ಪುಣ್ಯಫಲ ಪ್ರಾಪ್ತಿಗೆ ಪಂಚಾಂಗ ಶ್ರವಣ!
ಪುಣ್ಯಫಲ ಪ್ರಾಪ್ತಿಗೆ ಪಂಚಾಂಗ ಶ್ರವಣ!
ಹೊಸ ವರ್ಷದ, ಸಂವತ್ಸರದ ಆರಂಭ ಯುಗಾದಿ. ಈ ಹಬ್ಬ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಮನೆಮನೆಗಳಲ್ಲಿ ತೋರಣ, ಹೋಳಿಗೆ ಹೂರಣ ಅಷ್ಟೇ ಏಕೆ ಇಡೀ ದಿನ ಸಂಭ್ರಮ. ಪ್ರಕೃತಿಗೆ ಅತ್ಯಂತ ಸನಿಹವಾದ ಹಬ್ಬವೆಂದರೆ ಅದು ಯುಗಾದಿ. ಎಲ್ಲ ಹಬ್ಬಗಳಂತೆ ಹೊಸ ರುಚಿ, ಹೊಸ ಬಟ್ಟೆ, ಮನೆಯ ಅಲಂಕಾರ, ಪೂಜೆ ಪುನಸ್ಕಾರ, ಬೇವು ಬೆಲ್ಲಗಳ ವಿನಿಯೋಗ ಎಲ್ಲ ಮುಗಿದ ಬಳಿಕ ಸಂಜೆ ಹೊತ್ತು ಪಂಚಾಂಗ ಶ್ರವಣ ಮಾಡುವುದು ಅನಾದಿ ಕಾಲದಿಂದಲೂ ಬಂದ ರೂಢಿ, ಆಚರಣೆ.
ಇದೇ ದಿನ ಚಂದ್ರನ ದರ್ಶನವನ್ನೂ ಮಾಡಲಾಗುತ್ತದೆ. ಏಕೆಂದರೆ ಗಣೇಶ ಚೌತಿ ದಿನ ಚಂದ್ರನ ದರ್ಶನವನ್ನು ಅಚಾನಕ್ ಮಾಡಿದ್ದರೂ ಆ ದೋಷವು ಯುಗಾದಿ ದಿನದ ಚಂದ್ರನನ್ನು ನೋಡಿದರೆ ನಿವಾರಣೆಯಾಗುತ್ತದೆ ಎಂಬುದು ನಂಬಿಕೆ.
ಹಳ್ಳಿಗಳಲ್ಲಿ ಬಹಳ ಹಿಂದಿನಿಂದಲೂ ಪಂಚಾಂಗ ಶ್ರವಣವನ್ನೂ ಮಾಡುತ್ತಾ ಬಂದಿದ್ದಾರೆ ನಮ್ಮ ಹಿರೀಕರು. ಈಗಲೂ ಇದು ಚಾಲ್ತಿಯಲ್ಲಿದೆ. ಪಟ್ಟಣ, ನಗರಗಳಲ್ಲಿ ದೇವಸ್ಥಾನಗಳಲ್ಲಿ ಸಂಜೆ ಹೊತ್ತು ಪಂಚಾಂಗ ಶ್ರವಣ ಮಾಡುತ್ತಾರೆ. ಇದನ್ನು ಆಲಿಸಿದರೆ ಕಿವಿಗಳು ಪಾವನವಾಗುತ್ತವೆ, ಜೀವನದಲ್ಲಿ ಪುಣ್ಯಫಲ ಲಭಿಸುತ್ತದೆ, ಸುಖ, ಐಶ್ವರ್ಯ, ಯಶಸ್ಸು ಹೆಚ್ಚುತ್ತದೆ, ನವಗ್ರಹದ ಆಶೀರ್ವಾದ ಸಿಗುತ್ತದೆ, ದೇವರ ದರ್ಶನದಂತೆ ಪಂಚಾಂಗ ಶ್ರವಣವೂ ದೈವೀ ಮನೋಭಾವನೆ ಮೂಡಿಸುತ್ತದೆ ಎನ್ನಲಾಗುತ್ತದೆ.
ಏನಿದು ಪಂಚಾಂಗ ಶ್ರವಣ?
