ಮಂಡ್ಯ ಜಿಲ್ಲೆ, ಯುಗಾದಿ ಸಂಭ್ರಮ ಸಡಗರ
ಮಂಟೇಸ್ವಾಮಿಗೆ ನಮೋ ಎನ್ನಿರಿ
ಯುಗಾದಿ ವೇಳೆ ಮಠಕ್ಕೆ ನುಗ್ಗುವ ಸೇವೆ!
ಮಳವಳ್ಳಿ: ತಾಲ್ಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರ ರಾಜ ಬೊಪ್ಪೇಗೌಡನಪುರ (ಬಿ.ಜಿ.ಪುರ) ಗ್ರಾಮದ ಧರೆಗೆ ದೊಡ್ಡವರು ಮಂಟೇಸ್ವಾಮಿ ಜಾತ್ರಾ ಮಹೋತ್ಸವ ಅಂಗವಾಗಿ ಯುಗಾದಿ ಮುನ್ನಾ ದಿನ ನಡೆಯುವ ಮಠಕ್ಕೆ ನುಗ್ಗುವ ಸೇವೆಯಲ್ಲಿ (ಎದುರು ಸೇವೆ) ಲಕ್ಷಾಂತರ ಮಂದಿ ಭಾಗಿಯಾಗುತ್ತಾರೆ.
ಮಂಟೇಸ್ವಾಮಿ ಅವರು ಸಮಾಜದಲ್ಲಿನ ಮೌಢ್ಯವನ್ನು ಹೋಗಲಾಡಿಸಲು ಉತ್ತರನಾಡಿನಿಂದ ಬಂದು ಬಿ.ಜಿ.ಪುರ ಗ್ರಾಮದಲ್ಲಿ ಜೀವಂತ ಐಕ್ಯವಾಗಿದ್ದು, ಪ್ರತೀ ವರ್ಷ ಯುಗಾದಿ ಹಬ್ಬದ ಹಿಂದಿನ ದಿನ ಲಕ್ಷಾಂತರ ಮಂದಿ ಭಕ್ತರು ಬಂದು ಗದ್ದುಗೆ ದರ್ಶನ ಪಡೆಯುವ ಪ್ರತೀತಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇಂತಹ ಆವರಣೆಯನ್ನು ಮಠ ನುಗ್ಗುವುದು ಎಂದು ಕರೆಯಲಾಗುತ್ತದೆ.
ಉತ್ತರನಾಡಿನ ಕೊಡೆಕಲ್ ಪರಂಪರೆಯ ಮಂಟೇಸ್ವಾಮಿ ಅವರು 12ನೇ ಶತಮಾನದಲ್ಲಿ ಸಮಾಜದಲ್ಲಿನ ಅಹಂಕಾರ, ಮೂಢನಂಬಿಕೆಗಳನ್ನು ಹೋಗಲಾಡಿಸಲು ಮುಂದಾಗಿದ್ದರು. ಅದರಲ್ಲೂ ಅಮಾವಾಸ್ಯೆ ಶುಕ್ರವಾರ ಎಂದರೆ ಅಶುಭ ಎನ್ನುವ ದಿನಗಳಲ್ಲಿ ಅವರು ಇಂಥ ಆಚರಣೆಗಳನ್ನು ನಡೆಸುತ್ತಿದ್ದರು.
ಕೊಳ್ಳೇಗಾಲ ತಾಲ್ಲೂಕಿನ ಚಿಕ್ಕಲ್ಲೂರು ಸಿದ್ದಪ್ಪಾಜಿ, ಕೆ.ಆರ್. ನಗರ ಕಪ್ಪಡಿಯ ರಾಚಪ್ಪಾಜಿ ಜಾತ್ರೆ ಹಾಗೂ ತಾಲ್ಲೂಕಿನ ಬಿ.ಜಿ. ಪುರ ಮಂಟೇಸ್ವಾಮಿ ಜಾತ್ರೆ ನಡೆಯುತ್ತದೆ. ಚಿಕ್ಕಲ್ಲೂರು ಸಿದ್ದಪ್ಪಾಜಿ, ಕೆ.ಆರ್.ನಗರ ಕಪ್ಪಡಿ ಜಾತ್ರೆಯಲ್ಲಿ ಭಾಗವಹಿಸುವುದಕ್ಕಾಗಿ ಇಲ್ಲಿನ ಬೊಪ್ಪೇಗೌಡನಪುರ ಮಂಟೇಸ್ವಾಮಿ ಮಠದ ಪೀಠಾಧಿಪತಿ ಜ್ಞಾನಾನಂದಾ ಚನ್ನರಾಜೇ ಅರಸು ಅವರು 29 ದಿನ ಮುಂಚಿತವಾಗಿ ತೆರಳಿ ಅಲ್ಲಿನ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾರೆ.
ನಂತರ ಯುಗಾದಿ ಹಬ್ಬದ ಹಿಂದಿನ ಅಮಾವಾಸ್ಯೆ ದಿನ ಬಿ.ಜಿ.ಪುರ ಮಠಕ್ಕೆ ನುಗ್ಗಲು ಬಂದು ಮುಟ್ಟನಹಳ್ಳಿ ತೋಪಿನ ದೊಡ್ಡಮ್ಮ ತಾಯಿ ದೇವಸ್ಥಾನದಲ್ಲಿ ತಂಗುವ ಬಿ.ಜಿ.ಪುರ ಮಠದ ಪೀಠಾಧಿಪತಿ ಜ್ಞಾನಾನಂದ ಚೆನ್ನರಾಜೇ ಅರಸು ಅವರನ್ನು ಸಂಪ್ರದಾಯದಂತೆ ಬಸವ, ಕೊಂಬು, ಕಹಳೆ, ಹತ್ತಾರು ಕಠಾಯ, ತಮಟೆ, ನೂರಾರು, ನೀಲಗಾರರ ಜತೆ ಮೆರವಣಿಗೆ ಮೂಲಕ ಬರ ಮಾಡಿಕೊಂಡು ನಂತರ ಮಳವಳ್ಳಿ ಮತ್ತು ಬಿ.ಜಿ.ಪುರ ಬಸವಗಳು ಮುಂದೆ ಸಾಗಿದ ನಂತರ ಮಠಕ್ಕೆ ನುಗ್ಗುತ್ತಾರೆ.
ಬಿ.ಜಿ.ಪುರ ಮಠಕ್ಕೆ ನುಗ್ಗಿ ಮಂಟೇಸ್ವಾಮಿ ಗದ್ದುಗೆಯ ದರ್ಶನ ಪಡೆದು ಪೂಜೆ ಸಲ್ಲಿಸುವ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಪಾದಯಾತ್ರೆ ಮೂಲಕ ಆಗಮಿಸುವ ಅವರನ್ನು ಬಿಜಿಪುರದ ಮಂಟೇಸ್ವಾಮಿ ಮಠದ ರಾಜ ಬೀದಿಯಲ್ಲಿ ಮಳವಳ್ಳಿ ಮಂಟೇಸ್ವಾಮಿ ಮಠದ ಪೀಠಾಧಿಕಾರಿ ವರ್ಚಸ್ಸಿ ಸಿದ್ದಲಿಂಗರಾಜೇ ಅರಸು ಅವರು ಬರ ಮಾಡಿಕೊಂಡಿಕೊಳ್ಳುತ್ತಾರೆ. ಇಂಥ ಆಚರಣೆಯನ್ನು ‘ಎದುರು ಸೇವೆ’ ಎನ್ನುತ್ತಾರೆ.
