ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಸಾಧಕಿಯರು | ಇರುಳಿಗರ ಪಾಲಿನ ಹೆರಿಗೆ ಡಾಕ್ಟರ್

Published 8 ಮಾರ್ಚ್ 2024, 0:30 IST
Last Updated 8 ಮಾರ್ಚ್ 2024, 0:30 IST
ಅಕ್ಷರ ಗಾತ್ರ

‘ನಮ್ಮ ಕಾಲದವರು ಆಸ್ಪತ್ರೆ ಕಂಡವರಲ್ಲ. ಅದರಲ್ಲೂ ಹೆರಿಗೆಗಂತೂ ಹೋದವರೇ ಅಲ್ಲ. ನನ್ನ ಮತ್ತು ನನ್ನ ಮಕ್ಕಳ ಕಾಲದಲ್ಲೂ ಅದೇ ಪರಿಸ್ಥಿತಿ. ನಮ್ಮಜ್ಜಿ, ಮುತ್ತಜ್ಜಿ, ದೊಡ್ಡಮ್ಮ ಸೇರಿದಂತೆ ಊರಿನ ಕೆಲ ಹಿರಿಯ ಜೀವಗಳೇ ನಮ್ಮವರಿಗೆ ಡಾಕ್ಟರು. ಹೊರಗಿನ ಪ್ರಪಂಚ ಗೊತ್ತಿಲ್ಲದ, ಆಸ್ಪತ್ರೆಗೆ ಹೋಗುವಷ್ಟು ಶಕ್ತರಲ್ಲದ ನಮಗೆ ಈ ಸೂಲಗಿತ್ತಿಯರೇ ಹೆರಿಗೆ ಮಾಡಿಸಿ, ಆರೈಕೆ ಮಾಡುತ್ತಿದ್ದರು. ಅವರನ್ನು ನೋಡಿಯೇ ನಾನು ಸೂಲಗಿತ್ತಿಯಾದೆ. ನನ್ನ ಮಕ್ಕಳಿಂದಲೇ ಇದು ಮೊದಲುಗೊಂಡಿತು...’

ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಕೂತಗಾನಹಳ್ಳಿಯ ಇರುಳಿಗರ ಕಾಲೊನಿಯ 67 ವರ್ಷದ ಸೂಲಗಿತ್ತಿ ಶಿವಲಿಂಗಮ್ಮ ಅವರು, ತಮಗೊಲಿದ ಸೂಲಗಿತ್ತಿ ವಿದ್ಯೆಯ ಗುಟ್ಟನ್ನು ಬಿಚ್ಚಿಟ್ಟ ಬಗೆ ಇದು. ಆಧುನಿಕ ಬದುಕಿಗೆ ಇಂದಿಗೂ ಅಷ್ಟಾಗಿ ತೆರೆದುಕೊಳ್ಳದೆ, ಅರಣ್ಯದಂಚಿನಲ್ಲೇ ಬದುಕುತ್ತಿರುವ ಆದಿವಾಸಿ ಇರುಳಿಗ ಸಮುದಾಯದವರ ಪಾಲಿಗೆ ಶಿವಲಿಂಗಮ್ಮ ಹೆರಿಗೆ ಡಾಕ್ಟರಷ್ಟೇ ಅಲ್ಲದೆ, ನಾಟಿ ವೈದ್ಯೆ ಕೂಡ. ಐವತ್ತಕ್ಕೂ ಹೆಚ್ಚು ಹಸುಗೂಸುಗಳು ಅವರ ಕೈಯಿಂದ ಈ ಲೋಕವನ್ನು ಮೊದಲ ಬಾರಿಗೆ ಬೆರಗುಗಣ್ಣು
ಗಳಿಂದ ನೋಡಿವೆ.