ಪಂಚಾಂಗ ಶ್ರವಣ ಎಂದರೆ ಹೊಸ ವರ್ಷದಲ್ಲಿ ಬರುವ ತಿಥಿ, ನಕ್ಷತ್ರ, ಶಕವರ್ಷ, ವರ್ಷಾಧಿಪತಿ, ರಸಧಾನ್ಯಾಧಿಪತಿ, ಮೇಘಾಧಿಪತಿ, ಗ್ರಹಗತಿ, ಗೋಚಾರಫಲ, ಅಧಿಕ ಫಲ. ಪ್ರತಿಯೊಂದು ಮಾಸದ ಫಲ, ರಾಶಿಫಲ, ಮಳೆ–ಬೆಳೆ ಮೊದಲಾದ ವಿಚಾರಗಳನ್ನು ತಿಳಿಸುವುದು. ಇದು ಮಂಗಳಕರ ಹಾಗೂ ಇಡೀ ವರ್ಷ ನಡೆಸಬೇಕಾದ ವ್ಯವಹಾರ, ವಹಿವಾಟಿನ ಬಗ್ಗೆ ಮಾಹಿತಿ ತಿಳಿದಂತಾಗುತ್ತದೆ. ಜೊತೆಗೆ ಯಾವ ದಿನ ಯಾವ ಆಚರಣೆ ಮಾಡಬೇಕು, ಯಾವ ಕರ್ತವ್ಯ ನಿರ್ವಹಿಸಬೇಕು ಎಂಬುದರ ಬಗ್ಗೆಯೂ ಮೊದಲೇ ತಿಳಿದಂತಾಗುತ್ತದೆ. ಅಲ್ಲದೆ ಪಂಚಾಂಗ ಪಠಣ ಆಲಿಸುವುದರಿಂದ ಅಶುಭ ನಿವಾರಣೆಯಾಗಿ ಲಕ್ಷ್ಮೀಪ್ರದವಾಗುವುದು ಹಾಗೂ ಶುಭವಾಗುವುದು ಎಂಬುದೂ ಇದರ ಹಿಂದಿನ ಉದ್ದೇಶ.
ಹಾಗೆ ನೋಡಿದರೆ ನಾವು ಈಗ ಬಳಸುವ ರೋಮನ್ ಕ್ಯಾಲೆಂಡರ್ ಆರಂಭವಾದದ್ದು ಕ್ರಿಸ್ತ ಪೂರ್ವ 753ರಲ್ಲಿ. ಇದಕ್ಕಿಂತಲೂ ಹತ್ತು ಸಾವಿರ ವರ್ಷಗಳ ಹಿಂದಿನಿಂದಲೇ ಪಂಚಾಂಗವು ಕಾಲಗಣನೆಗಾಗಿ ಬಳಕೆಯಾಗುತ್ತಾ ಬಂದಿದೆ ಎಂಬುದು ಗಮನಾರ್ಹ. ಯುಗಾದಿ ಎಂದರೆ ಬ್ರಹ್ಮ ಈ ಬ್ರಹ್ಮಾಂಡವನ್ನು ಸೃಷ್ಟಿಸಿದ ದಿನ.
ಒಂದು ಯುಗಾದಿಯಿಂದ ಮತ್ತೊಂದು ಯುಗಾದಿಗೆ ಭೂಮಿಯು ಸೂರ್ಯನ ಸುತ್ತ ಒಂದು ಸುತ್ತನ್ನು ಪೂರ್ಣಗೊಳಿಸುತ್ತದೆ. ಇದು ವೈಜ್ಞಾನಿಕವಾಗಿಯೂ ಸಾಬೀತಾದ ವಿಚಾರ. ಹೀಗಾಗಿ ಯುಗಾದಿಯನ್ನು ನಾವು ಹೊಸ ವರ್ಷವೆಂದು ಆಚರಿಸುವುದು.
ಕ್ರೋಧಿ ನಾಮ ಸಂವತ್ಸರ ಬೀಳ್ಕೊಟ್ಟು ವಿಶ್ವಾವಸು ಸಂವತ್ಸರವನ್ನು ಸ್ವಾಗತಿಸುವ ಕಾಲವಿದು. ಋತು ಬದಲಾವಣೆ ಪ್ರಕೃತಿಯಲ್ಲಿನ ನಿಯಮ. ಇದು ಬದುಕನ್ನು ಬೆಳಗಲಿ. ಎಲ್ಲರಿಗೂ ಹೊಸ ಸಂವತ್ಸರದಲ್ಲಿ ಯಶಸ್ಸು ಪ್ರಾಪ್ತಿಯಾಗಲಿ.