ಉಮಾ ಅನಂತ್
ಅಕ್ಷಯ ತೃತೀಯ ಅರ್ಥಾತ್ ಚಿನ್ನದ ಹಬ್ಬ. ಸ್ಥೂಲಾರ್ಥದಲ್ಲಿ ಇದು ವಸಂತ ಹಬ್ಬ, ಪ್ರಮುಖವಾಗಿ ಹಿಂದೂ ಹಾಗೂ ಜೈನ ಸಮುದಾಯಕ್ಕೆ ಇದು ವಿಶೇಷ ದಿನ. ಅಕ್ಷಯ ತೃತೀಯ ಪ್ರತಿ ವರ್ಷ ವೈಶಾಖ ಶುಕ್ಲ ಪಕ್ಷದ ಮೂರನೇ ತಿಥಿಯಂದು ಬರುತ್ತದೆ. ಚಿನ್ನ ಖರೀದಿಗೆ ಈ ದಿನ ಪ್ರಶಸ್ತವಾದದ್ದು ಎಂಬುದು ನಂಬಿಕೆ. ಅಕ್ಷಯ ತೃತೀಯ ಹಬ್ಬವನ್ನು ಭಾರತದಾದ್ಯಂತ ಆಚರಿಸಲಾಗುತ್ತದೆ. ಇದನ್ನು ‘ಅಖ ತೀಜ್‘ ಎಂದೂ ಕರೆಯುತ್ತಾರೆ. ಎಂದರೆ ಅದೃಷ್ಟ ಮತ್ತು ಸಮೃದ್ಧಿಯ ಹಬ್ಬ ಎಂದರ್ಥ. ಸಂಸ್ಕೃತದಲ್ಲಿ ‘ಅಕ್ಷಯ’ ಎಂದರೆ ಎಂದೂ ‘ಕಡಿಮೆಯಾಗದ’ ಎಂಬ ಅರ್ಥವನ್ನೂ ಧ್ವನಿಸುತ್ತದೆ.
ಇದು ಹೊನ್ನಿನ ದಿನವಾದರೂ ಈ ಶುಭ ದಿನದಂದು ಅಕ್ಕಿ ಖರೀದಿಸಬಹುದು, ಬ್ಯಾಂಕ್ ಖಾತೆಯಲ್ಲಿ ಹಣ ಜಮಾ ಮಾಡಬಹುದು, ಯಾವುದೇ ರೀತಿಯ ಹೊಸ ವಸ್ತುಗಳನ್ನು ಖರೀದಿಸಲು, ಅಶಕ್ತರಿಗೆ ಬಟ್ಟೆ, ಅನ್ನದಾನ ಮಾಡಲು, ಬಡವರ ಮಕ್ಕಳಿಗೆ ಶಿಕ್ಷಣ ಶುಲ್ಕಕ್ಕೆ ಸಹಾಯ ಮಾಡಲು... ಹೀಗೆ ಎಲ್ಲ ಕಾರ್ಯಗಳಿಗೆ ಅತ್ಯಂತ ಸೂಕ್ತವಾದ ದಿನವೆಂದರೆ ಅದು ಅಕ್ಷಯ ತೃತೀಯ ಎನ್ನುವುದು ತಜ್ಞರ ಅನಿಸಿಕೆ. ಈ ದಿನ ಇಂತಹ ಯಾವುದೇ ಕೆಲಸ ಮಾಡಿದರೂ ಅದರಿಂದ ಪುಣ್ಯಪ್ರಾಪ್ತಿಯಾಗುವುದಷ್ಟೇ ಅಲ್ಲದೆ ನಮ್ಮಲ್ಲಿರುವ ಧನಕನಕವೂ ಹೆಚ್ಚಾಗುತ್ತದೆ ಎಂಬ ಕಾರಣಕ್ಕೆ ಈ ದಿನ ಖರೀದಿ ಹಾಗೂ ದಾನಕ್ಕೆ ಹೆಚ್ಚಿನ ಮಹತ್ವ ಇದೆ.
ಪ್ರಾದೇಶಿಕವಾಗಿಯೂ ಅಕ್ಷಯ ತೃತೀಯ ಬಹಳ ಮಹತ್ವದ ಹಬ್ಬವಾಗಿ ಆಚರಣೆಯಲ್ಲಿದೆ. ಮಹಾರಾಷ್ಟ್ರ, ಒಡಿಶಾ, ತೆಲಂಗಾಣ, ಆಂಧ್ರ ಪ್ರದೇಶಗಳಲ್ಲಿ ಈ ಹಬ್ಬದ ಆಚರಣೆ ಜೋರು.
