ಹೊಸತೊಡಕಿನ ಘಮಲು; ಯುಗಾದಿ ಜೂಜು
ಯುಗಾದಿ ಎಂದರೆ ಬೇವು–ಬೆಲ್ಲದ ಹಬ್ಬ. ಸಿಹಿ–ಕಹಿ ಎರಡನ್ನೂ ಒಟ್ಟಿಗೆ ಮೆಲ್ಲುತ್ತ ಸಂಭ್ರಮಿಸುವ ಮೂಲಕ ಹೊಸ ವರ್ಷವನ್ನು ಸ್ವಾಗತಿಸುವ ದಿನ. ಹಬ್ಬದ ಜೊತೆಗೆ ಹೊಸತೊಡಕಿನ ಆಚರಣೆಯೂ ಯುಗಾದಿಯೊಟ್ಟಿಗೆ ಬೆಸೆದುಕೊಂಡಿದೆ. ಅದರಲ್ಲೂ ಹಳೇ ಮೈಸೂರು ಭಾಗದ ಮೈಸೂರು, ಮಂಡ್ಯ, ರಾಮನಗರ, ಹಾಸನ ಮೊದಲಾದ ಜಿಲ್ಲೆಗಳಲ್ಲಿ ಹಬ್ಬದ ಮಾರನೆಯ ದಿನ ಮಾಂಸಾಹಾರದ ಘಾಟು ತುಸು ಹೆಚ್ಚಾಗಿಯೇ ಇರುತ್ತದೆ.
ಪ್ರತಿ ಹಬ್ಬದ ಮಾರನೆಯ ದಿನದಂದು ಮಾಂಸಾಹಾರದ ಅಡುಗೆಯ ಮೂಲಕ ಹೊಸತೊಡಕು/ ವರ್ಷದೊಡಕು ಆಚರಿಸುವ ಪದ್ಧತಿ ಬಹು ಹಿಂದಿನಿಂದಲೂ ಬೆಳೆದು ಬಂದಿದೆ. ಮನೆ ಮಂದಿ ಮಾತ್ರವಲ್ಲದೇ ನೆಂಟರಿಷ್ಟರು, ಬಂಧುಮಿತ್ರರು ಒಟ್ಟಾಗಿ ಕೂಡಿ ಬಗೆಬಗೆಯ ಮಾಂಸಾಹಾರ ಉಂಡು ಸಂಭ್ರಮ ಹೆಚ್ಚಿಸಿಕೊಳ್ಳುವ ಪದ್ಧತಿ ಇದೆ. ಅಂದು ಪ್ರತಿ ಮನೆಯಲ್ಲೂ ಬಾಡೂಟದ ಘಮ ತುಂಬಿರುತ್ತದೆ.
ಗ್ರಾಮೀಣ ಭಾಗದಲ್ಲಿ ಯುಗಾದಿಯ ಮಾರನೇ ದಿನದಂದು ಹೊಸತೊಡಕಿಗೆಂದೇ ನಡೆಯುವ ಗುಡ್ಡೆ ಮಾಂಸದ ವ್ಯಾಪಾರ ಬಲು ಜೋರಾಗಿರುತ್ತದೆ. ಯುಗಾದಿಗೆಂದೇ ಖರೀದಿಸಿದ ಕುರಿ–ಮೇಕೆಗಳನ್ನು ಮುಂಜಾನೆಯೇ ವಧೆ ಮಾಡಿ, ನಂತರದಲ್ಲಿ ಗುಡ್ಡೆಗಳ ಲೆಕ್ಕದಲ್ಲಿ ಪಾಲು ಹಾಕಲಾಗುತ್ತದೆ. ‘ಸರ್ವರಿಗೂ ಸಮಪಾಲು’ ಎನ್ನುವ ತತ್ವ ಇಲ್ಲಿ ಅಕ್ಷರಶಃ ಜಾರಿಯಲ್ಲಿರುತ್ತದೆ. ಬೇಡಿಕೆಗೆ ಅನುಸಾರ ತಮಗೆ ಬೇಕಾದಷ್ಟು ಗುಡ್ಡೆಗಳನ್ನು ಕೊಂಡು ಒಯ್ಯಲಾಗುತ್ತದೆ. ಇನ್ನೂ ಕೆಲವೆಡೆ ಒಟ್ಟಾಗಿ ಮರಿ ಖರೀದಿಸಿ ನಂತರದಲ್ಲಿ ಸಮನಾಗಿ ಮಾಂಸ ಹಂಚಿಕೊಳ್ಳುವ ಪದ್ಧತಿಯೂ ಇದೆ. ಮೈಸೂರಿನಂತಹ ನಗರಗಳಲ್ಲಿ ಹೊಸತೊಡಕಿನ ಮುಂಜಾನೆ ಮಾಂಸದಂಗಡಿಗಳ ಮುಂದೆ ಜನರ ಸಾಲೇ ನೆರೆದಿರುತ್ತದೆ.
