ಯುಗಾದಿಯ ಹೂ, ಹೊಂಗೆ ಹೂವ
ಹೊಂಗೆ ಹೂವ ತೊಂಗಲಲ್ಲಿ
ಭೃಂಗದ ಸಂಗೀತ ಕೇಳಿ
ಮತ್ತೆ ಕೇಳ ಬರುತಿದೆ
ಬೇವಿನ ಕಹಿ ಬಾಳಿನಲ್ಲಿ
ಹೂವಿನ ನಸುಗಂಪು ಸೂಸಿ ಜೀವಕಳೆಯ ತರುತಿದೆ...
‘ನಾದಲೀಲೆ’ಗೆ ಕಾವ್ಯವನ್ನು ಒಲಿಸಿದ ಕವಿ ಬೇಂದ್ರೆ ಎಂದೋ ಯುಗಾದಿಯ ಹಬ್ಬಕ್ಕೆ ಬರೆದ ಪದ್ಯವು, ಅದೆಷ್ಟೋ ಯುಗಾದಿಗಳ ಬಳಿಕವೂ ಇವತ್ತಿನ ಯುಗಾದಿ ಹಬ್ಬವನ್ನೂ ಅಷ್ಟೇ ಹೊಸತನದಿಂದ ನೋಡುವಂತೆ, ಸಂಭ್ರಮಿಸುವಂತೆ ಮಾಡುತ್ತಿದೆ. ಯುಗಾದಿ ಕುರಿತು ಹತ್ತು ಹಲವು ಪದ್ಯಗಳಿರಬಹುದು. ಆದರೆ ಈ ಪದ್ಯವನ್ನು ಗುನುಗದೆ ಹಬ್ಬ ಪೂರ್ಣವಾಗುವುದುಂಟೇ? ಇಲ್ಲವೇ ಇಲ್ಲ.
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುವಂತೆ, ಈ ಪದ್ಯವೂ ಮರಳಿ ಬರುತ್ತದೆ. ಈಗಿನ ಅಕಾಲಿಕ ಬೇಸಿಗೆಯ ಅಧಿಕ ತಾಪಮಾನ, ಬೇಸರಿಕೆಯನ್ನು ದೂರ ಸರಿಸುವಂತೆ. ಮಲಿನ ಕಣಗಳಿಲ್ಲದ ತಂಪಾದ ಗಾಳಿಯಂತೆ.
‘ಕುಲವಧು’ ಸಿನಿಮಾದಲ್ಲಿ ಪದ್ಯವನ್ನು ಗೀತೆಯಾಗಿಸಿ ಕೇಳುಗರ ಎದೆಯೊಳಕ್ಕೆ ಇಳಿಸಿದ ಗಾಯಕಿ ಎಸ್.ಜಾನಕಿಯವರಿಗೂ ಪೂರ್ಣಾಂಕ ಕೊಡಲೇಬೇಕು. ನಾದವನ್ನೇ ನೆಚ್ಚಿಕೊಂಡ ಕವಿಯು, ಗಾಯಕರು ಮತ್ತು ಸಂಗೀತವಿಲ್ಲದೆ ಅಜರಾಮರನಾಗಲಾರ.
ಈ ಪದ್ಯವನ್ನು ಪ್ರತಿ ವರ್ಷ ಸಂಭ್ರಮದಿಂದ ಅದೆಷ್ಟೋ ಬಾರಿ ಗುನುಗುವರು ಹಾಗೂ ಹಾಡಿಗೆ ತಲೆದೂಗುವವರ ಪೈಕಿ, ಹೊಂಗೆ ಹೂವಿನ ಗೊಂಚಲನ್ನು ಕಂಣ್ತುಂಬಿಕೊಂಡವರು, ಆ ಕಮ್ಮನೆಯ ಪರಿಮಳವನ್ನು ಎದೆಗಿಳಿಸಿಕೊಂಡವರು ಬಹಳ ಮಂದಿ ಇರಲಿಕ್ಕಿಲ್ಲ. ಇನ್ನು ಭೃಂಗದ ಸಂಗೀತ ಎಲ್ಲಿ ಕೇಳುತ್ತದೆ? ಆದರೆ, ಅದನ್ನು ಕೇಳಿಸಿಕೊಂಡವರೇ ಪುಣ್ಯವಂತರು. ರವಿ ಕಾಣದ್ದನ್ನಷ್ಟೇ ಅಲ್ಲ, ಕೇಳಿಸಿಕೊಳ್ಳದ್ದನ್ನೂ ಕವಿ ಕೇಳಿಸಿಕೊಳ್ಳಬಲ್ಲ.
