ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಜಾವಾಣಿ ಸಾಧಕಿಯರು | ಬುದ್ಧಿಮಾಂದ್ಯ ಮಕ್ಕಳ ‘ಅಮೃತ’

Published 8 ಮಾರ್ಚ್ 2024, 0:30 IST
Last Updated 8 ಮಾರ್ಚ್ 2024, 0:30 IST
ಅಕ್ಷರ ಗಾತ್ರ

ಕೂದಲು ಬಣ್ಣ ಕಪ್ಪು, ಹಲ್ಲಿನ ಬಣ್ಣ ಬಿಳುಪು, ಮೈಯಲ್ಲಿಲ್ಲ ಶಕ್ತಿ, ತಲೆಯಲ್ಲಿಲ್ಲ ಯುಕ್ತಿ....ಲಲಲ ಲಾಲಾಲಾ–

ಹೀಗೆ 65 ವರ್ಷದ ಅಮೃತವಲ್ಲಿ ಟೀಚರ್ ನೃತ್ಯ ಮಾಡುತ್ತಿದ್ದರೆ ಅವರ ಸುತ್ತ ಕುಳಿತಿದ್ದ ಬುದ್ಧಿಮಾಂದ್ಯ ಮಕ್ಕಳು ಹಾಡು ಹೇಳುತ್ತ ನೃತ್ಯ ಮಾಡುವರು. ಮಂದಹಾಸ ಬೀರುವರು. ಹೀಗೆ ಒಂದೂವರೆ ದಶಕಗಳಿಂದ ಅಮೃತವಲ್ಲಿ ಟೀಚರ್ ‘ನನ್ನದು ಇದೇ ಕಾಯಕ’ ಎನ್ನುವಂತೆ ಬುದ್ಧಿಮಾಂದ್ಯ ಮಕ್ಕಳಲ್ಲಿ ಮಂದಹಾಸ ಮೂಡಿಸುತ್ತಿದ್ದಾರೆ. 

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದ ‘ಆಧಾರ್’ ಬುದ್ಧಿಮಾಂದ್ಯ ಮಕ್ಕಳ ಶಾಲೆಯ ರೂವಾರಿಗಳಲ್ಲಿ ಅಮೃತವಲ್ಲಿ ಪ್ರಮುಖರು. ಅಂಧರಾದ ಅಮೃತವಲ್ಲಿ ಅವರು ಕಳೆದ ಒಂದೂವರೆ ದಶಕದಿಂದ ಬುದ್ಧಿಮಾಂದ್ಯ ಮಕ್ಕಳಿಗಾಗಿ ನಿಷ್ಕಾಮವಾಗಿ ಕೆಲಸ ಮಾಡುತ್ತಿದ್ದಾರೆ. ಆ ಕಾರಣದಿಂದ ಸಮಾಜ, ಸಂಘ ಸಂಸ್ಥೆಗಳಿಂದ ವಿಶೇಷ ಪ್ರೀತಿ ಮತ್ತು ಗೌರವಕ್ಕೆ ಪಾತ್ರರಾಗಿದ್ದಾರೆ. 

ಚಿಂತಾಮಣಿಯ ಕಿಶೋರ ಶಾಲೆಯಲ್ಲಿ ಇಪ್ಪತ್ತು ವರ್ಷಕ್ಕೂ ಹೆಚ್ಚು ಕಾಲ ಶಿಕ್ಷಕಿಯಾಗಿದ್ದ ಅವರು  ಸ್ವಯಂ ನಿವೃತ್ತಿ ಪಡೆದರು. ಅಧ್ಯಾತ್ಮದ ಒಲವುಳ್ಳ ಅಮೃತವಲ್ಲಿ ಅವರು ‘ಸೇವಕ್’ ಸಂಸ್ಥೆಯ ಆಚಾರ್ಯ ವಿನಯ್ ವಿನೇಕರ್ ಅವರ ಪ್ರಭಾವಕ್ಕೆ ಒಳಗಾದರು. ಗುರೂಜಿ ಅವರ ಸಲಹೆ ಮೇರೆಗೆ ‘ಆಧಾರ್’ ಬುದ್ಧಿಮಾಂದ್ಯ ಮಕ್ಕಳ ಶಾಲೆ ಆರಂಭಿಸಿದರು.

