ಅಕ್ಷಯ ತೃತೀಯ | ಚಿನ್ನಕ್ಕಿಂತಲೂ ಚೆನ್ನ ಈ ಬೆಳ್ಳಿ ಆಭರಣ

ಅಕ್ಷಯ ತೃತೀಯ | ಚಿನ್ನಕ್ಕಿಂತಲೂ ಚೆನ್ನ ಈ ಬೆಳ್ಳಿ ಆಭರಣ

Published on

-ಸುಶೀಲಾ ಡೋಣೂರ

ಈ ಅಕ್ಷಯ ತೃತೀಯ ಸಂದರ್ಭದಲ್ಲಿ ಬಂಗಾರವಂತೂ ಲಕ್ಷ ರೂಪಾಯಿ ಗಡಿ ದಾಟುತ್ತಿದೆ. ಇನ್ನೇನಿದ್ದರೂ ಉಳ್ಳವರ ಕಣ್ಣ ಕನಸದು ಎಂದು ನಿರಾಶರಾಗುವ ಅಗತ್ಯವೇನಿಲ್ಲ. ಬಂಗಾರಕ್ಕೆ ಸರಿಸಮನಾಗಿ ಬಂಗಾರದ ಅಂಗಡಿಗಳಲ್ಲಿ ಕಣ್ಣು ಕೋರೈಸುತ್ತಿರೊ ಚಿನ್ನ ಲೇಪಿತ ಬೆಳ್ಳಿ ಆಭರಣಗಳ ಮೇಲೊಮ್ಮೆ ಕಣ್ಣಾಡಿಸಿ ಬನ್ನಿ, ಇನ್ನೇಕೆ ಬೇಕು ಬಂಗಾರ ಎನ್ನುವಷ್ಟರ ಮಟ್ಟಿಗೆ ಬೆಳ್ಳಿ ಆಭರಣಗಳು ಚಿನ್ನದ ಹೊದಿಕೆ ಹೊತ್ತು ಲಕಲಕ ಎನ್ನುತ್ತಿವೆ.

ಬನ್ನಿ, ಕೈಗೆಟುಕುವ ಈ ಐಷಾರಾಮಿ ಚಿನ್ನ ಲೇಪಿತ ಬೆಳ್ಳಿ ಆಭರಣಗಳು ಹೇಗೆ ಈ ತಲೆಮಾರಿನ ಯುವಜನತೆಯ ಮನಸೂರೆಗೊಳ್ಳುತ್ತಿವೆ ಅಂತೊಮ್ಮೆ ನೋಡೋಣ. ಅಕ್ಷಯ ತೃತೀಯ ಸಡಗರದ ಸಂದರ್ಭದಲ್ಲಿ ಚಿನ್ನದ ಬೆಲೆ ಆಕಾಶಕ್ಕೆ ಮುಖ ಮಾಡಲು ಶುರು ಮಾಡಿದ ವರ್ಷದಿಂದಲೇ ಇತ್ತ ಬೆಳ್ಳಿ ಆಭರಣ ಚಿನ್ನದ ಕಳೆ ಹೊತ್ತು ಬರುವ ಜರೂರಿಗೆ ಒಳಗಾಯಿತು. ಕಳೆದ ಹಲವಾರು ವರ್ಷಗಳಿಂದ, ಚಿನ್ನ ಲೇಪಿತ ಆಭರಣಗಳು ಚಿನ್ನದ ಆಭರಣಗಳ ಅನುಕರಣೆ ಮಾತ್ರವಲ್ಲದೆ, ಕೈಗೆಟುಕುವ ಐಷಾರಾಮಿ ಪ್ರವೃತ್ತಿಯಾಗಿ ಬದಲಾಗಿವೆ.

ಹೆಚ್ಚು ಹೆಚ್ಚು ಜನರು ಕೈಗೆಟುಕುವ, ಸುಸ್ಥಿರ ಮತ್ತು ಟ್ರೆಂಡಿ ಆಭರಣಗಳನ್ನು ಬಯಸುತ್ತಿರುವುದರಿಂದ, ಚಿನ್ನ ಲೇಪಿತ ಆಭರಣಗಳು ಎಲ್ಲರಿಗೂ ಉತ್ತಮ ಆಯ್ಕೆಯಾಗಿ ಲಭ್ಯವಾಗುತ್ತಿವೆ. ಚಿನ್ನದಂತೆ ಕಾಣುವ, ಚಿನ್ನವಲ್ಲದ, ಆದರೆ ಚಿನ್ನದ ಚಹರೆ ಹೊಂದಿರುವ ಈ ಆಭರಣಗಳು ಹೆಚ್ಚು ಜನರ ಆದ್ಯತೆಯಾಗಿ ಬದಲಾಗುತ್ತಿವೆ.

