ಅವಳ ಸಾಧನೆ ಸಂಭ್ರಮಿಸೋಣ
ನಮ್ಮ ಜಗವ ಬೆಳಗೋಣ
ನಮ್ಮ ಸುತ್ತಲಿನ ಸಮಾಜ ಇಂದು ಇಷ್ಟು ಸಹ್ಯವಾಗಿ ಉಳಿಯುವಲ್ಲಿ ಸ್ತ್ರೀಶಕ್ತಿಯೇ ಪ್ರಧಾನ ಕಾರಣ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಆ ಶಕ್ತಿ ಅಷ್ಟೊಂದು ಢಾಳಾಗಿ ಪ್ರಕಟಗೊಳ್ಳದೆ ‘ಅದೃಶ್ಯ’ವಾಗಿ ಉಳಿದಿರುವುದೇ ಹೆಚ್ಚೇನೋ ಎಂಬ ಯೋಚನೆ ಕಾಡುವುದುಂಟು. ಮಹಿಳೆಯು ನಮ್ಮ ಸಮಾಜದ ಚಾಲಕ ಶಕ್ತಿ. ಶಿಕ್ಷಣತಜ್ಞೆಯಾಗಿ, ಸಮಾಜ ಪರಿವರ್ತನೆಯ ಹರಿಕಾರಳಾಗಿ, ಆವಿಷ್ಕಾರಗಳ ಮುಂದಾಳಾಗಿ, ನ್ಯಾಯಪರ ಹೋರಾಟಗಾರ್ತಿಯಾಗಿ, ನಮ್ಮ ಭವಿಷ್ಯದ ಪೋಷಕಿಯಾಗಿ ಅವಳ ಪಾತ್ರದ ಹಿರಿಮೆಗೆ ಎಲ್ಲೆಯೇ ಇಲ್ಲ. ಈ ಮಾತನ್ನು ಎಲ್ಲರೂ ಒಪ್ಪುತ್ತಾರೆ. ಆದರೆ, ಇಂತಹ ಸಾಧಕಿಯರನ್ನು ಗೌರವಿಸುವ ಕೆಲಸ ಸಮಾಜದಲ್ಲಿ ಅಷ್ಟಾಗಿ ಆದಂತಿಲ್ಲ. ಮಹಿಳೆಯರ ಸಾಧನೆಗೆ ಸೂಕ್ತ ಮನ್ನಣೆ ಸಹ ಪೂರ್ಣ ಪ್ರಮಾಣದಲ್ಲಿ ಸಿಕ್ಕಂತಿಲ್ಲ. ಇಂತಹ ಯೋಚನೆಗಳು ಹರಳುಗಟ್ಟಿದ್ದೇ ಪ್ರಜಾವಾಣಿಯು ‘ಪಿವಿ ಸಾಧಕಿಯರು’ ಪ್ರಶಸ್ತಿಯನ್ನು ಆರಂಭಿಸಲು ಮುಖ್ಯ ಕಾರಣ. ಸುತ್ತಲ ಸಮಾಜದ ಪರಿವರ್ತನೆಗೆ ಕಾರಣರಾದ ಅಸಾಮಾನ್ಯ ಸಾಧಕಿಯರ ಯಶೋಗಾಥೆಗಳನ್ನು ಸಮಾಜಕ್ಕೆ ಪರಿಚಯಿಸುವ ಉದ್ದೇಶವನ್ನೂ ಈ ಪ್ರಶಸ್ತಿ ತಲೆಯ ಮೇಲೆ ಹೊತ್ತುಕೊಂಡಿದೆ