ಅಜ್ಜಿ ನೋಡಿ ಕಲಿತೆ:

‘ನಮ್ಮವ್ವನ ಅವ್ವ ವೆಂಕಟಮ್ಮ ಸೂಲಗಿತ್ತಿಯಾಗಿದ್ದರು. ನಮ್ಮ ಜನರಷ್ಟೇ ಅಲ್ಲದೆ, ಬೇರೆಯವರೂ ಅವರನ್ನು ಹೆರಿಗೆ ಮಾಡಿಸಲು ಕರೆದುಕೊಂಡು ಹೋಗುತ್ತಿದ್ದರು. ಜೊತೆಗಿರಲಿ ಎಂದು ಕೆಲವೊಮ್ಮೆ ನನ್ನನ್ನೂ ಕರೆದೊಯುತ್ತಿದ್ದರು. ಯಾವ ಕ್ರಮದಲ್ಲಿ ಹೆರಿಗೆ ಮಾಡಿಸಬೇಕು, ಏನೆಲ್ಲಾ ಎಚ್ಚರಿಕೆ ವಹಿಸಬೇಕು ಎಂಬುದನ್ನು ತಿಳಿಸುತ್ತಿದ್ದರು. ನಿಧಾನವಾಗಿ ನನಗೂ ಆ ವಿದ್ಯೆ ಒಲಿಯಿತು. ಚಿಕ್ಕಂದಿನಲ್ಲೇ ಮದುವೆಯಾದ ನನ್ನ ನಾಲ್ಕು ಮಕ್ಕಳ ಹೆರಿಗೆ ಮಾಡಿಸಿದ್ದು ಅವರೇ. ಸುಮಾರು 30 ವರ್ಷದ ಹಿಂದೆ ನಾನು ಈ ಸೇವೆ ಶುರು ಮಾಡಿದೆ’ ಎಂದು ಆರಂಭದ ದಿನಗಳನ್ನು ನೆನೆದರು.

‘ನೇತು ಹಾಕಿದ ಹಗ್ಗವನ್ನು ಗರ್ಭಿಣಿಯ ಕೈಗೆ ಕೊಟ್ಟು ನಿಲ್ಲಿಸಿ, ಮಗು ಹೊರಕ್ಕೆ ಬರುವಂತೆ ಹೊಟ್ಟೆ ಅದುಮುತ್ತೇನೆ ಮಗು ಬರಲು ಆರಂಭಿಸಿದಾಗ, ಗರ್ಭಿಣಿಯನ್ನು ಕೆಳಗಡೆ ಮಲಗಿಸಿ ಮತ್ತಷ್ಟು ಅದುಮಿ ಮಗು ಸುಸೂತ್ರವಾಗಿ ಹೊರಗೆ ಬರುವಂತೆ ಮಾಡಿ ಹೆರಿಗೆ ಮಾಡಿಸುತ್ತೇನೆ ನಂತರ, ನಮ್ಮ ಕೆಲ ಗಿಡಮೂಲಿಕೆಗಳ ಔಷಧೋಪಚಾರ ಮಾಡುತ್ತೇನೆ. ಬಾಣಂತಿಯನ್ನು ಸತತ ಮೂರು ತಿಂಗಳು ಆರೈಕೆ ಮಾಡುತ್ತೇನೆ’ ಎಂದು ಹೇಳಿದರು.

ಸೊಂಟದ ಬಲಕ್ಕೆ ಹಗ್ಗ:

‘ಹೆರಿಗೆ ನೋವಿಗೆ ಸಮನಾದದ್ದು ಯಾವುದೂ ಇಲ್ಲ. ತನ್ನ ರಕ್ತ, ಮಾಂಸ ಹಾಗೂ ಶಕ್ತಿಯನ್ನು ಕೂಸಿಗೆ ಧಾರೆಯೆರೆದು ಜನ್ಮ ಕೊಟ್ಟ ತಾಯಿ, ತನ್ನ ಮೈಯಲ್ಲಿರುವ ಶಕ್ತಿಯನ್ನೆಲ್ಲಾ ಕಳೆದುಕೊಳ್ಳುತ್ತಾಳೆ. ಸೊಂಟದಲ್ಲಿ ಬಲವಿರುವುದಿಲ್ಲ. ಅದಕ್ಕಾಗಿ, ನಾವು ಬಾಣಂತಿಯರ ಸೊಂಟಕ್ಕೆ ಎರಡು ಹಿಂಬಡಿಕೆಯ ಹಗ್ಗವನ್ನು ಬಿಗಿಯಾಗಿ ಕಟ್ಟುತ್ತೇವೆ. ಉಪ್ಪಿಲ್ಲದ ಅನ್ನಕ್ಕೆ ಖಾರ ಬೆರೆಸಿದ ಊಟ ತಿನ್ನಿಸುತ್ತೇವೆ. ಕೆಲ ಸೊಪ್ಪುಗಳನ್ನು ಅರೆದು ಚಟ್ನಿ ಮಾಡಿ ಕೊಡುತ್ತೇವೆ. ಸತತ ಮೂರು ತಿಂಗಳು ಹಗ್ಗ ಕಟ್ಟುವುದರಿಂದ ಸೊಂಟಕ್ಕೆ ಬಲ ಬರುತ್ತದೆ. ಆಗ ತಾಯಿ ಎದ್ದು ಮಗು ಮತ್ತು ತನ್ನ ಕೆಲಸ ಮಾಡಿಕೊಳ್ಳಲು ಶುರು ಮಾಡುತ್ತಾಳೆ’ ಎಂದು ತಮ್ಮ ವೈದ್ಯ ವಿದ್ಯೆಯನ್ನು ಹಂಚಿಕೊಂಡರು.

‘ಈಗ ಆಸ್ಪತ್ರೆ ಹಾದಿ ಚೆನ್ನಾಗಿದೆ. ಊರೊಳಕ್ಕೆ ಬಸ್ ಬರುತ್ತದೆ. ಬೈಕ್, ಕಾರು, ಆಟೊ ಊರಲ್ಲೇ ಸಿಗುತ್ತವೆ. ಅರ್ಜೆಂಟಿದ್ದಾಗ ಆಂಬುಲೆನ್ಸ್‌ ಬರುತ್ತದೆ. ಈಗಿನ ಹೆಣ್ಣು ಮಕ್ಕಳಿಗೆ ಎಲ್ಲಾ ಗೊತ್ತಿರುವುದರಿಂದ, ನಾವು ಹೆರಿಗೆ
ಮಾಡಿಸುತ್ತೇವೆಂದರೆ ಭಯಪಡುತ್ತಾರೆ. ಸ್ವಲ್ಪ ಸಮಸ್ಯೆಯಾದರೂ ಆಸ್ಪತ್ರೆಗೆ ಹೋಗುತ್ತಾರೆ. ಹಾಗಾಗಿ, ನಮ್ಮಂತಹವರು ಹೆರಿಗೆ ಮಾಡಿಸುವುದು ಕಡಿಮೆಯಾಗಿದೆ. ನನಗೂ ವಯಸ್ಸಾಗಿರುವುದರಿಂದ ಏನಾದರೂ ತೊಂದರೆಯಾದರೆ ಎಂದು ಮಕ್ಕಳು ಹೆರಿಗೆ ಮಾಡಿಸಲು ಹೋಗಬೇಡ ಎನ್ನುತ್ತಾರೆ. ಹಾಗಾಗಿ, ಏಳೆಂಟು ವರ್ಷಗಳಿಂದ ಹೆರಿಗೆ ಮಾಡಿಸುತ್ತಿಲ್ಲ. ನನ್ನ ಮೊಮ್ಮಗಳಿಗೂ ಆಸ್ಪತ್ರೆಯಲ್ಲೇ ಹೆರಿಗೆಯಾಯಿತು. ಮಗಳ ಮನೆಯಲ್ಲಿರುವ ನಾನು ಎರಡು ತಿಂಗಳ ಮರಿಮೊಮ್ಮಗಳನ್ನು ನೋಡಿಕೊಳ್ಳುತ್ತಾ, ಮೊಮ್ಮಗಳ ಬಾಣಂತನ ಮಾಡುತ್ತಿದ್ದೇನೆ’ ಎಂದು ಹೇಳಿದರು.