ಬಾಳಿಕೆಗೆ ಮೋಸವೇನಿಲ್ಲ

ಬಂಗಾರ ಲೇಪಿತ ಬೆಳ್ಳಿ ಆಭರಣಗಳ ಬಾಳಿಕೆಯಲ್ಲಿ ರಾಜಿ ಏನಿಲ್ಲ, ಬೆಳ್ಳಿಯ ಬೇಸ್ ಚಿನ್ನಕ್ಕಿಂತ ಹೆಚ್ಚು ಗಟ್ಟಿಯಾಗಿರುತ್ತದೆ. ಹೊಳಪಿನಲ್ಲೂ ಕಡಿಮೆ ಇರುವುದಿಲ್ಲ. ವರ್ಷಗಳ ಬಳಕೆಯ ನಂತರ ಚಿನ್ನದ ಬಣ್ಣದಲ್ಲಿ ವ್ಯತ್ಯಾಸ ಕಂಡುಬಂದರೂ, ಕಡಿಮೆ ಖರ್ಚಿನಲ್ಲಿ ಮತ್ತೆ ಸುಲಭವಾಗಿ ಚಿನ್ನದ ಲೇಪನ ಮಾಡಿಸಬಹುದು.

ಮೊದಲೆಲ್ಲ ಕಾಸ್ಮೆಟಿಕ್ ಅಂಗಡಿಗಳಲ್ಲಿ ಮಾತ್ರ ದೊರಕುತ್ತಿದ್ದ ಈ ಆಭರಣಗಳು ಪ್ರಮುಖ ಚಿನ್ನದ ಅಂಗಡಿಗಳಲ್ಲಿಯೂ ಲಭ್ಯವಾಗುತ್ತಿವೆ. ಮಲಬಾರ್, ಜೊಯಾಲೋಕಾಸ್, ಆಭರಣ್, ನವರತ್ನ ಸೇರಿದಂತೆ ಅನೇಕ ಮಳಿಗೆಗಳಲ್ಲಿ ಈ ಆಭರಣಕ್ಕಾಗಿ ಪ್ರತ್ಯೇಕ ಕೌಂಟರ್ ಗಳನ್ನು ನಿರ್ಮಿಸಲಾಗಿದೆ. ಚಿನ್ನದಷ್ಟು ವೈವಿಧ್ಯಮಯ ಅಲ್ಲದಿದ್ದರೂ ಚಿನ್ನಕ್ಕಿಂತಲೂ ವಿಭಿನ್ನವಾದ ವಿನ್ಯಾಸಗಳನ್ನು ಇಲ್ಲಿ ಕಾಣಬಹುದು.

ಹೂಡಿಕೆಗೆ ಸೂಕ್ತವಲ್ಲ

ಆಭರಣಗಳನ್ನು ಒಂದು ಹೂಡಿಕೆಯ ಆಯ್ಕೆಯಾಗಿ ಖರೀದಿಸುವವರಿಗೆ ಚಿನ್ನ ಲೇಪಿತ ಬೆಳ್ಳಿ ಆಭರಣ ಸೂಕ್ತವಲ್ಲ. ಈ ಆಭರಣಗಳ ರೀಸೇಲ್ ಮೌಲ್ಯ ಹೆಚ್ಚಿರುವುದಿಲ್ಲ. ಹೀಗಾಗಿ ಕಷ್ಟಕಾಲದಲ್ಲಿ ಸಹಾಯಕವಾಗುವ ಆಭರಣ ಇದಲ್ಲ. ಖರೀದಿಸಿ, ಧರಿಸಿ ಖುಷಿಪಡಬೇಕು ಎನ್ನುವವರಿಗೆ ಮಾತ್ರ ಈ ಆಭರಣಗಳು ಸೂಕ್ತ.

ನಿರ್ವಹಣೆ ಹೇಗೆ?

  • ಪ್ಲಾಸ್ಟಿಕ್ ಕವರ್ ನಲ್ಲಿ ಹಾಕಿಡಿ

  • ಆಗಾಗ ಕಾಟನ್ ಬಟ್ಟೆಗಳಿಂದ ಸ್ವಚ್ಛಗೊಳಿಸಿ

  • ಬಿಸಿ ನೀರು ತಾಗಿಸಬೇಡಿ

  • ಡಿಯೋಡ್ರೆಂಟ್ ಪರ್ಫ್ಯೂಮ್‌ನಂತಹ ರಾಸಾಯನಿಕಗಳನ್ನು ತಾಗಿಸಬೇಡಿ

  • ಅಪರೂಪದ ಸಂದರ್ಭಗಳಲ್ಲಿ ಕಾರ್ಯಕ್ರಮಗಳಲ್ಲಿ ಮಾತ್ರ ಬಳಸಿ, ದೈನಂದಿನ ಬಳಕೆಗೆ ಸೂಕ್ತವಲ್ಲ

  • ಈ ಆಭರಣಗಳ ವಿನ್ಯಾಸ ಸರಳವಾಗಿದ್ದಷ್ಟು ನಿರ್ವಹಣೆ ಸುಲಭ. ಈ ಆಭರಣಗಳನ್ನು ಆಯ್ಕೆ ಮಾಡಿಕೊಳ್ಳುವಾಗ ತೀರಾ ಸೂಕ್ಷ್ಮವಾದ ವಿನ್ಯಾಸಗಳಿಗೆ ಹೋಗಬೇಡಿ

Advertisement
Festivals in Karnataka – A Prajavani Special Feature | ಕರ್ನಾಟಕದ ಹಬ್ಬಗಳು – ಪ್ರಜಾವಾಣಿಯ ವಿಶೇಷ ವೈಶಿಷ್ಟ್ಯ | Karnatakada Habbagalu – Prajavaniya Vishesha Vaishishtya
www.prajavani.net