ಸಾಂಪ್ರದಾಯಿಕವಾಗಿ ಪುರುಷರೇ ಮಾಡುತ್ತಾ ಬಂದಂತಹ ಕೆಲಸಗಳನ್ನು ಅಷ್ಟೇ ಸಮರ್ಥವಾಗಿ ತಾವೂ ಮಾಡಿದವರು, ಮಹಾನಗರಗಳ ವೈದ್ಯಕೀಯ ಕಾಲೇಜುಗಳಲ್ಲಿ ಏನನ್ನೂ ಓದದಿದ್ದರೂ ವೈದ್ಯ ಜಗತ್ತಿಗೂ ನಿಲುಕದಂತಹ ಅಪರೂಪದ ಚಿಕಿತ್ಸಾ ವಿಧಾನವನ್ನು ಕಾಡಿನಲ್ಲೇ ಕಲಿತು, ಜನರಿಗೆ ಉಪಚರಿಸುತ್ತಿರುವವರು, ಸದ್ದಿಲ್ಲದೆ ಶಿಕ್ಷಣ ಕ್ರಾಂತಿ ಮಾಡುತ್ತಿರುವವರು, ಸಮಾಜದಲ್ಲಿ ಕಾನೂನು ಜಾಗೃತಿ ಉಂಟು ಮಾಡುತ್ತಿರುವವರು, ಪುರುಷ ಪ್ರಧಾನ ಸಮಾಜಕ್ಕೆ ಸಡ್ಡು ಹೊಡೆದು ಸಮರ್ಥ ಬದುಕು ಕಟ್ಟಿಕೊಂಡವರು, ಪಶು–ಪಕ್ಷಿಗಳ ಮೇಲೂ ಮಾತೃಪ್ರೇಮವನ್ನು ಮೆರೆದವರು, ಕೋಟ್ಯಂತರ ಮೌಲ್ಯದ ಸಾರ್ವಜನಿಕ ಆಸ್ತಿಯನ್ನು ಬಡಿದಾಡಿ ಉಳಿಸಿದವರು, ಅಂಗವೈಕಲ್ಯವನ್ನೂ ಮೀರಿ ತಮ್ಮ ಪ್ರತಿಭೆಯಿಂದ ಜಗದಗಲ ಬೆಳೆದು ನಿಂತವರು... ನಮ್ಮ ಸಮಾಜದಲ್ಲಿ ಇಂತಹ ಸಾಧಕಿಯರಿಗೆ ಲೆಕ್ಕವೇ ಇಲ್ಲ. ಆದರೆ, ಅವರೆಲ್ಲ ಎಲೆ ಮರೆಯ ಕಾಯಿಗಳಂತೆ ಸಮಾಜಕ್ಕೆ ತಮ್ಮ ಕೈಯಿಂದ ಆದ ಸೇವೆ ಸಲ್ಲಿಸುತ್ತಾ ಹೊರಟಿದ್ದಾರೆಯೇ ಹೊರತು ಸಮಾಜ ಅವರ ಸಾಧನೆಯನ್ನು ಗುರುತಿಸುವ ಕೆಲಸ ಅಷ್ಟಾಗಿ ಆಗಿಲ್ಲ. ಈ ಕೊರತೆಯನ್ನು ನೀಗಿಸುವ ಕಳಕಳಿಯೂ ‘ಪಿವಿ ಸಾಧಕಿಯರು’ ಪ್ರಶಸ್ತಿಯ ಹಿಂದಿದೆ. ಅಂತಹ ಸಾಧನೆಗಳ ಕಥೆಗಳನ್ನು ಪ್ರಜಾವಾಣಿ ಹೆಕ್ಕಿ ತೆಗೆದು, ಸಮಾಜದ ಮುಂದಿಡಲಿದೆ. ಬನ್ನಿ, ಸಮಾಜ ಪರಿವರ್ತನೆಗೆ ಕಾರಣರಾದ ಸಾಧಕಿಯರನ್ನು ಒಟ್ಟಾಗಿ ಗೌರವಿಸೋಣ
ರವೀಂದ್ರ ಭಟ್ಟ, ಕಾರ್ಯನಿರ್ವಾಹಕ ಸಂಪಾದಕ
#PVSadhakiyaru