Akshaya Tritiya: ಬದುಕ ಬಂಗಾರವಾಗಿಸುವ ಅಕ್ಷಯ ತೃತೀಯಾ
ನವೀನ ಗಂಗೋತ್ರಿ
ಅಕ್ಷಯ ತೃತೀಯಾ ಎಂದರೆ ಬಂಗಾರ, ಬೆಳ್ಳಿ, ವಾಹನ, ಭೂಮಿ ಇತ್ಯಾದಿಗಳನ್ನು ಖರೀದಿಸಬೇಕಾದ ಕಾಲ ಎಂಬ ಲೋಕರೂಢಿಯ ಹೊರತಾಗಿ ಈ ದಿನಕ್ಕೆ ಇರುವ ಸಾಂಸ್ಕೃತಿಕ ಮಹತ್ವ ವಿಚಾರಣೀಯ.
ನಮ್ಮಲ್ಲಿ ಪ್ರಚಲಿತದಲ್ಲಿರುವ ಮಂಗಳಮಯ ಶಬ್ದಗಳಲ್ಲಿ ‘ಸ್ವಸ್ತಿ’ ಮತ್ತು ’ವೃದ್ಧಿ’ ಪದಗಳು ಪ್ರಸಿದ್ಧವಾಗಿವೆ. ಸ್ವಸ್ತಿ ಎನ್ನುವ ಪದಕ್ಕೆ ಒಳಿತು ಎನ್ನುವ ಅರ್ಥ, ಹಾಗೇನೆ ವೃದ್ಧಿ ಎನ್ನುವ ಪದಕ್ಕೆ ಬೆಳವಣಿಗೆ, ಏರಿಕೆ, ಏಳ್ಗೆ ಇತ್ಯಾದಿ ಅರ್ಥಗಳಿವೆ. ಸ್ವಸ್ತಿಯ ವೃದ್ಧಿ ಎಂದರೆ ಒಳಿತಿನ ಬೆಳವಣಿಗೆ; ಪ್ರತಿಯೊಬ್ಬ ಸಚ್ಚಿಂತನೆಯ ನಾಗರಿಕನ ಎಂದಿನ ಬಯಕೆ. ಒಳಿತಿನ ಬೆಳವಣಿಗೆ ನಿರಂತರವಾಗಿ ಇರಬೇಕು. ಎಂದರೆ ಅದು ಅಕ್ಷಯವಾಗಬೇಕು ಎಂದು ಬಯಸುವುದು ಸಾಂಸ್ಕೃತಿಕವಾಗಿ ಶ್ರೀಮಂತವಾದ ಎಲ್ಲ ಸಮುದಾಯಗಳ ಆಶಯ.
‘ಅಕ್ಷಯ ತೃತೀಯಾ’ ಎನ್ನುವ ಆಭಾರತವ್ಯಾಪಿ ಹಬ್ವವನ್ನು ನಾವು ಅರ್ಥಮಾಡಿಕೊಳ್ಳಬೇಕಿರುವುದು ಈ ನಿಟ್ಟಿನಲ್ಲಿ. ಕ್ಷಯವಿಲ್ಲದ, ಎಂದರೆ ಕುಂದಿಲ್ಲದ ವೃದ್ಧಿಯ ಆಶಯವಿರುವ ಹಬ್ಬವೇ ಅಕ್ಷಯ ತೃತೀಯಾ. ದ್ರವ್ಯಗಳಲ್ಲಿ, ಎಂದರೆ ಧನಕನಕಾದಿಗಳಲ್ಲಿ ಅಕ್ಷಯತನವನ್ನು ಸಾಧಿಸುವುದು ಕೇವಲ ಭೌತಿಕವಾದ ದೃಷ್ಟಿ. ಹಬ್ಬದ ಹಿನ್ನೆಲೆಯಲ್ಲಿ ನಮ್ಮ ಚಿಂತನಸ್ತರವು ಈ ಭೌತಿಕತೆಯ ಪರಿಧಿಯನ್ನು ಮೀರಿ ಕೊಂಚ ಎತ್ತರಕ್ಕೇರಿದರೆ ಅದು ಹಬ್ಬದ ಆಚರಣೆಯ ಸಾರ್ಥಕತೆ.
