ಅಕ್ಷಯ ತೃತೀಯ: ಅಕ್ಷರಾಭ್ಯಾಸ, ಅನ್ನಪ್ರಾಶನಕ್ಕೆ ಹೇಳಿ ಮಾಡಿಸಿದ ದಿನ
ಪವಿತ್ರಾ ಭಟ್
ಅಕ್ಷಯ ತೃತೀಯ ಹೊಸತನ್ನು ಪ್ರಾರಂಭಿಸಲು ಅತ್ಯುತ್ತಮ ದಿನವೆಂದೇ ಹೇಳಲಾಗುತ್ತದೆ. ಹೀಗಾಗಿ ಮಕ್ಕಳಿಗೆ ಅಕ್ಷರಾಭ್ಯಾಸ, ಅನ್ನಪ್ರಾಶನದಂತಹ ಕಾರ್ಯಕ್ರಮಗಳನ್ನು ಮಾಡುತ್ತಾರೆ.
ವೈಶಾಖ ಮಾಸದ ಶುಕ್ಲ ಪಕ್ಷ ತೃತೀಯದಂದು ಆಚರಿಸುವ ಅಕ್ಷಯ ತೃತೀಯ ಪೂರ್ತಿದಿನ ಒಳ್ಳೆಯ ದಿನ ಎಂದೇ ಪರಿಗಣಿಸಲಾಗುತ್ತದೆ.
ಅಕ್ಷಯ ಎಂದರೆ ಎಂದಿಗೂ ಮುಗಿಯದ್ದು, ತೃತೀಯ ಎಂದು ಶುಭಕರವಾದ್ದು ಎಂದರ್ಥ. ಹೀಗಾಗಿ ಹೊಸ ಕೆಲಸದ ಶ್ರೇಯಸ್ಸಿಗೆ ಅಕ್ಷಯ ತೃತೀಯವನ್ನು ಹೆಚ್ಚು ಮಾಡುತ್ತಾರೆ.
ಅಕ್ಷರಾಭ್ಯಾಸ
ಪ್ರತೀ ಮಗುವಿಗೆ ವಿದ್ಯಾಭ್ಯಾಸ ಬದುಕಿನ ಒಂದು ಭಾಗ. ಮನೆಯೇ ಪಾಠಶಾಲೆ ಎನ್ನುವಂತೆ ಕಲಿಕೆ ಮನೆಯಿಂದಲೇ ಆರಂಭವಾಗಿರುತ್ತದೆ. ಅದಕ್ಕೊಂದು ಮುನ್ನುಡಿ ಆರಂಭವಾಗುವುದೇ ಅಕ್ಷರಾಭ್ಯಾಸದಿಂದ. ವಿದ್ಯಾ ದೇವಿ ಒಲಿಯಲಿ, ಓದು ಬದುಕಿನಲ್ಲಿ ಶಾಶ್ವತವಾಗಲಿ ಎಂದು ಅಕ್ಷರಾಭ್ಯಾಸಕ್ಕೆ ಅಕ್ಷಯ ತೃತೀಯದ ದಿನವನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಹುಟ್ಟಿದ ಪ್ರತಿ ಮಗುವಿಗೆ ನೀಡುವ ಸಂಸ್ಕಾರದಲ್ಲಿ ಇದೂ ಒಂದು. ಹೀಗಾಗಿ ವಿದ್ಯಾರಂಭಂ ಎಂದು ವ್ಯಾಖ್ಯಾನಿಸಲಾಗುತ್ತದೆ. ಎರಡು ಅಥವಾ ಮೂರನೇ ವಯಸ್ಸಿಗೆ ಅಕ್ಷರ ಅಭ್ಯಾಸ ಮಾಡಲಾಗುತ್ತದೆ. ನವರಾತ್ರಿಯ ವಿಜಯದಶಮಿ ಬಿಟ್ಟರೆ ಅಕ್ಷಯ ತೃತೀಯ ಇದಕ್ಕೆ ಉತ್ತಮ ದಿನ ಎಂದು ಹಿರಿಯರು ಹೇಳುತ್ತಾರೆ.
ಅನ್ನಪ್ರಾಶನ
ತಾಯಿಯ ಎದೆಹಾಲಿನ ಬಳಿಕ ಮಗು ಅನ್ನವನ್ನು ಸೇವಿಸಲು ಆರಂಭಿಸುವ ಶಾಸ್ತ್ರವೇ ಅನ್ನಪ್ರಾಶನ. ಮೊದಲ ಬಾರಿ ಸಂಸ್ಕಾರ ರೂಪವಾಗಿ ಘನಾಹಾರವನ್ನು ಮಗುವಿಗೆ ತಿನ್ನಿಸುವ ಪ್ರಕ್ರಿಯೆ ಇದಾಗಿದೆ.
ಗಂಡು ಮಗುವಿಗೆ ಆರರಿಂದ ಎಂಟನೇ ತಿಂಗಳಲ್ಲಿ ಹಾಗೂ ಹೆಣ್ಣು ಮಗುವಿಗೆ ಐದರಿಂದ ಏಳನೇ ತಿಂಗಳ ಅವಧಿಯಲ್ಲಿ ಅನ್ನಪ್ರಾಶನದ ಸಂಸ್ಕಾರ ನೀಡಬೇಕು. ಒಟ್ಟಿನಲ್ಲಿ ಹೆಣ್ಣಾಗಲೀ ಗಂಡಾಗಲೀ ಒಂದು ವರ್ಷದೊಳಗೆ ಅನ್ನಪ್ರಾಶನದ ಸಂಸ್ಕಾರ ಪೂರ್ಣಗೊಂಡಿರಬೇಕು ಎನ್ನುತ್ತದೆ ಶಾಸ್ತ್ರ ಪುರಾಣ.
ವಿಶೇವಾಗಿ ಹಿಂದೂ ಧರ್ಮದಲ್ಲಿ ಅನ್ನಪ್ರಾಶನದ ದಿನ ಮಗುವಿಗೆ ತಂದೆಯು ಚಿನ್ನದ ಚಮಚ ಅಥವಾ ಉಂಗುರದ ಮೂಲಕ ಮೊದಲು ಸಿಹಿ ಆಹಾರವನ್ನು ಉಣಿಸುತ್ತಾನೆ. ಮಗು ಸದಾಕಾಲ ಆರೋಗ್ಯಕರವಾಗಿರಲಿ ಎನ್ನುವ ಪ್ರಾರ್ಥನೆ ತಂದೆಯದ್ದಾಗಿರುತ್ತದೆ. ಇನ್ನು ಈ ಸಮಯದಲ್ಲಿ ವೈದಿಕರ ಮಂತ್ರಗಳ ಮೂಲಕ ಮಾತು ಮತ್ತು ಧೈರ್ಯಕ್ಕಾಗಿ ಪ್ರಾರ್ಥಿಸಲಾಗುತ್ತದೆ. ಹೀಗಾಗಿ ಅಕ್ಷಯ ತೃತೀಯದಂದು ಈ ಶುಭ ಕಾರ್ಯವನ್ನು ಹೆಚ್ಚಾಗಿ ಮಾಡುತ್ತಾರೆ.