ಕವಿಗೂ ಉಂಟು ಯುಗಾದಿ ನಂಟು
ಕವಿಗೂ ಉಂಟು ಯುಗಾದಿ ನಂಟು...!
ಹೊಸ ಸಂವತ್ಸರ, ಹೊಸ ಹುರುಪು, ಹೊಸ ಚಿಗುರು, ಹೊಸ ಕನಸಿಗೆ ನಾಂದಿ ಹಾಡುವ ಯುಗಾದಿ ನಮ್ಮೊಳಗೆ ಉತ್ಸಾಹವನ್ನಷ್ಟೇ ಅಲ್ಲಾ, ಬದುಕಿನ ಪಾಠವನ್ನೂ ಕಲಿಸುತ್ತದೆ. ಈ ಸಂಭ್ರಮವನ್ನು ಕಟ್ಟಿಕೊಡುವಲ್ಲಿ ಕವಿಗಳ ಲೇಖನಿಯೂ ಹಿಂದೆ ಉಳಿದಿಲ್ಲ. ಬಾಳ ಬಂಡಿಯ ದಾರಿಯಲಿ ಸಿಗುವ ಸಿಹಿ-ಕಹಿಗಳನ್ನು ಸಮನಾಗಿ ಸ್ವೀಕರಿಸಬೇಕೆನ್ನುವ ಪಾಠವನ್ನು ಎದೆಗಿಳಿಯುವಷ್ಟು ಚಂದ ಕವಿಯಲ್ಲದೇ ಮತ್ಯಾರು ಹೇಳಿಯಾರು?
ಯುಗಾದಿ ಎಂದಾಕ್ಷಣ ಕಣ್ಣು ಬೇವು- ಬೆಲ್ಲದಿಂದ ತುಂಬಿಕೊಂಡರೆ, ಮನಸ್ಸು ಅಪ್ರಯತ್ನಾಪೂರ್ವಕವಾಗಿ ಬೇಂದ್ರೆ ಅಜ್ಜಾರ ‘ಯುಗ ಯುಗಾದಿ ಕಳೆದರೂ’ ಹಾಡನ್ನು ಗುನುಗುತ್ತದೆ. ಯುಗಾದಿಯೊಂದಿಗೆ ಬೇವು- ಬೆಲ್ಲಕ್ಕಿರುವ ನಂಟು ಈ ಹಾಡಿನೊಂದಿಗೂ ಬೆಸೆದುಕೊಂಡಿದೆ.
ದ.ರಾ.ಬೇಂದ್ರೆ ಅವರ ಈ ಕವಿತೆ ಭಾವಗೀತೆ ಆಗಿದ್ದರೂ, ‘ಕುಲವಧು’ ಸಿನಿಮಾದಲ್ಲಿ ಈ ಹಾಡನ್ನು ಬಳಸಿದ್ದರಿಂದ ಇದು ಚಿತ್ರ ಗೀತೆ ಆಗಿ ನಾಡಿನ ಜನತೆಯ ಮನದಲ್ಲಿ ಅಚ್ಚಳಿಯದಂತೆ ಉಳಿದಿದೆ. ನಾಲ್ಕೈದು ತಲೆಮಾರುಗಳು ಗುನುಗಿದ, ಗುನುಗುತ್ತಿರುವ ಈ ಹಾಡಿಗೆ ಸದಾ ಯವ್ವನದ ಮೆರುಗು. ‘ವರುಷಕೊಂದು ಹೊಸತು ಜನ್ಮ, ಹರುಷಕೊಂದು ಹೊಸತು ನೆಲೆಯು’ ಎನ್ನುವ ಸಾಲುಗಳು ನಿರಾಸೆಯ ಬದುಕಿಗೆ ಭರವಸೆಯ ಚಿಲುಮೆಯಾಗಿ ಹೊಸ ಹರುಷ ಹುಟ್ಟಿಸುತ್ತವೆ. ‘ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ’ ಎನ್ನುತ್ತಾ ಪ್ರತಿ ದಿನವೂ ಹೊಸ ಅವಕಾಶ ನೀಡುತ್ತದೆಂಬ ಸತ್ಯವನ್ನು ಮನವರಿಕೆ ಮಾಡಿಸುತ್ತದೆ. ಹೊಸ ವರುಷದ ಹರುಷಕ್ಕೆ ಮನದ ಹುರುಪು ಹೆಚ್ಚುತ್ತದೆ.
