ಜಾಗತಿಕ ಸಂಪ್ರದಾಯಗಳು
ಯುಗಾದಿಯ ಪುಳಕ: ಮೈಗೂ, ಮನಸಿಗೂ ಹೊಸತನದ ಜಳಕ...
ಹೊಸತು ಎಂದರೆ ಹಾಗೆಯೇ... ಹೊಸ ಬಟ್ಟೆಯ ಹೊಳಪು, ಹೊಸ ಶಾಲೆಯ ಕುತೂಹಲ, ಹೊಸ ಊರಿನ ಸೆಳೆತ ಇದ್ದಂತೆ, ಸೊಬಗಿನ ಸುಗ್ಗಿಯನ್ನೇ ಹೊತ್ತುತರುವ ಈ ನವೀನತೆಗೆ ಆಹ್ಲಾದದ ಸೋಂಕು. ಮಿಗಿಲಾಗಿ, ಎಲ್ಲವನ್ನೂ ಪೊರೆಯುವ ಧರೆಯೇ ಮರು ಜೀವತಳೆದಂತೆ ಹೊಸತನವನ್ನು ಆವಾಹಿಸಿಕೊಳ್ಳುವ ಪರಿಯೇ ಸೋಜಿಗ. ಪ್ರಕೃತಿಯ ಪರಿಪೂರ್ಣತೆಯ ಪರಾಕಾಷ್ಠೆಗೆ ‘ಯುಗಾದಿ’ ಎಂಬ ಹೆಸರು.
ಬೇರೆಲ್ಲ ಹಬ್ಬಗಳಿಗಿಂತಲೂ ಯುಗಾದಿ ತರುವ ನೆಮ್ಮದಿಗೆ ಮೌಲ್ಯ ಹೆಚ್ಚು. ಮುಂಬರುವ ಮುಂಗಾರು, ಹಸಿರುಡುವ ಭೂಮ್ತಾಯಿ, ಸಮೃದ್ಧವಾಗುವ ಬದುಕು– ಬೇಸಿಗೆಯ ಬಿಸಿಯಲ್ಲೇ ತಂಪಿನ ಕನಸು ಕಟ್ಟುವ ಯುಗಾದಿಗೆ ಗಡಿ, ಸೀಮೆಗಳ ಗೊಡವೆಯಿಲ್ಲ.
ಗ್ರಾಮೀಣ ಬಾಯಲ್ಲಿ ‘ಉಗಾದಿ’ ಎಂದೇ ಕರೆಸಿಕೊಳ್ಳುವ ಈ ಹಬ್ಬಕ್ಕೆ ಪ್ರಕೃತಿಯ ಆರಾಧನೆ, ಆತ್ಮ ಶುದ್ಧಿ, ಜಡತ್ವವನ್ನು ಕಳೆಯುವ ಹಂಬಲ. ಸುಖ–ದಃಖಗಳನ್ನು ಏಕಾಕಾರವಾಗಿ ಸ್ವೀಕರಿಸುವ ಮಾವು–ಬೇವಿನ ಸಾಂಕೇತಿಕ ರೂಪವಾಗಿಯೂ ಯುಗಾದಿ ಅಡಿಯಿಡುತ್ತದೆ. ಎಣ್ಣೆಸ್ನಾನವು ಜಡತ್ವ ಕಳೆದು ಮನಸ್ಸಿಗೂ ಜಳಕದ ಪುಳಕ ಮಾಡಿಸುವ ಹಾಗೂ ದೇಹಕ್ಕೆ ಹೊಸ ಕಸುವು ತರುವ ಮಾಯಾಶಕ್ತಿಯೇ ಹೌದು. ಹೋಳಿ ಹುಣ್ಣಿಮೆ ಕಳೆದು, ಮೊದಲ ಮಳೆ ಇಳೆಯ ತಬ್ಬಿ, ಗಿಡಮರ, ತರುಲತೆಗಳಲ್ಲಿ ಹಸಿರು ಪುಟಿಯುವ ಈ ತವಕವೇ ಹಬ್ಬದ ರೂಪ ತಾಳುವ ಸೋಜಿಗಕ್ಕೆ ಎಣೆಯಿಲ್ಲ.
