ಬೆಂಗಳೂರು: ‘ಸೋಲಾರ್ ವ್ಯವಸ್ಥೆ ಇದ್ದರೂ ಬಿಸಿನೀರು ಸಿಗುವುದಿಲ್ಲ. ಮತ್ತಷ್ಟು ಅನ್ನ ಕೇಳಿದರೆ ಸೌಟಿನಿಂದ ಹೊಡೆಯುತ್ತಾರೆ...’– ಕೊಪ್ಪಳ ನಗರದಲ್ಲಿರುವ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದ ವಿದ್ಯಾರ್ಥಿಗಳು ತೋಡಿಕೊಂಡ ನೋವಿದು.

‘ಶೌಚಾಲಯ, ಸ್ನಾನಗೃಹದ ಕೋಣೆಗಳಿಗೆ ಬಾಗಿಲುಗಳಿಲ್ಲ. ಸ್ವಚ್ಛತೆ ಮೊದಲೇ ಇಲ್ಲ. ನೀರಿನ ಬಾಟಲಿ, ತಂಬಿಗೆ ಹಿಡಿದುಕೊಂಡು ಶೌಚಕ್ಕೆ ಬೆಟ್ಟ ಗುಡ್ಡವೇ ಆಶ್ರಯ'– ಯಾದಗಿರಿ ನಗರದ ಸರ್ಕಾರಿ ಸಾರ್ವಜನಿಕ ಬಾಲಕರ ವಸತಿ ನಿಲಯವೊಂದರ ವಿದ್ಯಾರ್ಥಿಗಳ ಅಳಲಿದು.

‘ಹುಳು ಹತ್ತಿದ ದಿನಸಿ. ಕಲ್ಲು ಮಿಶ್ರಿತ ಅಕ್ಕಿ, ಕಡಲೆ. ನುಶಿತಿಂದ ಕಾಳು. ಉಪ್ಪಿಟ್ಟು ರವೆಯಲ್ಲೂ ಹುಳಗಳ ಕಾಟ, ಬೂಸ್ಟ್ ಹಿಡಿದ ಶೇಂಗಾ, ಕೊಳೆತ ತರಕಾರಿ. ಪ್ರಶ್ನಿಸಿದರೆ ವಾರ್ಡನ್ ಧಮ್ಕಿ ಹಾಕುತ್ತಾರೆ... ಗದಗದ ಮೆಟ್ರಿಕ್ ನಂತರ ವಸತಿ ನಿಲಯವೊಂದರ ವಿದ್ಯಾರ್ಥಿಗಳ ಗೋಳು.

ನಿಲಯದ ಊಟ ತೀರ ಕಳಪೆಯಾಗಿದೆ. ಬೆಳೆ ಕಾಳುಗಳು ಬೆಂದಿರುವುದಿಲ್ಲ. ತರಕಾರಿ ಬೇಕಾಬಿಟ್ಟಿಯಾಗಿ ಮಾಡಲಾಗುತ್ತಿದೆ. ಗುಣಮಟ್ಟದ ಊಟ ನೀಡುವಂತೆ ಮನವಿ ಮಾಡಿಕೊಂಡರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ... ತಿಪಟೂರಿನಲ್ಲಿರುವ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯವೊಂದರ ವಿದ್ಯಾರ್ಥಿಗಳ ಆರೋಪ.

ಹುಳು ಇರುವ ಅನ್ನ. ನೀರೇ ಸಾಂಬರ್. ಅರೆಬೆಂದ ದೋಸೆ, ಉಪಾಹಾರ. ಕಳಪೆ ಊಟ ಮಾಡಲು ಸಾಧ್ಯವಾಗದೆ ಅನೇಕ ಬಾರಿ ಉಪವಾಸ ಮಲಗಿದ್ದೇವೆ– ಕುಷ್ಟಗಿಯ ಮೆಟ್ರಿಕ್ ಪೂರ್ವ ವಸತಿ ನಿಲಯದ ವಿದ್ಯಾರ್ಥಿನಿಯರು ನೋವು

ಇವು ಕೆಲವು ಉದಾಹರಣೆಗಳಷ್ಟೆ. ವಿದ್ಯಾರ್ಥಿಗಳ ಈ ಮಾತಿಗೆ ಅಲ್ಲಿ ಸಾಕ್ಷಿಗಳೂ ಇವೆ. ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿರುವ ಬಹುತೇಕ ವಿದ್ಯಾರ್ಥಿನಿಲಯಗಳು, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ (ಕ್ರೈಸ್) ಅಧೀನದಲ್ಲಿರುವ ವಸತಿಶಾಲೆಗಳಲ್ಲಿ ಇಂತಹ ನೂರಾರು ಕಥೆಗಳಿವೆ.