ಈ ಕವಿತೆ ಚಿತ್ರ ಗೀತೆಯಾದ ಕತೆಯೂ ಕವಿತೆಯಷ್ಟೇ ಚಂದವಿದೆ. ‘ಕುಲವಧು’ ಸಿನಿಮಾದಲ್ಲಿ ಯುಗಾದಿ ಆಚರಣೆಯ ಸನ್ನಿವೇಶವಿದ್ದು, ಅದಕ್ಕಾಗಿ ಈ ಗೀತೆಯನ್ನು ಬಳಸಬೇಕು ಎಂದು ಚಿತ್ರತಂಡ ನಿರ್ಧರಿಸಿತ್ತು. ಈ ವಿಷಯವನ್ನು ಚಿತ್ರತಂಡ ಬೇಂದ್ರೆ ಅವರ ಮುಂದೆ ಪ್ರಾಸ್ತಾಪಿಸಿದಾಗ, ಬೇಂದ್ರೆ ಅವರು ‘ಸಿನಿಮಾದವರು ನಿಮಗೆ ಬೇಕಾದಂತೆ ಸಾಹಿತ್ಯವನ್ನು ಬಳಸಿ ವಿರೂಪ ಮಾಡತೀರಿ. ನಾ ಕೊಡುದಿಲ್ಲ’ ಎಂದು ನಿರಾಕರಿಸಿದ್ದರಂತೆ. ಸಂಗೀತ ನಿರ್ದೇಶಕರಾದ ಜಿ.ಕೆ.ವೆಂಕಟೇಶ ಅವರು ಹಾರ್ಮೋನಿಯಂ ಜೊತೆಗೆ ಮದ್ರಾಸಿನಿಂದ ಸಾಧನಕೇರಿಗೆ ಬಂದು, ಬೇಂದ್ರೆ ಅವರ ಮುಂದೆ ಹಾಡಿದರು. ಅವರ ಸಂಗೀತ ಸಂಯೋಜನೆಗೆ ಮನಸೋತ ಬೇಂದ್ರೆ ವೆಂಕಟೇಶ ಅವರ ಬಾಯಿಗೆ ಸಕ್ಕರೆ ಹಾಕಿ, ‘ಇದು ಕರೆ ಯುಗಾದಿನೋ ತಮ್ಮಾ’ ಎಂದು ಚಿತ್ರದಲ್ಲಿ ಗೀತೆ ಬಳಸಲು ಅನುಮತಿಸಿದರು. ಇಂದಿಗೂ ಈ ಹಾಡು ನೆನೆದಾಗ ಮನದಲ್ಲಿ ಬೇಂದ್ರೆ, ಕಿವಿಯಲ್ಲಿ ಎಸ್.ಜಾನಕಿ ಅವರ ಧ್ವನಿ, ಕಣ್ಣ ತುಂಬಾ ಲೀಲಾವತಿ ಅವರ ನಟನೆ ತುಂಬಿಕೊಳ್ಳುತ್ತದೆ.
