Celebrations

ಯುಗಾದಿ ಹಬ್ಬಕ್ಕಿರಲಿ ಚೆಂದದ ಲುಕ್‌

ಪ್ರಜಾವಾಣಿ ವಿಶೇಷ

ಯುಗಾದಿ ಹಬ್ಬಕ್ಕಿರಲಿ ಚೆಂದದ ಲುಕ್‌

ಪ್ರತಿ ಹಬ್ಬಗಳಿಗೂ ಅದರದ್ದೇ ಆದ ವಿಶೇಷತೆಗಳಿವೆ. ಅಂತೆಯೇ ಸಂದರ್ಭಕ್ಕೆ ತಕ್ಕಂತೆ ಮಹಿಳೆಯರು ಉಡುಗೆ, ತೊಡುಗೆಯಲ್ಲಿ ಕಂಗೊಳಿಸುವ ಉತ್ಸಾಹಕ್ಕೆ ಎಲ್ಲೆಯೇ ಇಲ್ಲ.

ಉಡುಪಿಗೆ ತಕ್ಕಂತೆ ಆಭರಣ ತೊಡುವುದು, ಕೇಶ ವಿನ್ಯಾಸ ಮಾಡುವುದು, ಮುಖ್ಯವಾಗಿ ಮುಖದ ಸೌಂದರ್ಯ ಹೆಚ್ಚಿಸುವಲ್ಲಿ ಬಹುತೇಕ ಸ್ತ್ರೀಯರು ಗಮನ, ಕಾಳಜಿ ವಹಿಸುತ್ತಾರೆ. ಯುಗಾದಿ ಹಬ್ಬಕ್ಕೆ ಸಾಂಪ್ರದಾಯಿಕ ಸೀರೆ, ಲಂಗಾ– ದಾವಣಿ, ಲೆಹೆಂಗಾ, ಚೂಡಿದಾರ್‌ ಇತ್ಯಾದಿ ತೊಡುವ ನಾರಿಯರಿಗಾಗಿ ಇಲ್ಲಿದೆ ಮೇಕ್‌ಅಪ್‌ ಬಗೆಗಿನ ಮಾಹಿತಿ.

ನಮ್ಮ ದೇಹದ ಬಣ್ಣ ಯಾವುದೇ ಇರಲಿ ಮುಖ ಮಾತ್ರ ಆಕರ್ಷಕವಾಗಿರಬೇಕು ಎನ್ನುವುದಕ್ಕೆ ಬಹುತೇಕ ಮಹಿಳೆಯರು ಒತ್ತು ನೀಡುತ್ತಾರೆ. ಹಾಗಾಗಿ ಮುಖದ ಹೆಚ್ಚಿನ ಸೌಂದರ್ಯಕ್ಕಾಗಿ ಮೇಕಪ್ ಬೇಕೇ ಬೇಕು. ಮೇಕಪ್ ವಿಷಯ ಬಂದಾಗ ಇಲ್ಲಿ ಚರ್ಮ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಒಬ್ಬೊಬ್ಬರದ್ದು ಒಂದೊಂದು ತರಹದ ಚರ್ಮವಿರುತ್ತದೆ. ಎಣ್ಣೆ ಚರ್ಮ, ಸುಕ್ಕು ಚರ್ಮ, ಮಿಶ್ರ ಚರ್ಮ, ಸೂಕ್ಷ್ಮ ಚರ್ಮ ಮತ್ತು ಸಾಮಾನ್ಯ ಚರ್ಮ ಪ್ರಮುಖವಾದವು ಎಂದು ತಜ್ಞರು ತಿಳಿಸಿದ್ದಾರೆ.

ಯಾವ ಸ್ಕಿನ್‌ಗೆ ಯಾವ ರೀತಿಯ ಮೇಕ್‌ ಅಪ್‌ ಸೂಕ್ತ ಹಾಗೂ ಚರ್ಮದ ಬಗ್ಗೆ ಇಲ್ಲಿ ತಿಳಿಯೋಣ.

