Akshaya Tritiya: ಹೊಸ್ತಿಲು ಪೂಜೆ ವಿಶೇಷ
ಪವಿತ್ರಾ ಭಟ್
ಭಾರತೀಯ ಸಂಸ್ಕೃತಿಯಲ್ಲಿ ಮನೆಯ ಮಧ್ಯಭಾಗಕ್ಕೆ ವಿಶೇಷ ಸ್ಥಾನವಿದೆ. ಅಲ್ಲಿ ದೇವತೆಗಳು ನೆಲೆಸಿರುತ್ತಾರೆ ಎನ್ನುವ ನಂಬಿಕೆ. ಹೀಗಾಗಿಯೇ ಹೊಸ ಮನೆ ಕಟ್ಟಿದಾಗ ಮೊದಲು ಪ್ರಧಾನ ಬಾಗಿಲನ್ನು ಸ್ಥಾಪಿಸುತ್ತಾರೆ. ದೇವರು ಕೋಣೆಯ ನಂತರದ ಬಾಗಿಲೇ ಪ್ರಧಾನ ಬಾಗಿಲು. ಇದಕ್ಕೆ ಹೊಸಲು, ಹೊಸ್ತಿಲು ಎಂತಲೂ ಕರೆಯಲಾಗುತ್ತದೆ. ಹೊಸ್ತಿಲಿನಲ್ಲಿ ದೇವತೆಗಳು ನೆಲೆಸಿರುತ್ತಾರೆ, ಅದರಲ್ಲೂ ಲಕ್ಷ್ಮಿ ದೇವಿ ನೆಲೆಸಿರುತ್ತಾಳೆ. ಹೊಸ್ತಿಲು ಪೂಜೆ ಮಾಡಿದರೆ ಲಕ್ಷ್ಮಿ ದೇವಿ ಮನೆಗೆ ಶುಭ ತಂದು, ಮನೆ – ಮನಸ್ಸುಗಳು ನೆಮ್ಮದಿಯಾಗಿರುವಂತೆ ಕಾಯುತ್ತಾಳೆ ಎನ್ನುವ ಭಾವ.
ಯಾವುದೇ ದೇವತಾ ಕಾರ್ಯಗಳನ್ನು ಮಾಡುವ ಮುನ್ನ ಈ ಬಾಗಿಲಗೆ ಗೌರವ ಮೊದಲು. ಅಕ್ಷಯ ತೃತೀಯದ ದಿನ ಹೊಸ್ತಿಲನ್ನು ವಿಶೇಷವಾಗಿ ಪೂಜೆ ಮಾಡಲಾಗುತ್ತದೆ.
ಅಕ್ಷಯ ಎಂದರೆ ಎಂದಿಗೂ ಕಡಿಮೆಯಾಗದ್ದು ಅಥವಾ ಶಾಶ್ವತವಾಗಿರುವುದು ಎಂದರ್ಥ, ತೃತೀಯ ಎಂದರೆ ಶುಭ ಕೆಲಸ ಮಾಡಿದರೆ ಫಲವನ್ನು ತಂದುಕೊಡುವುದು ಎಂದರ್ಥ. ಹೀಗಾಗಿ ಹೊಸ್ತಿಲಿಗೆ ಪೂಜಿಸುವುದರಿಂದ ಸದಾ ಒಳಿತಾಗುತ್ತದೆ, ಮೃತ್ಯು ಹೊಸ್ತಿಲು ದಾಟಿ ಬರುವುದಿಲ್ಲ ಎನ್ನುವುದು ನಂಬಿಕೆ.
ಹೊಸ್ತಿಲನ್ನು ನೀರಿನಿಂದ ಶುದ್ಧಪಡಿಸಿಕೊಳ್ಳಿ, ಅಕ್ಷತೆ, ಅರಿಶಿನ, ಕುಂಕುಮ, ಗಂಧ, ಹೂವು, ದೂರ್ವೆಯ ಮೂಲಕ ಹೊಸ್ತಿಲಿಗೆ ಅರ್ಚನೆ ಮಾಡಿ.
ಮಾಂಗಲ್ಯ ಆಭರಣೈರ್ಯುಕ್ತೇ ಮಂಗಳೇ ಸರ್ವಮಂಗಳೇ | ಗೃಹಲಕ್ಷ್ಮಿರ್ಧಾನ್ಯಲಕ್ಷ್ಮಿರ್ದ್ವಾರಲಕ್ಷ್ಮಿರ್ನಮೋಽಸ್ತುತೇ || ಇದು ಹೊಸ್ತಿಲು ಪೂಜೆ ಮಾಡುವಾಗ ಹೇಳಲೇಬೇಕಾದ ಶ್ಲೋಕವಾಗಿ ಎನ್ನುತ್ತಾರೆ ಹಿರಿಯರು.
ಬೆಳಗ್ಗಿನ ಜಾವ ಅಥವಾ ಸೂರ್ಯ ಮುಳಗುವ ಮೂರು ಸಂಜೆಯ ಹೊತ್ತು ದಿನನಿತ್ಯ ಹೊಸ್ತಿಲು ಪೂಜೆಗೆ ಶುಭ ಸಮಯ. ಆದರೆ ಅಕ್ಷಯ ತೃತೀಯದ ದಿನ ಇಡೀ ದಿನ ಶುಭವಾಗಿರುತ್ತದೆ. ಹೀಗಾಗಿ ಅಂದು ಯಾವುದೇ ಮುಹೂರ್ತ ನೋಡುವ ಅಗತ್ಯವೂ ಇರುವುದಿಲ್ಲ.
ಅಕ್ಷಯ ತೃತೀಯದಂದು ಏನೇ ಮಾಡಿದರೂ ಅಕ್ಷಯವಾಗುತ್ತದೆ ಎನ್ನುತ್ತಾರೆ, ಹೀಗಾಗಿ ಮನೆಯ ಏಳಿಗೆ, ಸಮೃದ್ಧಿಗಾಗಿ ಹೊಸ್ತಿಲು ಪೂಜೆ ತನ್ನದೇ ಆದ ಪ್ರಾಮುಖ್ಯತೆ ಪಡೆದುಕೊಂಡಿದೆ.