2007ರಲ್ಲಿ ಆರಂಭವಾದ ‘ಆಧಾರ್’ ಶಾಲೆಯಲ್ಲಿ ಮೊದಲಿಗೆ 7 ಮಕ್ಕಳು ಕಲಿಯುತ್ತಿದ್ದರು. ನಂತರ ಈ ಸಂಖ್ಯೆ 40 ತಲುಪಿತು. ಕೋವಿಡ್ ಕಾರಣದಿಂದ 11ಕ್ಕೆ ಇಳಿಯಿತು. ಮತ್ತೆ ಸಂಸ್ಥೆಯ ಪ್ರಯತ್ನದ ಫಲವಾಗಿ ಈಗ 24 ಮಕ್ಕಳು ಇಲ್ಲಿದ್ದಾರೆ.

ಆರಂಭದಲ್ಲಿ ಶಾಲೆಯನ್ನು ಟ್ರಸ್ಟಿ ಮದ್ದಿರೆಡ್ಡಿ ಅವರ ಕಾರ್ಖಾನೆಯಲ್ಲಿ ನಡೆಸಲಾಗುತ್ತಿತ್ತು. ನಂತರ ಉತ್ತಮ ಸ್ಥಳ ಪಡೆದು ಕಟ್ಟಡ ನಿರ್ಮಿಸಲಾಗಿದೆ. ಬೆಳಿಗ್ಗೆ 10ರಿಂದ ಸಂಜೆ 4ವರೆಗೆ ಬುದ್ಧಿಮಾಂದ್ಯ ಮಕ್ಕಳ ಕಲರವ ಶಾಲೆಯಲ್ಲಿ ಇರಲಿದೆ. ಅಮೃತವಲ್ಲಿ ಟೀಚರ್ ನೇತೃತ್ವದ ‘ಆಧಾರ್‌’ ಶಾಲೆಗೆ ಐದು ಮಂದಿ ಟ್ರಸ್ಟಿಗಳೂ ಇದ್ದಾರೆ. 

ಸಾಮಾನ್ಯವಾಗಿ ಇಂತಹ ಶಾಲೆಗಳನ್ನು ನಡೆಸುವಾಗ ಅನುಕಂಪದ ಹೆಸರಿನಲ್ಲಿ ‘ನೆರವು’ ಸಂಗ್ರಹಿಸುವುದು ಹೆಚ್ಚು. ಆದರೆ ಇಂತಹ ಪ್ರಯತ್ನಗಳಿಂದ ಈ ಸಂಸ್ಥೆ ದೂರ. ಸ್ವಯಂಪ್ರೇರಿತರಾಗಿ ಮಕ್ಕಳ ಪೋಷಕರು, ದಾನಿಗಳು ಹಾಗೂ ಇವರ ಕಾರ್ಯಚಟುವಟಿಕೆಗಳನ್ನು ಗಮನಿಸಿದ ಸಹೃದಯಿಗಳು ನೆರವಾಗುತ್ತಿದ್ದಾರೆ.

‘ಕಿಶೋರ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ವೇಳೆ ನನಗೆ ಕಣ್ಣಿನ ಸಮಸ್ಯೆ ಕಾಣಿಸಿಕೊಂಡಿತು. ಆಗ ಸ್ವಯಂ ನಿವೃತ್ತಿ ಪಡದೆ. ನಂತರ ದೃಷ್ಟಿ ಹೊರಟು ಹೋಯಿತು. ವಿನಯ್ ವಿನೇಕರ್ ಗುರೂಜಿ ಅವರು ನಡೆಸುತ್ತಿದ್ದ ಆತ್ಮವಿಕಾಸ ಶಿಬಿರಗಳಲ್ಲಿ ಭಾಗವಹಿಸಿದೆ. ‘ಕಣ್ಣು ಇಲ್ಲದಿದ್ದರೂ ಚೆನ್ನಾಗಿ ಜೀವನ ಸಾಗಿಸಬಹುದು’ ಎಂದರು ಗುರೂಜಿ. ಬುದ್ಧಿಮಾಂದ್ಯ ಮಕ್ಕಳ ಶಾಲೆ ತೆರೆಯುವಂತೆ ಪ್ರೇರೇಪಿಸಿದರು. ಆ ಫಲವಾಗಿ ‘ಆಧಾರ್’ ಶಾಲೆ ಕಾರ್ಯಾರಂಭ ಮಾಡಿತು ಎಂದು ಮಾಹಿತಿ ನೀಡುವರು ಅಮೃತವಲ್ಲಿ ಟೀಚರ್.