ಚೈತ್ರ ಮಾಸದೊಂದಿಗೆ ಅಡಿಯಿಡುವ ಯುಗಾದಿ ಸಮೃದ್ಧಿಗೆ ಪರ್ಯಾಯ ಎನಿಸಿದ್ದು, ಹೆಸರು ಬೇರೆಯಾದರೂ, ಇಡೀ ದೇಶವನ್ನು ಆವರಿಸಿಕೊಂಡಿದೆ. ಇಲ್ಲಿ ಯುಗಾದಿಯಾದರೆ, ಬಂಗಾಳದಲ್ಲಿ ನೊಬೋ ಬರ್ಷೋ. ಮಹಾರಾಷ್ಟ್ರದಲ್ಲಿ ಗುಡಿ ಪಡ್ವಾ, ತಮಿಳುನಾಡಿನಲ್ಲಿ ಪುತ್ತಂಡು. ತೆಲಂಗಾಣ, ಆಂಧ್ರದಲ್ಲೂ ಯುಗಾದಿಯ ಸಡಗರ.
ಹೊಸ ವರ್ಷದ ನವೋಲ್ಲಾಸವನ್ನು ಒಂದೊಂದು ದೇಶಗಳೂ ವಿಭಿನ್ನ ಆಚರಣೆಗಳಿಂದ ಹೊಸ ವರ್ಷ ಬರಮಾಡಿಕೊಳ್ಳುತ್ತವೆ. ನಮಗೆ ಯುಗಾದಿ ಹೊಸತನ ನೀಡಿದರೆ, ಥಾಯ್ಲೆಂಡ್, ಚೀನಾ, ಜಪಾನ್‌ನಲ್ಲಿ ಭಿನ್ನ ಸಂಸ್ಕೃತಿ, ಆಚರಣೆ ರೂಢಿಯಲ್ಲಿವೆ. ಜನವರಿ 1ರಂದು ನವ ವರ್ಷ ಆಚರಿಸುವ ದೇಶಗಳ ಪಟ್ಟಿ ಒಂದೆಡೆಯಾದರೆ, ಗ್ರೆಗೋರಿಯನ್, ಚೈನೀಸ್, ಇಸ್ಲಾಂ ಮೊದಲಾದ ಕ್ಯಾಲೆಂಡರ್ ಆಧರಿಸಿ ಹೊಸ ವರ್ಷ ನಿಗದಿಪಡಿಸುವ ದೇಶಗಳದ್ದೂ ದೊಡ್ಡ ಸಾಲೇ ಇದೇ. ಧರ್ಮದ ಆಚರಣೆ ಇಲ್ಲಿ ಮುಖ್ಯ.
ಧಾರ್ಮಿಕ ಆಚರಣೆಯಲ್ಲಿ ಸಾಮ್ಯತೆ: ಏಷ್ಯಾದ ಜನರ ಸಾಂಪ್ರದಾಯಕ ಆಚರಣೆಯ ಕೆಲ ಅಂಶಗಳು ಭಾರತವನ್ನೇ ಹೋಲುತ್ತವೆ. ಥಾಯ್ ಜನರು ‘ಸೊಂಕ್ರಾನ್’ ಹೆಸರಿನಲ್ಲಿ ಹೊಸ ವರ್ಷವನ್ನು ಬರಮಾಡಿಕೊಳ್ಳುತ್ತಾರೆ. ಆಗ್ನೇಯ ಏಷ್ಯಾದ ಲಾವೋಸ್ ಸೇರಿದಂತೆ ಕೆಲವು ದೇಶಗಳಲ್ಲೂ ಇದು ಆಚರಣೆಯಲ್ಲಿದೆ. ಇದು ಶುದ್ಧೀಕರಣದ ಮಹತ್ವ ಸಾರುವ ಹಬ್ಬವಾಗಿ ಗುರುತಿಸಿಕೊಂಡಿದೆ.
ಪರಸ್ಪರ ನೀರು ಎರಚುವ ಆಚರಣೆ ಇಲ್ಲಿದ್ದು, ಇದು ಆಶೀರ್ವಾದಕ್ಕೆ ಸಮ ಎಂಬ ನಂಬಿಕೆಯಿದೆ. ಎಲ್ಲಕ್ಕಿಂತ ರೋಚಕ ಎಂದರೆ, ಡ್ರ್ಯಾಗನ್ ಬೋಟ್ ರೇಸ್. ನದಿ, ದೊಡ್ಡ ಸರೋವರಗಳಲ್ಲಿ ದೋಣಿ ಸ್ಪರ್ಧೆಯನ್ನು ನೋಡಲು ಯುಗಾದಿಯ ಈ ಸಮಯಕ್ಕೆ ಜನರು ಕಾತುರದಿಂದ ಕಾಯುತ್ತಾರೆ.