ಬಾಗಿಲೇ ಇಲ್ಲದ ಶೌಚಾಲಯಗಳು. ಆವರಣ ಗೋಡೆ ಇಲ್ಲದ ಶಿಥಿಲ ಕಟ್ಟಡಗಳು. ಮುರಿದ ಮೇಜು, ಕುರ್ಚಿ. ಕಾಲುಗಳಿಲ್ಲದ ಮಂಚ. ಹರಿದ ಹಾಸಿಗೆ– ದಿಂಬು, ಚಾಪೆಗಳು. ಹುಳ ಹಿಡಿದ ಆಹಾರ ಸಾಮಗ್ರಿ. ರುಚಿ ಇಲ್ಲದ ಊಟ-ಉಪಹಾರ. ನೀರಿಲ್ಲ, ಕೊಳಚೆ ಸಮಸ್ಯೆ. ಕೆಲವೆಡೆ ಭದ್ರತೆಯೇ ಇಲ್ಲ. ಅಕ್ರಮ ವಸತಿ, ಗೂಂಡಾಗಿರಿ. ಭ್ರಷ್ಟಾಚಾರದ ಕೂಪದೊಳಗೆ ಸಿಲುಕಿ ದಿಕ್ಕೆಟ್ಟಿರುವ ಹಾಸ್ಟೆಲ್ಗಳ ‘ಆರೋಗ್ಯ’ದ ಸ್ಥಿತಿಯಿದು!

ಶತಮಾನಗಳಿಂದ ಶಿಕ್ಷಣ ವಂಚಿತ ಸಮುದಾಯದ, ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದವರ ಶೈಕ್ಷಣಿಕ ಅಭಿವೃದ್ಧಿಗೆ ಸರ್ಕಾರವೇ ನಿರ್ಮಿಸಿ ಕೊಟ್ಟಿರುವ ವಿದ್ಯಾರ್ಥಿನಿಲಯಗಳು ಕೆಲವೆಡೆ ದನದ ಕೊಟ್ಟಿಗೆಗಿಂತ ಕಡೆಯಾಗಿವೆ. ಮಕ್ಕಳಿಗೆ ಹಾಸ್ಟೆಲ್ ಮೂಲಕ ಉಚಿತ ವಸತಿ ಹಾಗೂ ಶಿಕ್ಷಣ ನೀಡಲು ಸರ್ಕಾರ ಪ್ರತಿವರ್ಷ ನೂರಾರು ಕೋಟಿ ರೂಪಾಯಿ ವೆಚ್ಚ ಮಾಡುತ್ತಿದೆ. ಉಣ್ಣಲು ಪೌಷ್ಟಿಕಾಂಶವಿರುವ ಗುಣಮಟ್ಟದ ಆಹಾರ, ತೊಡಲು ಒಳ್ಳೆಯ ಸಮವಸ್ತ್ರ, ಓದಲು- ಬರೆಯಲು ಪುಸ್ತಕ, ಪೆನ್ನು, ಓದಲು ಮೇಜು, ಕುರ್ಚಿ, ಹಲ್ಲುಜ್ಜಲು ಪೇಸ್ಟ್, ಸ್ನಾನಕ್ಕೆ ಸೋಪು, ತಲೆಗೆ ಎಣ್ಣೆ, ಮಲಗಲು ಹಾಸಿಗೆ-ದಿಂಬು, ನಿತ್ಯ ಕರ್ಮ ಪೂರೈಸಲು ಶೌಚಾಲಯ, ಸ್ನಾನಗೃಹ... ಹೀಗೆ ವಿದ್ಯಾರ್ಥಿಗಳಿಗೆ ಅನ್ನ- ಬಟ್ಟೆಯ ಯೋಚನೆ ಇಲ್ಲದಂತೆ ಪರಿಸರ ನಿರ್ಮಾಣ ಮಾಡಲಾಗುತ್ತಿದೆ ಎಂದು ಸರ್ಕಾರ ಪ್ರತಿಯೊಂದಕ್ಕೂ ಲೆಕ್ಕ ನೀಡುತ್ತದೆ. ಆದರೆ, ಬಡವರ ದುಡ್ಡು ಹೊಡೆಯುವ ಭ್ರಷ್ಟ ವ್ಯವಸ್ಥೆಯ ಕಾರಣಕ್ಕೆ ಅಲ್ಲಿನ ಪರಿಸ್ಥಿತಿ ಹತ್ತಾರು ಲೋಪದೋಷಗಳಿಂದ ರೋಗಗ್ರಸ್ತಗೊಂಡು ನರಳುತ್ತಿದೆ. ಮೂಲಸೌಕರ್ಯ ಒದಗಿಸಿ, ಒಳ್ಳೆಯ ಊಟ ಕೊಡಿ ಎಂಬುದು ಈ ವಿದ್ಯಾರ್ಥಿಗಳ ನಿತ್ಯದ ಪ್ರತಿಭಟನೆಯ ಸೊಲ್ಲು.

ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಹಿಂದುಳಿದ ವರ್ಗಗಳ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಡಾ. ಬಿ.ಆರ್. ಅಂಬೇಡ್ಕರ್, ಅಟಲ್ ಬಿಹಾರಿ ವಾಜಪೇಯಿ, ಶ್ರೀಮತಿ ಇಂದಿರಾಗಾಂಧಿ, ಹುತಾತ್ಮರ ವಸತಿ ಶಾಲೆ, ಶ್ರೀ ನಾರಾಯಣ ಗುರು ಹೀಗೆ ಒಟ್ಟು 860 ವಸತಿ ಶಾಲೆ, ಕಾಲೇಜುಗಳಿವೆ. ಈ ಶಾಲೆಗಳಲ್ಲಿ 2.43 ಲಕ್ಷ ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಶೇ 50ಕ್ಕೂ ಹೆಚ್ಚು ವಸತಿ ಶಾಲೆಗಳು ಬಾಡಿಗೆ ಕಟ್ಟಡಗಳಲ್ಲಿವೆ.

ಅನೇಕ ವಸತಿ ಶಾಲೆಗಳಲ್ಲಿ ಮಂಚ, ಹಾಸಿಗೆ, ದಿಂಬು, ಜಮಖಾನ, ಹೊದಿಕೆ, ಸೋಲಾರ ವಾಟರ್ ಹೀಟರ್, ವಾಟರ್ ಫಿಲ್ಟರ್, ಡೈನಿಂಗ್ ಟೇಬಲ್, ಸಿಸಿಟಿವಿ ಕ್ಯಾಮೆರಾ, ಕಂಪ್ಯೂಟರ್ಗಳು, ಪೀಠೋಪಕರಣಗಳು, ಆಟದ ಸಾಮಗ್ರಿಗಳು, ಅಡುಗೆ ಪಾತ್ರೆ ಸಾಮಗ್ರಿಗಳು ಇತ್ಯಾದಿಗಳ ಕೊರತೆ ಇದೆ. ಅನೇಕ ಶಾಲೆಗಳಲ್ಲಿ ಕಂಪ್ಯೂಟರ್ ಲ್ಯಾಬ್ ಕೊಠಡಿಗಳು ಇಲ್ಲದಿದ್ದರೂ ಗಣಕಯಂತ್ರ ಶಿಕ್ಷಕರಿದ್ದಾರೆ. ಗಣಕಯಂತ್ರ ಇಲ್ಲದೇ ಮಕ್ಕಳಿಗೆ ಗಣಕಯಂತ್ರ ವಿಜ್ಞಾನ ವಿಷಯ ಪಾಠ ಮಾಡುತ್ತಿದ್ದಾರೆ. ಇದು ವಾಸ್ತವ ಎಂದು ಹೆಸರು ಹೇಳಲು ಬಯಸದ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.

27 ವಸತಿ ಶಾಲೆಗಳಲ್ಲಿ ಪ್ರಾಂಶುಪಾಲರ ಹುದ್ದೆಗಳು ಖಾಲಿ ಇವೆ. ಅಚ್ಚರಿಯೆಂದರೆ, 2022ರ ನಂತರ ಪ್ರಾಂಶುಪಾಲರ ಹುದ್ದೆಗೆ ಬಡ್ತಿಯನ್ನೇ ನೀಡಿಲ್ಲ. 26 ಸ್ವತಂತ್ರ ಪದವಿ ಪೂರ್ವ ಕಾಲೇಜುಗಳಿಗೆ ಪ್ರಾಂಶುಪಾಲರ ಮತ್ತು ಉಪನ್ಯಾಸಕರ ಹುದ್ದೆಗಳು (ಪಿಸಿಎಂಬಿ ಮತ್ತು ಪಿಸಿಎಂಸಿಎಸ್) ಮಂಜೂರಾತಿ ಆಗಿವೆ. ಆದರೆ, ಮೇಲ್ದರ್ಜೇಗೆರಿಸಿದ 81 ವಸತಿ ಕಾಲೇಜುಗಳಿಗೆ ಒಂದೇ ಒಂದು ಪ್ರಾಂಶುಪಾಲ ಮತ್ತು ಉಪನ್ಯಾಸಕ ಹುದ್ದೆ ಮಂಜೂರಾತಿ ಆಗಿಲ್ಲ. 4,735 ಶಿಕ್ಷಕರ ಹುದ್ದೆಗಳು ಭರ್ತಿ ಆಗಿದೆ ಖಾಲಿ ಇದೆ ಎನ್ನುತ್ತವೆ ಇಲಾಖೆಯ ಮೂಲಗಳು.