‘ಶೆಟ್ರು ಮನೆ ಮಕ್ಕಳು ಈಗಲೂ ನೆನೆಯುತ್ತಾರೆ’

ಶಿವಲಿಂಗಮ್ಮ ಅವರು ತಮ್ಮ ಸಮುದಾಯದ ಹೆಣ್ಣು ಮಕ್ಕಳಿಗಷ್ಟೇ ಅಲ್ಲದೆ, ಬೇರೆ ಸಮುದಾಯದವರಿಗೂ ಹೆರಿಗೆ ಮಾಡಿಸಿ ಸೈ ಎನಿಸಿಕೊಂಡಿದ್ದಾರೆ. ‘ಇವರ ಕೈಗುಣ ಚೆನ್ನಾಗಿದೆ’ ಎಂದು ಜನ ಮಾತನಾಡಿಕೊಳ್ಳ
ತೊಡಗಿದಂತೆ ಶಿವಲಿಂಗಮ್ಮ ಅವರನ್ನು ಅಕ್ಕಪಕ್ಕದ ಹಳ್ಳಿಯವರು, ತಮ್ಮ ಮನೆಯ ಹೆಣ್ಣು ಮಕ್ಕಳ ಹೆರಿಗೆ ಮಾಡಿಸಲು ಮನೆಗೆ ಬಂದು ಕರೆದೊಯ್ದಿದ್ದಾರೆ.

ಹಣ ಪಡೆದಿ‌ಲ್ಲ; ದುಡಿಮೆ ನಿಂತಿಲ್ಲ

‘ಹೆರಿಗೆ ಮಾಡಿಸಿದ್ದಕ್ಕೆ ಹಣ ಪಡೆಯುವುದಿಲ್ಲ. ಹುಟ್ಟಿದ ಕೂಸಿನ ಮುಖ, ಮರುಜನ್ಮ ಪಡೆಯುವ ತಾಯಿಯ ನಗುವೇ ನನಗೆ ದೊಡ್ಡ ಬಹುಮಾನ. ಈ ವಿದ್ಯೆಯನ್ನು ದುಡ್ಡಿಗೆ ಮಾರಿಕೊಳ್ಳಬಾರದು ಎಂದು ನಮ್ಮಜ್ಜಿ, ದೊಡ್ಡವ್ವ ಹೇಳುತ್ತಿದ್ದರು. ಹೆರಿಗೆಯಾದ 15–20 ದಿನದಲ್ಲೇ ಕೂಲಿ ಕೆಲಸ ಶುರು ಮಾಡಿದವಳು ನಾನು. ಗಂಡನೊಂದಿಗೆ ಕಾಡಿಗೆ ಹೋಗಿ ಸೌದೆ ಕಡಿದು, ಕನಕಪುರಕ್ಕೆ ತಲೆ ಮೇಲೆ ಹೊತ್ತುಕೊಂಡು ಹೋಗಿ ಮಾರಿ ಮಕ್ಕಳನ್ನು ಸಾಕಿದವರು ನಾವು. ಮಕ್ಕಳು ದೊಡ್ಡವರಾದ ಮೇಲೆ, ಮನೆಯಲ್ಲೇ ಇರು ಅನ್ನುತ್ತಾರೆ. ಆದರೆ, ದುಡಿದ ಜೀವಕ್ಕೆ ಕೂರಲಾಗದು. ಅದಕ್ಕಾಗಿ ಒಂದಿಷ್ಟು ಕುರಿಗಳನ್ನು ಕಟ್ಟಿ ಮೇಯಿಸುತ್ತೇನೆ. ಮಾಡಿದ ಪುಣ್ಯ ಕಾಯುತ್ತದೆ. ಮೈಯಲ್ಲಿ ಇನ್ನೂ ಶಕ್ತಿ ಇದೆ. ಕೈಲಾಗದ ಕಾಲಕ್ಕೆ ಮಕ್ಕಳು ನೋಡುತ್ತಾರೆ. ಅಲ್ಲಿಯವರೆಗೆ ದುಡಿದು ತಿನ್ನಬೇಕು‘ ಎಂದು ತಮ್ಮ ಬದುಕಿನ ತತ್ವವನ್ನು ಶಿವಲಿಂಗಮ್ಮ ಬಿಚ್ಚಿಟ್ಟರು.

__________________________________________________________________

ಇನ್ನಷ್ಟು ಲೇಖನಗಳನ್ನು ಇಲ್ಲಿ ಓದಿ... ಪ್ರಜಾವಾಣಿ ಸಾಧಕಿಯರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT