ಅಕ್ಷಯ ಆಚರಣೆ

Akshaya Tritiya: ಅಕ್ಷಯ ತೃತೀಯಕ್ಕೆ ಮಾಡಿ ಆರೋಗ್ಯಕರ ಕೋಸಂಬರಿಗಳು

ಪ್ರಜಾವಾಣಿ ವಿಶೇಷ

ಪವಿತ್ರಾ ಭಟ್‌

ಹಬ್ಬಗಳೆಂದರೆ ತರಹೇವಾರಿ ಆಹಾರಗಳು ಸಾಮಾನ್ಯ. ಸಿಹಿ ಭಕ್ಷ್ಯಗಳು, ಕೋಸಂಬರಿಗಳು ವಿಶೇಷ ಊಟದ ಜತೆಗೆ ಆರೋಗ್ಯವನ್ನು ವೃದ್ಧಿಸುತ್ತದೆ.

ಅದರಲ್ಲೂ ಅಕ್ಷಯ ತೃತೀಯ ಬೇಸಿಗೆಯ ಸಮಯದಲ್ಲಿ ಬರುವುದರಿಂದ ಆರೋಗ್ಯಕ್ಕೆ ಹಿತವಾಗುವ, ರುಚಿಯಾಗಿರುವ ಕೋಸಂಬರಿಗಳೇ ಹೆಚ್ಚು ಜನಪ್ರಿಯ. ಹಾಗಾದರೆ ಅಕ್ಷಯ ತೃತೀಯ ಹಬ್ಬದಂದು ಯಾವೆಲ್ಲಾ ರೀತಿಯ ಕೋಸಂಬರಿಗಳನ್ನು ಮಾಡಬಹುದು ಎನ್ನುವ ಬಗ್ಗೆ ನೋಡಿವುದಾದರೆ

ಬಾಳೆದಿಂಡಿನ ಕೋಸಂಬರಿ

ಬಾಳೆ ಎಲೆ ಮಾತ್ರವಲ್ಲದೆ ಬಾಳೆ ದಿಂಡು ಕೂಡ ಬಲು ರುಚಿ. ಆರೋಗ್ಯಕ್ಕೂ ಹಿತ. ಎಲ್ಲಾ ಹಬ್ಬಗಳಲ್ಲೂ ಮಾಡಬಹುದಾದ ಖಾದ್ಯ ಇದಾಗಿದೆ.

ಮಾಡುವ ವಿಧಾನ: ಮೊದಲು ಬಾಳೆ ದಿಂಡನ್ನು ಚೆನ್ನಾಗಿ ತೊಳೆದು, ತುರಿದುಕೊಳ್ಳಿ, ಸಣ್ಣದಾಗಿ ಹೆಚ್ಚಿಕೊಂಡರೂ ತೊಂದರೆಯಿಲ್ಲ. ಒಗ್ಗರಣೆ ಪಾತ್ರೆಗೆ ಎಣ್ಣೆ, ಸಾಸಿವೆ ಚಿಟಿಕೆ ಇಂಗು ಹಾಕಿ ಸಿಡಿಸಿಕೊಳ್ಳಿ. ಅದನ್ನು ಹೆಚ್ಚಿಕೊಂಡ ಬಾಳೆದಿಂಡಿಗೆ ಸೇರಿಸಿ. ನಂತರ ಉಪ್ಪು, ಒಣಕಾಯಿ ತುರಿ, ಅರ್ಧ ಕಪ್‌ ಮೊಸರು ಸೇರಿಸಿದರೆ ಆರೋಗ್ಯಕರವಾದ ಬಾಳೆದಿಂಡಿನ ಕೋಸಂಬರಿ ತಯಾರು.