ಶಾಲೆಗಳಲ್ಲಿ ಶಾಲಾ ಉಸ್ತುವಾರಿ ಸಮಿತಿಗಳು, ನಿರ್ವಹಣಾ ಸಮಿತಿಗಳು ಇಲ್ಲ. ಹೀಗಾಗಿ, ವಸತಿ ಶಾಲೆಗಳಲ್ಲಿ ಶೈಕ್ಷಣಿಕ ಗುಣಮಟ್ಟ ಕುಸಿದಿದೆ. ಐದು ವರ್ಷಗಳಿಂದ ಸರಿಯಾದ ಪಾಠ ಪ್ರವಚನಗಳು ನಡೆಯುತ್ತಿಲ್ಲ. ಫಲಿತಾಂಶ ಪ್ರಮಾಣ ಕುಸಿದಿದೆ. ಪ್ರತಿ ವಿದ್ಯಾರ್ಥಿಗೆ ಊಟದ ವೆಚ್ಚಕ್ಕೆ ಸರ್ಕಾರ ತಿಂಗಳಿಗೆ ₹ 1,850 ನೀಡುತ್ತಿದೆ. ಇದು ತೀರಾ ಕಡಿಮೆ. ಈ ಮೊತ್ತದಲ್ಲಿ ಡಯಟ್ ಚಾರ್ಟ್ನಲ್ಲಿರುವಂತೆ ಸಮತೋಲಿತ ಆಹಾರ ನೀಡಲು ಸಾಧ್ಯವಿಲ್ಲ ಎಂದೂ ಅಧಿಕಾರಿ ಹೇಳಿದರು.

ಪ್ರಾಂಶುಪಾಲರಿಗೆ ಮತ್ತು ಶಿಕ್ಷಕರಿಗೆ ಇಲ್ಲಿಯವರೆಗೂ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್), ಜಿಲ್ಲಾ ತರಬೇತಿ ಕೇಂದ್ರ (ಡಿಟಿಐ) ವತಿಯಿಂದ ತರಬೇತಿಗಳು ಮತ್ತು ಕಾರ್ಯಗಾರಗಳು ಆಗಿಲ್ಲ. ಬಹಳಷ್ಟು ವಸತಿ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಪದವಿ ಮತ್ತು ಬಿ.ಇಡ್ ತರಬೇತಿ ಪಡೆದ ಶಿಕ್ಷಕರಿದ್ದು, ವಸತಿ ಶಾಲೆಗಳಲ್ಲಿ ಆರನೇ ತರಗತಿಯಿಂದಲೇ ಆಂಗ್ಲ ಮಾಧ್ಯಮದಲ್ಲಿ ಕಲಿಸಲಾಗುತ್ತಿದೆ. ಇದು ಕೂಡಾ ಬೋಧನೆಯ ಮೇಲೆ ಪರಿಣಾಮ ಉಂಟು ಮಾಡಿದ್ದು, ಗುಣಮಟ್ಟ ಕಡಿಮೆಯಾಗಲು ಕಾರಣ ಎನ್ನುವುದು ಶಿಕ್ಷಕರ ಪ್ರತಿಪಾದನೆ.