ಸಾಲ ತೀರಿಸುವ ಜನ:
ಫೆಬ್ರುವರಿ ಮಧ್ಯದಲ್ಲಿ ಚೀನಾಕ್ಕೆ ಹೊಸ ವರ್ಷದ ಸಡಗರ. ‘ಟೆಟ್’ ಎಂಬ ಹೆಸರಿನಿಂದ ವಿಯೆಟ್ನಾಂ, ಕೊರಿಯಾದಲ್ಲಿ ಇದು ಆಚರಣೆಯಲ್ಲಿದೆ. ಕೆಲವು ಸಮುದಾಯಗಳಲ್ಲಿ ಭಿನ್ನ ಪದ್ಧತಿಗಳಿವೆ. ಸಾಧ್ಯವಾದಷ್ಟೂ ಸಾಲ ತೀರಿಸುತ್ತಾರೆ. ಸಾಲ ಇಟ್ಟುಕೊಂಡು ವರ್ಷ ಸ್ವಾಗತಿಸುವುದು ಒಳ್ಳೆಯದಲ್ಲ ಎಂಬ ನಂಬಿಕೆ. ಮಕ್ಕಳಿಗೆ ಹಣವನ್ನು ಕೆಂಪು ಕವರ್‌ನಲ್ಲಿ ಇರಿಸಿ ಉಡುಗೊರೆ ನೀಡಲಾಗುತ್ತದೆ. ಹಬ್ಬದ ವಿಶೇಷವೆಂದರೆ ಔತಣಕೂಟ. ಒಂದೊಂದು ಖಾದ್ಯಕ್ಕೂ ಒಂದೊಂದು ಅರ್ಥ. ನೂಡಲ್ಸ್ ದೀರ್ಘಾಯುಷ್ಯ, ಮೀನು ಸಮೃದ್ಧಿ, ಸಿಹಿ ಪದಾರ್ಥ ಸಿಹಿ ಜೀವನ ಪ್ರತಿನಿಧಿಸುತ್ತವೆ. ವರ್ಷಕ್ಕೊಂದು ಪ್ರಾಣಿಯ ಸಂಕೇತಗಳಿದ್ದು, ಪ್ರತಿ 12 ವರ್ಷಗಳಿಗೆ ಅವು ಪುನರಾವರ್ತನೆಯಾಗುತ್ತವೆ. ಹಾವು ಸಂಕೇತಿಸುವ ವರ್ಷದಲ್ಲಿ ಜನಿಸಿದ ಹುಡುಗ, ಇಲಿ ಸಂಕೇತಿಸುವ ವರ್ಷದಲ್ಲಿ ಹುಟ್ಟಿದ ಹುಡುಗಿಯನ್ನು ಮದುವೆಯಾದರೆ ಕಷ್ಟ ಎದುರಾಗುತ್ತದೆ ಎಂಬ ಪುರಾತನ ನಂಬಿಕೆಗಳಿವೆ.
ಜಪಾನ್‌ನಲ್ಲಿ ಗಂಟೆ ಸದ್ದು: 1873ರಲ್ಲಿ ಆಧುನಿಕ ಕ್ಯಾಲೆಂಡರ್ ಅಳವಡಿಕೆ ಬಳಿಕ ಜನವರಿ 1ರಂದು ಜಪಾನ್ ಹೊಸ ವರ್ಷ ಬರಮಾಡಿಕೊಳ್ಳುತ್ತಿದೆ. ಸಾಂಪ್ರದಾಯಿಕ ವರ್ಷಾಚರಣೆ ಮಾಡುವವರೂ ಇದ್ದಾರೆ. ಅಂದು ಮನೆಯನ್ನು ಸ್ವಚ್ಛಗೊಳಿಸಿ, ಎಲ್ಲ ಕೋಣೆಗಳಲ್ಲಿ ಸೋಯಾಬೀನ್ ಹರಡಲಾಗುತ್ತದೆ. ಹೀಗೆ ಮಾಡಿದರೆ ದುಷ್ಟ ಶಕ್ತಿಗಳ ತೊಂದರೆ ಇರುವುದಿಲ್ಲ ಎಂಬುದು ನಂಬಿಕೆ. ಎಲ್ಲ ಬೌದ್ಧ ದೇಗುಲಗಳಲ್ಲಿ 108 ಬಾರಿ ಗಂಟೆ ಬಾರಿಸಲಾಗುತ್ತದೆ.