ಹೆಸರು ಬೇಳೆ

ಮಾಡುವ ವಿಧಾನ: ಹೆಸರು ಬೇಳೆಯನ್ನು ಎರಡು ಗಂಟೆ ನೀರಿನಲ್ಲಿ ನೆನೆಸಿಡಿ. ಬಳಿಕ ಅದನ್ನು ಸೋಸಿಕೋಳಿ. ಒಗ್ಗರಣೆ ಪಾತ್ರೆಗೆ ಒಂದು ಚಮಚ ಎಣ್ಣೆ ಹಾಕಿ, ಸಾಸಿವೆ, ಬೇವಿನ ಎಲೆ, ಚಿಟಿಕೆ ಇಂಗು ಹಾಕಿ, ನೆನೆಸಿಟ್ಟ ಹೆಸರುಬೇಳೆಗೆ ಹಾಕಿಕೊಳ್ಳಿ. ನಂತರ ಹಸಿಯಾಗಿ ತುರಿದುಕೊಂಡ ಕ್ಯಾರೆಟ್‌, ಕಾಯಿತುರಿ, ಉಪ್ಪು, ಲಿಂಬು ರಸ ಸೇರಿ ಚೆನ್ನಾಗಿ ಮಿಶ್ರಣ ಮಾಡಿದರೆ ಹೆಸರು ಬೇಳೆ ಕೋಸಂಬರಿ ಸವಿಯಲಿ ಸಿದ್ಧ.

ಅಲಸಂದೆ ಕಾಳಿನ ಕೋಸಂಬರಿ

ಅಲಸಂದೆ ಕಾಳು ಆರೋಗ್ಯಕ್ಕೆ ಒಳ್ಳೆಯದು. ನಿದ್ರಾಹೀನತೆಯಿಂದ ಬಳುತ್ತಿರುವವರಿಗಂತೂ ರಾಮಬಾಣ. ಹಬ್ಬದ ನೆವದಲ್ಲಾದರೂ ಅಲಸಂದೆ ಕಾಳಿನ ಕೋಸಂಬರಿ ತಿಂದರೆ ದೇಹಕ್ಕೂ ಹಿತ

ಮಾಡುವ ವಿಧಾನ: ಮೊದಲು ಅಲಸಂದೆ ಕಾಳನ್ನು ಮೆತ್ತಗಾಗುವರೆಗೆ ಬೇಯಿಸಿಕೊಳ್ಳಿ. ಉಪ್ಪು ಹಾಕಿ ಬೇಯಿಸಿಕೊಂಡರೆ ಒಳಿತು. ನಂತರ ಅದನ್ನು ಪಾತ್ರೆಗೆ ಹಾಕಿ ಸೋಸಿಕೊಳ್ಳಿ. ನಂತರ ಅದಕ್ಕೆ ಕಾಯಿತುರಿ ಸೇರಿಸಿ ಮಿಶ್ರಣ ಮಾಡಿಕೊಳ್ಳಿ, ಖಾರ ಬೇಕಿದ್ದರೆ, ಮೆಣಸಿನ ಪುಡಿ ಅಥವಾ ಹಸಿ ಮೆಣಸನ್ನು ಸೇರಿಸಿಕೊಳ್ಳಿ.

ಬೀಟ್ರೂಟ್‌ ಕೋಸಂಬರಿ

ಮಾಡುವ ವಿಧಾನ: ಬೀಟ್ರೂಟ್‌ ಸಿಪ್ಪೆ ತೆಗೆದು ಅನ್ನು ಚೆನ್ನಾಗಿ ತುರಿದುಕೊಳ್ಳಿ ಅಥವಾ ಸಣ್ಣದಾಗಿ ಕತ್ತರಿಸಿ ಬೇಯಿಸಿಕೊಳ್ಳಿ. ನಂತರ ಅದಕ್ಕೆ ಉಪ್ಪು, ಲಿಂಬುರಸ, ಕಾಯಿತುರಿ, ನೆನೆಸಿದ ಶೇಂಗಾ, ಕತ್ತರಿಸಿಕೊಂಡ ಕೊತ್ತಂಬರಿ ಸೊಪ್ಪನ್ನು ಸೇರಿಸಿಕೊಂಡರೆ ಬೀಟ್ರೂಟ್‌ ಕೋಸಂಬರಿ ಸಿದ್ಧ.