‘ಸಮಾಜದಲ್ಲಿ ಬುದ್ಧಿವಂತ ಮಕ್ಕಳ ಬಗ್ಗೆ ಎಲ್ಲರೂ ಕಾಳಜಿ ವಹಿಸುತ್ತಾರೆ. ಆದರೆ ಈ ಮಕ್ಕಳು ದೇವರಂತೆ. ಅವರ ಬಗ್ಗೆ ಕಾಳಜಿ ವಹಿಸಬೇಕು ಎಂದರು. ಆದರೆ ಗುರೂಜಿ ಅವರ ಮಾತುಗಳಲ್ಲಿ ನನಗೆ ಆರಂಭದಲ್ಲಿ ನಂಬಿಕೆ ಬರಲಿಲ್ಲ. ನಂತರ ಶಾಲೆ ತೆರೆದು ಮುನ್ನಡೆದಂತೆ ಈ ಮಕ್ಕಳು ಮುಖ ನೋಡಿ ಮಣೆ ಹಾಕುವುದಿಲ್ಲ, ಇವರು ದೈವೀಕ ಮಕ್ಕಳು ಎನ್ನುವುದು ಅರಿವಾಯಿತು’ ಎಂದರು.

‘ಶಾಲೆ ಆರಂಭಿಸಿದಾಗ ಪೋಷಕರಿಗೆ ಖುಷಿ ಆಯಿತು. ಬುದ್ಧಿಮಾಂದ್ಯ ಮಕ್ಕಳನ್ನು ಮನೆಯಲ್ಲಿ ಇಟ್ಟುಕೊಂಡಿರುವುದಕ್ಕಿಂತ ಶಾಲೆಗೆ ಕಳುಹಿಸಿದರೆ ಹೊರೆ ತಪ್ಪಿತು ಎಂದು ಹಲವರು ಬಗೆದರು. ಬಹಳಷ್ಟು ಪೋಷಕರು ಇಲ್ಲಿಯೇ ಮಕ್ಕಳನ್ನು ಬಿಟ್ಟು ಹೋಗಬೇಕು ಎಂದುಕೊಂಡಿದ್ದರು. ಇವೆಲ್ಲವು ನಮಗೆ ತಿಳಿದು ಪೋಷಕರಿಗೆ ತರಬೇತಿ ಆರಂಭಿಸಿದೆವು.

ಈ ಮಕ್ಕಳಿಗೆ ಪೋಷಕರ ಪ್ರೀತಿ ಅತ್ಯಗತ್ಯ. ಪ್ರೀತಿ ದೊರೆತರೆ ಅವರು ಮತ್ತಷ್ಟು ಪ್ರಗತಿ ಸಾಧಿಸುವರು. ನಮ್ಮಲ್ಲಿ ತರಬೇತಿ ಪಡೆದ ಪೋಷಕರು ನಿಲುವು ಬದಲಿಸಿದರು. ಶ್ರೀನಿವಾಸಪುರದಲ್ಲಿ ಸ್ವಂತ ಮನೆ, ವ್ಯವಹಾರವನ್ನು ಹೊಂದಿದ್ದ ದಂಪತಿ ಅವುಗಳನ್ನು ಬಿಟ್ಟು ಚಿಂತಾಮಣಿಯಲ್ಲಿ ಮನೆ ಮಾಡಿಕೊಂಡರು. ಇಲ್ಲಿಯೇ ಸಣ್ಣ ವ್ಯವಹಾರ ಆರಂಭಿಸಿದರು. ಅವರ ಮಗುವನ್ನು ನಮ್ಮಲ್ಲಿಗೆ ಸೇರಿಸಿದರು. ಇಂತಹ ಹಲವು ನಿದರ್ಶನಗಳು ಇವೆ’ ಎಂದರು ಅಮೃತವಲ್ಲಿ.

‘ಆಧಾರ್’ ಶಾಲೆಯಲ್ಲಿ ಮಕ್ಕಳಿಗೆ ಸೃಜನಾತ್ಮಕ ಕಲಿಕೆ ಇದೆ. ಇಲ್ಲಿಂದ ಹೊರ ಹೋದ 12 ಮಕ್ಕಳು ಇಂದು ದುಡಿಮೆಯ ಹಾದಿ ಕಂಡು ಕೊಂಡಿದ್ದಾರೆ. ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಕಿರಾಣಿ ಅಂಗಡಿಗಳನ್ನು ನಡೆಸುತ್ತಿದ್ದಾರೆ. ಹೀಗೆ ಆಧಾರ್ ಶಾಲೆ ಅವರ ಬದುಕಿಗೂ ಬಲ ನೀಡಿದೆ.

ಸದ್ಯ ಶಾಲೆಯಲ್ಲಿ 13 ಸಿಬ್ಬಂದಿ ಇದ್ದಾರೆ. ಬುದ್ಧಿ ಮಾಂದ್ಯ ಮಕ್ಕಳ ಆರೈಕೆಗೆ ಹೆಚ್ಚು ನಿಗಾ ಅಗತ್ಯ. ಆರು ವರ್ಷದಿಂದ 35 ವರ್ಷದವರೆಗಿನವರು ಇಲ್ಲಿ ಕಲಿಕೆಗೆ ಬರುತ್ತಾರೆ. ಓದು, ಬರಹ ಅಗತ್ಯವಿದ್ದ ಮಕ್ಕಳಿಗೆ ಈ ಕಲಿಕೆಯೂ ನಡೆಯುತ್ತದೆ. ಹೊಲಿಗೆ ತರಬೇತಿ, ಹೂವಿನ ಹಾರ ಸಿದ್ಧಗೊಳಿಸುವುದು, ಶುಭಾಶಯ ಪತ್ರಗಳನ್ನು ರೂಪಿಸುವುದು–ಹೀಗೆ ಸೃಜನಾತ್ಮಕ ಚಟುವಟಿಕೆಗಳಲ್ಲಿ ಈ ಮಕ್ಕಳನ್ನು ತೊಡಗಿಸಲಾಗುತ್ತದೆ.

ಬುದ್ಧಿಮಾಂದ್ಯ ಮಕ್ಕಳಿಗೆ ಅಮೃತವಲ್ಲಿ ಟೀಚರ್ ಶಿಕ್ಷಕಿ, ತಾಯಿಯಾಗಿದ್ದಾರೆ. ಪ್ರಚಾರದ ಹಂಗಿನಿಂದ ದೂರವೇ ಉಳಿದಿರುವ ಅವರು, ಈ ಬುದ್ಧಿಮಾಂದ್ಯ ಮಕ್ಕಳ ಶಾಲೆ ನಡೆಸುವುದನ್ನು ‘ಇದು ನನ್ನ ಅಧ್ಯಾತ್ಮ’ ಎನ್ನುವರು.

‘ಮನೆಯಲ್ಲಿ ಇಟ್ಟುಕೊಳ್ಳಬೇಡಿ’

ಬುದ್ಧಿಮಾಂದ್ಯ ಮಕ್ಕಳ ಬಗ್ಗೆ ತಾತ್ಸಾರ ಅಥವಾ ಬೇಸರಪಟ್ಟುಕೊಂಡು ಮನೆಯಲ್ಲಿಯೇ ಇಟ್ಟುಕೊಳ್ಳ
ಬಾರದು. ಶಾಲೆಗಳಿಗೆ ಕಳುಹಿಸಬೇಕು. ಆ ಮಗು ಇತರ ಮಗುವನ್ನು ನೋಡಿ ಅನುಕರಿಸುತ್ತದೆ. ಕಲಿಯುತ್ತದೆ ಎಂದರು ಅಮೃತವಲ್ಲಿ ಟೀಚರ್.

ಈ ಯಾವ ಕಾರ್ಯಗಳು ನನ್ನೊಬ್ಬಳದ್ದೇ ಅಲ್ಲ. ಟ್ರಸ್ಟಿಗಳು, ಶಿಕ್ಷಕಿಯರು ಎಲ್ಲರ ಸಹಕಾರದಿಂದ ಶಾಲೆ ನಡೆಯುತ್ತಿದೆ. ಸರ್ಕಾರದ ಅನುದಾನ ಪಡೆದಿಲ್ಲ. ಸರ್ಕಾರದ ಅನುದಾನ ಪಡೆದ ತಕ್ಷಣ ನಮಗೆ ಸ್ವಾತಂತ್ರ್ಯ ಇರುವುದಿಲ್ಲ. ಯಾವ ಆಸೆಗಳನ್ನೂ ಇಟ್ಟುಕೊಳ್ಳದೆ ಈ ಮಕ್ಕಳ ಸೇವೆ ಮಾಡುತ್ತಿದ್ದೇವೆ ಎಂದು ಹೇಳಿದರು.

__________________________________________________________________

ಇನ್ನಷ್ಟು ಲೇಖನಗಳನ್ನು ಇಲ್ಲಿ ಓದಿ... ಪ್ರಜಾವಾಣಿ ಸಾಧಕಿಯರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT