ಪ್ರಕೃತಿ ಸೊಬಗು
ಕೇರಳೀಯರಿಗೆ ವಿಷು ಹಬ್ಬದಲ್ಲಿ ಅಗತ್ಯ ಬೇಕಾಗಿರುವ ಕೊಂದೆ; ಥಾಯ್ಲೆಂಡ್‌ನ ರಾಷ್ಟ್ರೀಯ ಪುಷ್ಪ.
ಕರ್ನಾಟಕದಲ್ಲಿ ಯುಗಾದಿ ಎಂದರೆ ಬೇವು–ಬೆಲ್ಲವೇ ಪ್ರಧಾನ. ಅದು ಈ ಹಬ್ಬದ ಅವಿಭಾಜ್ಯ ಅಂಗವೇ. ಅದರ ನೆನಪಾಗದೆ ಅಥವಾ ಅದರ ಪ್ರಸ್ತಾಪ ಇಲ್ಲದೇ ಯುಗಾದಿ ಉಂಟೇ..? ಅದೇ ರೀತಿ ಕೇರಳದಲ್ಲಿ ವಿಷು ಅಥವಾ ಸೌರಮಾನ ಯುಗಾದಿ ಜೊತೆ ಬೆಸೆದುಕೊಂಡಿದೆ, ಕೊನ್ನಪ್ಫೂ ಎಂಬ ಕೊನ್ನೆ ಹೂ.
ಇಂಗ್ಲಿಷ್‌ನಲ್ಲಿ ಗೋಲ್ಡನ್ ಷವರ್ ಅಥವಾ ಇಂಡಿಯನ್ ಲಾಬರ್ನಂ (Indian laburnum) ಎಂದು ಹೆಸರಿರುವ ಈ ಹೂವನ್ನು ಭಾರತದಲ್ಲಿ ಸ್ವರ್ಣ ಪುಷ್ಪ ಎಂದೂ ಕರೆಯುವುದುಂಟು. ಕನ್ನಡದಲ್ಲಿ ಕೊಂದೆ ಹೂ, ಕಕ್ಕೆ ಹೂ ಮುಂತಾದ ಹೆಸರುಗಳು ಇವೆ. ಚಿನ್ನದ ಬಣ್ಣದ ಹೂ ನೆಲಮುಖವಾಗಿ ಇಳಿಬಿಡುತ್ತದೆ. ಗುಂಪು ಗುಂಪಾಗಿ ಇರುವಾಗ ಚಿನ್ನದ ಝರಿಯೇ ಇಳಿದಂತೆ ಕಾಣುತ್ತದೆ. ಕೇರಳದ ಜನರು ವಿಷುವಿಗೆ ಸಿದ್ಧವಾಗುತ್ತಿದ್ದಂತೆ ಈ ಹೂ ಕೂಡ ಕಾಣಿಸಿಕೊಳ್ಳುತ್ತದೆ. ದಕ್ಷಿಣ ಕನ್ನಡದ ಹೆದ್ದಾರಿಗಳು ಸೇರಿದಂತೆ ಪ್ರಮುಖ ರಸ್ತೆಗಳ ಬದಿಯಲ್ಲಿ ಕೊಂದೆ ಹೂವಿನ ಮರಗಳನ್ನು ಬೆಳೆಸಲಾಗಿದೆ. ಇವೆಲ್ಲವೂ ಈಗ ಹೂ ಬಿಟ್ಟಿದ್ದು ಹಬ್ಬದ ಸಂಭ್ರಮಕ್ಕೆ ಸಜ್ಜಾಗಿವೆ.