ನಮ್ಮ ರಸಋಷಿ ಕುವೆಂಪು ಅವರ ಪದಗಳೂ ಯುಗಾದಿ ಮೆರುಗು ಹೆಚ್ಚಿಸಿವೆ. ಬೇಂದ್ರೆ ಅವರು ತಮ್ಮ ಅಕ್ಷರಗಳಲ್ಲಿ ಭರವಸೆ ಕಟ್ಟಿಕೊಟ್ಟರೇ, ಕುವೆಂಪು ಅವರು, ‘ತೊಲಗಲಿ ದುಃಖ, ತೊಲಗಲಿ ಮತ್ಸರ... ಪ್ರೇಮಕೆ ಮೀಸಲು ನವ ಸಂವತ್ಸರ’ ಎನ್ನುತ್ತಾ ಪ್ರೇಮ, ಸಂಭ್ರಮಕ್ಕೆ ಮೀಸಲಿಟ್ಟಿದ್ದಾರೆ. ‘ಜೀವನವೆಲ್ಲಾ ಬೇವೂಬೆಲ್ಲ; ಎರಡೂ ಸವಿವನೆ ಕಲಿ ಮಲ್ಲ!’ ಎನ್ನುತ್ತಾ ಜೀವನ ಪಾಠವನ್ನೂ ಸಾರಿದ್ದಾರೆ. ‘ಜೀವನವೆಂಬುದು ಹೂವಿನ ಬೀಡು’ ಎಂದ ಕವಿ ‘ಕವಿಯದೆ ಹೆಜ್ಜೇನಿನ ಗೂಡು!’ ಎನ್ನುತ್ತಾ ಕವಿಗೂ ಯುಗಾದಿಗೂ ಬಿಡದ ನಂಟೆಂದು ಸಾರಿದ್ದಾರೆ.
ಹಬ್ಬ, ಸಂಭ್ರಮ, ಜೀವನ, ಆಚರಣೆ ಎಲ್ಲವನ್ನೂ ಬದಿಗೆ ಸರಿಸಿ ಯುಗಾದಿಯ ಹೊಸ ಬೆಳಗನ್ನು ವಿಡಂಬನಾತ್ಮಕವಾಗಿ ಬಿಂಬಿಸಿದ್ದಾರೆ ನಮ್ಮ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರು.
ಹೊಸ ವರ್ಷದ ಮುಂಜಾನೆ
ಮನೆಯಂಗಳಕ್ಕೆ ಹಾರಿ ಬಂದು ಕೂತ
ಯುಗಾದಿಯ ಕೊಕ್ಕಿನಲ್ಲಿ
ಚೈತ್ರದ ಚಿಗುರಿರಲಿಲ್ಲ
ಚೂಪಾದ ಚೂರಿಯಿತ್ತು ಎಂದು ಬರೆಯುತ್ತಾ.. ಸಮಾಜದ ಕೆಟ್ಟ ಮಗ್ಗಲನ್ನು ಟೀಕಿಸಿದ್ದಾರೆ. ದ್ವೇಷದ ವಾತಾವರಣದಲ್ಲಿ ಯುಗಾದಿ ಹೂ ಅರಳದು, ಕೋಗಿಲೆ ಸ್ವರ ಇಂಪಾಗದು, ವಸಂತ ನಗದು ಎಂದು ಆಕ್ರೋಶ, ಆತಂಕ, ಬೇಸರ ವ್ಯಕ್ತಪಡಿಸಿದ್ದಾರೆ. ‘ಯುಗಾದಿಯ ರೆಕ್ಕೆಗಳ ಮೇಲೆ ವಸಂತದ ಬಣ್ಣಗಳಿರಲಿಲ್ಲ ರಕ್ತದ ಕಲೆಯಿತ್ತು’ ಎನ್ನುವ ಸಾಲು ದ್ವೇಷಮಯ ಸಮಾಜದ ವಿರುದ್ಧ ಅವರಿಗಿದ್ದ ಅಸಮಾಧಾನದ ಕಿಚ್ಚನ್ನು ಬಿಂಬಿಸುತ್ತದೆ. ‘ಸುತ್ತಲೂ ಜಾರುವ ಮಾಗಿಯ ಮಂಜಿನ ಧೂಪವಿರಲಿಲ್ಲ. ಶ್ಮಶಾನಗಳ ಹೊಗೆಯಿತ್ತು’ ಎನ್ನುವ ಸಾಲು ಓದುಗನಿಗೂ ಕಟು ವಾಸ್ತವವನ್ನು ತಿಳಿಸುತ್ತದೆ.
ಪ್ರೀತಿ ಇಲ್ಲದ ಯುಗಾದಿಯನ್ನು ಕಟುವಾಗಿ ಟೀಕಿಸಿದ ಜಿಎಸ್‌ಎಸ್ ಇನ್ನೊಂದೆಡೆ ‘ಅಂದಾದರೂ ನಗೋಣ’ ಎನ್ನುತ್ತಾರೆ ತಮ್ಮ ಚುಟುಕಲ್ಲಿ.
