ಅಕ್ಷಯ ಆಚರಣೆ

Akshaya Tritiya: ಧರಣಿಯ ಭರಣಿಗಳೆಲ್ಲ ತುಂಬುವವು ಇಂದು

ಪ್ರಜಾವಾಣಿ ವಿಶೇಷ

ರೂಪಾ ಕೆ.ಎಂ

ಮನೆಯ ಹಿಂದೆ ಇರುವ ಮಾವಿನ ಮರಗಳಲ್ಲಿ ಮಾವಿನಕಾಯಿಗಳು ತೂಗುತ್ತಿವೆ. ಆದರೆ, ಹಿತ್ತಲ ತುಂಬಾ ಕಾಯಿಗಳು ಬಿದ್ದಿವೆ. ಈ ಕಾಯಿಗಳು ಯಾವ ಮರದ್ದು ಕಸೆಯೋ, ಕಾಟೋ (ಇವರೆಡೂ ಬೇರೆ ಬೇರೆ ಪ್ರಬೇಧಗಳು ) ಉಪ್ಪಿನಕಾಯಿ ಮಾಡಲು ಚೆನ್ನಾಗಿ ಆಗುತ್ತವೆ ಎಂದು ಅಜ್ಜಿ ಒಂದೊಂದನ್ನೆ ಎತ್ತಿ ಮೂಸಿ ನೋಡುತ್ತಿದ್ದ ಕಾಲವಿತ್ತು. ಅದರ ಘಮದಲ್ಲಿಯೇ ಅದು ಕಸೆಯೋ, ಕಾಟೋ ಎಂದು ಅವಳಿಗೆ ಅರ್ಥವಾಗುತ್ತಿತ್ತು.

ಬೇಸಿಗೆ ಆರಂಭವಾಗುವ ಮೊದಲೇ ಉಪ್ಪಿನಕಾಯಿ ಮಾಡಬೇಕು ಎಂಬ ಧಾವಂತ ಮನೆಯ ಹಿರಿಯ ಸದಸ್ಯರಲ್ಲಿ ಇತ್ತು. ಹಳೆಯ ಉಪ್ಪಿನಕಾಯಿಗಳನ್ನೆಲ್ಲ ಒಂದು ದೊಡ್ಡ ಭರಣಿಗೆ ಹಾಕಿ, ಬೇರೆ ಬೇರೆ ಭರಣಿಗಳನ್ನು ಚೆನ್ನಾಗಿ ಜಿಡ್ಡು ಹೋಗುವಂತೆ ತಿಕ್ಕಿ ತೊಳೆದು ಫಳ ಫಳ ಫಳ ಹೊಳೆಯುವಂತೆ ಮಾಡಿಡಲಾಗುತ್ತಿತ್ತು ಇಂಥ ಭರಣಿಯಲ್ಲಿ ವರ್ಷಗಳ ಕಾಲ ಕೆಡದೆ ಇರುವಂಥ ರುಚಿಕರ ಬಗೆ ಬಗೆಯ ಉಪ್ಪಿನಕಾಯಿಗಳನ್ನು ಶೇಖರಿಸಿ ಇಡಲಾಗುತ್ತಿತ್ತು.

ಹಳ್ಳಿಗಳಲ್ಲಿ ಒಂದು ಮಾತಿದೆ. ಯಾರ ಮನೆಯಲ್ಲಿ ಉಪ್ಪು, ಉಪ್ಪಿನಕಾಯಿ, ಹಾಲು, ತುಪ್ಪ, ಅಕ್ಕಿಗಳಿಗೆ ಬರ ಬಂದಿದೆಯೋ ಅವರು ನಿಜವಾದ ಬಡವರು ಅಂಥ. ಹಾಲು ತುಪ್ಪಕ್ಕೆ ಆಕಳಿತ್ತು. ಭತ್ತವನ್ನು ಬೆಳೆಯಲಾಗುತ್ತಿತ್ತು. ಮನೆಯ ಹಿತ್ತಲಿನಲ್ಲಿ ಬೆಳೆಯುತ್ತಿದ್ದ ಮಾವಿನಕಾಯಿ, ಲಿಂಬೆಹಣ್ಣು, ಬಿಂಬುಳಿಕಾಯಿ, ಕಂಚಿಕಾಯಿಗಳೆಲ್ಲ ಉಪ್ಪಿನಕಾಯಿಗಳಾಗಿ ಭರಣಿಗಳನ್ನು ಸೇರುತ್ತಿದ್ದವು. ಇವುಗಳನ್ನು ಶೇಖರಿಸಿಡಲು ಸಾಧ್ಯವಾಗದೇ ಹೋದರೆ ಆಪತ್ತು ಎದುರಾಗಿದೆ ಎಂದೇ ಭಾವಿಸಲಾಗುತ್ತಿತ್ತು.

ಉಪ್ಪಿನಕಾಯಿಗೂ ಮೌನಾಚರಣೆಗೂ ಸಂಬಂಧ!

ಯಾವುದೇ ಉಪ್ಪಿನಕಾಯಿ ಮಾಡುವಾಗಲೂ ಮನೆ ಮಂದಿಯೆಲ್ಲ ಅದರಲ್ಲಿ ಪಾಲ್ಗೊಳ್ಳುತ್ತಿದ್ದರಿಂದ ಸಹಜವಾಗಿ ಒಂದು ಸಂಭ್ರಮಾಚರಣೆ ಏರ್ಪಡುತ್ತಿತ್ತು. ಉಪ್ಪಿನಕಾಯಿ ಹದವರಿತು ಮಾಡುತ್ತಿದ್ದ ಮನೆಯ ಹಿರಿಯಾಳು ಸಹಜವಾಗಿ ಉಪ್ಪಿನಕಾಯಿಯನ್ನು ಭರಣಿಗೆ ಸೇರಿಸುವವರೆಗೂ ಮಾತನಾಡುತ್ತಿರಲಿಲ್ಲ. ಮಾತನಾಡುವಾಗ ಎಂಜಲು ಸಿಡಿದೀತು ಎಂಬ ಭಯ. ಒಂದು ಹನಿ ನೀರು ಉಪ್ಪಿನಕಾಯಿ ಭರಣಿಗೆ ಸೋಕಿದರೆ ಅಲ್ಲಿಗೆ ಅದು ಕೆಟ್ಟಂತೆ ಎಂಬ ಭಾಸ. ಊಟಕ್ಕೆ ನೆಂಜಿಕೊಳ್ಳುವ ಉಪ್ಪಿನಕಾಯಿಯನ್ನು ಅಷ್ಟು ಶ್ರದ್ಧೆ ಹಾಗೂ ಭಕ್ತಿಯಿಂದ ಮಾಡಲಾಗುತ್ತದೆ.

ಉಪ್ಪಿನಕಾಯಿಯೂ ಅಡುಗೆ ಮನೆಯಲ್ಲಿ ಮಹತ್ವದ ಸ್ಥಾನ ಪಡೆದುಕೊಂಡಿದ್ದರಿಂದ ಅಕ್ಷಯ ತೃತೀಯ ದಿನದಂದು ಉಪ್ಪಿನಕಾಯಿಯನ್ನು ಭರಣಿಗೆ ತುಂಬಿಸಲಾಗುತ್ತದೆ. ಸಾಮಾನ್ಯವಾಗಿ ವಸಂತ ಋತುವಿನಲ್ಲಿ ಸಿಗುವ ಮಾವಿನಕಾಯಿ ಇದು ಸರಿ ಪ್ರಮಾಣದಲ್ಲಿ ಸಿಕ್ಕಿಲವಾದರೆ ಬಿಂಬುಳಿ, ಮಿಶ್ರ ತರಕಾರಿಗಳಲ್ಲಿಯೇ ಉಪ್ಪಿನಕಾಯಿ ಮಾಡಿ ಅದನ್ನು ಭರಣಿಗೆ ತುಂಬಿಸಲಾಗುತ್ತದೆ. ಇದರ ಜತೆಗೆ ಹಲಸು, ಗೆಣಸು, ಅಕ್ಕಿ ಹೀಗೆ ಬೇರೆ ಬೇರೆ ಪದಾರ್ಥಗಳನ್ನು ಬಳಸಿ ಹಪ್ಪಳವನ್ನು ಮಾಡಿ, ಬಿರು ಬೇಸಿಗೆಗೆ ಒಣಗಿಸಲಾಗುತ್ತದೆ. ಸಾಂಕೇತಿಕವಾಗಿ ಅಕ್ಷಯ ತೃತೀಯ ದಿನದಂದು ಇದನ್ನು ತುಂಬಿಡಲಾಗುತ್ತದೆ. ಎಂದಿಗೂ ಮನೆಯಲ್ಲಿ ಉಪ್ಪಿನಕಾಯಿ, ಹಪ್ಪಳಕ್ಕೆ ಕೊರತೆಯಾಗದಿರಲಿ ಎಂಬ ಆಶಯವೂ ಇದರ ಹಿಂದಿದೆ.

ಬೇಸಿಗೆ ರಜೆಗೆಂದು ಮಕ್ಕಳು ಮನೆಗೆ ದಾಂಗುಡಿ ಇಡುವುದರಿಂದ ಅಜ್ಜಿಯಂದಿರು ಮಕ್ಕಳಿಗೆ ಉಪ್ಪಿನಕಾಯಿ, ಹಪ್ಪಳ ಮಾಡಿ, ಭರಣಿಯಲ್ಲಿ ತುಂಬಿಡುವುದನ್ನು ಕಲಿಸಲು ಇದೊಂದು ಸುವರ್ಣ ಅವಕಾಶವೇ ಸರಿ.