ಪೂಜಾ ವಿಧಾನ ಹೇಗೆ?
‘ಅಕ್ಷಯ ತೃತೀಯದ ದಿನ ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ, ಹೊಸ ಬಟ್ಟೆ ಧರಿಸಿ ವಿಷ್ಣು ಹಾಗೂ ಲಕ್ಷ್ಮಿಯನ್ನು ಪೂಜಿಸಲಾಗುತ್ತದೆ. ದೇವರ ಕೋಣೆಯಲ್ಲಿ ದೀಪ ಬೆಳಗಿಸಿ ಹೂವು, ಹಣ್ಣು, ನೈವೇದ್ಯಗಳನ್ನು ಗಣೇಶ, ವಿಷ್ಣು ಲಕ್ಷ್ಮಿಯ ವಿಗ್ರಹಗಳಿಗೆ ಸಮರ್ಪಿಸಲಾಗುತ್ತದೆ. ಈ ದಿನ ಹಳದಿ ಬಟ್ಟೆ ಧರಿಸುವುದು ಸಾಮಾನ್ಯ. ನದಿ ಸಮೀಪದಲ್ಲಿದ್ದರೆ ನದಿ ಸ್ನಾನ ಮಂಗಳಕರ ಎಂಬ ಭಾವನೆ ಇದೆ. ಬೆಳಿಗ್ಗೆ ಸೂರ್ಯದೇವರಿಗೆ ಅರ್ಘ್ಯ ನೀಡುವ ಪದ್ಧತಿ ಕೆಲವೆಡೆ ಇದೆ. ಗಂಗಾಜಲವನ್ನು ತಂದು ಮನೆಯಲ್ಲಿ ಚಿಮುಕಿಸಿ ಪಾವನಗೊಳ್ಳುವ ಪ್ರತೀತಿಯೂ ಈ ಹಬ್ಬದ ವಿಶೇಷವೇ ಆಗಿದೆ. ಅಕ್ಷಯ ತೃತೀಯದಂದು ಖರೀದಿಸಿದ ಚಿನ್ನ, ಬೆಳ್ಳಿಯ ವಸ್ತುಗಳನ್ನು ದೇವರ ಬಳಿ ಇರಿಸಿ ಪೂಜೆ ಸಲ್ಲಿಸಿದರೆ ಸಂತೃಪ್ತಿಯ ಭಾವ ಮೂಡುತ್ತದೆ’ ಎಂದು ಹೇಳುತ್ತಾರೆ ದಕ್ಷಿಣ ಕನ್ನಡದ ಪುತ್ತೂರಿನಲ್ಲಿರುವ ಜ್ಯೋತಿಷ್ಯ ಶಾಸ್ತ್ರಜ್ಞ ಕೆ. ಕೃಷ್ಣ ಭಟ್.
‘ಈ ದಿನ ಉಪವಾಸ ಆಚರಣೆಯೂ ಪ್ರಚಲಿತದಲ್ಲಿದೆ. ಕೆಲ ಸಂಪ್ರದಾಯಗಳ ಪ್ರಕಾರ, ಜನರು ಈ ದಿನ ಮಧ್ಯಾಹ್ನದ ನಂತರ ಅನ್ನ ಮತ್ತು ಹೆಸರು ಬೇಳೆ ಖಿಚಡಿ ಸೇವಿಸುವುದಿದೆ. ಅವರವರ ದೈಹಿಕ ಶಕ್ತಿಗೆ ಅನುಸಾರವಾಗಿ ಸಾತ್ವಿಕ ಆಹಾರವನ್ನು ಸೇವಿಸಬಹುದು. ಬರೀ ದ್ರವಾಹಾರದಲ್ಲೇ ಇದ್ದು ಕೂಡ ಉಪವಾಸ ಮಾಡಬಹುದು. ಕೋಸಂಬರಿ, ಪಾನಕ, ಹಣ್ಣುಗಳ ಸೇವನೆಯನ್ನೂ ಮಾಡಬಹುದು’ ಎಂದು ವಿವರ ನೀಡುತ್ತಾರೆ ಅವರು.