ಆಯಿಲಿ ಸ್ಕಿನ್ (ಎಣ್ಣೆ ಚರ್ಮ): ಕೆಲವರ ಮುಖ ಹೊಳೆಯುವ ಹಾಗೂ ಮುಖದ ತುಂಬಾ ಎಣ್ಣೆ ಸವರಿದ ರೀತಿ ಕಾಣುವ ಹಾಗೂ ಮುಖದ ಮೇಲೆ ಕೈಯಾಡಿಸಿದಾಗ ಎಣ್ಣೆಯ ತೇವ ಕೈಗೆ ಹತ್ತಿದಂತಹ ಅನುಭವವಾಗುತ್ತದೆ. ಇದಕ್ಕೆ ಮುಖ್ಯ ಕಾರಣ ದೇಹದಲ್ಲಿರುವ ‘ಸಿಬಮ್’ ಎಂಬ ಗ್ರಂಥಿ ಎಥೇಚ್ಛವಾಗಿ ದೇಹದಿಂದ ಎಣ್ಣೆಯ ಜಿಡ್ಡನ್ನು ಹೊರ ಹಾಕುವದರಿಂದ ಚರ್ಮ ಎಣ್ಣೆಯ ಜಿಡ್ಡಿನಿಂದ ತೇವವಾಗುತ್ತದೆ.

ಒಣ ಚರ್ಮ: ಮುಖದ ಚರ್ಮವು ಸದಾ ತೇವಾಂಶ ರಹಿತವಾಗಿದ್ದು, ಚರ್ಮ ಬಿರುಸಾದ ಅನುಭವವನ್ನು ನೀಡುತ್ತದೆ. ತುಂಬಾ ತೆಳುವಾದ ಚರ್ಮ ಇರುವುದರಿಂದ ಇಂಥವರಲ್ಲಿ ತುರಿಕೆ ಮತ್ತು ರ‍್ಯಾಷಸ್ಸ್‌ಗಳು ಹೆಚ್ಚಾಗಿ ಕಂಡು ಬರುತ್ತವೆ.

ಮಿಶ್ರ ಚರ್ಮ: ಇದು ಒಣ ಚರ್ಮ ಮತ್ತು ಎಣ್ಣೆ ಚರ್ಮ ಮಿಶ್ರಣವಾದ ಗುಣಲಕ್ಷಣಗಳನ್ನು ಹೊಂದಿರುತ್ತದೆ. ತಕ್ಷಣ ಇದರ ಗುಣಲಕ್ಷಣಗಳನ್ನು ನಿರ್ಧರಿಸುವುದು ಕಷ್ಟಸಾಧ್ಯ. ಮುಖ್ಯವಾಗಿ ಹಣೆ, ಮೂಗು ಹಾಗೂ ಬಾಯಿಯ ಸುತ್ತಲೂ ಎಣ್ಣೆ ತೇವವಿರುತ್ತದೆ. ಕೆನ್ನೆಯ ಭಾಗದಲ್ಲಿ ಒಣ ಚರ್ಮ ಇರುತ್ತದೆ. ಇದನ್ನು ಕಾಂಬಿನೇಷನ್ ಸ್ಕಿನ್ ಎನ್ನುತ್ತೇವೆ.

ಸೂಕ್ಷ್ಮ ಚರ್ಮ: ಹೆಸರೇ ಹೇಳುವಂತೆ ಇಲ್ಲಿ ಚರ್ಮವು ತುಂಬಾ ಸೂಕ್ಷ್ಮವಾಗಿದ್ದು, ಮುಖದಲ್ಲಿ ಕೊಂಚ ಏರುಪೇರಾದರೂ ಇದು ಸಹಕರಿಸುವುದಿಲ್ಲ, ಬಹು ಬೇಗನೆ ಪ್ರತಿಕ್ರಿಯಿಸುತ್ತದೆ.

ಸ್ವಾಭಾವಿಕ ಚರ್ಮ: ಯಾವುದೇ ತೊಂದರೆ ಇಲ್ಲದೆ, ಆರೋಗ್ಯವಂತ ಚರ್ಮಕ್ಕೆ ನಾರ್ಮಲ್ ಸ್ಕಿನ್ ಎನ್ನಲಾಗುತ್ತದೆ.

‘ಚರ್ಮ ಯಾವ ರೀತಿಯದ್ದು ಎಂಬುದನ್ನು ಅರಿತ ಬಳಿಕವೇ ಮೇಕಪ್ ಮಾಡುವುದು ಪ್ರೊಫೇಷನಲ್ ಮೇಕಪ್‌ನ ಮುಖ್ಯ ನಿಯಮ’ ಎನ್ನುತ್ತಾರೆ ಮೇಕಪ್‌ ಆರ್ಟಿಸ್ಟ್‌ ಪ್ರೀತಿ ಮೋಹನ್‌ ಪತ್ತಾರ.

ಸ್ವಾಭಾವಿಕ ಮೇಕ್‌ಅಪ್: ಅತಿಯಾದ ಸೌಂದರ್ಯ ವರ್ಧಕಗಳನ್ನು ಬಳಕೆ ಮಾಡದೇ ಕಡಿಮೆ ಪ್ರಮಾಣದಲ್ಲಿ ಬಳಸಿ ಸಹಜ ಚರ್ಮದಂತೆಯೇ ಕಾಣುವ ಮೇಕಪ್‌ ಮಾಡಬಹುದು.

ಬೇಸಿಗೆಯ ಬಿಸಿಲಿನ ಬೇಗೆಯಿಂದ ಮೇಕ್‌ಅಪ್‌ ರಕ್ಷಿಸುವುದು ಕೂಡ ಮುಖ್ಯವಾಗುತ್ತದೆ. ಮೊದಲು ಮುಖವನ್ನು ಶುದ್ಧವಾದ ನೀರಿನಿಂದ ಸ್ವಚ್ಛಗೊಳಿಸಬೇಕು. ಐಸ್ ಕ್ಯೂಬ್‌ (ಮಂಜುಗಡ್ಡೆ)ಯಿಂದ 3 ರಿಂದ 5 ನಿಮಿಷಗಳ ಕಾಲ ಮಸಾಜ್‌ ಮಾಡಬೇಕು. ನಂತರ ಸನ್ಸ್‌ಕ್ರೀಂ, ಮೊಯಿಶ್ಚರೈಜರ್ ಮತ್ತು ಪ್ರೈಮರ್ ಹಚ್ಚಬೇಕು. ತೆಳುವಾದ ಮೇಕಪ್ ಮಾಡಿದರೆ ಹೆಚ್ಚು ಸೂಕ್ತ. ಏಕೆಂದರೆ ಬೇಸಿಗೆಯಲ್ಲಿ ಹೆಚ್ಚು ಬೆವರುವುದರಿಂದ ಗಾಢವಾದ ಮೇಕಪ್ ಹಾಕಿದರೆ ಮುಖವೆಲ್ಲ ಹರಡಿ, ಅಂದಗೆಡುವ ಸಾಧ್ಯತೆ ಹೆಚ್ಚು.

ಲಿಪ್ಸ್‌ಸ್ಟಿಕ್ ಗಾಢವಾಗಿದ್ದು, ನ್ಯೂಡ್ ಬ್ಲಶ್ (ಕೆನ್ನೆಕೆಂಪು) ಹಚ್ಚುವುದರಿಂದ ಮುಖದಲ್ಲಿ ತಾಜಾತನ ಕಾಣಬಹುದು. ಫೌಂಡೇಷನ್, ಕನ್ಸಿಲರ್ ಹಾಗೂ ಪೌಡರ್‌ಗಳ ಕಡಿಮೆ ಬಳಕೆ ಮಾಡಿ, ತೆಳುವಾದ ಕಾಜಲ್, ಐ ಲೈನರ್‌ಗಳಿದ್ದರೆ ನೈಸರ್ಗಿಕ ನೋಟ ಪಡೆಯಬಹುದು. ಸೀರೆ, ಲಂಗಾ– ದಾವಣಿ ಉಡುಗೆಗೆ ಇದು ಸೂಕ್ತ ಎನಿಸುವುದು.

ಏರ್ ಬ್ರೇಷ್‌ ಮೇಕ್‌ಅಪ್‌: ಎಲೆಕ್ಟ್ರಿಕ್ ಸಾಧನಗಳನ್ನು ಬಳಕೆ ಮಾಡಿ ಉತ್ತಮವಾದ ಹಾಗೂ ವೃತ್ತಿಪರ ಮೇಕ್‌ಅಪ್‌ ಲುಕ್‌ ಪಡೆಯಲು ಬಳಸುವ ತಂತ್ರಜ್ಞಾನವಿದು. ನಟ, ನಟಿಯರು, ಸೆಲೆಬ್ರಿಟಿಗಳು ಇದನ್ನು ಹೆಚ್ಚು ಬಳಸುತ್ತಾರೆ. ಟೋನರ್‌, ವಾಟರ್‌ ಜಲ್‌, ಮೊಯಿಶ್ಚರ್‌ ಬೇಸ್‌ ಪ್ರೀ ಮೇಕ್‌ಅಪ್‌ ಕ್ರೀಂ, ಕಲರ್‌ ಕರೆಕ್ಷನ್‌ ಕ್ರೀಂ, ಫೌಂಡೇಷನ್‌ ಬಳಸಿ, ಬಳಿಕ ಏರ್ ಬ್ರೇಷ್‌ ಮೂಲಕ ಸ್ಕಿನ್‌ ಇವನ್‌ ಟೋನ್‌ ಮಾಡುವುದು. ಕೆನ್ನೆಗಳಿಗೆ ಚಿಕ್‌ ರೋಸ್‌ ಬಳಸಿ, ನೋಸ್‌ ಪಾಯಿಂಟ್‌, ಚಿಕ್ಸ್‌ ಹೈಲೈಟ್‌ ಮಾಡಿ, ಬ್ರೆಷ್‌ನಿಂದ ಫಿನಿಷಿಂಗ್‌ ಮಾಡಿ, ಕಾಡಿಗೆ, ಐ ಶೇಡ್ಸ್‌, ಐ ಲ್ಯಾಷಸ್‌, ಐಬ್ರೋ ಹೈಲೈಟರ್‌, ಲಿಪ್‌ಸ್ಟಿಕ್‌ ಹಚ್ಚಿ, ಮೇಕ್‌ಅಪ್‌ ಸೆಟರ್‌ ಸ್ಪ್ರೇ ಮಾಡಿದರೆ ಸುಂದರ ಲುಕ್‌ ನಿಮ್ಮದಾಗುವುದು. ಲೆಹೆಂಗಾ, ಹೆವಿ ವರ್ಕ್‌ಡ್‌ ಡಿಸೈನರ್‌ ಡ್ರೆಸ್‌ಗಳಿಗೆ ಹೆಚ್ಚು ಸೂಕ್ತ.