ಅವರೊಂದಿಗೆ ಸಾವಿರಾರು ಭಕ್ತರು ಕೆ.ಆರ್. ನಗರದ ಕಪ್ಪಡಿಜಾತ್ರೆ ಹೋಗಿ ಅಲ್ಲಿಂದ ಮಠಕ್ಕೆ ನುಗ್ಗುವ ಮುನ್ನ ತಾಲ್ಲೂಕಿನ ಬಿ.ಜಿ. ಪುರ ಮಠದಿಂದ 7-8 ಕಿ.ಮೀ ದೂರದ ಪೂರಿಗಾಲಿ, ಮುಟ್ಟನಹಳ್ಳಿ, ಬಳ್ಳಗೆರೆ ತೋಪುಗಳಲ್ಲಿ ವಾಸ್ತವ್ಯ ಮಾಡುತ್ತಾರೆ. ಲಕ್ಷಾಂತರ ಮಂದಿ ಭಕ್ತರಿಗೆ ಸ್ಥಳೀಯ ಜನರು ಕುಡಿಯುವ ನೀರು, ಪಾನಕ, ಮಜ್ಜಿಗೆಯನ್ನು ವಿತರಿಸುತ್ತಾರೆ. ದರ್ಶನ ಪಡೆದ ಬಳಿಕ ಮಠದ ವತಿಯಿಂದ ಅನ್ನಸಂತರ್ಪಣೆಯು ನಡೆಯಲಿದೆ. ಮರುದಿನ ಪಂಕ್ತಿಸೇವೆ, ಸಾರಪಂಕ್ತಿ ಸೇರಿದಂತೆ ಒಟ್ಟು 5 ಪಂಕ್ತಿಗಳ ಸೇವೆ ನಡೆಯುವುದು ವಿಶೇಷ.
ಒಂದು ವರ್ಷ ಮಳವಳ್ಳಿ ಮಠದ ಸ್ವಾಮೀಜಿ ಹಾಗೂ ಮತ್ತೊಂದು ವರ್ಷ ಬಿ.ಜಿ. ಪುರದ ಸ್ವಾಮೀಜಿ ಮಠ ನುಗ್ಗುವ ಕಾರ್ಯಕ್ರಮ ನಡೆದುಕೊಂಡು ಬಂದಿದೆ. ಪ್ರಸ್ತುತ ವರ್ಷ ಬಿ.ಜಿ. ಪುರ ಮಠದ ಪೀಠಾಧಿಪತಿ ಜ್ಞಾನಾನಂದ ಚೆನ್ನರಾಜ್ ಅರಸು ಅವರು ಮಠಕ್ಕೆ ನುಗ್ಗುತ್ತಾರೆ. ಮುಂದಿನ ವರ್ಷ ಮಳವಳ್ಳಿ ಮಂಟೇಸ್ವಾಮಿ ಮಠದ ಪೀಠಾಧಿಪತಿ ಎಂ.ಎಲ್. ವರ್ಚಸ್ವೀ ಶ್ರೀಕಂಠ ಸಿದ್ದಲಿಂಗರಾಜೇ ಅರಸು ಅವರು ನುಗ್ಗುತ್ತಾರೆ.
ಚಿತ್ರಶೀರ್ಷಿಕೆಗಳು
BG Pura 1: ಮಳವಳ್ಳಿ ತಾಲ್ಲೂಕಿನ ಬೆಳಕವಾಡಿ ಸಮೀಪದ ಬೊಪ್ಪೇಗೌಡನಪುರ (ಬಿ.ಜಿ.ಪುರ) ಮಂಟೇಸ್ವಾಮಿ ಮಠದ ಪೀಠಾಧಿಪತಿ ಬಿ.ಎಸ್. ಜ್ಞಾನಾನಂದ ಚನ್ನರಾಜೇ ಅರಸು ಚಿಕ್ಕಲ್ಲೂರು ಜಾತ್ರಗೆ ಪ್ರಯಾಣ ಹೊರಟ ದೃಶ್ಯ (ಸಂಗ್ರಹ ಚಿತ್ರ)
BG Pura 2: ಬೆಳಕವಾಡಿ ಸಮೀಪದ ಬೊಪ್ಪೇಗೌಡನಪುರ (ಬಿ.ಜಿ.ಪುರ) ಮಂಟೇಸ್ವಾಮಿ ಮಠದಿಂದ ಪೀಠಾಧಿಪತಿ ಬಿ.ಎಸ್. ಜ್ಞಾನಾನಂದ ಚನ್ನರಾಜೇ ಅರಸು ಕಪ್ಪಡಿಗೆ ಪ್ರಯಾಣ ಹೊರಟ ದೃಶ್ಯ (ಸಂಗ್ರಹ ಚಿತ್ರ)
BG Pura 3: ಮಳವಳ್ಳಿ ತಾಲ್ಲೂಕಿನ ಬಿ.ಜಿ.ಪುರದಲ್ಲಿರುವ ಮಂಟೇಸ್ವಾಮಿ ಗದ್ದುಗೆ