ನವದೆಹಲಿ: ಅಕ್ಷಯ ತೃತೀಯಕ್ಕೆ ಆಭರಣ ಮಳಿಗೆಗಳು ಸಜ್ಜಾಗಿದ್ದು, ಗ್ರಾಹಕರಿಂದ ಮಿಶ್ರ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿ ಚಿನ್ನ, ಬೆಳ್ಳಿ ವರ್ತಕರು ಇದ್ದಾರೆ ಎಂದು ಅಖಿಲ ಭಾರತ ವರ್ತಕರ ಒಕ್ಕೂಟ ಹೇಳಿದೆ.
ಅಕ್ಷಯ ತೃತೀಯವನ್ನು ಏ. 30ರಂದು ಆಚರಿಸಲಾಗುತ್ತಿದ್ದು, ಒಟ್ಟು ₹16 ಸಾವಿರ ಕೋಟಿ ವಹಿವಾಟನ್ನು ನಿರೀಕ್ಷಿಸಲಾಗುತ್ತಿದೆ ಎಂದು ಅಖಿಲ ಭಾರತ ಆಭರಣ ಮತ್ತು ಆಭರಣ ತಯಾರಕರ ಒಕ್ಕೂಟದ ಅಧ್ಯಕ್ಷ ಪಂಕಜ್ ಅರೊರಾ ಹೇಳಿದ್ದಾರೆ.
‘ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ಏರಿಕೆಯಾಗುತ್ತಿರುವುದರಿಂದದ ಈ ವರ್ಷ ಆಭರಣ ಮಾರುಕಟ್ಟೆಯು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುವ ಸಾಧ್ಯತೆ ಇದೆ’ ಎಂದು ಹೇಳಿದ್ದಾರೆ.
‘ಸದ್ಯ ಪ್ರತಿ ಹತ್ತು ಗ್ರಾಂ ಶುದ್ಧ ಚಿನ್ನದ ಬೆಲೆ ₹1 ಲಕ್ಷ ಇದೆ. ಕಳೆದ ಅಕ್ಷಯ ತೃತೀಯ ವೇಳೆ ₹73,500 ಇತ್ತು. ಅದರಂತೆಯೇ ಬೆಳ್ಳಿ ಪ್ರತಿ ಕೆ.ಜಿ. ಬೆಲೆ ಸದ್ಯ ₹1 ಲಕ್ಷ ಇದೆ. 2023ರಲ್ಲಿ ₹86 ಸಾವಿರ ಇತ್ತು. ಈ ವರ್ಷ ₹12 ಸಾವಿರ ಕೋಟಿ ಮೌಲ್ಯದ ಸುಮಾರು 12 ಟನ್ ಚಿನ್ನ ಮತ್ತು ₹4 ಸಾವಿರ ಕೋಟಿ ಮೌಲ್ಯದ 400 ಟನ್ ಬೆಳ್ಳಿ ಮಾರಾಟವಾಗುವ ನಿರೀಕ್ಷೆ ಇದೆ’ ಎಂದು ಅರೊರಾ ಹೇಳಿದ್ದಾರೆ.
ಜಾಗತಿಕ ಆರ್ಥಿಕ ಅಸ್ಥಿರತೆ, ಕಚ್ಚಾ ತೈಲ ಬೆಲೆ ಏರಿಕೆ, ಡಾಲರ್ ಎದುರು ಕುಸಿದ ರೂಪಾಯಿ ಮೌಲ್ಯ, ಭದ್ರತೆಯ ದೃಷ್ಟಿಯಿಂದ ಚಿನ್ನದ ಮೇಲೆ ಹೂಡಿಕೆದಾರರ ಆಸಕ್ತಿ, ಜಾಗತಿಕ ರಾಜಕೀಯ ಒತ್ತಡ ಇವೆಲ್ಲವೂ ಚಿನ್ನ ಹಾಗೂ ಬೆಳ್ಳಿ ಬೆಲೆ ಏರಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದು ಪಿಟಿಐ ವರದಿ ಮಾಡಿದೆ.
ಅಕ್ಷಯ ತೃತೀಯ ವಿಶೇಷ ಸಂದರ್ಭದಲ್ಲಿ ಚಿನ್ನ, ಬೆಳ್ಳಿ ಖರೀದಿಸುವ ಗ್ರಾಹಕರು ಬಿಐಎಸ್ ಹಾಲ್‌ಮಾರ್ಕ್ ಇರುವ ಆಭರಣಗಳನ್ನೇ ಖರೀದಿಸಬೇಕು ಮತ್ತು ಸರಿಯಾದ ರಶೀದಿ ಪಡೆಯಬೇಕು. ಜತೆಗೆ ವಿಶ್ವಾಸಾರ್ಹ ಆಭರಣಕಾರರಲ್ಲೇ ಖರೀದಿಸಬೇಕು ಎಂದು ಅಖಿಲ ಭಾರತ ವರ್ಕತರಕ ಒಕ್ಕೂಟ ಮನವಿ ಮಾಡಿಕೊಂಡಿದೆ.