ಯುಗಾದಿ ಶ್ಯಾವಿಗೆ
ಯುಗಾದಿಗೂ ಶ್ಯಾವಿಗೆಗೂ ‘ಬೇವುಬೆಲ್ಲ’ದ ನಂಟು
ಹೊಸ ಯುಗದ ಆದಿ ಎನಿಸಿದ ಯುಗಾದಿ ಹಬ್ಬದ ಸಡಗರ ಆರಂಭಗೊಂಡಿದೆ. ಕರ್ನಾಟಕದ ಮಲೆನಾಡು ಹಾಗೂ ಬಹುತೇಕ ಭಾಗಗಳಲ್ಲಿ ‘ಬೇವುಬೆಲ್ಲ’ದೊಂದಿಗೆ ಹೋಳಿಗೆ ವಿಶೇಷ ಖಾದ್ಯವಾದರೆ ಮಧ್ಯ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಬಸಿದ ಶ್ಯಾವಿಗೆ ತಿನ್ನುವುದು ಪರಿಪಾಠ. ದಾವಣಗೆರೆ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ‘ಬಸ್ಸಾವಿಗೆ–ಬೇವುಬೆಲ್ಲ’ವೇ ಯುಗಾದಿಯ ಪ್ರಮುಖ ಆಕರ್ಷಣೆ.
ಯುಗಾದಿಯ ಸಂದರ್ಭದಲ್ಲಿ ಪ್ರಮುಖವಾಗಿ ದಾವಣಗೆರೆಯಲ್ಲಿ ಶ್ಯಾವಿಗೆಯ ಮಾರಾಟ ಜೋರು. ಯುಗಾದಿ ಹಬ್ಬಕ್ಕೆ ಶ್ಯಾವಿಗೆ ಬಸಿದು ತುಪ್ಪ, ಗೋಡಂಬಿ, ದ್ರಾಕ್ಷಿ ಹಾಕಿ ತಿನ್ನುವ ಸಂಪ್ರದಾಯ ಜಿಲ್ಲೆಯಲ್ಲಿ ಬೇರೂರಿದೆ. ಹೀಗಾಗಿ ಅಂದು ಮನೆಮನೆಗಳಲ್ಲಿ ಶ್ಯಾವಿಗೆ ಖಾದ್ಯ ಸಿದ್ಧವಾಗುತ್ತದೆ.
ಇಲ್ಲಿ ಬೇವು–ಬೆಲ್ಲವೆಂದರೆ ಅದರಲ್ಲಿ ಬೇವಿನ ಎಲೆ ಮತ್ತು ಬೆಲ್ಲ ಮಾತ್ರ ಇರುವುದಿಲ್ಲ. ಅದಕ್ಕೆ ಬೇರೆಯದ್ದೇ ಆದ ಸ್ವರೂಪವಿದೆ. ಹುರಿದ ಪುಟಾಣಿ ಪುಡಿ, ಬೆಲ್ಲ, ಒಣಕೊಬ್ಬರಿ ತುರಿ, ಗಸಗಸೆ, ಬೇವಿನ ಹೂವು, ಕುಟ್ಟಿದ ಗೋಡಂಬಿ ಪುಡಿ, ಬಾದಾಮಿ ಪುಡಿ, ಒಣಶುಂಠಿ ಪುಡಿ, ಗೇರುಬೀಜ, ಯಾಲಕ್ಕಿ ಪುಡಿ ಇವುಗಳನ್ನು ಹಾಕಿ ಮಿಶ್ರಣ ಮಾಡಿದ ಪುಡಿಯನ್ನು ಇಲ್ಲಿ ‘ಬೇವು ಬೆಲ್ಲ’ ಎನ್ನಲಾಗುತ್ತದೆ. ಕುದಿಯುವ ನೀರಿನಲ್ಲಿ ಶಾವಿಗೆ ಹಾಕಿ, ಬೆಂದ ನಂತರ ಅದನ್ನು ಬಸಿಯುತ್ತಾರೆ. ಆ ಬಸಿದ ಶಾವಿಗೆಯ ಮೇಲೆ ‘ಬೇವು–ಬೆಲ್ಲ’ದ ಪುಡಿಯನ್ನು ಹಾಕಿಕೊಂಡು ಕಲಸಿ ತಿನ್ನುತ್ತಾರೆ. ಮೊದಲ ದಿನ ಇದು ಖಾದ್ಯವಾದರೆ. ಯುಗಾದಿ ಚಂದ್ರನ ದರ್ಶನವಾದ ನಂತರ ಹೋಳಿಗೆ ಮಾಡಿ ತಿನ್ನುತ್ತಾರೆ ಇಲ್ಲಿಯ ಮಂದಿ.
ದಾವಣಗೆರೆ–ಹಾವೇರಿ ಜಿಲ್ಲೆಗಳಲ್ಲಿ ಶ್ಯಾವಿಗೆ ತಯಾರಿಕೆಯಿಂದಲೇ ಹಲವು ಕುಟುಂಬಗಳು ಜೀವನ ಕಟ್ಟಿಕೊಂಡಿವೆ. ದಾವಣಗೆರೆ ನಗರದ ಕೆ.ಟಿ.ಜೆ ನಗರದಲ್ಲಿ ‘ಶ್ಯಾವಿಗೆ ಬೀದಿ’ ಎಂಬ ಉಪನಾಮ ಇರುವ ಬೀದಿಯೇ ಇದರ ಖ್ಯಾತಿಗೆ ಸಾಕ್ಷಿ. ಶಾವಿಗೆ ಸಿದ್ಧಪಡಿಸುವ 10ಕ್ಕೂ ಹೆಚ್ಚು ಗೃಹ ಕೈಗಾರಿಕೆಗಳು ಇಲ್ಲಿ ಕಂಡು ಬರುತ್ತವೆ. 50–60 ವರ್ಷಗಳಿಂದ ಶ್ಯಾವಿಗೆ ತಯಾರಿಕೆ ನಡೆಸಿಕೊಂಡು ಬಂದವರೂ ಇಲ್ಲಿದ್ದಾರೆ.
