ರೂಪಾ ಕೆ.ಎಂ.
ಅಕ್ಷಯ ತೃತೀಯ ದಿನದಂದು ಮನೆಯಲ್ಲಿ ಸಿಗುವ ಸರಳ ಪದಾರ್ಥಗಳಿಂದ ಮಾಡಿ ಬಗೆ ಬಗೆಯ ಪಾಯಸ.
ಬಾಳೆಹಣ್ಣಿನ ಪಾಯಸ
ಬೇಕಾಗುವ ಸಾಮಗ್ರಿಗಳು: ಪಚ್ಚ ಬಾಳೆ – 2, ಹೆಸರುಬೇಳೆ – ಅರ್ಧ ಕಪ್, ತುಪ್ಪ –2 ಟೇಬಲ್ ಚಮಚ, ಗೋಡಂಬಿ– 10 ರಿಂದ 15, ಹಸಿ ತೆಂಗಿನಕಾಯಿ ಚೂರು – 2 ಟೇಬಲ್ ಚಮಚ (ಚಿಕ್ಕದಾಗಿ ಕತ್ತರಿಸಿದ್ದು) ಪುಡಿ ಬೆಲ್ಲ – 1 ಕಪ್, ಗಟ್ಟಿ ತೆಂಗಿನಹಾಲು – 1 ಕಪ್, ಏಲಕ್ಕಿ ಪುಡಿ – ಅರ್ಧ ಟೀ ಚಮಚ
ತಯಾರಿಸುವ ವಿಧಾನ: ಬಾಳೆಹಣ್ಣಿನ ಸಿಪ್ಪೆ ತೆಗೆದು ಅರ್ಧ ಇಂಚಿಗೆ ಕತ್ತರಿಸಿಕೊಳ್ಳಿ. ಹೆಸರುಬೇಳೆಯನ್ನು ಪರಿಮಳ ಬರುವರೆಗೆ ಹುರಿದುಕೊಳ್ಳಿ. ಬಳಿಕ 3 ಕಪ್ ನೀರನ್ನು ಹಾಕಿ ಮೆತ್ತಗಾಗುವರೆಗೆ ಬೇಯಿಸಿ. ಬಾಣಲೆಗೆ ತುಪ್ಪ ಹಾಕಿ ಗೋಡಂಬಿಯನ್ನು ಹುರಿದು ತೆಗೆದಿಡಿ. ಅದೇ ತುಪ್ಪದಲ್ಲಿ ತೆಂಗಿನಚೂರನ್ನು ಹಾಕಿ ಬಣ್ಣ ಬದಲಾಗುವರೆಗೆ ಹುರಿದು ತೆಗೆದಿಡಿ. ಕತ್ತರಿಸಿಕೊಂಡ ಬಾಳೆಹಣ್ಣನ್ನು ಉಳಿದ ತುಪ್ಪದಲ್ಲಿ ಹಾಕಿ. ಬಣ್ಣ ಬದಲಾಗುವರೆಗೆ ಸಣ್ಣ ಉರಿಯಲ್ಲಿ ಹುರಿಯಿರಿ. ನಂತರ ಬೆಲ್ಲವನ್ನು ಬಾಣಲೆಗೆ ಹಾಕಿ ಅರ್ಧ ಕಪ್ ನೀರನ್ನು ಸೇರಿಸಿ. ಬೆಲ್ಲ ಕರಗುವರೆಗೆ ಕುದಿಸಿ. ಬೆಂದ ಬೇಳೆಗೆ ಬಾಳೆಹಣ್ಣನ್ನು ಸೇರಿಸಿ ಮಿಶ್ರಣ ಮಾಡಿ. ಕರಗಿಸಿಕೊಂಡ ಬೆಲ್ಲವನ್ನು ಸೋಸಿಕೊಂಡು ಹಾಕಿ. ಒಂದು ನಿಮಿಷ ಕುದಿ ಬರಲಿ. ಬಳಿಕ ತೆಂಗಿನ ಹಾಲನ್ನು ಹಾಕಿ ಒಂದು ನಿಮಿಷ ಕುದಿಸಿ. ಹುರಿದ ಗೋಡಂಬಿ, ತೆಂಗಿನಚೂರು ಮತ್ತು ಏಲಕ್ಕಿ ಪುಡಿಯನ್ನು ಹಾಕಿ ಮಿಶ್ರಣ ಮಾಡಿ. ರುಚಿಕರವಾದ ಮತ್ತು ಆರೋಗ್ಯಕರವಾದ ಬಾಳೆಹಣ್ಣಿನ ಪಾಯಸ ಸವಿಯಲು ಸಿದ್ಧ.
ಸಬ್ಬಕ್ಕಿ ಹೆಸರುಬೇಳೆ ಖೀರು
ಬೇಕಾಗುವ ಸಾಮಗ್ರಿಗಳು: ಹೆಸರುಬೇಳೆ – 1ಕಪ್, ಸಬ್ಬಕ್ಕಿ – 1ಕಪ್, ಬೆಲ್ಲ – 2 ಕಪ್, ಒಣದ್ರಾಕ್ಷಿ – 20 ರಿಂದ 30, ಗೋಡಂಬಿ – 15, ಬಾದಾಮಿ – 15, ಏಲಕ್ಕಿ – 4 (ಕುಟ್ಟಿ ಪುಡಿ ಮಾಡಿದ್ದು), ತುಪ್ಪ– 2 ಟೇಬಲ್ ಚಮಚ
ತಯಾರಿಸುವ ವಿಧಾನ: ಸಬ್ಬಕ್ಕಿಯನ್ನು ಅರ್ಧ ಗಂಟೆಗಳ ಕಾಲ ನೆನೆಸಿಡಿ. ನಂತರ ಹೆಸರುಬೇಳೆ ತೊಳೆದು ಇರಿಸಿಕೊಳ್ಳಿ. ಈಗ ಸ್ಟವ್ ಮೇಲೆ ಕುಕರ್ ಇರಿಸಿ ಅದಕ್ಕೆ ತುಪ್ಪ ಹಾಕಿ. ಅದಕ್ಕೆ ಹೆಸರುಬೇಳೆ ಹಾಕಿ ಕೆಂಬಣ್ಣ ಬರುವವರೆಗೂ ಹುರಿದುಕೊಳ್ಳಿ. ಇದಕ್ಕೆ 7ಕಪ್ ನೀರು ಸೇರಿಸಿ. ನಂತರ ಅದಕ್ಕೆ ನೆನೆದ ಸಬ್ಬಕ್ಕಿ ಹಾಕಿ 4 ವಿಷಲ್ ಕೂಗಿಸಿ. ಈಗ ಪಾತ್ರೆಯೊಂದಕ್ಕೆ ಬೆಲ್ಲ ಹಾಕಿ 1 ಕಪ್ ನೀರು ಹಾಕಿ ಕರಗಿಸಿ ಶೋಧಿಸಿಕೊಳ್ಳಿ. ಈಗ ಕುಕರ್‌ಗೆ 4 ಕಪ್ ಹಾಲು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಕುದಿಸಿ. ಅದಕ್ಕೆ ಬೆಲ್ಲ ಕರಗಿಸಿದ ನೀರು ಹಾಕಿ ಕುದಿಸಿ. ಈಗ ಸ್ಟವ್ ಆರಿಸಿ ಅದಕ್ಕೆ ಏಲಕ್ಕಿ ಪುಡಿ ಸೇರಿಸಿ ಮಿಶ್ರಣ ಮಾಡಿ. ಈಗ ತುಪ್ಪದಲ್ಲಿ ಒಣಹಣ್ಣುಗಳನ್ನು ಹುರಿದು ಪಾಯಸಕ್ಕೆ ಸೇರಿಸಿ. ಈಗ ನಿಮ್ಮ ಮುಂದೆ ದೇವರ ನೈವೇದ್ಯಕ್ಕೆ ಇರಿಸುವ ಸಬ್ಬಕ್ಕಿ ಹೆಸರುಬೇಳೆ ಪಾಯಸ ರೆಡಿ.
ಅನಾನಸ್ ಪಾಯಸ
ಬೇಕಾಗುವ ಸಾಮಗ್ರಿಗಳು: ಅನಾನಸ್ ಹಣ್ಣು – 1 ಮಧ್ಯಮ ಗಾತ್ರದ್ದು, ಕಡಲೇಬೇಳೆ –1 ಕಪ್, ತೆಂಗಿನಕಾಯಿ – 1, ಏಲಕ್ಕಿ – 4-5, ತುಪ್ಪ –2 ಚಮಚ, ಸಕ್ಕರೆ – ರುಚಿಗೆ ತಕ್ಕಷ್ಟು.
ತಯಾರಿಸುವ ವಿಧಾನ: ತೆಂಗಿನಕಾಯಿಯನ್ನು ಮಿಕ್ಸಿಯಲ್ಲಿ ರುಬ್ಬಿಕೊಂಡು ಹಾಲು ತಯಾರಿಸಿ ಇಟ್ಟುಕೊಳ್ಳಿ. ಕಡಲೆಬೇಳೆಯನ್ನು ಬೇಯಿಸಿ ಇಟ್ಟುಕೊಳ್ಳಿ. ಬೆಂದ ಕಡಲೆಬೇಳೆಗೆ ಚಿಕ್ಕದಾಗಿ ಕತ್ತರಿಸಿದ ಅನಾನಸ್ ತುಂಡುಗಳು, ಸಕ್ಕರೆ, ಏಲಕ್ಕಿಪುಡಿಯನ್ನು ಹಾಕಿ ಪುನಃ 5 ನಿಮಿಷಗಳವರೆಗೆ ಬೇಯಿಸಿ. ಇದಕ್ಕೆ ತೆಂಗಿನಹಾಲನ್ನು ಬೆರೆಸಿ ಚೆನ್ನಾಗಿ ಕದಡಿ. ಕೆಳಗಿಳಿಸಿ ತುಪ್ಪ ಹಾಕಿ.