ಹೊಂಗೆ ಹೂವು ಹಾಡಿನಲ್ಲಿ ಪ್ರಸಿದ್ಧವಾದರೂ ಅನುಭವದಲ್ಲಿ ಅಪರೂಪವೇ. ನೆರಳಿನ ವಿಚಾರಕ್ಕೆ ಬಂದರೆ ಹಾಗೆ ಹೇಳುವಂತಿಲ್ಲ. ಎಲ್ಲರೂ ಹೊಂಗೆ ನೆರಳ ತಂಪಲ್ಲಿ ನಿಂತವರೇ. ಮಿಂದವರೇ. ಕಲ್ಪನೆಯಲ್ಲಾದರೂ ಸರಿ. ‘ತಾಯಿಯ ಮಡಿಲು, ಹೊಂಗೆಯ ನೆರಳು’ ಗಾದೆ ಸುಮ್ಮನೆ ಆಗಿಲ್ಲ.
ಹೊಂಗೆ ಎಂದರೆ ಏನೋ ಖುಷಿ..
‘ಪೊಂಗಾಮಿಯಾ ಪಿನ್ನಾಟ’ ಎಂದರೆ ಏನೆಂದು ಅರ್ಥವಾಗುವುದಿಲ್ಲ. ಅದು ವೈಜ್ಞಾನಿಕ ಹೆಸರು. ಹೊಂಗೆ ಎನ್ನಿ ಏನೋ ಖುಷಿ. ನಮ್ಮ ಮನೆಯವರು, ಸ್ನೇಹಿತರು ನಮ್ಮ ಪೂರ್ತಿ ಹೆಸರನ್ನು ಬಿಟ್ಟು ಅಡ್ಡ ಹೆಸರಲ್ಲಿ ಪ್ರೀತಿ, ಕಕ್ಕುಲಾತಿ, ಸಲುಗೆಯಿಂದ ಕರೀತಾರಲ್ಲ ಹಾಗೆ. ಸದಾ ನೆರಳು ಕೊಡುವ ಸದಾ ಹಸಿರನ್ನೇ ಹೊದ್ದುಕೊಳ್ಳುವ ಮರ ಹೊಂಗೆ. ಬಹುಜನ ಹಿತಾಯ, ಬಹುಜನ ಸುಖಾಯ ಎಂಬ ನಾಣ್ಣುಡಿಗೆ ಅರ್ಥ ಬರುವಂತೆ ಬದುಕುವ ಮರ. ಜಗತ್ತಿಗೆ
ಅದೇ ಹೊಂಗೆಯ ಸಂದೇಶ.
ದಟ್ಟ ಹಸಿರಿನ ಎಲೆಗಳ ನಡುವೆ ನೀಲಿಮಿಶ್ರಿತ ಹೂಗಳ ಗೊಂಚಲಿನಿಂದ ಬಿಡಿ ಹೂಗಳು ಗಾಳಿಗೆ ಉದುರುವಾಗ ನೆಲ ಮುಟ್ಟುವ ಮುನ್ನ ಪರಿಮಳವನ್ನೂ ಸೇರಿಸುತ್ತವೆ. ಮುಂಜಾನೆ ಮತ್ತು ಸಂಜೆಯ ತಂಗಾಳಿಯಷ್ಟೇ ಅಲ್ಲ, ಬಿರುಬಿಸಿಲಿನ ಬಿಸಿಗಾಳಿಗೂ ಹೂಪಕಳೆಗಳು ಉದುರಿ ನೆಲದಲ್ಲೊಂದು ವೈವಿಧ್ಯಮಯ ಹೂ ರಂಗೋಲಿ ಬಿಡಿಸುತ್ತವೆ. ಈ ರಂಗೋಲಿಯ ಪರಿಮಳ ಮರದಡಿ ನಿಂತವರ ಎದೆಯಲ್ಲೂ ಹತ್ತಾರು ರಂಗೋಲಿಗಳನ್ನು ಬಿಡಿಸುತ್ತದೆ. ಈ ಕ್ಷಣಕ್ಕೆ ಸಾಕ್ಷಿಯಾದವರಿಗೆ ಮತ್ತೊಂದು ಸಾಕ್ಷಿ ಬೇಕಿಲ್ಲ!
