ಕೃಷಿ ಚಟುವಟಿಕೆಗಳಿಗೆ ಮುನ್ನುಡಿ ಬರೆಯುವ ಯುಗಾದಿ
ಕೃಷಿ ಚಟುವಟಿಕೆಗಳಿಗೆ ಮುನ್ನುಡಿ ಬರೆಯುವ ಯುಗಾದಿ
ಯುಗಾದಿ ಬಂತೆಂದರೆ ಅನ್ನದಾತರಲ್ಲಿ ಸಂತೋಷ ಮನೆ ಮಾಡುತ್ತದೆ. ಬಿತ್ತನೆಗೆ ಅಣಿಯಾಗುವ ಸಮಯದ್ದರಿಂದ ಭೂಮಿ ಉಳುಮೆ ಮಾಡಿ ಯುಗಾದಿ ಹಬ್ಬವನ್ನು ಸಮಭ್ರಮದಿಂದ ಆಚರಿಸುವ ಸಂಪ್ರದಾಯ ಹಲವು ಕಡೆ ಇದೆ.
ಯುಗಾದಿ ಪಾಡ್ಯದಂದು ನಸುಕಿನ ಜಾವ ಬೇಗ ಎದ್ದು ಎಣ್ಣೆಸ್ನಾನ ಮಾಡಿ, ಮಡಿ ಬಟ್ಟೆ ಧರಿಸಿಕೊಂಡು, ಎತ್ತುಗಳಿಗೆ ಆಲಂಕಾರಿಕ ವಸ್ತುಗಳನ್ನು ಹಾಕಿ ಶೃಂಗರಿಸುತ್ತಾರೆ. ಅಷ್ಟೇ ಅಲ್ಲದೆ ಭೂಮಿ ಉಳುಮೆ ಮಾಡುವ ನೆಗಿಲಿಗೆ ಕೆಂಬಣ್ಣ, ಸುಣ್ಣ ಹಚ್ಚಿ ಪೂಜೆ ಸಲ್ಲಿಸಿ, ನಸುಕಿನ ಜಾವ ಹೊಲಕ್ಕೆ ತೆರಳಿ ಪೂಜೆ ಸಲ್ಲಿಸುವುದು ವಾಡಿಕೆ. ಮತ್ತೆ ಬಿತ್ತನೆಗೆ ಅಣಿಯಾಗುವ ಸಮಯವಾಗಿದ್ದರಿಂದ ಭೂಮಿತಾಯಿಗೆ ಪೂಜೆ ಸಲ್ಲಿಸಿ, ನೆಗಿಲು ಹೊಡೆಯುತ್ತಾರೆ.
ಕೆಲವು ಭಾಗದಲ್ಲಿ ಉಳುಮೆ ನಿರತ ರೈತರು. ಉಳುಮೆಗೆ ಮುನ್ನ ಬೆಳ್ಳಿಯ ತಟ್ಟೆಯಲ್ಲಿ ಮಣ್ಣನ್ನು ಇಟ್ಟು ಭೂಮಿ ತಾಯಿಗೆ ಗೌರವ ಸೂಚಿಸಲಾಗುತ್ತದೆ. ಪ್ರತಿ ಯುಗಾದಿ ರೈತರ ಕುಟುಂಬ ಮನೆಗಳಲ್ಲಿ ವಿಶೇಷವಾದ ಸಂಭ್ರಮಕ್ಕೆ ಕಾರಣವಾಗುತ್ತದೆ. ಮುಂದಿನ ವರ್ಷವಿಡೀ ನಡೆಸುವ ಕೃಷಿಗೆ ಯುಗಾದಿಯಂದೇ ಚಾಲನೆ ನೀಡುತ್ತಾರೆ. ವರ್ಷದ ಮೊದಲ ದಿನ ಕೃಷಿ ಚಟುವಟಿಕೆ ಆರಂಭಿಸಿ ವರ್ಷವಿಡೀ ಉತ್ತಮ ಬೆಳೆ-ಬೆಲೆ ಬಂದು ರೈತರ ಬಾಳು ಬೆಳಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಾರೆ.