ಶಿಕ್ಷಣ ಇಲಾಖೆಯಲ್ಲಿ ಸಿಆರ್ಸಿ, ಬಿಆರ್ಸಿ, ಇಒ, ಬಿಇಒ, ಡಿಡಿಪಿಐ ಮೂಲಕ ನಿರಂತರ ಪರಿಶೀಲನೆ, ಮೇಲ್ವಿಚಾರಣೆ, ತನಿಖೆ ಮತ್ತು ಉಸ್ತುವಾರಿ ಆಗುತ್ತಿದೆ. ಆದರೆ, ಪ್ರತ್ಯೇಕವಾಗಿ ನಡೆಯುವ ವಸತಿ ಶಾಲೆಗಳಲ್ಲಿ ಈ ರೀತಿಯಲ್ಲಿ ಯಾವುದೇ ಪರಿಶೀಲನೆಯ ಕೆಲಸ ಆಗುತ್ತಿಲ್ಲ. ಮೇಲುಸ್ತುವಾರಿ ನೋಡಿಕೊಳ್ಳಲು ಯಾರೂ ಇಲ್ಲ. ವಸತಿನಿಲಯಗಳ ನಿಲಯಪಾಲಕರುಗಳಿಗೆ ಮತ್ತು ಸ್ಟಾಫ್ ನಸ್ಗಳಿಗೆ ಇಲ್ಲಿಯವರೆಗೂ ಯಾವುದೇ ತರಬೇತಿ ನೀಡಿಲ್ಲ.

ವಸತಿ ಶಾಲೆಗಳಿಗೆ ಆಹಾರ ಪದಾರ್ಥಗಳನ್ನು ಪೂರೈಸಲು ಕೇಂದ್ರೀಕೃತ ಟೆಂಡರ್ ವ್ಯವಸ್ಥೆಯನ್ನು ಮಾಡಲಾಗಿದೆ. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (ಕ್ರೈಸ್) ವತಿಯಿಂದಲೇ ಟೆಂಡರ್ ಕರೆದು ಜಿಲ್ಲಾವಾರು ಏಜೆನ್ಸಿಯನ್ನು ನಿಗದಿ ಮಾಡಲಾಗುತ್ತಿದೆ. ಆದರೆ, ವಸತಿನಿಲಯಗಳಿಗೆ ಆಹಾರ ಪದಾರ್ಥಗಳನ್ನು ಪೂರೈಸಲು ಜಿಲ್ಲಾ ಮಟ್ಟದಲ್ಲಿ ಟೆಂಡರ್ ಕರೆಯಲಾಗುತ್ತಿದೆ. ಜಿಲ್ಲಾಧಿಕಾರಿ ಟೆಂಡರ್ ಕರೆದು ಅಂತಿಮಗೊಳಿಸುತ್ತಾರೆ. ಸಮಾಜ ಕಲ್ಯಾಣ ಇಲಾಖೆಯ ವಸತಿನಿಲಯಗಳಿಗೆ ಸಂಬಂಧಿಸಿದಂತೆ ವಿಕೇಂದ್ರೀಕೃತ ವ್ಯವಸ್ಥೆ ಇದ್ದರೆ, ಕ್ರೈಸ್ ಅಡಿಯಲ್ಲಿರುವ ವಸತಿ ಶಾಲೆಗಳಿಗೆ ಸಂಬಂಧಿಸಿದಂತೆ ಕೇಂದ್ರೀಕೃತ ವ್ಯವಸ್ಥೆ ಇದೆ. ಒಂದೇ ಇಲಾಖೆಯ ಅಡಿಯಲ್ಲಿ ಈ ರೀತಿಯ ಕ್ರಮವಲ್ಲ ಎನ್ನುವುದು ಅಧಿಕಾರಿಗಳ ವಾದ.

ಆಹಾರ ಪದಾರ್ಥಗಳ ಬಿಲ್ಲುಗಳನ್ನು, ಶುಚಿ ಸಂಭ್ರಮ ಕಿಟ್, ಸ್ಟೇಶನರಿ, ಸಮವಸ್ತ್ರ ಮತ್ತು ಶೂ-ಸಾಕ್ಸ್ಗಳ ಬಿಲ್ಗಳನ್ನು ಕ್ರೈಸ್ ಕಚೇರಿಯಲ್ಲಿ ಅನುಮೋದಿಸಲಾಗುತ್ತದೆ. ಜಿಲ್ಲಾ ಮಟ್ಟದಲ್ಲಿ ಜಂಟಿ ನಿರ್ದೇಶಕರು ಮತ್ತು ಉಪ ನಿರ್ದೇಶಕರು ಇದ್ದರೂ ಅವರಿಗೆ ಯಾವುದೇ ರೀತಿಯ ಅಧಿಕಾರ ಇಲ್ಲ. ವಸತಿ ಶಾಲೆಗಳಲ್ಲಿ ಸಮಸ್ಯೆ ಆದಾಗ ಮಾತ್ರ ಇಲಾಖೆ ಅಧಿಕಾರಿಗಳನ್ನು ಕಳುಹಿಸಿ ಸಮಸ್ಯೆಗಳನ್ನು ನಿವಾರಿಸಲು ಬಳಸಿಕೊಳ್ಳಲಾಗುತ್ತಿದೆ. ಆದರೆ, ಯಾವುದೇ ಅಧಿಕಾರ, ಉಸ್ತುವಾರಿಯನ್ನು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ನೀಡಿಲ್ಲ ಎನ್ನುವುದು ಈ ಅಧಿಕಾರಿಗಳ ಆರೋಪ.

