುದನ್ನು ಮರೆಯಬೇಡಿ. 

ಲ್ಯೂಬ್ರಿಕೆಂಟ್ ಆಯಿಲ್‌

ಮೊದಲ ಮಿಲನಕ್ಕೆ ಮುಂದಡಿ ಇರುವ ಮುನ್ನ, ಹೆಚ್ಚು ತ್ರಾಸಾಗದಂತೆ ತೇವಾಂಶ ಹೇರಳವಾಗಿರುವ ಲವ್ ಜೆಲ್ಲಿ ಅಥವಾ ತೆಂಗಿನೆಣ್ಣೆ ಹೆಚ್ಚು ಇರುವ ಲೂಬ್ರಿಕೆಂಟ್‌ಗಳ ಬಳಕೆ ಉತ್ತಮ. ಇದು ವಿಚಿತ್ರವೆನಿಸಿದರೂ, ಆ ರಾತ್ರಿ ಹುಡುಕುವ ಗೋಜು ಬೇಡವೆಂದರೆ ಬಳಿ ಇಟ್ಟುಕೊಳ್ಳುವುದೇ ಉದ್ಭವಿಸಬಹುದಾದ ಹೆಚ್ಚು ಸಮಸ್ಯೆಗಳಿಗೆ ಪರಿಹಾರ.

ಇದರೊಂದಿಗೆ ಉತ್ತಮ ಕಾಂಡೋಮ್ ಆಯ್ಕೆಯೂ ನವ ಜೋಡಿಯ ರಾಸಲೀಲೆಯನ್ನು ಇನ್ನಷ್ಟು ಉದ್ದೀಪಿಸುವುದರಲ್ಲಿ ಹೆಚ್ಚಿನ ಕೆಲಸ ಮಾಡಲಿದೆ. ಕಾಂಡೋಮ್ ಆಯ್ಕೆ ಹೇಗಿರಬೇಕು... ಫ್ಲೇವರ್ಸ್‌, ರಿಬ್ಡ್‌, ಡಾಟೆಡ್‌ ಹೀಗೆ ಹಲವು ಬಗೆಯ ಹಾಗೂ ಹಲವು ಕಂಪನಿಗಳ ಕಾಂಡೋಮ್‌ ಈಗ ಲಭ್ಯ. ಇಷ್ಟೇ ಏಕೆ, ತೆಳುವಾದ, ಹೆಚ್ಚು ತೆಳುವಾದ, ಕಾಂಡೋಮ್ ಧರಿಸಿದ್ದೀರಿ ಎಂದು ತಿಳಿಯದಷ್ಟು ತೆಳುವಾದ ಎಂಬಿತ್ಯಾದಿ ಒಕ್ಕಣೆಯುಳ್ಳುವೂ ಲಭ್ಯ. ಮೊದಲ ಮಿಲನವನ್ನು ಇನ್ನಷ್ಟು ದೀರ್ಘಗೊಳಿಸುವ ರಾಸಾಯನಿಕವುಳ್ಳ ಕಾಂಡೋಮ್‌ಗಳೂ ಮಾರುಕಟ್ಟೆಯಲ್ಲಿವೆ. ಹೀಗಾಗಿ ಇವುಗಳ ಆಯ್ಕೆ ಹಾಗೂ ಖರೀದಿಯಲ್ಲಿ ಯಾವುದೇ ಸಂಕೋಚ ಬೇಡ.

ಹಾಗೆಯೇ ಒಂದಷ್ಟು ದಿನ ಸತಿ, ಪತಿಗಳ ಮಿಲನ ಸಂತಸದ ಕ್ಷಣಗಳು ಮುಂದುವರಿಯಲು ಗರ್ಭನಿರೋಧ ಗುಳಿಗೆಗಳೂ ಪ್ರಧಾನಪಾತ್ರ ವಹಿಸುತ್ತವೆ. ಹೀಗಾಗಿ ಇವುಗಳನ್ನೂ ಖರೀದಿಸಿಟ್ಟುಕೊಳ್ಳುವುದು ಉತ್ತಮ. ಆದರೆ ವೈದ್ಯರ ಸಲಹೆಯನ್ನೂ ಒಮ್ಮೆ ಪಡೆಯುವುದು ಅಗತ್ಯ.

ರಸಭಂಗವಾಗದಂತೆ ಮೊಬೈಲ್‌ ಬಂದ್ ಇಡಿ. ಖಾಸಗಿತನಕ್ಕೆ ಒತ್ತು ನೀಡಿ. ಹೀಗಾಗಿ ಆ ಮೊದಲ ರಾತ್ರಿಯಲ್ಲಿ ಕೋಣೆಯನ್ನು ಮಂದ ಬೆಳಕು, ಸಣ್ಣ ಸಂಗೀತ, ತಣ್ಣನೆಯ ಗಾಳಿ, ಮೈ, ಮನ ಅರಳಿಸುವ ಸುಗಂಧದೊಂದಿಗೆ ಒಂದಷ್ಟು ಚಾಕೊಲೇಟ್‌, ಸ್ಟ್ರಾಬೆರಿಯೂ ಸೇರಿದಂತೆ ಹಣ್ಣುಗಳು ಇದ್ದಲ್ಲಿ ಅದು ಇನ್ನಷ್ಟು ಕಳೆ ಕಟ್ಟುವುದು ಆಪ್ತತೆ.