ಅಕ್ಷಯ ಆಚರಣೆ

Akshaya Tritiya: ಚಿನ್ನ,ಬೆಳ್ಳಿ ದುಬಾರಿ; ಆಫರ್ ಭರಾಟೆಯಲ್ಲಿ ತಗ್ಗದ ಬೇಡಿಕೆ

ಪ್ರಜಾವಾಣಿ ವಿಶೇಷ

ಕೋಲ್ಕತ್ತ: ಚಿನ್ನ ಹಾಗೂ ಬೆಳ್ಳಿಯ ಬೆಲೆ ಏರುತ್ತಲೇ ಇದ್ದರೂ, ಅಕ್ಷತ ತೃತೀಯದ ವಿಶೇಷ ಸಂದರ್ಭದಲ್ಲಿ ಗ್ರಾಹಕರನ್ನು ಆಭರಣ ಮಳಿಗೆಗಳತ್ತ ಸೆಳೆಯಲು ತರಹೇವಾರಿ ಕೊಡುಗೆಗಳ ಘೋಷಣೆಯಾಗುತ್ತಿವೆ.

ಅಕ್ಷಯ ತೃತೀಯ (ಏ. 30) ದಿನದಂದು ಚಿನ್ನ ಹಾಗೂ ಬೆಳ್ಳಿ ಖರೀದಿಯು ಸಮೃದ್ಧಿಯ ಸಂಕೇತ ಎಂಬುದು ಭಾರತೀಯರ ನಂಬಿಕೆಯಾಗಿದೆ. ಈ ಸಂದರ್ಭಕ್ಕಾಗಿ ತನಿಷ್ಕ್‌, ಸೆನ್ಕೊ ಗೋಲ್ಡ್‌, ಎಂಜಿ ಜ್ಯುವಲರ್ಸ್, ಪಿಸಿ ಚಂದ್ರಾ ಸೇರಿದಂತೆ ಬಹಳಷ್ಟು ಆಭರಣ ಮಳಿಗೆಗಳು ಆಕರ್ಷಕ ಕೊಡುಗೆಗಳ ಮೂಲಕ ಗ್ರಾಹಕರನ್ನು ಮಳಿಗೆಗಳತ್ತ ಆಕರ್ಷಿಸಲು  ಮುಂದಾಗಿವೆ.

ಆಭರಣ ತಯಾರಿಕೆ ಮೇಲೆ ತನಿಷ್ಕ್‌ ಶೇ 20ರಷ್ಟು ರಿಯಾಯಿತಿ ಘೋಷಿಸಿದೆ. ಸೆನ್ಕೊ ಗೋಲ್ಡ್‌ ಚಿನ್ನದ ಬೆಲೆ ಮೇಲೆ ₹350ರಷ್ಟು ರಿಯಾಯಿತಿ ಹಾಗೂ ಮೇಕಿಂಗ್ ಚಾರ್ಜ್ ಮೇಲೆ ಶೇ 30ರಷ್ಟು ರಿಯಾಯಿತಿ ಘೋಷಿಸಿದೆ. ವಜ್ರದ ಆಭರಣಗಳ ಮೇಕಿಂಗ್ ಮೇಲೆ ಶೇ 100ರಷ್ಟು ರಿಯಾಯಿತಿ ಘೋಷಿಸಿದೆ.

‘ಅಕ್ಷಯ ತೃತೀಯ ಉತ್ತಮವಾಗಿರಲಿ ಎಂದು ನಾವು ಬಯಸುತ್ತೇವೆ. ಬೆಲೆ ಹೆಚ್ಚಳವಾದರೂ, ಚಿನ್ನ ಖರೀದಿಗೆ ಗ್ರಾಹಕರು ಒಲವು ಹೊಂದಿದ್ದಾರೆ. ಮೇಕಿಂಗ್ ಮೇಲೆ ರಿಯಾಯಿತಿ ಘೋಷಿಸುವ ಮೂಲಕ ಗ್ರಾಹಕರನ್ನು ಮಳಿಗೆಯತ್ತ ಆಕರ್ಷಿಸುವ ಪ್ರಯತ್ನ ನಡೆಸಿದ್ದೇವೆ’ ಎಂದು ಅಂಜಲಿ ಜ್ಯುವೆಲರ್ಸ್‌ನ ನಿರ್ದೇಶಕ ಅನರ್ಘ ಉತ್ತಿಯಾ ಚೌಧರಿ ಹೇಳಿದ್ದಾರೆ.