ಕೆಲವು ಜಿಲ್ಲೆಗಳಲ್ಲಿರುವ ವಸತಿ ನಿಲಯಗಳಲ್ಲಿ ವಾರ್ಡನ್ಗಳ ಕೊರತೆಯಿದೆ. 3–4 ವಸತಿ ನಿಲಯಗಳನ್ನು ಒಬ್ಬರೇ ನಿರ್ವಹಣೆ ಮಾಡಬೇಕದ ಸ್ಥಿತಿ ನಿರ್ಮಾಣವಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ, ಕೊಪ್ಪಳ, ಕುಷ್ಟಗಿ, ಯಲಬುರ್ಗಾ, ಕನಕಗಿರಿ ತಾಲ್ಲೂಕುಗಳಲ್ಲಿ ವಿದ್ಯಾರ್ಥಿಗಳಿಗೆ ಗ್ರಂಥಾಲಯ, ಗುಣಮಟ್ಟದ ಆಹಾರ, ಹಾಸಿಗೆ, ಕಂಪ್ಯೂಟರ್ ಉತ್ತಮ ಸ್ಥಿತಿಯ ಸ್ವಂತ ಕಟ್ಟಡ ಇಲ್ಲ. ಕಿಟಕಿ ಬಾಗಿಲುಗಳು ಒಡೆದು ಹೋಗಿವೆ. ಮಳೆ ಬಂದರೆ ನೀರು ಒಳಗೆ, ವಿದ್ಯಾರ್ಥಿಗಳು ಹೊರಗೆ.

‘ಹಾಗೆಂದು, ಸರ್ಕಾರ ವಸತಿಶಾಲೆಗಳಿಗೆ ಕಳಪೆ ಆಹಾರ ವಿತರಿಸುತ್ತದೆ ಎಂದು ಭಾವಿಸಬೇಕಾಗಿಲ್ಲ. ಈ ವಸತಿಶಾಲೆಗಳ ಆಹಾರಗಳಿಗಾಗಿ ವ್ಯಯಿಸುವ ಹಣ, ಹಲವು ಮಧ್ಯವರ್ತಿಗಳ ನಡುವೆ ಹಂಚಿಹೋಗುತ್ತದೆ. ಅದರೊಳಗೆ ವಸತಿ ಶಾಲೆಗಳ ಮುಖ್ಯಸ್ಥರಿಂದ ಹಿಡಿದು ವಾರ್ಡನ್, ಅಡುಗೆಯವರೂ ಶಾಮೀಲಾಗಿರುತ್ತಾರೆ. ಈ ಕುರಿತಂತೆ ವಿದ್ಯಾರ್ಥಿಗಳು ಯಾರ ಬಳಿ ದೂರು ನೀಡಬೇಕು? ಯಾರ ದೂರು ನೀಡಬೇಕೋ ಅವರೇ ಈ ಅವ್ಯವಹಾರಗಳಲ್ಲಿ ಶಾಮೀಲಾದರೆ? ಕಳಪೆ ಆಹಾರ, ಅಶುಚಿತ್ವ ಇತ್ಯಾದಿಗಳ ಕುರಿತಂತೆ ದೂರುಗಳನ್ನು ನೀಡಿದರೆ ವಿದ್ಯಾರ್ಥಿಯ ವಿರುದ್ಧವೇ ಕ್ರಮ ತೆಗೆದುಕೊಂಡಿರುವ ನಿದರ್ಶನಗಳು ಸಾಕಷ್ಟಿವೆ’ ಎಂದು ಪೋಷಕರೊಬ್ಬರು ಅಭಿಪ್ರಾಯ ಹಂಚಿಕೊಂಡರು.