ಯುಗಾದಿಯ ದಿನವಾದರೂ ಒಂದಷ್ಟು ನಗೋಣ ಉಳಿದಂತೆ ವರ್ಷಾದ್ಯಂತ ಇದ್ದೇ ಇದೆ ನಮ್ಮನ್ನರೆಯುವ ಗಾಣ... ಮತ್ತೊಂದೆಡೆ ಯುಗಾದಿಗೆ ತರಕಾರಿಗಳನ್ನು ತಮ್ಮ ಚೆಲುವೆಗೆ ಪೋಣಿಸುವ ಕವಿ ಜಿಎಸ್‌ಎಸ್ ಹೀಗೆ ಹೇಳುತ್ತಾರೆ
ಮೂಗೊಂದು ಮೂಲಂಗಿ
ಕಣ್ಣು ಉಳ್ಳಾಗಡ್ಡೆ
ಬೆಳ್ಳುಳ್ಳಿ ಹಲ್ಲಿನವಳೆನ್ನ ಚೆಲುವೆ
ತರಕಾರಿ ಉಪಮೆಗಳ
ಹೀಗೆ ಪೋಣಿಸಿ ನಾನು
ಈ ಯುಗಾದಿಯ ದಿವಸ ಬದುಕಬಹುದೆ!
ಕುವೆಂಪು, ಬೇಂದ್ರೆ, ಜಿಎಸ್‌ಎಸ್ ಅವರಿಂದ ಹಿಡಿದು ಈಗಿನ ಇತ್ತೀಚಿನ ಹೊಸ ಕವಿಗಳವರೆಗೆ ಎಲ್ಲರ ಅಕ್ಷರಗಳಲ್ಲೂ ಯುಗಾದಿ ಸಂಭ್ರಮಿಸಿದೆ.
ಹಸುರಿನ ಓಕುಳಿ ಗಿಡಮರದೊಳಗೆ
ಹೊಸತನ ಚಿಗುರಿದೆ ಹಸಿರಾಗಿ
ನವಗಾನದ ಮದ ಹದಗೊಂಡಿದೆ ಶೃತಿ
ಕೋಗಿಲೆ ಪಂಚಮ ಉಸಿರಾಗಿ ...
ಎಂದು ನಮ್ಮ ಪ್ರಕೃತಿಯೂ ಯುಗಾದಿಯನ್ನು ಸಂಭ್ರಮಿಸುವ ಬಗೆ ಸಾರಿದ ಕವಿ ಜೀವರಾಜರ ಸಾಲುಗಳು ಸ್ವಾರಸ್ಯಕರವಾಗಿದೆ.
ಮತ್ತೊಬ್ಬ ಕವಿ ಮಾರ್ಕಂಡ ಪುರಂ ಶ್ರೀನಿವಾಸ ಅವರ ಕವಿತೆಯಲ್ಲಿ,
ಗಿರಿವನಗಳ ಹೊಸಹಸಿರನು ಹೊತ್ತು
ಸುಡುಬಿಸಿಲಿನ ಜ್ವಾಲೆಗಳನು ಹೆತ್ತು
ಕಳೆದು ಗುಣವ ಮನೋಲ್ಲಾಸ ತಳೆದು
ತಾನಾಗೆ ವರುಷಕೊಮ್ಮೆ ಬಂತು ಯುಗಾದಿ...
ಈ ಹೊಸ ಸಂವತ್ಸರದ ಹೊಸತನ, ಹೊಸ ಹುರುಪು ಕವಿತೆಗಳಲ್ಲಿ ಸಂಭ್ರಮಿಸಿದಂತೆ ನಮ್ಮ ಬದುಕಲ್ಲೂ ಸಂಭ್ರಮಿಸಲಿ.. ಬಾಳು ಬೆಳಗಲಿ.. ಕವಿ ಹೃದಯ ಹಿಗ್ಗಲಿ.. ಓದುಗನ ಮನ ತಣಿಯಲಿ.. ನಗು ಅರಳಲಿ..