ಮರದಿಂದ ಕೊಂಚ ದೂರ ನಿಂತು ನೋಡಿ; ಮರವು ತನ್ನ ಒಡಲಿಂದ ಉದುರಿ ನೆಲ ಸೇರಿದ ಹೂಮಕ್ಕಳೊಂದಿಗೆ ಸಂವಾದ ನಡೆಸುತ್ತಿರುವಂತೆಯೂ ಕಾಣುತ್ತದೆ. ಇದು, ಯುಗಾದಿ ಹೇಳಿಕೊಡುವ ಹೂ–ಮರದ ಸಂಬಂಧಾಂತರಗಳ ಪಾಠ. ಬೇರ್ಪಡುತ್ತಲೆ ಸೇರ್ಪಡೆಗೊಳ್ಳುವ ಪಾಠ. ನೋವು–ನಲಿವಿನ ಪಾಠ.
ಅಗಲವಾದ ಹಸಿರು ಎಲೆಗಳ ನಡುವೆ ಬಚ್ಚಿಟ್ಟುಕೊಂಡ ಸೋಜಿಗದ ಹೂವುಗಳಿವು. ಹತ್ತಿರದಿಂದ ನೋಡಿದರೆ ಮಲ್ಲಿಗೆಯ ಮೊಗ್ಗುಗಳು ಪೋಣಿಸಿದಂತೆಯೇ ಕಾಣುವ ಈ ಹೂಗೊಂಚಲು ಒಂದೊಂದು ಮರದಲ್ಲಿ ಒಂದೊಂದು ಬಣ್ಣವನ್ನು ಧರಿಸಿರುತ್ತದೆ. ಒಂದರಲ್ಲಿ ಬಿಳಿ ಹೆಚ್ಚಿದ್ದರೆ, ಮತ್ತೊಂದರಲ್ಲಿ ನೀಲಿ ಹೊಳೆಯುತ್ತದೆ. ಈ ವರ್ಣವೈವಿಧ್ಯದ ನಡುವ ಕಳೆದುಹೋಗದೆ, ಮೌನವಾಗಿ, ಸಮಯ ಲೆಕ್ಕಕ್ಕಿಡದೆ ನಿಂತರಷ್ಟೇ ನಿಮಗೆ ಭೃಂಗ ಕಾಣಿಸುತ್ತದೆ. ಅದರ ಸಂಗೀತವೂ ಕೇಳಿಸುತ್ತದೆ.
ಕವಿ ಬೇಂದ್ರೆ ಭೃಂಗದ ಸಂಗೀತ ಮತ್ತೆ ಮತ್ತೆ ಕೇಳಿಬರುವ ಬಗ್ಗೆಯಷ್ಟೇ ಹೇಳಿ ಮುಂದೆ ಸಾಗುತ್ತಾರೆ. ಮರದ ಮುಂದೆ ನಿಂತ ನಾವೂ ಹಾಗೆ ಮುಂದೆ ಹೋಗಬಾರದೆಂಬಂತೆ ಹೊಂಗೆ ಹೂವುಗಳು ಪರಿಮಳ ಸೂಸುತ್ತವೆ. ಪ್ರತಿ ಹೊಂಗೆ ಮರವೂ ತನ್ನ ಮುಂದೆ ಅನನ್ಯವಾದ ಪರಿಮಳದ ಹಾದಿಯನ್ನು, ಲೋಕವನ್ನು ನಿರ್ಮಿಸಿರುತ್ತದೆ. ಹೂಗಳಿಗೆ ನೋವಾಗದಂತೆ ನಿಲ್ಲಬೇಕು. ನಡೆಯಬೇಕು.
ತಾಯೊಡಲಿಂದ ಹೊರಬಂದ ಹಸುಗೂಸಿನ ಪುಟಾಣಿ ಕೈಬೆರಳುಗಳನ್ನು ನೆನಪಿಸಿಕೊಳ್ಳಿ. ಈ ಹೂವುಗಳೂ ಅಷ್ಟೇ ಗಾತ್ರದವು. ಅದೇ ಬಣ್ಣದವು. ನಮ್ಮ ಒಂದು ಬೆರಳ ತುದಿಯನ್ನು ಇನ್ನೊಂದು ಬೆರಳ ತುದಿಯಿಂದ ಒತ್ತಿಹಿಡಿದುಕೊಂಡರೆ ಮೂಡುವ ಬಣ್ಣ ಅದು. ಒಳಗಿನ ರಕ್ತ. ಹೊರಗೆ ಬಾಂಧವ್ಯವಾಗಿ ಹೊಳೆಯುವ ಬಣ್ಣ. ಬೆಳ್ಳಗೂ ಇರುವುದಿಲ್ಲ. ಕೆಂಪಗೂ ಇರುವುದಿಲ್ಲ. ಕಂದು ಬಣ್ಣವೂ ಅಲ್ಲ. ಅದು ಹೂಬಣ್ಣ. ಅದಕ್ಕೆ ಹೆಸರಿಟ್ಟರೆ ಅನುಭವ ಕಳೆದುಹೋಗುತ್ತದೆ.