‘ ಹಿಂದೆಲ್ಲ ಈಗಿನಂತೆ ವಾರಕ್ಕೆ ಮೂರ್ನಾಲ್ಕು ದಿನ ಚಿಕನ್ ತಿನ್ನುವಷ್ಟು ಅನುಕೂಲ ಇರಲಿಲ್ಲ. ಬೀದಿಗೊಂದು ಕೋಳಿಮಾಂಸದ ಅಂಗಡಿಗಳೂ ಇರಲಿಲ್ಲ. ಜನರ ಬಳಿ ನಿತ್ಯ ಮಾಂಸ ಖರೀದಿಸುವಷ್ಟು ಹಣವೂ ಇರಲಿಲ್ಲ. ತಿಂಗಳಿಗೊಮ್ಮೆ ಮಾಂಸ ತಿಂದರೇ ಹೆಚ್ಚು. ಹೀಗಾಗಿ ಪ್ರತಿ ಹಬ್ಬದ ತರುವಾಯ ಮಾಂಸದಡುಗೆ ಮಾಡಿ ಸವಿಯುವ ಪದ್ಧತಿ ಹೊಸತೊಡಕಿನ ಹೆಸರಿನಲ್ಲಿ ಜಾರಿಗೆ ಬಂತು. ಎಷ್ಟೇ ಬಡವರಾದರೂ ಹೊಸತೊಡಕಿನ ದಿನದಂದು ಒಂದಿಷ್ಟು ಮಾಂಸ ಕೊಂಡು ಒಟ್ಟಿಗೆ ಉಣ್ಣುವ ಸಂಪ್ರದಾಯ ಬೆಳೆದು ಬಂತು’ ಎಂದು ಹಿರಿಯರು ಹೇಳುತ್ತಾರೆ.
ಹಳ್ಳಿಗಳಲ್ಲಿ ಇಂದಿಗೂ ಯುಗಾದಿ ಹೊಸತೊಡಕಿಗೆಂದೇ ‘ಯುಗಾದಿ ಚೀಟಿ’ ಜಾರಿಯಲ್ಲಿದೆ. ಒಟ್ಟಿಗೆ ಕೊಳ್ಳಲು ಆಗದವರು ತಿಂಗಳಿಗೆ ಇಂತಿಷ್ಟು ಹಣ ಕಟ್ಟಿ ಹಬ್ಬದಂದು ಉಡುಗೊರೆ ಪಡೆಯುತ್ತಾರೆ. ತಿಂಗಳಿಗೆ ₹500ರಂತೆ 12 ಚೀಟಿ ಕಟ್ಟಿದರೆ, ಹೊಸತೊಡಕಿನ ದಿನ ಅಂತಹವರಿಗೆ 8 ಕೆ.ಜಿ.ಯಷ್ಟು ಕುರಿ–ಮೇಕೆ ಮಾಂಸ, 4ರಿಂದ 6 ಕೆ.ಜಿ. ಕೋಳಿ ಮಾಂಸದ ಜೊತೆಗೆ 1 ಡಜನ್ ಮೊಟ್ಟೆ, ಕಬಾಬ್–ಬಿರಿಯಾನಿ ಪೌಡರ್‌ಗಳ ‘ಪ್ಯಾಕೇಜ್’ ಸಿಗುತ್ತದೆ. ತಿಂಗಳಿಗೆ ₹100–200ರಿಂದಲೂ ಶುರುವಾಗುವ ಈ ಅಲ್ಪ ಉಳಿತಾಯದ ಯುಗಾದಿ ಚೀಟಿಗಳೂ ಜಾರಿಯಲ್ಲಿವೆ.
ಗ್ರಾಮೀಣ ಭಾಗದಲ್ಲಿನ ಮತ್ತೊಂದು ವಿಶೇಷ ಎಂದರೆ ಯುಗಾದಿ ಜೂಜು. ಹಬ್ಬದ ತರುವಾಯ ವಿರಾಮದ ಮೋಜಿಗೆಂದು ಶುರುವಾದ ಈ ಜೂಜು ಇಂದು ‘ವೃತ್ತಿಪರ’ ರೂಪ ಪಡೆದುಕೊಂಡಿದೆ. ಅಂದು ಇಸ್ಪೀಟಿನ ಎಲೆಗಳನ್ನು ಕಲೆಸುತ್ತ ಹಣ ಕಳೆದುಕೊಳ್ಳುವ ಮಂದಿಗೆ ಲೆಕ್ಕವಿಲ್ಲ. ಹಣಕ್ಕಾಗಿ ತಮ್ಮ ಬೈಕು–ಚಿನ್ನದ ಚೈನು ಒತ್ತೆ ಇಡುವವರೆಷ್ಟೋ. ಕೆಲಸಕ್ಕೆಂದು ಊರು ಬಿಟ್ಟು ಬೆಂಗಳೂರಿನಂತಹ ಪಟ್ಟಣ ಸೇರಿದವರೂ ಯುಗಾದಿ ಜೂಜಿಗೆ ತಪ್ಪದೇ ಬರುತ್ತಾರೆ. ಊರ ಹೊರಗಿನ ಮರದ ನೆರಳಿನಲ್ಲಿ, ಹಳೇ ಕಟ್ಟಡಗಳ ಜಗಲಿಗಳಲ್ಲಿ, ಹೊಳೆ ದಂಡೆಗಳಲ್ಲಿ ಜೂಜಿನದ್ದೇ ಸದ್ದು ಜೋರಾಗಿರುತ್ತದೆ. ಹೀಗೆ ಆರಂಭವಾದ ಆಟ ಒಂದೇ ದಿನಕ್ಕೆ ಮುಗಿಯದೇ ವಾರಗಟ್ಟಲೆ ಮುಂದುವರಿಯುತ್ತದೆ. ಪೊಲೀಸರ ದಾಳಿಯ ಭೀತಿಯ ನಡುವೆಯೂ ಜೂಜಾಟ ಜೋರಾಗಿಯೇ ನಡೆದಿರುತ್ತದೆ.