ತುಳುನಾಡು ಸೌರಮಾನ ಯುಗಾದಿ ಆಚರಣೆ

ತುಳುನಾಡು ಸೌರಮಾನ ಯುಗಾದಿ ಆಚರಣೆ

Published on


ಕಣಿಯ ಕಂಡು ಸಂಭ್ರಮಿಸುವ ಸೌರ ಯುಗಾದಿ

ಬಿಸು ‍ಪರ್ಬ: ತುಳುವರಿಗೆ ಹೊಸ ವರ್ಷ

ರಂಜಿತ್‌ ಪುಣ್ಚಪ್ಪಾಡಿ

ಮಂಗಳೂರು: ದೇಶದಾದ್ಯಂತ ಚಾಂದ್ರಮಾನ ಯುಗಾದಿಯನ್ನು ಹೊಸ ವರ್ಷವೆಂದು ಆಚರಿಸಿದರೆ, ದೇವರನಾಡು ಎಂದೇ ಕರೆಯಲಾಗುವ ತುಳುನಾಡು ಮತ್ತು ಕೇರಳದಲ್ಲಿ ಸೌರಮಾನ ಯುಗಾದಿಯನ್ನು ಆಚರಿಸಲಾಗುತ್ತದೆ.

ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಕೇರಳದ ಕಾಸರಗೋಡಿನಲ್ಲಿ ಸೌರಮಾನ ಯುಗಾದಿಯನ್ನು ‘ಬಿಸು ಅಥವಾ ವಿಷು’ ಹಬ್ಬ ಎಂದು ಆಚರಿಸಲಾಗುತ್ತದೆ. ತುಳುವರು ಬಿಸು ಪರ್ಬ ಆಚರಿಸಿ ವರ್ಷಾರಂಭ ಮಾಡುತ್ತಾರೆ. ಬಿಸು ಕಣಿಯಿಟ್ಟು, ವಿವಿಧ ಭಕ್ಷ್ಯಗಳನ್ನು ತಯಾರಿಸಿ ಕುಟುಂಬ ಸಮೇತ ಭೋಜನ ಸೇವಿಸುತ್ತಾರೆ.

ತುಳುವರು ಸೌರಮಾನ ಪದ್ಧತಿಯಲ್ಲಿ ಕಾಲಗಣನೆ ಮಾಡುತ್ತಾರೆ. ಪಗ್ಗು (ಮೇಷ ಮಾಸ) ತುಳುವರ ಮೊದಲ ತಿಂಗಳು. ಅಂದರೆ ಮೀನ ಮಾಸ ಮುಗಿದು ಮೇಷ ಮಾಸದ ಸಂಕ್ರಮಣಕ್ಕೆ ಹೊಸ ವರ್ಷ ಆಚರಣೆ. ಮೇಷ ಸಂಕ್ರಮಣದ ಮರುದಿನ ಅಂದರೆ ‘ಸಿಂಗೊಡೆ’ಯೇ ತುಳುವರ ‘ಪೊಸ ವರ್ಸೊ’.

ಮೂಲತಃ ಕೃಷಿಕರಾದ ತುಳುವರ ಪ್ರತಿ ಹಬ್ಬಗಳೂ ಕೃಷಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿವೆ. ಕೃಷಿ ಸಂಸ್ಕೃತಿಯೊಂದಿಗೆ ಹಾಸು ಹೊಕ್ಕಾಗಿವೆ. ಬಿಸು ಪರ್ಬದಂದು ಕಣಿ ಇಡುವುದು, ಬುಳೆ (ಬೆಳೆ) ಕಾಣಿಕೆ ಒಪ್ಪಿಸುವುದು, ಎಣೇಲು ಬೇಸಾಯಕ್ಕೆ ಮುಹೂರ್ತ ‘ಕೈ ಬಿತ್‌ ಹಾಕುವುದು’ ಮುಂತಾದ ಆಚರಣೆಯಿದೆ. ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ರಥೋತ್ಸವ, ಜಾತ್ರೆ, ವಿಷು ಕಣಿ ಸೇವೆ ನಡೆಯುತ್ತದೆ. ದೈವಗಳಿಗೆ ವರ್ಷಾವಧಿ ನೇಮ, ಕೋಲ ನಡೆಯುತ್ತದೆ.

ಅಂದು ಮುಂಜಾನೆ ಬೇಗ ಎದ್ದು ಅಥವಾ ಮುನ್ನಾ ದಿನ ಮನೆಯ ಯಜಮಾನ ದೈವಸ್ಥಾನ, ದೇವರ ಕೋಣೆ ಅಥವಾ ತುಳಸಿಕಟ್ಟೆಯ ಎದುರು ‘ಬಿಸು ಕಣಿ’ ಇಡುತ್ತಾರೆ. ಎರಡು ಕೊಡಿ (ತುದಿ) ಬಾಳೆ ಎಲೆಯಲ್ಲಿ ಮಣೆ ಇಟ್ಟು, ಅದರ ಮೇಲೆ ದೀಪ ಇಡಲಾಗುತ್ತದೆ. ದೀಪದ ಎಡ– ಬಲದಲ್ಲಿ ಒಂದು ಸೇರು ಕುಚ್ಚಲಕ್ಕಿ, ಹಣ್ಣು, ತರಕಾರಿ, ಹಿಂಗಾರ, ವೀಳ್ಯದೆಲೆ, ಅಡಿಕೆ, ತೆಂಗಿನಕಾಯಿ ಇಟ್ಟು ಅದರ ಮಧ್ಯ ಭಾಗದಲ್ಲಿ ಕನ್ನಡಿ ಇಡಲಾಗುತ್ತದೆ. ಅಲ್ಲದೆ, ಹಲಸಿನ ಹಣ್ಣು, ಕಾಡಿಗೆ, ಸೌತೆಕಾಯಿ, ಬಾಳೆಹಣ್ಣು, ಧಾರ್ಮಿಕ ಪುಸ್ತಕ, ಧೋತಿ, ನಾಣ್ಯ– ನೋಟು ಇಡಲಾಗುತ್ತದೆ. ಇದೇ ಬಿಸು ಕಣಿ. ಮನೆಮಂದಿಯೆಲ್ಲಾ ಮಿಂದು ಕನ್ನಡಿಯಲ್ಲಿ ಮುಖ ನೋಡಿ ಬಿಸುಕಣಿಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತಾರೆ. ಕಿರಿಯರು ಹಿರಿಯರ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುತ್ತಾರೆ. ಬೆಳಿಗ್ಗೆ ಬೇಗ ಎದ್ದು ಕಣ್ಣು ಮುಚ್ಚಿಕೊಂಡು ಹೋಗಿ ಬಿಸುಕಣಿಯನ್ನು ಮೊದಲು ನೋಡಬೇಕೆಂಬುದು ಸಂಪ್ರದಾಯ. ಇದರಿಂದ ವರ್ಷವಿಡೀ ಅದೃಷ್ಟ ಮತ್ತು ಸಮೃದ್ಧಿ ದೊರೆಯುತ್ತದೆ ಎಂಬುದು ನಂಬಿಕೆ.

