ಹಳೆಯ ಮೈಸೂರು ಆಚರಣೆಗಳು  ಹೊಸತೊಡಕು- ಬಾಡೂಟ

ಹಳೆಯ ಮೈಸೂರು ಆಚರಣೆಗಳು ಹೊಸತೊಡಕು- ಬಾಡೂಟ

Published on

ಯುಗಾದಿ ಹಬ್ಬ ಎಂದಾಕ್ಷಣ ನೆನಪಾಗುವುದು ಬೇವು–ಬೆಲ್ಲದೊಂದಿಗೆ ಸಿಹಿ ಒಬ್ಬಟ್ಟು. ಯುಗಾದಿ ದಿನ ಸಿಹಿಯೂಟ ಮಾಡುವ ಹಳೇ ಮೈಸೂರು ಭಾಗದ ಜನ ಮರುದಿನ ಹೊಸತೊಡಕು ಆಚರಿಸುತ್ತಾರೆ. ಅಂದು ಬಗೆ ಬಗೆಯ ಮಾಂಸದ ಅಡುಗೆ ಮಾಡಿ ಬಾಡೂಟ ಮಾಡುತ್ತಾರೆ. ಇದು ಹಿಂದಿನಿಂದಲೂ ಈ ಭಾಗದಲ್ಲಿ ಆಚರಿಸಿಕೊಂಡು ಬಂದ ಆಚರಣೆಯಾಗಿದ್ದು ಈಗಲೂ ಮುಂದುವರಿದಿದೆ.

ಮಟನ್ ಕರಿ

ಬೇಕಾಗುವ ಸಾಮಗ್ರಿಗಳು: ಈರುಳ್ಳಿ – 2 ದೊಡ್ಡದು ಹೆಚ್ಚಿದ್ದು, ಟೊಮೆಟೊ – 2 ದೊಡ್ಡದು ಹೆಚ್ಚಿದ್ದು, ಶುಂಠಿ–ಬೆಳ್ಳುಳ್ಳಿ ಪೇಸ್ಟ್ – 3 ಚಮಚ, ಗರಂಮಸಾಲೆ – 2 ಚಮಚ, ಕೊತ್ತಂಬರಿ ಪುಡಿ – 2 ಚಮಚ, ಜೀರಿಗೆ ಪುಡಿ – 2 ಚಮಚ, ಅರಿಸಿನ – ಅರ್ಧ ಚಮಚ, ಖಾರದಪುಡಿ – ಅರ್ಧ ಚಮಚ, ಕುರಿ ಮಾಂಸ – ಅರ್ಧ ಕೆ.ಜಿ, ಉಪ್ಪು – ರುಚಿಗೆ, ಎಣ್ಣೆ– ಸ್ವಲ್ಪ, ಕೊತ್ತಂಬರಿ ಸೊಪ್ಪು – ಹೆಚ್ಚಿದ್ದು 2 ಚಮಚ.

ತಯಾರಿಸುವ ವಿಧಾನ: ದಪ್ಪ ತಳದ ಪಾತ್ರೆಯಲ್ಲಿ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಬಿಸಿ ಮಾಡಿ. ಅದಕ್ಕೆ ಈರುಳ್ಳಿ ಹಾಕಿ ಬಣ್ಣ ಬದಲಾಗುವವರೆಗೂ ಹುರಿಯಿರಿ. ನಂತರ ಈರುಳ್ಳಿಯನ್ನು ತೆಗೆದಿರಿಸಿ. ತಣ್ಣದಾಗ ಮೇಲೆ ಮಿಕ್ಸಿಗೆ ಈರುಳ್ಳಿ ಹಾಗೂ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಅದನ್ನು ತೆಗೆದಿರಿಸಿ ಮಿಕ್ಸಿ ಜಾರಿಗೆ ಟೊಮೆಟೊ, ಶುಂಠಿ–ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ರುಬ್ಬಿಕೊಳ್ಳಿ. ಮತ್ತೆ ಪ್ಯಾನ್ ಬಿಸಿ ಮಾಡಿ ಅದಕ್ಕೆ ರುಬ್ಬಿಕೊಂಡ ಈರುಳ್ಳಿ ಪೇಸ್ಟ್ ಹಾಕಿ 2 ರಿಂದ 3 ನಿಮಿಷ ಹುರಿದುಕೊಳ್ಳಿ. ಅದಕ್ಕೆ ಟೊಮೆಟೊ ಪೇಸ್ಟ್, ಗರಂಮಸಾಲೆ, ಕೊತ್ತಂಬರಿ ಪುಡಿ, ಜೀರಿಗೆ ಪುಡಿ, ಅರಿಸಿನ ಪುಡಿ, ಖಾರದಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, ಎಣ್ಣೆ ಬಿಡುವವರೆಗೂ ಕುದಿಸಿ. ಕುರಿ ಮಾಂಸವನ್ನು ಈ ಮಿಶ್ರಣಕ್ಕೆ ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಮಸಾಲೆ ಹೋಳುಗಳಿಗೆ ಹಿಡಿಯುವವರೆಗೆ ಕೈಯಾಡಿಸಿ. ನಂತರ ಅರ್ಧ ಕಪ್ ನೀರು ಹಾಕಿ ಮತ್ತೆ ಎಲ್ಲವನ್ನೂ ಮಿಶ್ರಣ ಮಾಡಿ ಸಣ್ಣ ಉರಿಯಲ್ಲಿ ಕುರಿ ಮಾಂಸ ಬೇಯುವವರೆಗೆ ಬೇಯಿಸಿ. ಚೆನ್ನಾಗಿ ಕುದಿದು, ಮಾಂಸ ಬೆಂದು ಮಂದ ಆಗುವವರೆಗೂ ಕುದಿಸಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.