ಈ ಹೂವಿನ ಸೌಂದರ್ಯಾತ್ಮಕವಾದ, ಆಧ್ಯಾತ್ಮಿಕ ಆಯಾಮದ ಜೊತೆಗೆ, ಮರೆತುಹೋದ ಕೃಷಿ ಆಯಾಮದ ನೆನಪನ್ನೂ ಮಾಡಿಕೊಳ್ಳಬೇಕು. ನಿಧಾನಕ್ಕೆ ಕೊಳೆಯುವ ಗುಣವುಳ್ಳ ಈ ಹೂವು ಸಾಂಪ್ರದಾಯಿಕ ಕೃಷಿ ಪದ್ಧತಿಯಲ್ಲಿ ರೈತನ ಆಪ್ತಮಿತ್ರ. ಹೀಗಾಗಿಯೇ ಹಿಂದೆ ತೋಟ, ಜಮೀನುಗಳಲ್ಲಿ ಹೊಂಗೆ ಮರದ ಸಾಲುಗಳನ್ನೂ ಕಾಣಬಹುದಿತ್ತು. ಈಗ ರಸ್ತೆಬದಿಗಳಲ್ಲಷ್ಟೇ.
ಉದುರಿದ ಹೂರಾಶಿಗಳನ್ನು ಗುಡ್ಡೆಮಾಡಿ ಬೆಳೆಯ ಬುಡಕ್ಕೆ ಹಾಕುತ್ತಿದ್ದ ಆ ದಿನಗಳೂ ಇದ್ದವು. ಈಗ ಅಲ್ಲಲ್ಲಿ ಇರಬಹುದೇನೋ. ನೆಲದ ತೇವಾಂಶವನ್ನು ರಕ್ಷಿಸಿಡುವ ಶಕ್ತಿಯುಳ್ಳ ಈ ಹೂವುಗಳಲ್ಲಿ ಉತ್ಕೃಷ್ಟ ಗೊಬ್ಬರ ಗುಣಗಳೂ ಇವೆ. ಅದೇ ಕಾರಣಕ್ಕೆ ಹಿಂದೆ, ಅದನ್ನು ಕದ್ದು ಸಾಗಿಸುವುದನ್ನು ತಡೆಯಲೆಂದೇ ಕಾಯುವ ಕಾಯಕವೂ ಜಾರಿಯಲ್ಲಿತ್ತು!
ಹೂವಷ್ಟೇ ಅಲ್ಲ, ಹೊಂಗೆಯ ಹಸಿರೆಲೆ, ಬೀಜ, ಹೊಟ್ಟು.. ಎಲ್ಲವೂ ಕೃಷಿಯ ಭಾಗವೇ ಆಗಿತ್ತು. ಇದು ಹೊಂಗೆಯ ಫಲವತ್ತತೆಯ ವೈವಿಧ್ಯ. ಆಯುರ್ವೇದದಲ್ಲೂ ವಿಶೇಷ ಸ್ಥಾನ ಪಡೆದಿರುವ ಹೊಂಗೆಯು ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ. ಅದು ಜೈವಿಕ ಇಂಧನ ಮೂಲ.
ಇಂಥ ಫಲವತ್ತಾದ ಮರದ ಹೂವಿನ ಪರಿಮಳ ಎಂಥದ್ದು ಎಂದರೆ, ಜನಪ್ರಿಯ ಮಲ್ಲಿಗೆ, ಸಂಪಿಗೆಯಂಥಲ್ಲ . ಮಹಿಳೆಯರಷ್ಟೇ ಮುಡಿದು ಸಂಭ್ರಮಿಸುವಂಥದ್ದೂ ಅಲ್ಲ. ಇದು ಮುಡಿಗಷ್ಟೇ ಅಲ್ಲ, ಎಲ್ಲರೂ ಮನಕ್ಕೇ ಮುಡಿದುಕೊಳ್ಳಬೇಕಾದ ಹೂ. ಯುಗಾದಿಯ ಹೂ. ಯುಗದುದ್ದಕ್ಕೂ ಸ್ಮರಿಸಬೇಕಾದ ಹೂ.