ಬೇವು–ಬೆಲ್ಲದೊಳಗಿನ ಆರೋಗ್ಯ
ಯುಗಾದಿ ಅಂದರೆ ನಮಗೆಲ್ಲ ಥಟ್ಟನೆ ನೆನಪಾಗುವುದು ಬೇವು–ಬೆಲ್ಲ. ಯುಗಾದಿ ಹಬ್ಬದ ಆಚರಣೆ ಹಲವು ಬಗೆಯಲ್ಲಿ ತನ್ನ ಮಗ್ಗಲನ್ನು ಬದಲಿಸಿಕೊಂಡಿದ್ದರೂ ಬೇವು–ಬೆಲ್ಲದ ಸೇವನೆಯೇ ಮುಖ್ಯ.
ಜೀವನದಲ್ಲಿ ಸುಖ ಮಾತ್ರ ಬಯಸದೆ, ಕಷ್ಟ–ಸುಖವನ್ನು ಸಮಾನವಾಗಿ ಸ್ವೀಕರಿಸುವುದೇ ನಿಜವಾದ ಜೀವನ ಎಂಬ ಸಂದೇಶವನ್ನು ಬೇವು–ಬೆಲ್ಲ ಸಂಗಾತಿ ಸಾರಲಿದೆ. ನಮ್ಮ ಪೂರ್ವಜರಿಂದ ಬಂದಿರುವ ಎಲ್ಲ ಆಚರಣೆಗಳ ಹಿಂದೆ ಆರೋಗ್ಯಕ್ಕೆ ಸಂಬಂಧಪಟ್ಟು ಒಂದೊಂದು ತಾತ್ಪರ್ಯ ಇದ್ದೇ ಇರಲಿದೆ. ಅಂತೆಯೇ ಯುಗಾದಿ ಆಚರಣೆಯಲ್ಲಿ ಬೇವು–ಬೆಲ್ಲದ ಸೇವನೆಗೂ ಅಂಥದ್ದೇ ಬಲವಾದ ಕಾರಣವಿದೆ.
ಯುಗಾದಿ ಅಂದರೆ ಯುಗದ ಆದಿ. ಹಿಂದೂ ಧರ್ಮಿಯರಿಗೆ ಹೊಸ ವರ್ಷದ ಆರಂಭ. ವಸಂತ ಋತುವಿನಲ್ಲಿ ಬೇವು–ಬೆಲ್ಲ ಸೇವನೆಗೂ ನಮ್ಮ ಆರೋಗ್ಯಕ್ಕೂ ಒಂದು ಬಂಧವಿದೆ. ಕಾರಣವಿದೆ. ವಸಂತ ಋತುವಿನಲ್ಲಿ ಬೇವು–ಬೆಲ್ಲವನ್ನು ಸೇವಿಸುವುದರಿಂದ ಮುಂದೆ ನಮ್ಮನ್ನು ಬಾಧಿಸಬಹುದಾದ ಹಲವು ಅನಾರೋಗ್ಯದಿಂದ ನಮ್ಮನ್ನು ನಾವು ಕಾಪಾಡಿಕೊಳ್ಳಬಹುದು. ವೈಜ್ಞಾನಿಕ ನೆಲೆಯಲ್ಲೂ ನಮ್ಮ ಶರೀರಕ್ಕೆ ಹಲವು ಪ್ರಯೋಜನಗಳಿವೆ.
ಬೇವು ತಿನ್ನುವುದರಿಂದ ತ್ವಚೆ ಸಂಬಂಧಿ ಸಮಸ್ಯೆಗಳನ್ನು ಪರಿಹರಿಸಬಹುದು. ಮಧುಮೇಹದಿಂದ ಬಳಲುತ್ತಿರುವವರು ಬೇವಿನ ಎಲೆ ಸೇವನೆ ಪಾಲಿಸಿದರೆ ಮಧುಮೇಹವನ್ನು ನಿಯಂತ್ರಣದಲ್ಲಿರಿಸಬಹುದು. ಜಂತು ಹುಳು ಬಾಧೆ ನಿವಾರಣೆಗೆ, ಜೀರ್ಣಕ್ರಿಯೆ ಸಮಸ್ಯೆಯನ್ನು ನಿವಾರಿಸಲು, ಮಲಬದ್ಧತೆ ಸಮಸ್ಯೆ ನಿವಾರಿಸಲು, ರಕ್ತದ ಶುದ್ಧೀಕರಣಕ್ಕೆ, ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಣೆಗೆ ತುಂಬಾ ಪರಿಣಾಮಕಾರಿಯಾದ ಔಷಧಿಯಾಗಿದೆ. ಬೇಸಿಗೆಯಲ್ಲಿ ಹೆಚ್ಚು ಕಾಡುವ ಮೊಡವೆ, ಬ್ಲ್ಯಾಕ್‌ಹೆಡ್ ಸಮಸ್ಯೆಗೂ ಪರಿಹಾರ ಒದಗಿಸಲಿದೆ.
