ಪ್ರಶಸ್ತಿ ಕುರಿತು
ನಮ್ಮ ಸುತ್ತಲಿನ ಸಮಾಜ ಇಂದು ಇಷ್ಟು ಸಹ್ಯವಾಗಿ ಉಳಿಯುವಲ್ಲಿ ಸ್ತ್ರೀಶಕ್ತಿಯೇ ಪ್ರಧಾನ ಕಾರಣ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಆ ಶಕ್ತಿಗೆ ಎಲ್ಲೆಡೆ ಸಿಗಬೇಕಾದ ಮಾನ್ಯತೆ ಇನ್ನೂ ಸಿಕ್ಕಿಲ್ಲ. ಸಮಾಜ ಪರಿವರ್ತನೆಯ ಹರಿಕಾರರಾದ ಸಾಧಕ ಮಹಿಳೆಯರನ್ನು ನಾಡಿಗೆ ಪರಿಚಯಿಸುವ ಮೂಲಕ ಆ ಕೊರತೆಯನ್ನು ನೀಗಿಸುವಲ್ಲಿ ತುಸು ದೂರವಾದರೂ ಮುಂದೆ ಕ್ರಮಿಸಬೇಕು ಎನ್ನುವ ಉದ್ದೇಶ ಪ್ರಜಾವಾಣಿಯ ಈ ‘ಪಿವಿ ಸಾಧಕಿಯರು’ ಪ್ರಶಸ್ತಿಯ ಹಿಂದಿದೆ. ಪಿವಿ ಸಾಧಕಿಯರ ಪ್ರೇರಣೆದಾಯಕ ಯಶೋಗಾಥೆಗಳು ಇತರರಲ್ಲೂ ಸ್ಫೂರ್ತಿ ತುಂಬುವಲ್ಲಿ ಯಶಸ್ವಿಯಾದರೆ ಪ್ರಶಸ್ತಿಯ ಆಶಯ ಈಡೇರಿದಂತೆ. ಬನ್ನಿ, ತಮ್ಮ ನೋವು ಮರೆತು ನಮ್ಮ ಭವಿಷ್ಯದ ಪೋಷಣೆಗೆ ಟೊಂಕಕಟ್ಟಿ ನಿಂತ ಅಪರೂಪದ ಸಾಧಕಿಯರನ್ನು ಗೌರವಿಸೋಣ.