ಎಲ್ಲ ಭಾರತೀಯ ಹಬ್ಬಗಳಂತೆ ಅಕ್ಷಯ ತೃತೀಯಾ ಹಬ್ಬದ ಹಿನ್ನೆಲೆಯಲ್ಲಿಯೂ ನಾನಾ ಕಥೆಗಳ ಸಂತೆಯೇ ಇದೆ. ಭಗವಾನ್ ಶ್ರೀಕೃಷ್ಣನ ಕೃಪಾಧಾರೆಯಲ್ಲಿ ಸುದಾಮನೆಂಬೋ ಕಡುಬಡವ ಗೆಳೆಯನ ಬಡತನವೆಲ್ಲ ಕೊಚ್ಚಿಹೋದ ದಿವಸ ಅಕ್ಷಯ ತೃತೀಯ. ಶ್ರೀಕೃಷ್ಣನ ಔದಾರ್ಯ ಮತ್ತು ಕಾರುಣ್ಯದ ಇನ್ನೊಂದು ಕಥೆಯೂ ಅಕ್ಷಯ ತೃತೀಯಾದ ಹಬ್ಬದೊಂದಿಗೆ ಮಿಳಿತಗೊಂಡಿದೆ; ಅದುವೇ ಕಾಡುಪಾಲಾದ ಪಾಂಡವರ ಊಟದ ವ್ಯವಸ್ಥೆಗಾಗಿ ಶ್ರೀಕೃಷ್ಣನು ದ್ರೌಪದಿಗೆ ಅಕ್ಷಯ ಪಾತ್ರವನ್ನು ಕೊಡಮಾಡಿದ ಕಥೆ. ಭಗೀರಥನ ತಪಸ್ಸಿಗೆ ಮೆಚ್ಚಿ ಸ್ವರ್ಗಂಗೆ ಭೂಮಿಗೊಲಿದ ದಿನವೂ ವೈಶಾಖ ಶುದ್ಧ ತೃತೀಯಾ ದಿನವೇ – ಎಂದರೆ ಅಕ್ಷಯ ತೃತೀಯಾ ದಿನವೇ ಹೌದಂತೆ. ಮತ್ತೆ ಬ್ರಹ್ಮಕ್ಷತ್ರದ ಮೂರ್ತರೂಪವಾದ ಪರಶುರಾಮಾವತಾರವಾದದ್ದು ಈ ಪುಣ್ಯದಿನದಂದೇ. ಮಹರ್ಷಿ ವ್ಯಾಸರು ಭಾರತಕಥೆಯನ್ನು ಗಣೇಶನಿಗೆ ಹೇಳಿ ಬರೆಸಲು ಮೊದಲುಮಾಡಿದ ದಿನವೂ ಇದುವೇ. ಇನ್ನೆಷ್ಟೋ ಅಕ್ಷಯ ತೃತೀಯದ ಕಥೆಗಳು ಶಿವಸಂಪ್ರದಾಯದೊಂದಿಗೂ ಮಿಳಿತವಾಗಿವೆ.
ಅಕ್ಷಯ ತೃತೀಯಕ್ಕೆ ಕಥೆಗಳ ಹಿನ್ನೆಲೆ ಇರುವುದಷ್ಟೇ ಅಲ್ಲ, ಭಾರತದ ಶ್ರದ್ಧಾಜಗತ್ತಿನ ಆಚರಣೆಗಳಿಗೂ ಇದು ಪ್ರಶಸ್ತವಾದ ದಿನ. ಬೇರೆ ದಿನಗಳಂದು ಶುಭಕಾರ್ಯಕ್ಕೆ ಶುಭಮುಹೂರ್ತವನ್ನು ಹುಡುಕಿದರೆ ಅಕ್ಷಯ ತೃತೀಯಾ ದಿನದಂದು ಮಾತ್ರ ಶುಭಕಾರ್ಯಕ್ಕೆ ದಿನವಿಡೀ ಮುಹೂರ್ತವೇ. ಹಾಗಾಗಿ ಶಾಂತಿಕ, ಪೌಷ್ಟಿಕ ಮತ್ತು ಉಪನಯನಾದಿ ಸಂಸ್ಕಾರಕರ್ಮಗಳನ್ನು ಈ ದಿನದಂದು ಮಾಡುವುದಿದೆ. ವಿಶ್ವಪ್ರಸಿದ್ಧ ಪುರಿ ಜಗನ್ನಾಥನ ರಥೋತ್ಸವ ಮೊದಲುಗೊಳ್ಳುವುದು ಈ ದಿನದಂದೇ. ಅಕ್ಷಯ ತೃತೀಯಾ, ಅಕ್ಷತ ತದಿಗೆ, ಆಖಾತೀಜ್ – ಹೀಗೆ ನಾನಾ ಹೆಸರುಗಳಲ್ಲಿ ಗುರುತಾಗಿರುವ ಈ ಹಬ್ಬವು ಕರ್ನಾಟಕ, ಒಡಿಶಾ, ಉತ್ತರಪ್ರದೇಶ, ಮಹಾರಾಷ್ಟ್ರ ಮತ್ತು ಪಶ್ಚಿಮವಂಗ ರಾಜ್ಯಗಳಲ್ಲಿ ವಿಶೇಷವಾಗಿ ಆಚರಣೆಯಲ್ಲಿದೆ.