ಕಾಲ, ತಿಥಿ, ನಕ್ಷತ್ರಗಳಿಗೆ ಅನುಸರಿಸಿ ಪ್ರತೀ ವರ್ಷವೂ ಅಕ್ಷಯ ತೃತೀಯ ದಿನದ ಪೂಜಾ ಸಮಯ, ಚಿನ್ನ ಖರೀದಿಯ ಸಮಯ ಬದಲಾಗುತ್ತದೆ. ಈ ವರ್ಷ ಏಪ್ರಿಲ್ 30ರಂದು ಬುಧವಾರ ಅಕ್ಷಯ ತೃತೀಯವಾಗಿದ್ದು, ಪೂಜೆ ಮಾಡಲು ಶುಭ ಸಮಯವೆಂದರೆ ಬೆಳಿಗ್ಗೆ 5.41 ರಿಂದ ಮಧ್ಯಾಹ್ನ 2.18 ರವರೆಗೆ. ಚಿನ್ನ ಖರೀದಿಸಲು ಶುಭ ಸಮಯವೆಂದರೆ ಬೆಳಿಗ್ಗೆ 5.41 ರಿಂದ ಮಧ್ಯಾಹ್ನ 2.12 ರವರೆಗೆ ಎಂದು ಮಾಹಿತಿ ನೀಡುತ್ತಾರೆ ಜ್ಯೋತಿಷಿ ಕೃಷ್ಣ ಭಟ್.
ಪೌರಾಣಿಕ ಸನ್ನಿವೇಶಗಳು...
ಅಕ್ಷಯ ತೃತೀಯ ಹಬ್ಬದ ಪ್ರಾಮುಖ್ಯತೆ ಮಹಾಭಾರತದಲ್ಲೂ ಉಲ್ಲೇಖವಾಗಿದೆ. ಪಂಚಪಾಂಡವರು ವನವಾಸದಲ್ಲಿದ್ದಾಗ, ಇವರಿಗೆ ಕಷ್ಟಕೊಡಬೇಕೆಂದು ದುರ್ಯೋಧನ ಹೇಳಿದಾಗ, ದೂರ್ವಾಸ ಋಷಿ ತನ್ನ ಪರಿವಾರವನ್ನು ಕರೆದುಕೊಂಡು ಈ ಐವರಿದ್ದ ಜಾಗದ ಅರಣ್ಯಕ್ಕೆ ಬಂದು ಊಟ ನೀಡುವಂತೆ ಕೇಳಲು ಹೇಳುತ್ತಾನೆ. ಅದರಂತೆ ಮುನಿಗಳು ಇಡೀ ಪರಿವಾರ ಸಮೇತ ಪಾಂಡವರ ವನವಾಸ ಪ್ರದೇಶಕ್ಕೆ ತೆರಳಿ ಊಟ ಕೇಳುತ್ತಾನೆ. ಇದನ್ನು ಗಮನಿಸಿದ ದ್ರೌಪದಿ, ಈಗಷ್ಟೇ ಎಲ್ಲರೂ ಊಟ ಮುಗಿಸಿಯಾಯಿತು, ಈ ಮುನಿಗಳಿಗೆ ಹೇಗಪ್ಪ ಅನ್ನ ನೀಡುವುದು ಎಂಬ ಚಿಂತೆಯಲ್ಲಿರುತ್ತಾಳೆ. ಆಗ ಮುನಿಗಳನ್ನು ಸರೋವರಕ್ಕೆ ಸ್ನಾನ ಮಾಡಿ ಬರಲು ಕಳಿಸುತ್ತಾರೆ. ಈ ದುರಿತ ಕಾಲದಲ್ಲಿ ದ್ರೌಪದಿ ಶ್ರೀಕೃಷ್ಣನನ್ನು ನೆನೆಯುತ್ತಾಳೆ. ಆಗ ಕೃಷ್ಣ ಪ್ರತ್ಯಕ್ಷನಾಗಿ ಅನ್ನ ಮಾಡಿದ ಪಾತ್ರೆಯಲ್ಲಿ ಅಳಿದುಳಿದ ಒಂದೆರಡು ಅಗುಳನ್ನು ತಿನ್ನುತ್ತಾನೆ. ಅನ್ನ ಅಕ್ಷಯವಾಗುತ್ತದೆ. ಇದೇ ಸಂದರ್ಭದಲ್ಲಿ ಎಲ್ಲ ಮುನಿಗಳಿಗೆ ಹೊಟ್ಟೆತುಂಬಿ ತೇಗು ಬರುತ್ತದೆ. ಸಂತೃಪ್ತರಾದ ಮುನಿಗಳು ಪಂಚಪಾಂಡವರಿಗೆ ಪುಣ್ಯಪ್ರಾಪ್ತಿಯಾಗಲಿ ಎಂದು ಹರಸಿ ಅಲ್ಲಿಂದ ಹೊರಡುತ್ತಾರೆ. ಇದು ಕೂಡ ಅಕ್ಷಯವಾದ ಕಥೆಯನ್ನೇ ಸಾರುತ್ತದೆ.