ಅಂದಹಾಗೆ, ವಿಷು ದಕ್ಷಿಣ ಕನ್ನಡ–ಉಡುಪಿಯಲ್ಲೂ ಆಚರಿಸಲಾಗುತ್ತಿದೆ. ತುಳುನಾಡಿನಲ್ಲಿ ಚಾಂದ್ರಮಾನ ಯುಗಾದಿಗಿಂತ ಸೌರಮಾನ ಯುಗಾದಿ ಅಥವಾ ಬಿಸು ಪರ್ಬದ ಆಚರಣೆಗೆ ಹೆಚ್ಚು ಒತ್ತು. ಕೇರಳದೊಂದಿಗೆ ಇಲ್ಲಿನವರಿಗೆ ಒಡನಾಟವೂ ಅಧಿಕ. ಈ ಭಾಗದಲ್ಲಿ ನೆಲೆನಿಂತ ಮತ್ತು ಬಂದು ಹೋಗುವ ಕೇರಳಿಗರ ಸಂಖ್ಯೆ ಕಡಿಮೆಯೇನಲ್ಲ. ಈಗ ಕೊನ್ನೆ ಹೂ ಕೂಡ ಇಲ್ಲಿನವರೊಂದಿಗೆ ಬಾಂಧವ್ಯ ಬೆಳೆಸಿಕೊಂಡಿದೆ.
ವಿಷು ಹಬ್ಬದ ಪ್ರಮುಖ ಭಾಗ ಕಣಿ ಇಡುವುದು. ಹಣ್ಣು–ಕಾಯಿಗಳು, ಹೊಸ ಸೀರೆ, ಬಂಗಾರ, ಹಣ ಇತ್ಯಾದಿಗಳನ್ನು ದೇವರ ಕೋಣೆಯಲ್ಲಿ ಹಿಂದಿನ ರಾತ್ರಿಯೇ ಸಿದ್ಧಗೊಳಿಸಿಟ್ಟು ಬೆಳಿಗ್ಗೆ ಅದರ ಮುಂದೆಯೇ ಕಣ್ಣು ಬಿಡುವುದು ಸಂಪ್ರದಾಯ. ಇಂಥ ಕಣಿಯಲ್ಲಿ ಕೊನ್ನಪ್ಫೂವಿಗೂ ವಿಶಿಷ್ಟ ಸ್ಥಾನವಿದೆ. ಮಲಯಾಳಂ ಸಾಹಿತ್ಯದಲ್ಲೂ ಸಂಸ್ಕೃತಿ ಚಿಂತನೆಯಲ್ಲೂ ವಿಷು ಮತ್ತು ಕೊನ್ನಪ್ಪೂವಿನ ಪ್ರಸ್ತಾಪ ಅಗದೇ ಇರಲು ಸಾಧ್ಯವೇ ಇಲ್ಲ. ಅಷ್ಟೇ ಯಾಕೆ, ಇದನ್ನು ಬರೀ ಕೊನ್ನ ಎನ್ನದೆ ಕಣಿಕೊನ್ನ ಎನ್ನವುದು ಕೇರಳದಲ್ಲಿ ರೂಢಿಯಾಗಿಬಿಟ್ಟಿದೆ. ಅಂದಹಾಗೆ, ಕೇರಳದ ರಾಜ್ಯ ಪುಷ್ಪ ಈ ಕೊನ್ನ ಅಥವಾ ಕಣಿಕೊನ್ನ. ಥಾಯ್ಲೆಂಡ್‌ನ ರಾಷ್ಟ್ರೀಯ ವೃಕ್ಷವೂ ರಾಷ್ಟ್ರೀಯ ಪುಷ್ಪವೂ ಆಗಿದೆ, ಥಾಯ್ ಭಾಷೆಯಲ್ಲಿ ರಚಾಫ್ರುಯೆಕ್ ಎನ್ನುವ ಈ ‘ಚಿನ್ನ’.
ಯಾವುದೀ ಹೂವಿನ ಲೋಕ?