ಯುಗಾದಿ ರೈತರ ಪಾಲಿನ ಶುಭದಿನ. ಕಳೆದ ವರ್ಷದ ರಾಶಿ ಮುಗಿದ ನಂತರ ಮುಂದಿನ ಪೀಕಿಗೆ ಭೂಮಿಯನ್ನು ಹದಗೊಳಿಸುವ ಪ್ರಕ್ರಿಯೆ ಆರಂಭಗೊಳ್ಳುತ್ತದೆ. ಹೊಲಗಳಲ್ಲಿ ಉತ್ತಿ ಬಿತ್ತಲು ಬೇರೆ ರೈತರಿಗೆ ಕೊಡುವುದಕ್ಕೂ ಕೂಡ ಯುಗಾದಿ ಒಳ್ಳೆಯ ದಿನವಾಗಿರುತ್ತದೆ. ಯುಗಾದಿ ಸಂಜೆ ಹೊಲದ ಮಾಲೀಕರು, ಹೊಲ ಮಾಡುವ ರೈತರು ಹಾಗೂ ಹಿರಿಯರು ಸೇರಿ ಇಂತಿಷ್ಟು ವರ್ಷ, ಇಂತಿಷ್ಟು ಪ್ರಮಾಣದ ಪೀಕು( ಧಾನ್ಯ) ನೀಡುವ ಕರಾರು ಮಾಡಿ ಹೊಲವನ್ನು ರೈತರ ಸುಪರ್ದಿಗೆ ಒಪ್ಪಿಸುತ್ತಾರೆ. ಹೊಲ, ಗದ್ದೆಗಳಿಗೆ ತೆರಳಿ ಭೂತಾಯಿಗೆ ಪೂಜೆ ಸಲ್ಲಿಸುತ್ತಾರೆ. ಗ್ರಾಮ ದೇವತೆಗೆ ಪೂಜೆ ಸಲ್ಲಿಸಿ, ಮುಂದಿನ ವರ್ಷ ಸಮೃದ್ಧ ಮಳೆ, ಬೆಳೆ ನೀಡುವಂತೆ ಕೋರುತ್ತಾರೆ.
ಭಾರತ ಹಿಂದಿನಿಂದ ಕೃಷಿ ಪ್ರಧಾನ ರಾಷ್ಟ್ರ. ಭಾರತದಲ್ಲಿ ಮಳೆ ಬರುವುದು ಮಾನ್ಸೂನ್ ನಿಂದ. ಈ ಮಾನ್ಸೂನ್ ಬೇಸಿಗೆ ಕಾಲದಲ್ಲಿ ಸಮುದ್ರದ ನೀರು ಕಾದು, ಆವಿಯಾಗಿ, ಮೋಡವಾಗಿ ಕರಗುವುದರಿಂದ ಬರುತ್ತದೆ. ಅಂದರೆ ಬೇಸಿಗೆ ನಾಲ್ಕು ತಿಂಗಳಿನ ನಂತರ ಮಳೆಗಾಲ ಬರುತ್ತದೆ. ಮಳೆ ಬರುವ ಹೊತ್ತಿಗೆ ಭೂಮಿ ಉಳುವ ಕಾರ್ಯಕ್ರಮ ಮುಗಿದಿರಬೇಕು. ಅಂದರೆ ಕೃಷಿ ಚಟುವಟಿಕೆ, ಮಳೆ ಬರುವ ಮುಂಚೆಯೇ ಶುರು ಆಗುತ್ತದೆ. ಈ ಕೃಷಿ ಚಟುವಟಿಕೆ ಶುರು ಮಾಡಲು ಸೂಕ್ತವಾಗಿರುವ ದಿನ ಏಪ್ರಿಲ್ ತಿಂಗಳ ಆಚೆ-ಈಚೆ ಇದ್ದರೆ, ಎಲ್ಲ ರೈತರಿಗೆ ವರ್ಷದ ಕೆಲಸಗಳನ್ನ ಸಂಯೋಜಿಸಲು ಅನುಕೂಲ. ಇದೇ ಹೊತ್ತಿನಲ್ಲಿ ಬರುವ ಯುಗಾದಿಗೆ ರೈತರು ಕೃಷಿ ಚಟುವಟಿಕೆಗಳನ್ನು ಪ್ರಾರಂಭಿಸಲು ಶುಭ ದಿನವೆಂದು ಆಯ್ದುಕೊಳ್ಳುತ್ತಾರೆ.