ಹಬ್ಬದ ಸಾಂಪ್ರದಾಯಿಕ ಮನೆ ಅಲಂಕಾರ
ಹಬ್ಬಗಳು ಎಂದರೆ ಮನೆ ಅಲಂಕರಿಸುವುದೇ ದೊಡ್ಡ ಸಂಭ್ರಮ. ಇನ್ನು ಯುಗಾದಿ ಎಂದರೆ ಕೇಳಬೇಕೆ? ಈ ಸಂಭ್ರಮ ಇನ್ನಷ್ಟು ಹೆಚ್ಚಿರುತ್ತದೆ. ಇನ್ನೆರೆಡು ದಿನಗಳಲ್ಲಿ ಹಬ್ಬ ಬಂದೇ ಬಿಟ್ಟಿತು. ದಿಢೀರನೆ ಮನೆ ಅಲಂಕಾರ ಮಾಡುವುದು ಹೇಗೆ ಎಂಬ ತಲೆಬಿಸಿಯೇ? ಚಿಂತೆ ಬಿಡಿ. ತಕ್ಷಣ ಮನೆ ಅಲಂಕಾರ ಶುರು ಮಾಡಿಕೊಳ್ಳಿ.
l ವಸ್ತುಗಳನ್ನು ಒಪ್ಪವಾಗಿ ಜೋಡಿಸಿ: ಮನೆಯನ್ನು ಹಬ್ಬಕ್ಕೆ ಅಣಿಯಾಗಿಸಲು ಸ್ವಚ್ಛತೆಯೇ ಪ್ರಧಾನ. ಮನೆಯಲ್ಲಿ ವಸ್ತುಗಳನ್ನು ಎಲ್ಲೆಂದರಲ್ಲಿ ಹರಡಬೇಡಿ. ಕರ್ಟನ್, ಬೆಡ್‌ಶೀಟ್, ಮ್ಯಾಟ್‌ಗಳನ್ನು ಒಗೆದು ಬಳಸಿ. ಶೋಕೆಸ್‌ನಲ್ಲಿಟ್ಟಿರುವ ವಸ್ತುಗಳನ್ನು ಸರಿಯಾಗಿ ಜೋಡಿಸಿ. ಅಡುಗೆ ಮನೆಯ ಶುಚಿಯನ್ನು ಬೇಗನೇ ಮಾಡಿ.
ಬಿಸಾಡಿಬಿಡಿ: ಮೊದಲು ಮನೆಯಲ್ಲಿರುವ ಉಪಯುಕ್ತವಲ್ಲದ, ವಸ್ತುಗಳ ಮೋಹವನ್ನು ಬಿಟ್ಟುಬಿಡಿ, ಇವನ್ನೆಲ್ಲ ಮನೆಯಿಂದಾಚೆ ಹಾಕಿ. ಹೆಚ್ಚಾಗಿ ನಿಂತು ಹೋಗಿರುವ ಗಡಿಯಾರ, ಒಡೆದುಹೋದ ಕನ್ನಡಿ, ಸೋರುತ್ತಿರುವ ಗಾಜಿನ ಲೋಟಗಳು ಅದ್ಹೇಗೋ ಮನೆಯಲ್ಲಿ ಉಳಿದಿರುತ್ತವೆ. ಇವನ್ನೆಲ್ಲ ಮೊದಲು ಆಚೆ ಹಾಕಿರಿ. ಫೋಟೊಗಳಿಲ್ಲದ ಫ್ರೇಮು..
l ಅಲಂಕಾರಕ್ಕಿರಲಿ ಪ್ರಾಧಾನ್ಯ: ನಿಮ್ಮ ಹವ್ಯಾಸಕ್ಕೆ ಮಾಡಿರುವ ಪೇಂಟಿಂಗುಗಳು, ಕರಕುಶಲ ವಸ್ತುಗಳನ್ನು ಅವುಗಳ ಪೆಟ್ಟಿಗೆ ಆಚೆ ತನ್ನಿ. ಅವೂ ಹೊಸಗಾಳಿಯನ್ನು ಸೇವಿಸಲಿ. ಜೊತೆಗೆ ಅಲ್ಲಲ್ಲಿ ಇಷ್ಟವೆಂದು ಕೊಂಡು ತಂದ ವಸ್ತುಗಳನ್ನು ವರೆಸಿ, ಮಿಂಚಿಸಿ ಹೊಂದಿಸಿಡಿ. ಆಲಂಕಾರಿಕ ವಸ್ತುಗಳನ್ನಿಟ್ಟು ಆಕರ್ಷಕಗೊಳಿಸಿ. ಹೂಕುಂಡ, ವಾಲ್‌ಹ್ಯಾಂಗಿಂಗ್ ಹಾಕಿ ಮನೆಯ ಮೆರುಗು ಹೆಚ್ಚಿಸಿ.