ರವೆ ಶ್ಯಾವಿಗೆ, ಅಕ್ಕಿ ಶ್ಯಾವಿಗೆ, ನೂಡಲ್ಸ್, ರಾಗಿ ಶ್ಯಾವಿಗೆ, ಗೋಧಿ ಶ್ಯಾವಿಗೆ, ರೆಡಿಮೇಡ್ ಶ್ಯಾವಿಗೆಗಳನ್ನು ಬಹುತೇಕರು ತಯಾರಿಸುತ್ತಾರೆ. ದೀಪಾವಳಿಗೆ ತಯಾರಿಕೆ ಆರಂಭವಾದರೆ ಯುಗಾದಿಯವರೆಗೂ ಮುಂದುವರಿಯುತ್ತದೆ. ಮಳೆಗಾಲದಲ್ಲಿ ತಯಾರಿಕೆ ಇರುವುದಿಲ್ಲ. ಬೇಸಿಗೆಯಲ್ಲಿ ಸಿದ್ಧವಾದ ಶಾವಿಗೆಯನ್ನೇ ಜತನದಿಂದ ಕಾಯ್ದಿಡುತ್ತಾರೆ. ವರ್ಷವಿಡೀ ಇದಕ್ಕೆ ಬೇಡಿಕೆ ಇರುತ್ತದೆ. ಹೊರ ಜಿಲ್ಲೆಗಳಲ್ಲೂ ‘ದಾವಣಗೆರೆ ಶ್ಯಾವಿಗೆಯ ರುಚಿ ಖ್ಯಾತ. ಇಲ್ಲಿಗೆ ಬಂದವರು ಶ್ಯಾವಿಗೆ ಒಯ್ಯುವುದನ್ನು ಮರೆಯುವುದಿಲ್ಲ. ಯುಗಾದಿಯ ಸಮಯದಲ್ಲಿ ಮಹಿಳೆಯರು ಬುಟ್ಟಿಗಳಲ್ಲಿ ಶ್ಯಾವಿಗೆಗಳನ್ನು ಹೇರಿಕೊಂಡು ಮನೆಮನೆಗೆ ಮಾರುವ ದೃಶ್ಯ ಇಲ್ಲಿ ಸಾಮಾನ್ಯ.
ಚಿರೋಟಿ ರವೆಯ ಶ್ಯಾವಿಗೆ ಹೆಚ್ಚು ಜನಪ್ರಿಯ. ಶ್ಯಾವಿಗೆ ತಯಾರಿಸುವ ಕೇಂದ್ರಗಳಲ್ಲಿ ಸಾಮಾನ್ಯವಾಗಿ ಬೆಳಿಗ್ಗೆ 5ರಿಂದ ಆರಂಭವಾಗುವ ಕಾಯಕ ಸಂಜೆ 4ರವರೆಗೂ ಇರುತ್ತದೆ. ರವೆಗೆ ನೀರು ಹಾಕಿ ಕಲಸಿ ಬೀಸುವ ಯಂತ್ರಕ್ಕೆ ಹಾಕುತ್ತಾರೆ. ಬೀಸಿದ ಹಿಟ್ಟನ್ನು ಶ್ಯಾವಿಗೆ ಯಂತ್ರಕ್ಕೆ ಹಾಕುತ್ತಾರೆ. ನೂಲಿನೆಳೆಯಷ್ಟು ತೆಳ್ಳಗಿನ ಶ್ಯಾವಿಗೆ ಸಿದ್ಧವಾಗುತ್ತದೆ. ಅದನ್ನು ಬಿಸಿಲಿಗೆ ಒಣಗಿಸಿಡುತ್ತಾರೆ. 3 ತಾಸಿನೊಳಗೆ ಶ್ಯಾವಿಗೆ ಒಣಗಿ ಸಿದ್ಧವಾಗುತ್ತದೆ.
ನಗರ ಮಾತ್ರವಲ್ಲದೇ ಜಿಲ್ಲೆಯಾದ್ಯಂತ ಹಲವು ಹಳ್ಳಿಗಳಿಯೂ ಇದು ಗೃಹ ಕೈಗಾರಿಕೆಯಾಗಿ ಬೆಳೆದು ನಿಂತಿದೆ.
ವಿವಾಹಗಳಲ್ಲಿ ವಧುವಿಗೆ ನೀಡುವ ಸಾಮಗ್ರಿಗಳೊಂದಿಗೆ ಶ್ಯಾವಿಗೆಯ ಜಡೆ ನೀಡು ಪದ್ಧತಿಯೂ ಇಲ್ಲಿಯ ಕೆಲವು ಸಮುದಾಯಗಳಲ್ಲಿ ಇದೆ. ಇದಕ್ಕಾಗಿ ಶಾವಿಗೆ ಜಡೆಗಳನ್ನು ಹೆಣೆದು, ಸಿಂಗಾರ ಮಾಡಿಕೊಡುತ್ತಾರೆ.