ನವ ದಂಪತಿಗಳಿಗೆ ಯುಗಾದಿಸಂಭ್ರಮ, 
ಸಡಗರ

ನವ ದಂಪತಿಗಳಿಗೆ ಯುಗಾದಿಸಂಭ್ರಮ, ಸಡಗರ

Published on

ಮತ್ತೆ ಬಂತು ಯುಗಾದಿ: ನವೋಲ್ಲಾಸಕ್ಕೆ ಬುನಾದಿ

ಭಾರತೀಯರಲ್ಲಿ ಭಾವ-ಬಂಧ ಬೆಸೆಯುವ ಹಬ್ಬಗಳಿಗೆ ಮಹತ್ವದ ಸ್ಥಾನ. ಸಂತಸ, ನೆಮ್ಮದಿಯನ್ನು ತರುವ ಹಬ್ಬಗಳ ಆಚರಣೆಗೂ ಬದುಕಿಗೂ ಅವಿನಾಭಾವ ನಂಟು.
ಭಾರತೀಯರ ಹೊಸ ವರ್ಷಕ್ಕೆ ಸ್ವಾಗತ ಕೋರಿ ಹೊಸ ಹರ್ಷವನ್ನುಂಟುಮಾಡುವ ಯುಗಾದಿ ಸಂಭ್ರಮೋಲ್ಲಾಸದ ಹಬ್ಬ. ಅದರಲ್ಲೂ ಹೊಸದಾಗಿ ಮದುವೆಯಾದವರಿಗೆ ಯುಗಾದಿ ಇನ್ನಷ್ಟು ವಿಶೇಷ.

ಹೊಸ ವರುಷ...
ಮರಗಳಲ್ಲಿ ಹಳೆಯ ಎಲೆಗಳು ಕಳಚಿ ಹೊಸ ಚಿಗುರು ಮೂಡುವಂತೆ, ನವದಂಪತಿಗಳು ಹೊಸ ಬದುಕಿಗೆ ಅಡಿಯಿಡುತ್ತಾರೆ. ಚೈತ್ರ–ವಸಂತರ ಆಗಮನದಿಂದ ಪರಿಸರ ಹಸಿರಾದಂತೆ, ಜೋಡಿ ಜೀವಗಳೂ ಹೊಸ ಹುರುಪು ಪಡೆಯುತ್ತವೆ.

ಮೊದಲ ಹಬ್ಬದ ಹರುಷ...
ನವ ಮದುಮಗಳಿಗೆ ಯುಗಾದಿ ಬಂತೆಂದರೆ ಅದೇನೋ ಸಡಗರ. ತವರಿಗೆ ತೆರಳುವ ಸಂಭ್ರಮ.  ಜೀವನ ಸಂಗಾತಿಯೊಂದಿಗೆ ವರ್ಷದ ಮೊದಲ ಹಬ್ಬ ಆಚರಿಸುವ ಖುಷಿ.
ಸಾಮಾನ್ಯವಾಗಿ ಯುಗಾದಿಯಲ್ಲಿ ಬೇವು–ಬೆಲ್ಲವನ್ನು ಸವಿಯಲಾಗುತ್ತದೆ. ಬದುಕಿನಲ್ಲಿ ಎದುರಾಗುವ ಸುಖ– ದುಃಖಗಳನ್ನು ಬೇವು ಬೆಲ್ಲದಂತೆ ಸಮ ಪ್ರಮಾಣದಲ್ಲಿ ಸ್ವೀಕರಿಸಬೇಕು. ಅದಕ್ಕಾಗಿಯೇ ಹೊಸ ಹರುಷವನ್ನು ಹೊಸತು ಹೊಸತಾಗಿಯೇ ತರುತ್ತದೆ ಯುಗಾದಿ.

ಯುಗಾದಿ ಸಂದೇಶ...
ನವ ದಂಪತಿಗಳಿಗೆ ಬೇವು ಬೆಲ್ಲ ತುಸು ಹೆಚ್ಚಿನ  ಸಲಹೆಯನ್ನೇ ನೀಡುತ್ತದೆ. ಮದುವೆಯಾದ ಹೊಸದರಲ್ಲಿ ಭಿನ್ನಾಭಿಪ್ರಾಯಗಳು, ಮನಸ್ತಾಪಗಳು, ಸಿಹಿ, ಕಹಿ ಘಟನೆಗಳು ಎಲ್ಲವೂ ಸಹಜ. ಅವುಗಳನ್ನು ಸಮಾನವಾಗಿ ಸ್ವೀಕರಿಸಿ ಹೊಂದಿಕೊಂಡು ಹೋಗಬೇಕು ಎನ್ನುವ ಸಂದೇಶ ನೀಡುತ್ತದೆ. 

ತವರಿನಲ್ಲಿ ಸಂಭ್ರಮ
ಪ್ರತಿ ವರ್ಷ ಅಪ್ಪ–ಅಮ್ಮನೊಂದಿಗೆ ಆಚರಿಸುತ್ತಿದ್ದ ಯುಗಾದಿಯನ್ನು ಮದುವೆಯ ಬಳಿಕ ಜೀವನ ಸಂಗಾತಿಯೊಂದಿಗೆ ತವರಿನಲ್ಲೇ ಆಚರಿಸುತ್ತಾಳೆ. ಹೊಸ ಹಬ್ಬಕ್ಕೆ ಮನೆ ಬಂದ ಅಳಿಯ ಮಗಳಿಗೆ ಎಣ್ಣೆ ಸ್ನಾನ ಮಾಡಿಸಿ, ಆರತಿ ಎತ್ತಿ, ಉಡುಗೊರೆ ನೀಡುತ್ತಾರೆ. ನಂತರ ಸಂತಸದ ಸಿಹಿಯೂಟ. ಸಂಜೆ ವೇಳೆಗೆ ಪುರೋಹಿತರಿಂದ ಪಂಚಾಂಗ ಶ್ರವಣ... ಮತ್ತದೇ ಭವಿಷ್ಯದ ಭರವಸೆಯಲ್ಲಿ ಮತ್ತೊಂದು ಯುಗಾದಿಯತ್ತ ನಮ್ಮ ಪಯಣ. ಯುಗ ಯುಗಾದಿ ಕಳೆದರೂ...

Advertisement
Festivals in Karnataka – A Prajavani Special Feature | ಕರ್ನಾಟಕದ ಹಬ್ಬಗಳು – ಪ್ರಜಾವಾಣಿಯ ವಿಶೇಷ ವೈಶಿಷ್ಟ್ಯ | Karnatakada Habbagalu – Prajavaniya Vishesha Vaishishtya
www.prajavani.net