l ಮಾವಿನೆಲೆ ತೋರಣ: ಹಸಿರು ತೋರಣಕ್ಕೆ ಒಂದೇ ಗಾತ್ರದ ಹಚ್ಚಹಸಿರು ಎಲೆಗಳನ್ನು ಜೋಡಿಸಿ. ಎಲೆಯ ನಡುವೆ ಒಂದೊಂದು ಸೇವಂತಿಗೆ ಅಥವಾ ಚೆಂಡುಹೂಗಳನ್ನೂ ಜೋಡಿಸಬಹುದಾಗಿದೆ. ಕೆಲವೆಡೆ ನಿಂಬೆಹಣ್ಣನ್ನೂ ಪೋಣಿಸುತ್ತಾರೆ. ಇನ್ನೂ ಕೆಲವೆಡೆ ಕೆಂಪು ಮೆಣಸನ್ನು ಜೋಡಿಸಿ, ವರ್ಣ ಸಂಯೋಜನೆ ಚಂದಗಾಣಿಸುತ್ತಾರೆ. ಮಹತ್ವ. ಮನೆಯ ಪ್ರವೇಶದ್ವಾರಕ್ಕೆ ತೋರಣದೊಂದಿಗೆ ಬೇವಿನ ತಳಿರನ್ನೂ ಬಾಗಿಲಿನ ಎರಡೂ ಕಡೆ ಇಳಿಬಿಡುತ್ತಾರೆ. ಬೇವಿನ ಟಿಸಿಲುಗಳನ್ನು ಹೀಗೆ ಕಟ್ಟುವಾಗ, ಅವುಗಳಲ್ಲಿ ಮಲ್ಲಿಗೆಯನ್ನೂ ಸೇರಿಸಿದರೆ ಮನೆ ಘಮಘಮಿಸುತ್ತದೆ. ಇದು ಶುಭಸೂಚಕವೂ ಹೌದು. ಇದು ಮನೆ ಮಂದಿಗೆ ಅದೃಷ್ಟವನ್ನು ತಂದುಕೊಡುತ್ತದೆ ಎಂದು ನಂಬಲಾಗಿದೆ. ಹಸಿರು ತೋರಣ ಮನಸಿಗೆ ಹೊಸ ಉಲ್ಲಾಸ ಕೊಡುತ್ತದೆ.
l ಹೂಗಳು ಅಂದ: ಮನೆಯ ಮುಖ್ಯ ದ್ವಾರ ಮತ್ತು ಪೂಜಾ ಕೊಠಡಿಯನ್ನು ಶುಚಿಗೊಳಿಸಿದ ಬಳಿಕ ಮಲ್ಲಿಗೆ ದಂಡೆಯಿಂದ ಅದನ್ನು ಅಲಂಕರಿಸಿ. ಈ ಹೂವು ಮನೆ ಪೂರ್ತಿ ಸುವಾಸನೆ ಹರಡುತ್ತದೆ. ಇನ್ನು ಮನೆಯ ಮುಂದಿನ ತುಳಸಿ ಗಿಡಕ್ಕೆ ಬೇವು, ಹೂಗಳನ್ನು ಕಟ್ಟಿರಿ. ದೇವರ ಮನೆಯಲ್ಲಿ ಹಚ್ಚುವ ಗಂಧ, ತುಳಸಿ, ಸಾಂಬ್ರಾಣಿಯ ಪರಿಮಳ ಮನೆಯಲ್ಲಿ ಹರಡಿದರೆ ಮನೆಯಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗುತ್ತದೆ.
l ರಂಗೋಲಿ: ಮನೆ ಮುಂದೆ, ದೇವರ ಕೋಣೆಯಲ್ಲಿ ಆಕರ್ಷಕವಾದ ರಂಗೋಲಿ ಚಿತ್ತಾರಗಳನ್ನು ಬಿಡಿಸಿದರೆ ಮನೆಯ ಅಂದ ಹೆಚ್ಚುತ್ತದೆ. ಲಕ್ಷ್ಮಿ ಕಳೆ ಎದ್ದು ಕಾಣುತ್ತದೆ. ಬಣ್ಣಬಣ್ಣದ ರಂಗೋಲಿ ಬಳಸಿ ಚಿತ್ತಾರಗಳನ್ನು ತೆರೆಯಿರಿ. ಬಣ್ಣದ ಬದಲಿಗೆ ಉಳಿದಿರುವ ಹೂವಿನ ಎಸಳನ್ನೂ ಬಳಸಬಹುದು. ಬೇವಿನೆಲೆಯ ಚೂರುಗಳಿಂದಲೂ ಮಾವಿನ ಚಿಗುರಿನಿಂದಲೂ ರಂಗೋಲಿಯನ್ನು ಅಲಂಕರಿಸಬಹುದಾಗಿದೆ.
l ಬಾಳೆಲೆಯೂ.. ಅಡಕೆ ಹಾಳೆಯೂ: ಹಬ್ಬದೂಟವನ್ನು ಸವಿಯಲು ಒಂದೇ ಬಗೆಯ ತಟ್ಟೆಗಳಿರದೇ ಇದ್ದಲ್ಲಿ ಬಾಳೆಲೆಯನ್ನು ಹೊಂದಿಸಿಕೊಳ್ಳಿ. ಇಲ್ಲವೇ ಅಡಕೆಹಾಳೆಯ ತಟ್ಟೆ ಬಟ್ಟಲುಗಳನ್ನು ತಂದರೂ ಹಬ್ಬದೂಟಕ್ಕೆ ವಿಶೇಷ ರುಚಿ ಬರುತ್ತದೆ.