ಕುಷ್ಟಗಿ, ಯಲಬುರ್ಗಾದಲ್ಲಿರುವ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಸರಿಯಾದ ಸೌಲಭ್ಯಗಳು ಸಿಗುತ್ತಿಲ್ಲ. ಅನೇಕ ಬಾರಿ ಹಾಸ್ಟೆಲ್ ವಿದ್ಯಾರ್ಥಿಗಳು ಪ್ರತಿಭಟಿಸಿದರೂ ಪ್ರಯೋಜನ ಆಗಿಲ್ಲ. ಮೊರಾರ್ಜಿ ಶಾಲೆಗಳು ಸ್ವಂತ ಕಟ್ಟಡ ಇಲ್ಲದೆ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಕೆಲವಡೆ ವಸತಿನಿಲಯಗಳ ಸ್ಥಿತಿ ಬಹಳ ಚಿಂತಾಜನಕವಾಗಿದೆ. ಸೌಲಭ್ಯ ಕೇಳಿದರೆ ಕೊಡಲಾಗದ ಸ್ಥಿತಿ ಸರ್ಕಾರದ್ದು ಎನ್ನುವ ಆರೋಪವಿದೆ.

ಇನ್ನು ವಿದ್ಯಾರ್ಥಿ ನಿಲಯಗಳ ಪರಿಸ್ಥಿತಿಯೂ ಭಿನ್ನವೇನೂ ಅಲ್ಲ. ಸಮಾಜ ಕಲ್ಯಾಣ ಇಲಾಖೆಯಡಿ 1,972 ವಿದ್ಯಾರ್ಥಿನಿಲಯಗಳು ಕಾರ್ಯನಿರ್ವಹಿಸುತ್ತಿದ್ದು, 1,87,200 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ವಿದ್ಯಾರ್ಥಿ ನಿಲಯಗಳಲ್ಲಿಯೂ ಮಂಚ, ಹಾಸಿಗೆ, ದಿಂಬು, ಜಮಖಾನೆ, ಹೊದಿಕೆ, ಸೋಲಾರ್ ವಾಟರ್ ಹೀಟರ್, ವಾಟರ್ ಫಿಲ್ಟರ್, ಡೈನಿಂಗ್ ಟೇಬಲ್, ಸಿಸಿಟಿವಿ ಕ್ಯಾಮೆರಾಗಳು, ಕಂಪ್ಯೂಟರ್ಗಳು, ಪೀಠೋಪಕರಣಗಳು, ಆಟದ ಸಾಮಗ್ರಿಗಳು, ಅಡುಗೆ ಪಾತ್ರೆ ಸಾಮಗ್ರಿಗಳು ಇತ್ಯಾದಿಗಳ ಕೊರತೆ ಇವೆ.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಸತಿನಿಲಯಗಳಿಗೆ ಅರ್ಜಿ ಸಲ್ಲಿಸಿದ ಅರ್ಹ ಎಲ್ಲ ವಿದ್ಯಾರ್ಥಿಗಳಿಗೆ ಸ್ಥಳಾವಕಾಶದ ಆಧಾರದಲ್ಲಿ ಪ್ರವೇಶ ನೀಡುವಂತೆ ಸರ್ಕಾರ 2018ರಲ್ಲಿ ಆದೇಶ ಹೊರಡಿಸಿತ್ತು. ಆ ನಂತರ ವಿದ್ಯಾರ್ಥಿನಿಲಯಗಳಲ್ಲಿ ಮೂಲಸೌಕರ್ಯಗಳ ಕೊರತೆ ಉಂಟಾಗಿದೆ. 100 ವಿದ್ಯಾರ್ಥಿಗಳಿಗೆ ಸ್ಥಳಾವಕಾಶ ಇರುವ ವಿದ್ಯಾರ್ಥಿ ನಿಲಯಗಳಲ್ಲಿ 150 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗಿದೆ. ಈ ಹೆಚ್ಚುವರಿ ವಿದ್ಯಾರ್ಥಿಗಳಿಗೆ ಹೆಚ್ಚುವರಿ ವಾಸದ ಕೊಠಡಿಗಳು, ಡೈನಿಂಗ್ ಹಾಲ್, ಊಟ, ಸ್ನಾನಗೃಹಗಳು ಮತ್ತು ಶೌಚಾಲಯಗಳನ್ನು ಒದಗಿಸಿಲ್ಲ. ಹೀಗಾಗಿ ಸಮಸ್ಯೆ ಆಗಿದೆ ಎನ್ನುವುದು ಅಧಿಕಾರಿಗಳ ಸಮರ್ಥನೆ.