ಬಿಸು ಕಣಿಗೆ ಅರ್ಪಿಸದೆ ಹೊಸ ಫಲವನ್ನು ತಿನ್ನಬಾರದೆಂಬ ನಂಬಿಕೆ ತುಳುವರಲ್ಲಿ ರೂಢಿಯಲ್ಲಿದೆ. ಬಿಸುಕಣಿಗೆ ಇಟ್ಟಿರುವ ತರಕಾರಿಗಳನ್ನೇ ಅಂದಿನ ಮಧ್ಯಾಹ್ನದ ಭೋಜನಕ್ಕೆ ಬಳಸಲಾಗುತ್ತದೆ‌. ಗೇರುಬೀಜ ಹಾಕಿರುವ ಹೆಸರುಬೇಳೆ ಪಾಯಸ ಅಂದಿನ ವಿಶೇಷತೆಗಳಲ್ಲೊಂದು. ಮೂಡೆ, ಕೊಟ್ಟಿಗೆ, ಕಡುಬು, ಹೆಸರು, ಗೇರುಬೀಜದ ಪಲ್ಯ ಇನ್ನಿತರ ವಿಶೇಷ ಖಾದ್ಯಗಳು ಅಂದಿನ ಹಬ್ಬದ ಊಟದಲ್ಲಿ ಸೇರಿರುತ್ತವೆ.

ಶುಭ ಕಾರ್ಯಗಳನ್ನು ಈ ದಿನದಂದೇ ಆರಂಭಿಸಲಾಗುತ್ತದೆ. ಹೊಸ ಮನೆಯ ಶಂಕು ಸ್ಥಾಪನೆ, ಬೀಜ ಬಿತ್ತನೆ, ಸಣ್ಣ ಮಕ್ಕಳಿಗೆ ಕಿವಿ ಚುಚ್ಚುವುದು, ಆಭರಣ ಖರೀದಿ ಮಾಡಲಾಗುತ್ತದೆ. ತೆಂಗಿನಕಾಯಿ ಕುಟ್ಟುವುದು ಬಿಸು ಪರ್ಬದ ವಿಶೇಷ ಜಾನಪದ ಸ್ಪರ್ಧೆ. ‘ಬಿಸು ಕಟ್ಟ’ ಹೆಸರಿನಲ್ಲಿ ಕೋಳಿ ಅಂಕವನ್ನೂ ನಡೆಸಲಾಗುತ್ತದೆ.

ಇಂದಿನ ಆಧುನಿಕ ಯುಗದ ಭರಾಟೆಯಲ್ಲಿ ತುಳುನಾಡಿನ ಕೆಲವೊಂದು ಆಚಾರ– ವಿಚಾರ, ಸಂಸ್ಕೃತಿ– ಸಂಪ್ರದಾಯ ನಿಧಾನವಾಗಿ ಮರೆಯಾಗುತ್ತಿವೆ. ಆಚರಣೆಗಳು ಕಡಿಮೆಯಾಗುತ್ತಿವೆ. ತುಳುವರಲ್ಲಿ ಈ ಬಗ್ಗೆ ಜಾಗೃತಿ ಮೂಡಬೇಕಾದ ಅನಿವಾರ್ಯತೆಯಿದೆ. ಕೃಷಿ ಪ್ರಾಧಾನ್ಯತೆಯ ತುಳುವರ ಆಚರಣೆಗಳು ಸಾರ್ವಜನಿಕವಾಗಿ ಹೆಚ್ಚು ಹೆಚ್ಚು ನಡೆದು ತುಳು ಸಂಸ್ಕೃತಿ ಉಳಿಯಬೇಕು ಎಂಬುದು ಆಶಯ.

ತುಳುನಾಡು ಸೌರಮಾನ ಯುಗಾದಿ ಆಚರಣೆ
ಹೊಸತೊಡಕಿನ ಘಮಲು; ಯುಗಾದಿ ಜೂಜು
Advertisement
Festivals in Karnataka – A Prajavani Special Feature | ಕರ್ನಾಟಕದ ಹಬ್ಬಗಳು – ಪ್ರಜಾವಾಣಿಯ ವಿಶೇಷ ವೈಶಿಷ್ಟ್ಯ | Karnatakada Habbagalu – Prajavaniya Vishesha Vaishishtya
www.prajavani.net