Celebrations

ಸೆಲೆಬ್ರಿಟೀಸ್ ಸೆಲೆಬ್ರೇಶನ್

ಪ್ರಜಾವಾಣಿ ವಿಶೇಷ

ಎಣ್ಣೆ ನೀರು ಸ್ನಾನ, ಹೊಸ ಬಟ್ಟೆಯ ಸಂಭ್ರಮ, ಬೇವು ಬೆಲ್ಲದ ಸವಿ, ಮಾವಿನ ಚಿತ್ರಾನ್ನ, ಹೋಳಿಗೆ ಸೀಕರಣೆಯ ಸವಿ, ಸಂಜೆ ಚಂದ್ರನದ ದರ್ಶನದೊಂದಿಗೆ ಹಿರಿಯರ ಆಶೀರ್ವಾದ ಪಡೆಯುವ ಅವಕಾಶ ಕಲ್ಪಿಸುವ ಯುಗಾದಿ ಸಡಗರಕ್ಕೆ ನಾಡು ಸಜ್ಜಾಗಿದೆ. ಚಿತ್ರರಂಗವೂ ಹೊಸ ವರುಷದ ಹೊಸ ಹರುಷಕ್ಕೆ ಹಾಗೂ ಹೊಸ ಅವಕಾಶಗಳಿಗೆ ಮುಖ ಮಾಡುತ್ತಾ ಯುಗಾದಿಯ ಸಡಗರದೊಂದಿಗೆ ಹಲವು ನೆನಪುಗಳನ್ನು ಮೆಲುಕು ಹಾಕಿದೆ.

ಸಂಯುಕ್ತ ಹೊರನಾಡು

ವರ್ಷದ ಆದಿ ಯುಗಾದಿ ಎಂದರೆ ನೆನಪಾಗುವುದೇ ಅಜ್ಜಿ (ಭಾರ್ಗವಿ ನಾರಾಯಣ್). ಅಜ್ಜಿ ಮನೆ ಎಂದರೆ ನನಗೆ ಮಾತ್ರವಲ್ಲ, ನಮ್ಮ ಕುಟುಂಬದ ಪ್ರತಿಯೊಬ್ಬರಿಗೂ ಆ ನೆನಪೇ ಶಾಶ್ವತ.

ಅಜ್ಜಿಗೆ ನಾಲ್ವರು ಮಕ್ಕಳು. ಎಲ್ಲರೂ ಕುಟುಂಬ ಸಮೇತರಾಗಿ ಒಂದೆಡೆ ಸೇರಿ ಹಬ್ಬ ಆಚರಿಸುವುದನ್ನು ರೂಢಿ ಮಾಡಿಸಿದ್ದೇ ಅಜ್ಜಿ. ಎಲ್ಲರೂ ಸೇರಿ ಒಂದೊಂದು ಅಡುಗೆ ಮಾಡುವುದು ನಾವು ರೂಢಿಸಿಕೊಂಡ ಒಂದು ಪದ್ಧತಿ. ಅಮ್ಮ, ಅಜ್ಜಿ ಎಲ್ಲರೂ ಮುಖ್ಯವಾದ ಅಡುಗೆ ಮಾಡುತ್ತಿದ್ದರೆ, ನಾವು ಚಿಕ್ಕವರು ಬಜ್ಜಿ, ಆಂಬೊಡೆಯಂಥ ತಿಂಡಿ ಮಾಡುವುದರಲ್ಲಿ ನಿರತರಾಗುತ್ತಿದ್ದೆವು.

ಶ್ಲೋಕ, ಹಾಡು, ಸಿನಿಮಾ ಹಾಡುತ್ತಾ ಹಬ್ಬದ ಮಜವನ್ನು ಸವಿಯುವ ಆ ದಿನಗಳೇ ನೆನಪು. ನನ್ನ ಪಾಲಿಗೆ ಹಬ್ಬ ಎಂದರೆ ಅಜ್ಜಿಮನೆಯದ್ದೇ ನೆನಪು. ಅವರಿಲ್ಲದೆ ಈಗ ಮೂರು ವರ್ಷವಾಯಿತು. ಆದರೆ ಅಜ್ಜಿ ಹಾಕಿಕೊಟ್ಟ ಆ ಪರಂಪರೆಯನ್ನು ನಾವು ಮರೆತಿಲ್ಲ. ಬೆಳವಾಡಿ, ಹೊರನಾಡು ಕುಟುಂಬದವರೆಲ್ಲರೂ ಸೇರುತ್ತೇವೆ. ಹಿಂದಿನ ಆ ಪದ್ಧತಿಯಲ್ಲೇ ಸಾಗುತ್ತಿದ್ದೇವೆ.

ಹಬ್ಬ ಎಂದರೆ ಜೀವನದ ಎಲ್ಲಾ ನೋವನ್ನು ಮರೆತು, ಸಂಭ್ರಮಿಸುವುದು. ಅದನ್ನು ಎಲ್ಲರೂ ಜತೆಗೂಡಿ ಆಚರಿಸುವುದರ ಮೂಲಕ ಹೊಸ ವರ್ಷದ ಮೊದಲ ಹಬ್ಬದ ಮೂಲಕ ಬದುಕಿಗೊಂದು ಅರ್ಥ ಸಿಗಬೇಕೆನ್ನುವುದು ನನ್ನ ಬಯಕೆ. ಹೊಸ ವರ್ಷದಲ್ಲಿ ಕನ್ನಡ, ಮಲಯಾಳ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಚಿತ್ರಮಂದಿರಗಳಿಗೆ ಜನರು ಬಂದು ನೋಡುವಂತ ಚಿತ್ರ ಮಾಡುವ ಯೋಜನೆ ಇದೆ. ಹೊಸ ವರ್ಷ ಎಲ್ಲರಿಗೂ ಹೊಸ ಹರುಷ ತರಲಿದೆ ಎಂಬುದು ನನ್ನ ಭರವಸೆ.

ರಾಗಿಣಿ ದ್ವಿವೇದಿ

ಉತ್ತರ ಭಾರತದಲ್ಲಿ ಯುಗಾದಿ ಅಷ್ಟಾಗಿ ಆಚರಿಸುವುದಿಲ್ಲ. ಕನ್ನಡತಿಯಾದ ಮೇಲೆ ಇದುವೇ ನನ್ನ ಹೊಸ ವರ್ಷದ ಆಚರಣೆಯಾಗಿದೆ. 

ಹೊಸ ಚಿಗುರು ನಮಗೆ ನವಚೈತನ್ಯ ಮೂಡಿಸುತ್ತದೆ. ಯುಗಾದಿಯಂದು ಪೂಜೆ, ಊಟದ ಜತೆಗೆ ನಾವು ಹಲವರಿಗೆ ಉಡುಗೊರೆ ನೀಡುವುದನ್ನು ರೂಢಿಸಿಕೊಂಡಿದ್ದೇವೆ. ಪೌರ ಕಾರ್ಮಿಕರು, ರೈತರು, ಶ್ರಮ ಜೀವಿಗಳಿಗೆ ಹಬ್ಬದ ದಿನ ಅವರನ್ನು ಸತ್ಕರಿಸುವ ಪದ್ಧತಿ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ.

ಹೊಸ ವರ್ಷ ನಮ್ಮೆಲ್ಲರ ಪಾಲಿಗೆ ಹೊಸ ಸಂತಸ ತರಲಿದೆ ಎಂಬುದು ನನ್ನ ವಿಶ್ವಾಸ. ಕನ್ನಡ, ಹಿಂದಿ ಹಾಗೂ ಮಲಯಾಳ ಸಿನಿಮಾಗಳಲ್ಲಿ ನಾನು ನಟಿಸುತ್ತಿದ್ದೇನೆ. ಪ್ರಸಿದ್ಧ ನಟ ಮೋಹನ್‌ ಲಾಲ್ ಅವರೊಂದಿಗೆ ತೆರೆ ಹಂಚಿಕೊಳ್ಳುತ್ತಿರುವ ಸಂತಸ ಒಂದೆಡೆಯಾದರೆ, ‘ಸರ್ಕಾರಿ ನ್ಯಾಯ ಬೆಲೆ ಅಂಗಡಿ’ ಎಂಬ ಸದಭಿರುಚಿಯ ಚಿತ್ರ ಹಾಗೂ ‘ರಾಗಿಣಿ ಐಪಿಎಸ್‌–2’ ಈ ವರ್ಷ ತೆರೆ ಕಾಣುವ ಸಾಧ್ಯತೆಗಳಿವೆ. 

ಈ ವರ್ಷ ಎಲ್ಲಾ ರೈತರು, ಕಾರ್ಮಿಕರನ್ನೂ ಒಳಗೊಂಡು ಎಲ್ಲಾ ಶ್ರಮಿಕರೂ ಒಳ್ಳೆಯದಾಗಲಿದೆ ಎಂಬುದು ನನ್ನ ಭಲವಾದ ವಿಶ್ವಾಸ.