ಮಟನ್ ಬೋಟಿ ಫ್ರೈ

ಬೇಕಾಗುವ ಸಾಮಗ್ರಿಗಳು: ಬೋಟಿ – ಅರ್ಧ ಕೆ.ಜಿ., ಈರುಳ್ಳಿ – 1 ಹೆಚ್ಚಿದ್ದು, ಹಸಿಮೆಣಸು – 2, ಅರಿಸಿನಪುಡಿ – ಅರ್ಧ ಚಮಚ, ಜೀರಿಗೆ ಪುಡಿ – ಅರ್ಧ ಚಮಚ, ಕರಿಬೇವು, ಶುಂಠಿ–ಬೆಳ್ಳುಳ್ಳಿ ಪೇಸ್ಟ್ – 1 ಚಮಚ, ಖಾರದಪುಡಿ – 2 ಚಮಚ, ಉಪ್ಪು – ರುಚಿಗೆ,
ಮಸಾಲೆಗೆ: ಈರುಳ್ಳಿ – 1, ಚಕ್ಕೆ – 2 ಚಿಕ್ಕದು, ಬೆಳ್ಳುಳ್ಳಿ – 5 ರಿಂದ 6 ಎಸಳು, ಶಾಹಿಜೀರಾ– 1/2 ಚಮಚ, ಲವಂಗ – 3, ಏಲಕ್ಕಿ – 4, ಜೀರಿಗೆ – 1 ಚಮಚ, ಕೊತ್ತಂಬರಿ – 1 ಚಮಚ, ತೆಂಗಿನತುರಿ – 2 ಚಮಚ.

ತಯಾರಿಸುವ ವಿಧಾನ: ಬೋಟಿಯ ಒಳಭಾಗವನ್ನು ಚೆನ್ನಾಗಿ ತೊಳೆದು ಸ್ವಚ್ಛ ಮಾಡಿಕೊಳ್ಳಿ. ಅದನ್ನು ಸುಣ್ಣದ ನೀರಿನಲ್ಲಿ ನಾಲ್ಕೈದು ಬಾರಿ ಚೆನ್ನಾಗಿ ತೊಳೆದುಕೊಳ್ಳಿ. ಪುನಃ ತಣ್ಣೀರಿನಲ್ಲಿ ಎರಡು ಬಾರಿ ತೊಳೆದು ಕುಕರ್‌ಗೆ ಹಾಕಿ 2 ರಿಂದ 3 ವಿಷಲ್ ಕೂಗಿಸಿ. ಮಿಕ್ಸಿ ಜಾರಿಗೆ ಮಸಾಲೆ ಪದಾರ್ಥಗಳನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಪ್ಯಾನ್‌ ಬಿಸಿ ಮಾಡಿ 2 ಚಮಚ ಎಣ್ಣೆ ಹಾಕಿ ಬಿಸಿಯಾದ ಮೇಲೆ ಜೀರಿಗೆ ಹಾಕಿ ಸಿಡಿಸಿ. ಅದಕ್ಕೆ ಹೆಚ್ಚಿದ ಈರುಳ್ಳಿ ಸೇರಿಸಿ ಬಣ್ಣ ಬದಲಾಗುವವರೆಗೆ ಹುರಿದುಕೊಳ್ಳಿ. ಅದಕ್ಕೆ ಹಸಿಮೆಣಸು, ಶುಂಠಿ–ಬೆಳ್ಳುಳ್ಳಿ ಪೇಸ್ಟ್‌ ಹಾಗೂ ಕರಿಬೇವು ಹಾಕಿ 2 ನಿಮಿಷ ಹುರಿಯಿರಿ. ಅದಕ್ಕೆ ಅರಿಸಿನ ಪುಡಿ ಸೇರಿಸಿ ಮಿಶ್ರಣ ಮಾಡಿ. ಆ ಮಿಶ್ರಣಕ್ಕೆ ಬೇಯಿಸಿದ ಬೋಟಿ ಹಾಕಿ ಮಿಶ್ರಣ ಮಾಡಿ ಮುಚ್ಚಳ ಮುಚ್ಚಿ 2 ರಿಂದ 3 ನಿಮಿಷ ಬೇಯಿಸಿ. ಅದಕ್ಕೆ ಖಾರದಪುಡಿ ಹಾಗೂ ಉಪ್ಪು ಸೇರಿಸಿ ಮಿಶ್ರಣ ಮಾಡಿ. ಮತ್ತೆ ಮುಚ್ಚಳ ಮುಚ್ಚಿ 10 ನಿಮಿಷ ಬೇಯಿಸಿ. ಅದಕ್ಕೆ ಕೊತ್ತಂಬರಿ ಸೊಪ್ಪು ಸೇರಿ ಮಿಶ್ರಣ ಮಾಡಿ.

ಹಳೆಯ ಮೈಸೂರು ಆಚರಣೆಗಳು  ಹೊಸತೊಡಕು- ಬಾಡೂಟ
ಮಂಡ್ಯ ಜಿಲ್ಲೆ, ಯುಗಾದಿ ಸಂಭ್ರಮ ಸಡಗರ
Advertisement
Festivals in Karnataka – A Prajavani Special Feature | ಕರ್ನಾಟಕದ ಹಬ್ಬಗಳು – ಪ್ರಜಾವಾಣಿಯ ವಿಶೇಷ ವೈಶಿಷ್ಟ್ಯ | Karnatakada Habbagalu – Prajavaniya Vishesha Vaishishtya
www.prajavani.net