ಚಿನ್ನದ ಬೆಲೆ ಶೇ 5ರಿಂದ 7ರಷ್ಟು ಹೆಚ್ಚಳ ಸಾಧ್ಯತೆ

‘ಸದ್ಯದ ಜಾಗತಿಕ ಪರಿಸ್ಥಿತಿಯಲ್ಲಿ ಚಿನ್ನ ಮಾತ್ರ ಸುರಕ್ಷಿತ ಹೂಡಿಕೆಯಾಗಿದೆ. ಹಣದುಬ್ಬರ ತಪ್ಪಿಸಲು ಜಾಗತಿಕ ಬ್ಯಾಂಕುಗಳೂ ಚಿನ್ನಗಳನ್ನು ಖರೀದಿಸುತ್ತಿವೆ. ಹೀಗಾಗಿ ಗ್ರಾಹಕರೂ ಚಿನ್ನದ ಮೇಲೆ ಹೂಡಿಕೆಗೆ ಮುಂದಾಗಿದ್ದಾರೆ. 22 ಕ್ಯಾರಟ್‌ನ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9 ಸಾವಿರ ಇದ್ದು, ಇದು ಕಳೆದ ವರ್ಷದ ಅಕ್ಷಯ ತೃತೀಯ ಸಂದರ್ಭಕ್ಕೆ ಹೋಲಿಸಿದಲ್ಲಿ ಶೇ 30ರಷ್ಟು ಏರಿಕೆಯಾಗಿದೆ’ ಎಂದಿದ್ದಾರೆ.

‘ಇದೇ ಪರಿಸ್ಥಿತಿ ಮುಂದುವರಿದರೆ ಅತಿ ಶೀಘ್ರದಲ್ಲಿ ಚಿನ್ನದ ಬೆಲೆ ಶೇ 5ರಿಂದ 7ರಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ. ಈ ಬೆಳವಣಿಗೆ 2025ರುದ್ದಕ್ಕೂ ಮುಂದುವರಿಯುವ ಸಾಧ್ಯತೆಗಳಿವೆ’ ಎಂದು ಚೌಧರಿ ಹೇಳಿದ್ದಾರೆ.

ಐಸಿಆರ್‌ಎ ವರದಿಯ ಪ್ರಕಾರ ಚಿನ್ನದ ವಿನಿಮಯ ವಹಿವಾಟು ನಿಧಿ (ಇಟಿಎಫ್‌)ಯು ವರ್ಷದಿಂದ ವರ್ಷಕ್ಕೆ ಶೇ 98.45ರ ದರದಲ್ಲಿ ಹೆಚ್ಚುತ್ತಲೇ ಸಾಗುತ್ತಿದೆ. 2025ರ ಫೆಬ್ರುವರಿಯಲ್ಲಿ ₹1,979.84 ಕೋಟಿಯಷ್ಟಾಗಿದೆ. 2024ರ ಫೆಬ್ರುವರಿಯಲ್ಲಿ ₹997.21ರಷ್ಟು ವಹಿವಾಟು ದಾಖಲಾಗಿದೆ. ಒಟ್ಟು ಚಿನ್ನದ ಮೇಲಿನ ಹೂಡಿಕೆಯು ₹28,529 ಕೋಟಿಯಿಂದ ₹55,677ಕ್ಕೆ ಏರಿಕೆಯಾಗಿದೆ ಎಂದು ಪಿಟಿಐ ವರದಿ ಮಾಡಿದೆ.

ಚಿನ್ನದಂತೆಯೇ ಬೆಳ್ಳಿಗೂ ಬೇಡಿಕೆ

ಝಿರೊದಾ ಫಂಡ್ ಹೌಸ್‌ನ ಮಾಹಿತಿಯನ್ವಯ ಬೆಳ್ಳಿ ಮೇಲಿನ ಹೂಡಿಕೆಯು 2025ರ ಫೆಬ್ರುವರಿಯಲ್ಲಿ ₹13,500 ಕೋಟಿ ತಲುಪಿದೆ. ಭೌತಿಕ ಲೋಹವನ್ನು ಹೊಂದದೇ, ಹೂಡಿಕೆ ಮಾಡುವ ಅವಕಾಶವನ್ನು ಸೆಬಿಯು 2021ರ ನವೆಂಬರ್‌ನಲ್ಲಿ ಅವಕಾಶ ನೀಡಿತು. ಇದಾದ ನಂತರ ಚಿನ್ನ ಮತ್ತು ಬೆಳ್ಳಿ ಮೇಲಿನ ಹೂಡಿಕೆಗೆ ಬೇಡಿಕೆ ಹೆಚ್ಚಳವಾಗಿದೆ. 

ಈ ಬಾರಿ ಅಕ್ಷಯ ತೃತೀಯದ ಜತೆಗೆ, ವಿವಾಹ ಋತುಮಾನವೂ ಚಿನ್ನ ಹಾಗೂ ಬೆಳ್ಳಿ ಮೇಲಿನ ಬೇಡಿಕೆಯನ್ನು ಇನ್ನಷ್ಟು ಹೆಚ್ಚಿಸಿವೆ.