ಆದರೆ ಜಪಾನ್‌ನಲ್ಲಿ ಗಂಟಾನಾದ ಮೊಳಗಿದರೆ, ಇಂಡೊನೇಷ್ಯಾದಲ್ಲಿ ಮೌನಾಚರಣೆ ಮಾಡಲಾಗುತ್ತದೆ. ಇಲ್ಲಿನ ‘ನೈಪಿ’ ಹೊಸ ವರ್ಷದಲ್ಲಿ ಬೀದಿಗಳು ಖಾಲಿಖಾಲಿ. ಮನೆಯಲ್ಲಿ ಅಡುಗೆ ಇಲ್ಲ. ಸಂಗೀತವೂ ನಿರ್ಬಂಧ. ಟಿ.ವಿ., ರೇಡಿಯೊ ಬಂದ್. ಸ್ವಯಂ ನಿಯಂತ್ರಣವೇ ಇದರ ಅರ್ಥ. ಇಲ್ಲಿನ ಹಬ್ಬಗಳು ಸೌರಮಾನ ಅಥವಾ ಚಂದ್ರಮಾನ ಪದ್ಧತಿಗೆ ಅಂಟಿಕೊಳ್ಳದೇ ಪ್ರತಿ 210 ದಿನಗಳಿಗೊಮ್ಮೆ ಪುನರಾವರ್ತನೆಯಾಗುತ್ತವೆ.
ಸೌದಿ ಅರೇಬಿಯಾದಲ್ಲಿ ಇಸ್ಲಾಮಿಕ್ ಹಾಗೂ ಗ್ರೆಗೋರಿಯನ್ ಕ್ಯಾಲೆಂಡರ್‌ಗಳೆರಡೂ ಬಳಕೆಯಲ್ಲಿವೆ. ಸಾಂಪ್ರದಾಯಿಕ ಹೊಸವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಅಡಿಯಿಡುತ್ತದೆ. ಹೊರ ಹೋಗಿ ಪಾರ್ಟಿ ಮಾಡುವ ಪದ್ಧತಿ ಇಲ್ಲಿಲ್ಲ. ಅಕ್ಕಪಕ್ಕದ ಮನೆಯವರು ಒಂದೆಡೆ ಸೇರಿ ಹೊಸ ವರ್ಷವನ್ನು ಸ್ವಾಗತಿಸುತ್ತಾ ಊಟ ಮಾಡುತ್ತಾರೆ.
ಬಾಲಿಯಲ್ಲಿರುವ ಮುಸ್ಲಿಮರು ಮೊಹರಂನ ಮೊದಲ ದಿನವನ್ನು (ಮುಸ್ಲಿಂ ಕ್ಯಾಲೆಂಡರ್ ಪ್ರಕಾರ) ಹೊಸ ವರ್ಷವಾಗಿ ಆಚರಿಸುತ್ತಾರೆ. ಇದೇ ದಿನ ಷಿಯಾ ಮುಸ್ಲಿಮರಿಗೆ ಶೋಕದ ದಿನ. ಜೊರಾಸ್ಟ್ರಿಯನ್ ಅನುಸರಿಸುವ ಶಿಯಾ ಮುಸ್ಲಿಮರು ‘ನೌರುಜ್’ (ಸಂಕ್ರಾಂತಿ) ಹೆಸರಿನಲ್ಲಿ ಹೊಸ ವರ್ಷ ಮಾಡುತ್ತಾರೆ. ಬೀದಿಗಳಲ್ಲಿ ಸಂಗೀತಗಾರರು ಹಾಡುತ್ತಾರೆ. ದೀಪ ಬೆಳಗಿಸಲಾಗುತ್ತದೆ. ಖಾದ್ಯವಾಗಿ ಮೊಟ್ಟೆಯನ್ನು ಬಳಸುತ್ತಾರೆ. ಇದು ಹೊಸ ಜೀವನ ಆರಂಭದ ಸಂಕೇತ.