ರೇಟ್ರೊ ಮೇಕಪ್: ಹಿಂದಿನ ಕಾಲದ ಉಡುಗೆ-ತೊಡುಗೆ ಜೊತೆಗೆ ಅಂದಿನ ಶೈಲಿಯ ಮೇಕ್‌ ಅಪ್‌ ಅನ್ನು ಅನುಸರಿಸುವುದೇ ರೆಟ್ರೊ ಸ್ಟೈಲ್‌ ಮೇಕಪ್. ಇಲ್ಲಿ ಮುಖ್ಯವಾಗಿ ಕಣ್ಣಿನ ಕಾಡಿಗೆಯು ದಪ್ಪನೆಯ ಗೆರೆಗಳಿಂದ ಕೂಡಿರುತ್ತದೆ. ಅದಕ್ಕೆ ತಕ್ಕಂತೆ ಪಫ್‌ನಿಂದ ಕೂಡಿದ ದೊಡ್ಡ ದೊಡ್ಡ ಕೇಶ ವಿನ್ಯಾಸ ಮಾಡಬಹುದು. ಯುಗಾದಿ ಹಬ್ಬಕ್ಕೆ ಸೀರೆ ತೊಟ್ಟು ಈ ಮೇಕ್‌ಅಪ್‌ ಮಾಡಿದರೆ ಹೆಚ್ಚು ಸೂಕ್ತ ಎನಿಸುವುದು.

ಎಚ್.ಡಿ. ಮೇಕಪ್: ಇಲ್ಲಿ ಅತ್ಯಾಧುನಿಕ ತಂತ್ರಜ್ಞಾನದ, ಗುಣಮಟ್ಟದ ಉತ್ಪನ್ನಗಳನ್ನು ಬಳಸಿ ಮುಖದಲ್ಲಿನ ಕಲೆಗಳನ್ನು ಮತ್ತು ಸುಕ್ಕನ್ನು ಮರೆಮಾಚಿಸಿ ಮುಖದ ಸೌಂದರ್ಯವನ್ನು ಆಕರ್ಷಕವಾಗಿರುವಂಂತೆ ಮಾಡುವುದು. ಹೆವಿ ವರ್ಕ್‌ಡ್‌ ಡಿಸೈನರ್‌ ಡ್ರೆಸ್‌, ಗೌನ್‌ಗಳಿಗೆ ಸೂಕ್ತ.

ಇಲ್ಲಿ ಮೇಕಪ್ ತೆಗೆದು ಹಾಕುವಾಗಲೂ ಎಚ್ಚರಿಕೆ ಕ್ರಮ ವಹಿಸುವುದು ಮುಖ್ಯ. ಅಂಗಡಿಗಳಲ್ಲಿ ಸಿಗುವ ಮೇಕ್‌ ಅಪ್‌ ರಿಮೂವರ್‌ ಕ್ರೀಂ, ಇತ್ಯಾದಿಗಳನ್ನು ಬಳಸಬಹುದು ಅಥವಾ ಮನೆಯಲ್ಲಿ ಕೊಬ್ಬರಿ ಎಣ್ಣೆ, ಬಾದಾಮಿ ಎಣ್ಣೆಯನ್ನು ಮುಖ್ಯದೆಲ್ಲೆಡೆ ಹಚ್ಚಿ, ಹತ್ತಿಯಿಂದ ತೆಗೆಯಬಹುದು.