ಭಾರತದಲ್ಲಿ ಮಾತ್ರವಲ್ಲ, ಮ್ಯಾನ್ಮಾರ್, ಥಾಯ್ಲೆಂಡ್, ಶ್ರೀಲಂಕಾ ಮತ್ತು ಪಾಕಿಸ್ತಾನದಲ್ಲೂ ಕೊಂದೆ ಹೂ ಇದೆ ಎಂದು ಅಂತರ್ಜಾಲ ಮಾಹಿತಿ ತಿಳಿಸುತ್ತದೆ. ಹೆಚ್ಚು ಎತ್ತರಕ್ಕೆ ಬೆಳೆಯದ, ತೀರಾ ಸಣ್ಣದೂ ಅಲ್ಲದ ಮರದಲ್ಲಿ ಕೊಂದೆ ಹೂ ಅರಳುತ್ತದೆ. ಲೆಗುಮಿನೋಸೆ (Leguminosae) ಅಥವಾ ಪ್ಯಾಬೇಶಿಯೇ (Fabaceae) ಕುಟುಂಬಕ್ಕೆ ಸೇರಿದ ಈ ಹೂವಿನ ವೈಜ್ಞಾನಿಕ ಹೆಸರು ಕಾಸಿಯಾ ಫಿಸ್ತುಲಾ (Cassia fistula). ಈಗ ಇದು ಎಲ್ಲ ಕಡೆಯೂ ಆಲಂಕಾರಿಕ ಪುಷ್ಪವಾಗಿ ಜನಪ್ರಿಯವಾಗಿದೆ. ಬಿರು ಬೇಸಿಗೆಯಲ್ಲಿ ಅರಳಿ ತಂಪು ಮತ್ತು ಸೊಂಪು ನೀಡುವುದೇ ಇದರ ವೈಶಿಷ್ಟ್ಯ.
ತ್ರಿದೋಷ ಶಮನ ಮಾಡುವ ಸಾಮರ್ಥ್ಯ ಇದೆ ಎಂದು ಹೇಳಲಾಗುತ್ತಿದ್ದು ಆಯುರ್ವೇದದಲ್ಲಿ ಔಷಧಿಗಾಗಿ ಬಳಸುವ ಕೊಂದೆ ಮರ ಮತ್ತು ಹೂವಿಗೆ ಸಂಸ್ಕೃತದಲ್ಲಿ ಹಲವು ನಾಮಗಳಿವೆ. ಆರಗ್ವಧ ಎಂಬುದು ಹೆಚ್ಚು ಪ್ರಚಲಿತ. ತಮಿಳಿನಲ್ಲಿ ಸರಕ್ಕೊನ್ರೈ, ತೆಲುಗಿನಲ್ಲಿ ರೇಲಾ, ಕೊಂಡ್ರಕಾಯ, ಆರಗ್ವಾದಮು ಮುಂತಾದ ಹೆಸರುಗಳಿವೆ.
ಉಷ್ಣವಲಯದಲ್ಲೇ ಕೊಂದೆ ಹೂವಿನ ಮರ ಹೆಚ್ಚಾಗಿ ಬೆಳೆಯುವುದು. ಹೆಚ್ಚು ಎತ್ತರಕ್ಕೆ ಸಾಗುವುದಿಲ್ಲ. ಫೆಬ್ರುವರಿಯಿಂದ ನಾಲ್ಕು ತಿಂಗಳು ಹೂ ಬಿಡುತ್ತದೆ. 50 ಸೆಂಟಿಮೀಟರ್‌ನಷ್ಟು ಉದ್ದದ ಗೊಂಚಲಿನಲ್ಲಿ ಹತ್ತಾರು ಹೂಗಳು ಇರುತ್ತವೆ. ಹಸಿರು ಮಿಶ್ರಿತ ಹಳದಿ ಬಣ್ಣದ ದಳಗಳು ಹೊರಗೆ, ಹಳದಿ ದಳಗಳು ಒಳಗೆ ಇರುತ್ತವೆ. ಕೇಸರಗಳು ಮೂರು ಭಾಗಗಳಲ್ಲಿ ಇರುತ್ತವೆ. ಇವುಗಳ ಬಣ್ಣವೂ ಹಳದಿ. ಇಡೀ ಗೊಂಚಲು ಚಿನ್ನದ ಬಣ್ಣದಲ್ಲಿ ಗೋಚರಿಸಲು ಇದೆಲ್ಲವೂ ಕಾರಣ. ಹೂಗಳಿಗೆ ಒಂದಿಷ್ಟು ಸುಗಂಧವೂ ಇದೆ.