ಮಾನವನು ಸಮಾಜಜೀವನಕ್ಕೆ ಬಂದಾಗಿನಿಂದಲೂ ಸಂಪತ್ತಿಗೆ ಇನ್ನೊಂದು ಹೆಸರೆಂದರೆ ಬಂಗಾರ ಎನ್ನುವ ಭಾವನೆ ಬೆಳೆದುಬಂದಿದೆ. ಅದು ಅಸತ್ಯವೇನಲ್ಲ. ಜಗತ್ತಿನ ಚಾಲ್ತಿ ಹಣಗಳು ಒಂದು ದಿನ ಹೇಳಹೆಸರಿಲ್ಲದೆ ಹೋಗಬಹುದು. ಆದರೆ ಬಂಗಾರ ಮಾತ್ರವೇ ಮಾನವಸಮಾಜ ಇರುವವರೆಗೂ ತನ್ನ ಮೂಲ್ಯವನ್ನು ಉಳಿಸಿಕೊಳ್ಳುತ್ತದೆ. ಹಾಗಾಗಿ ಲೋಕದ ದೃಷ್ಟಿಯಿಂದ ಅದರ ಸಂಗ್ರಹ ತಪ್ಪಲ್ಲ. ಅಕ್ಷಯ ತೃತೀಯಾ ದಿನವು ಅದಕ್ಕೆ ನಿಮಿತ್ತವಾಗುವುದೂ ಸರಿಯೇ.
ಆದರೆ ಬೆಳ್ಳಿ, ಬಂಗಾರ, ಭೂಮಿ ಇತ್ಯಾದಿಗಳ ಸಂಗ್ರಹಕ್ಕೆ ಪ್ರಶಸ್ತವಾದ ದಿನ ಎಂಬುದರ ಜೊತೆಗೇ ಅಕ್ಷಯ ತೃತೀಯಾ ಎನ್ನುವುದು ದಾನಕ್ಕೂ ಪ್ರಶಸ್ತವಾಗಿದೆ ಎಂಬುದನ್ನು ನೆನೆದುಕೊಳ್ಳಬೇಕು. ದ್ರವ್ಯಸಂಗ್ರಹವು ಈ ಲೋಕದ ಜೊತೆಗಿನ ನಮ್ಮ ಬಂಧನವನ್ನು ಇನ್ನಷ್ಟು ಬಿಗಿಗೊಳಿಸಿದರೆ ದಾನವೆಂಬುದು ಆ ಬಂಧನದಿಂದ ಬಿಡುಗಡೆಯಾಗಿದೆ. ಬಿಡುಗಡೆ ಮತ್ತು ಬಂಧನಗಳ ನಡುವೆ ಸಮತೋಲನವನ್ನು ಕಾಯ್ದುಕೊಂಡು ಪರಮಲೌಕಿಕರೂ ಅಥವಾ ಪೂರ್ತಿ ಲೋಕಾತೀತರೂ ಆಗದೆ ಬದುಕುವ ಕಮಲದೆಲೆಯ ವಿದ್ಯೆಯನ್ನು ಆವಾಹಿಸಿಕೊಳ್ಳಬೇಕು. ಅಕ್ಷಯ ತೃತೀಯಾ ದಿನವು ಅಂಥದೊಂದು ಪರ್ವಕಾಲ.