ರೂಪಾ ಕೆ.ಎಂ
ನಿತ್ಯ ಬೆಳಗಾದರೆ ಗೃಹಿಣಿಯರು ಹಾಲನ್ನು ಕಾಯಿಸುವ ಮೂಲಕ ಅಡುಗೆ ಮನೆಯ ಮೊದಲ ಕೆಲಸನವ್ನು ಶುರುವಿಟ್ಟುಕೊಳ್ಳುತ್ತಾರೆ. ಇದ್ದ ಬದ್ದ ಪಾತ್ರೆಯಲ್ಲಿದ್ದ ತಂಗಳನ್ನೆಲ್ಲ ಒಂದು ಕಡೆಗೆ ಹಾಕಿ, ತೊಳೆದ ಪಾತ್ರದಲ್ಲಿ ಹೊಸದಾಗಿ ಅನ್ನವನ್ನು ಬೇಯಿಸಲಾಗುತ್ತದೆ. ಹಾಲು– ಅನ್ನಗಳೆರಡು ಇಂದಿಗೂ ಸಂಪತ್ತಿನ ದ್ಯೋತಕವೆಂದೇ ಭಾವಿಸಲಾಗುತ್ತದೆ. ಅಡುಗೆ ಮನೆಯಲ್ಲಿ ತರಹೇವಾರಿ ಪದಾರ್ಥಗಳಿದ್ದರೂ ಹಾಲು – ಅನ್ನಗಳೆರಡಕ್ಕೂ ವಿಶಿಷ್ಟವಾದ ಸ್ಥಾನವಿದೆ.
ಅಕ್ಷಯಾ ತೃತೀಯ ದಿನದಂದು ಸಾಮಾನ್ಯವಾಗಿ ದೊಡ್ಡ ಅಕ್ಕಿಯ ಮಡಕೆಯಲ್ಲಿ ಅಕ್ಕಿ ತುಂಬಿಸುವ ಸಂಪ್ರದಾಯ ಇಂದಿಗೂ ಕರಾವಳಿಯ ಕೆಲವು ಕಡೆಗಳಲ್ಲಿ ಚಾಲ್ತಿಯಲ್ಲಿದೆ.
ಏನಿದು ಅಕ್ಕಿ ತುಂಬಿಸುವ ಸಂಪ್ರದಾಯ?
ಅಕ್ಕಿಯೆಂಬುದು ಆಹಾರದ ಭಾಗವಾಗಿದ್ದರೂ, ಸಾಂಸ್ಕೃತಿಕವಾಗಿಯೂ ತನ್ನದೇ ಮಹತ್ವವನ್ನು ಪಡೆದುಕೊಂಡಿದೆ. ಸೇರು ಒದ್ದು, ಸೂರು ಕಾಯುವ ಸೊಸೆಯಂದಿರ ಗೃಹ ಪ್ರವೇಶ, ಮದುವೆ, ಮುಂಜಿಯಂಥ ಶ್ರೇಷ್ಠ ಸಮಾರಂಭಗಳಲ್ಲಿ ಅರಿಶಿನ–ಕುಂಕುಮದಲ್ಲಿ ಮಿಂದೆದ್ದ ಅಕ್ಕಿ ಅಕ್ಷತೆಯಾಗಿ ಬದಲಾಗುತ್ತದೆ. ಹೀಗೆ ಸಾಂಸ್ಕೃತಿಕವಾಗಿ ಅಗತ್ಯವೆನಿಸುವ ಅಕ್ಕಿಯನ್ನು ಅಕ್ಷಯ ತೃತೀಯ ದಿನದಂದು ದೊಡ್ಡ ಮಡಕೆಯಲ್ಲಿ ತುಂಬಿಸಿಡಲಾಗುತ್ತದೆ. ಇದು ಸಂಪತ್ತನ್ನು ತುಂಬಿಸಿಡುವ ದ್ಯೋತಕವೂ ಹೌದು. ಅಕ್ಕಿ ಆಹಾರಕ್ಕೂ, ಅನುಬಂಧಕ್ಕೂ ನಂಟಿನಂತೆ ಇರುವುದರಿಂದ ಸಂಪತ್ತಿನ ಸೂಚಕವಾಗಿಯೂ ಕಾಣಬಹುದು.
ಹೇಗಿರುತ್ತದೆ ಆಚರಣೆ
ಗೋಪಿ ,ಚಂದನ, ಅರಿಶಿನ, ಕುಂಕುಮದಲ್ಲಿ ಚಿತ್ತಾರ ಬರೆದ ಮಣ್ಣಿನ ದೊಡ್ಡ ಮಡಕೆಯ ಕುತ್ತಿಗೆಗೆ ಶ್ವೇತ ಬಣ್ಣದ ಹೂವಿನಿಂದ ಅಲಂಕಾರ ಮಾಡಲಾಗುತ್ತದೆ. ನಂತರ ಲಕ್ಷ್ಮಿ ಅಷ್ಟೋತ್ತರಗಳನ್ನು ಜೋರಾಗಿ ಪಠಿಸುತ್ತಲೇ ಅಕ್ಕಿಯನ್ನು ತುಂಬಲಾಗುತ್ತದೆ. ಅಕ್ಕಿ ತುಂಬಿದ ಮೇಲೆ ಜಾಗಟೆ ಸದ್ದಿನೊಂದಿಗೆ ಒಂದಾರತಿ ಬೆಳಗಿ, ‘ಲಕ್ಷ್ಮಿ ತಾಯಿ ನಮ್ಮ ಮನೆಯಲ್ಲಿ ಸ್ಥಿರವಾಗಿ ಉಳಿಯಮ್ಮ’ ಎಂದು ಪ್ರಾರ್ಥಿಸಲಾಗುತ್ತದೆ.
ರೈತಾಪಿ ಕುಟುಂಬದಲ್ಲಿ ಅಕ್ಕಿಯನ್ನು ಭತ್ತದ ಮುಡಿಯಲ್ಲಿ ಕಟ್ಟಿ ಇಡಲಾಗುತ್ತಿತ್ತು. ಅಕ್ಷಯ ತೃತೀಯ ದಿನದಂದು ಈ ಮುಡಿಯನ್ನು ಬಿಚ್ಚಿ, ಅದರಲ್ಲಿದ್ದ ಅಕ್ಕಿಯನ್ನು ಮನೆಯ ಖರ್ಚಿಗೆಂದು ಬಳಸಲಾಗುತ್ತಿತ್ತು. ಹಾಗೆ ಬಳಸುವಾಗಲೂ ಒಂದಿಷ್ಟು ಅಕ್ಕಿ ಪೋಲಾಗದಂತೆ, ಹಾಳಾಗದಂತೆ ಮಡಕೆಗೆ ಸುರಿಯಲಾಗುತ್ತಿತ್ತು.
ಇದರ ಹಿಂದಿನ ಉದ್ದೇಶವಿಷ್ಟೆ ಅಕ್ಕಿಯೆಂಬುದು ನಾವು ಕಷ್ಟಪಟ್ಟು ಬೆಳೆದ ಪದಾರ್ಥ. ಒಂದು ಹೊತ್ತಿನ ಕೂಳಿಗೆ ಕಷ್ಟಪಡುವವರ ನಡುವೆ ಉಣ್ಣುವವರಿಗೆ ಸದಾ ಕೃತಜ್ಞತೆ ಇರಬೇಕು ಎನ್ನುವ ಮನೋಭಾವವೂ ಇದರ ಹಿಂದೆ ಇತ್ತು.
ಅಕ್ಕಿ ತುಂಬಿಸುವುದು ಎಂದರೆ ಸಂಪತ್ತನ್ನು ತುಂಬಿಸಿಕೊಂಡಂತೆ. ತಟ್ಟೆಯಲ್ಲಿ ಒಂದು ಕಾಳನ್ನು ಬಿಡದೆ ಊಟ ಮಾಡುವುದು ಕೂಡ ಅನ್ನಕ್ಕೆ ನಾವು ಕೊಡುವ ದೊಡ್ಡ ಗೌರವ. ಸಾಂಪ್ರದಾಯಿಕವಾಗಿ ಅಕ್ಕಿಯನ್ನು ಹೀಗೆ ತುಂಬಿಸುವುದರ ಜತೆಗೆ ಮನೆ ಮಂದಿಗೆಲ್ಲ ತಟ್ಟೆಯಲ್ಲಿ ಅನ್ನವನ್ನು ಬಿಡದಂತೆ ಊಟ ಮಾಡುವ ಕಲೆಯನ್ನು ಹೇಳಿಕೊಡುವುದರ ಅಗತ್ಯವಂತೂ ಇದೆ.
ಪ್ರತಿ ಅಕ್ಕಿ ಕಾಳಿನ ಹಿಂದೆ ಇರುವ ಶ್ರಮದ ಬಗ್ಗೆ, ಪ್ರತಿ ಕಾಳು ಕೂಡಿyE ಇಡೀ ಕುಟುಂಬವನ್ನು ಸಲುಹುವ ಬಗ್ಗೆ ಮನೆಯ ಮಕ್ಕಳಿಗೆ ಅರಿವಿರಬೇಕು. ಈ ಅಕ್ಷಯ ತೃತೀಯ ದಿನದಂದು ಎಲ್ಲರ ಮನೆಯಲ್ಲಿಯೂ ಅಕ್ಕಿ ಮಡಕೆ ತುಂಬಿರಲಿ. ಮತ್ತು ಅದರಲ್ಲಿರುವ ಅಕ್ಕಿಯ ಕಾಳು ಎಂದೂ ಪೋಲಾಗದಂತೆ ಕಾಪಿಡುವ ಮನಸ್ಸು ನಮ್ಮದಾಗಲಿ.