ಬೇಸಿಗೆಯಲ್ಲಿ ತ್ವಚೆಯ ಕಾಡುವ ಸಮಸ್ಯೆಗಳ ನಿಗ್ರಹಕ್ಕೆ ಬೇವಿನ ಎಲೆಗಳನ್ನು ನೀರಿನಲ್ಲಿ ಹಾಕಿ ಸ್ನಾನ ಮಾಡುವುದರಿಂದ ಪರಿಹಾರ ಕಾಣಬಹುದು. ಬೆವರಿನಿಂದ ತಲೆಹೊಟ್ಟು ಹೆಚ್ಚಿ ತಲೆಗೂದಲು ಉದುರುವಿಕೆ ತಡೆಗೆ ಸಹಕಾರಿಯಾಗಲಿದೆ. ಚಿಕ್ಕ ಮಕ್ಕಳಿಗೆ ಕಾಡುವ ಚಿಕನ್ ಪಾಕ್ಸ್ ಸಮಸ್ಯೆಗೆ ಕಹಿಬೇವನ್ನು ನೀರಲ್ಲಿ ಕುದಿಸಿ ಅದರಿಂದ ಸ್ನಾನ ಮಾಡಿಸಲಾಗುವುದರಿಂದ ಇನ್‌ಫೆಕ್ಷನ್ ಕಡಿಮೆಯಾಗಲಿದೆ. ಕಹಿಬೇವು ಆ್ಯಂಟಿ ಬ್ಯಾಕ್ಟೀರಿಯಾ ಗುಣವನ್ನು ಹೊಂದಿರುವುದರಿಂದ ರೋಗ ನಿರೋಧಕ ಶಕ್ತಿ ವೃದ್ಧಿಯಾಗಲಿದೆ.
ಇನ್ನು ಬೆಲ್ಲದ ವಿಚಾರಕ್ಕೆ ಬಂದರೆ ಬೆಲ್ಲದಲ್ಲಿ ಕಬ್ಬಿಣದಂಶ ಅಧಿಕವಾಗಿದ್ದು ಶರೀರಕ್ಕೆ ಅಗತ್ಯ ಹಿಮೋಗ್ಲೋಬಿನ್ ಪ್ರಮಾಣ ಕಾಯುವಲ್ಲಿ ಸಹಕಾರಿಯಾಗಿದೆ. ಬೆಲ್ಲದಲ್ಲಿ ಸತು ಮತ್ತು ವಿಟಮಿನ್ ಅಂಶಗಳೂ ಅಧಿಕವಾಗಿದೆ. ಕೆಮ್ಮು, ಅಸ್ತಮಾ, ಅಜೀರ್ಣ, ತಲೆನೋವು ನಿವಾರಣೆಗೂ ಬೆಲ್ಲ ತಿನ್ನುವುದು ಒಳ್ಳೆಯದು.
ಬೇವು–ಬೆಲ್ಲದಲ್ಲಿ ಇಷ್ಟೆಲ್ಲ ಆರೋಗ್ಯದ ನಂಟು ಇರುವಾಗ ಅವುಗಳ ಮಿಶ್ರಣವನ್ನು ಯುಗಾದಿಯಲ್ಲಿ ಹಂಚಿ ಸೇವಿಸುವುದರಿಂದ ಆರೋಗ್ಯ ವೃದ್ಧಿಯ ಜೊತೆ ಸುಖ-ದುಃಖದ ಸಂಕೇತವಾಗಿಯೂ ಪರಿಗಣಿಸಲಾಗುತ್ತದೆ