ಅಕ್ಷಯ ತೃತೀಯದ ಮತ್ತೊಂದು ವಿಶೇಷವೆಂದರೆ ಈ ದಿನ ಪರಶುರಾಮನ ಜನ್ಮದಿನವೆಂಬುದು ಜನರ ನಂಬಿಕೆ. ವೈಷ್ಣವ ದೇವಾಲಯಗಳಲ್ಲಿ ಈ ದಿನ ಪೂಜೆ ಪುನಸ್ಕಾರ ಜೋರು. ಈ ಹಬ್ಬವನ್ನು ಪರಶುರಾಮ ಜಯಂತಿ ಎಂದೂ ಕರೆಯುವುದಿದೆ. ಇನ್ನೊಂದು ಮಹತ್ವವೆಂದರೆ ಈ ದಿನ ವೇದವ್ಯಾಸರು ಹಿಂದೂ ಮಹಾಕಾವ್ಯ ಮಹಾಭಾರತವನ್ನು ಗಣೇಶ ದೇವರಿಗೆ ಪಠಿಸಲು ಪ್ರಾರಂಭಿಸಿದರು ಎಂಬುದು ಕೂಡ ಅಕ್ಷಯ ತೃತೀಯ ದಿನಕ್ಕೆ ಹೆಚ್ಚಿನ ಮಹತ್ವ ಬರಲು ಕಾರಣವಾಗಿದೆ.
ಗಗನಕ್ಕೇರಿದೆ ಚಿನ್ನದ ಬೆಲೆ
ಜಾಗತಿಕ ಮಟ್ಟದ ಷೇರು ಮಾರುಕಟ್ಟೆಯಲ್ಲಿ ಏರಿಳಿತ ಸಂಭವಿಸಿದ ಹಿನ್ನೆಲೆಯಲ್ಲಿ ಚಿನ್ನದ ದರ ಗಗನಕ್ಕೇರಿದೆ. 22 ಕ್ಯಾರಟ್ ಚಿನ್ನದ (ಆಭರಣ ಚಿನ್ನ) ದರ 10 ಗ್ರಾಂ ಗೆ ಒಂಬತ್ತು ಸಾವಿರದ ಗಡಿಯಲ್ಲಿದೆ. ಪ್ರತೀವರ್ಷ ಅಕ್ಷಯ ತೃತೀಯದಂದು ಒಂದು ಗ್ರಾಂ ಆದರೂ ಚಿನ್ನ ಖರೀದಿ ಮಾಡಬೇಕೆಂಬ ತುಡಿತದಿಂದ ಇದ್ದ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ‘ಉಳ್ಳವರು ಹೊನ್ನ ಕೊಳ್ಳುವರು; ನಾವೇನು ಮಾಡಲಿ ಬಡವರಯ್ಯ...’ ಎಂದು ಹಾಡುತ್ತಾ, ತಮ್ಮ ಪಾಡು ಇಷ್ಟೇ ಎಂದು ಹಪಹಪಿಸುವ ಮಂದಿಯನ್ನು ಈ ಅಕ್ಷಯ ತೃತೀಯದಂದು ನೋಡಬೇಕಷ್ಟೆ. ಬೇರೆ ದಾರಿ ಇಲ್ಲ. ಆದರೂ ಚಿನ್ನ ಖರೀದಿಗೆ ತುದಿಗಾಲಲ್ಲಿ ನಿಂತವರಿಗೆ ‘ಹ್ಯಾಪಿ ಅಕ್ಷಯ ತೃತೀಯ...’!