ನೀನಾಸಂ ಸತೀಶ್

ಬಾಲ್ಯದ ಆಟ, ಆ ಹುಡುಗಾಟ ಎನ್ನುವಂತೆ ಯುಗಾದಿಯಂದು ನಮ್ಮೂರಿನಲ್ಲಿ ಜಾತ್ರೆ ನಡೆಯುತ್ತಿತ್ತು. ಇಡೀ ಊರಿನವರೇ ಅಲ್ಲಿ ಸೇರುತ್ತಿದ್ದರು. ಆ ಜಾತ್ರೆಯಲ್ಲಿ ಸಿನಿಮಾಗಳ ಹಾಗೂ ನಟ ನಟಿಯರ ಪೋಸ್ಟರ್‌ಗಳು, ಕಾರ್ಡ್‌ಗಳನ್ನು ಮಾರಾಟವಾಗುತ್ತಿದ್ದವು. ಮನೆಯಿಂದ ದುಡ್ಡು ಪಡೆದು, ಇವುಗಳನ್ನು ಖರೀದಿಸಿ, ಮನೆಗೆ ತಂದು ಗೋಡೆಗೆ ಅಂಟಿಸುತ್ತಿದ್ದುದು ಇಂದಿಗೂ ನೆನಪು. ಸಿನಿಮಾದೊಂದಿಗಿನ ನನ್ನ ನಂಟು ಬಾಲ್ಯದಲ್ಲಿ ಕಳೆದ ಯುಗಾದಿಯ ಜಾತ್ರೆಯಿಂದಲೇ ಮೊಳಕೆಯೊಡೆದಿತ್ತು.

ಯುಗಾದಿ ಎಂದರೆ ಸಿಹಿ ತಿಂಡಿ, ಹೊಸ ಬಟ್ಟೆ ಸಂಭ್ರಮ ತರುತ್ತಿದ್ದ ಕಾಲವದು. ಈಗಲೂ ಆಚರಿಸುತ್ತೇವೆ. ಆದರೆ ಆ ಸಂಭ್ರಮಕ್ಕೆ ಸಾಟಿ ಇಲ್ಲ. ಆದರೂ ಪ್ರತಿ ಹೊಸ ವರ್ಷದಂದು ಕಳೆದು ಹೋದ ವರ್ಷದ ನೆನಪುಗಳೊಂದಿಗೆ, ಹೊಸ ಭರವಸೆಗಳೊಂದಿಗೆ ಹೊಸ ವರ್ಷಕ್ಕೆ ಕಾಲಿಡುವುದನ್ನು ಪಾಲಿಸಿಕೊಂಡು ಬರಲಾಗುತ್ತಿದೆ. 

‘ದಿ ರೈಸ್ ಆಫ್ ಅಶೋಕಾ’ ಚಿತ್ರೀಕರಣ ನಡೆಯುತ್ತಿದೆ. ‘ಅಯೋಗ್ಯ–2‘ ಚಿತ್ರೀಕರಣವೂ ಪ್ರಗತಿಯಲ್ಲಿದ್ದು, ಇದೇ ವರ್ಷ ತೆರೆ ಕಾಣಲಿದೆ. ಹೀಗಾಗಿ ಹೊಸ ವರ್ಷ ಯಶಸ್ಸು ತರಲಿದೆ ಎಂಬ ವಿಶ್ವಾಸವಿದೆ.

 ***
ಚಿತ್ರ

ಸಂಯುಕ್ತ–1,2– ಕಲಾವಿದೆ ಭಾರ್ಗವಿ ನಾರಾಯಣ್ ಅವರೊಂದಿಗೆ ಸುಧಾ ಬೆಳವಾಡಿ ಹಾಗೂ ಸಂಯುಕ್ತ ಹೊರನಾಡು.

ಸುಧಾ ಬೆಳವಾಡಿ, ಪ್ರಕಾಶ್ ಬೆಳವಾಡಿ, ಸಂಯುಕ್ತ ಹೊರನಾಡು, ಭಾರ್ಗವಿ ನಾರಾಯಣ್ ಸಹಿತಿ ಹಬ್ಬದ ಸಡಗರದಲ್ಲಿ ಇಡೀ ಕುಟುಂಬದ ಒಂದು ನೆನಪಿನ ಚಿತ್ರ