ಆದರೆ, 186 ವಿದ್ಯಾರ್ಥಿ ನಿಲಯಗಳಲ್ಲಿ ವಾರ್ಡನ್ ಹುದ್ದೆಗಳು ಖಾಲಿ ಇವೆ. 73 ತಾಲ್ಲೂಕುಗಳಲ್ಲಿ ಸಹಾಯಕ ನಿರ್ದೇಶಕರ ಹುದ್ದೆಗಳು ಖಾಲಿ ಇವೆ. 75ಕ್ಕಿಂತಲೂ ಹೆಚ್ಚು ತಾಲ್ಲೂಕುಗಳಲ್ಲಿ ಸಹಾಯಕ ನಿರ್ದೇಶಕರ ಕಚೇರಿಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ಹೊಸದಾಗಿ ರಚನೆಯಾಗಿವ ತಾಲ್ಲೂಕುಗಳ ಪೈಕಿ 35ಕ್ಕಿಂತಲೂ ಹೆಚ್ಚು ತಾಲ್ಲೂಕುಗಳಲ್ಲಿ ಸಹಾಯಕ ನಿರ್ದೇಶಕರ ಹುದ್ದೆ ಮಂಜೂರಾತಿ ಆಗಿಲ್ಲ. ಇನ್ನು ಗ್ರೂಪ್ ‘ಸಿ’ ವೃಂದದ 450 ಹೆಚ್ಚು ಹುದ್ದೆಗಳು ಖಾಲಿ ಇವೆ.

ಹೊಸದಾಗಿ 200ಕ್ಕೂ ಹೆಚ್ಚು ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳನ್ನು ಮಂಜೂರು ಮಾಡುವ ಅಗತ್ಯವಿದೆ. ಡಯಟ್ ಚಾರ್ಟ್ನಂತೆ ವಿದ್ಯಾರ್ಥಿಗಳಿಗೆ ಸಮತೋಲಿತ ಆಹಾರ ಒದಗಿಸಬೇಕಾದರೆ ವಿದ್ಯಾರ್ಥಿಗಳಿಗೆ ಮಾಸಿಕ ನೀಡುತ್ತಿರುವ ವೆಚ್ಚದ ಮೊತ್ತವನ್ನು ಹೆಚ್ಚಿಸಬೇಕು. ಜಿಲ್ಲಾ ಮಟ್ಟದಲ್ಲಿ ಜಂಟಿ ನಿರ್ದೇಶಕರ, ಉಪ ನಿರ್ದೇಶಕರ ಕಚೇರಿಗಳಲ್ಲಿ ಹೆಚ್ಚುವರಿ ಗ್ರೂಪ್ ‘ಸಿ’ ಹುದ್ದೆಗಳನ್ನು (ಕಚೇರಿ ವ್ಯವಸ್ಥಾಪಕರು. ಎಫ್ಡಿಎ, ಎಸ್ಡಿಎ ಜವಾನ) ಭರ್ತಿ ಮಾಡಬೇಕು ಎನ್ನುವುದು ಜಿಲ್ಲಾಮಟ್ಟದ ಅಧಿಕಾರಿಗಳ ಬೇಡಿಕೆ.

ಸರ್ಕಾರ ತಾನು ಘೋಷಿಸಿರುವ ಮೂಲಸೌಕರ್ಯಗಳನ್ನು ನೀಡುತ್ತಿಲ್ಲ ಎಂಬುದು ಒಂದೆಡೆಯಾದರೆ, ಇನ್ನೊಂದು ಕಡೆ ವಸತಿನಿಲಯಗಳಲ್ಲಿ ಅಕ್ರಮ ವಾಸ, ಗೂಂಡಾಗಿರಿ, ಖರೀದಿ ಟೆಂಡರ್ನಲ್ಲಿ ನಡೆಯುವ ಲಕ್ಷಾಂತರ ರೂಪಾಯಿ ಭ್ರಷ್ಟಾಚಾರ ಇಡೀ ವ್ಯವಸ್ಥೆಯನ್ನು ದಯನೀಯವಾಗಿಸಿದೆ. ಕೆಲವು ವಸತಿನಿಲಯಗಳಲ್ಲಿ ಭದ್ರತಾ ಸಿಬ್ಬಂದಿ ಇಲ್ಲ. ಹೀಗಾಗಿ ಭದ್ರತೆಯೇ ಇಲ್ಲ. ಈ ಎಲ್ಲ ಕಾರಣಗಳಿಗೆ ಬಹಳಷ್ಟು ಪೋಷಕರು ತಮ್ಮ ಮಕ್ಕಳನ್ನು ವಸತಿನಿಲಯಗಳಿಗೆ ಸೇರಿಸಲು ಹಿಂಜರಿಯುತ್ತಾತೆ. ಮಕ್ಕಳು ಓದದಿದ್ದರೂ ಪರವಾಗಿಲ್ಲ, ಇಂತಹ ವಸತಿನಿಲಯಗಳಲ್ಲಿ ಬೆಳೆದು ದಾರಿ ತಪ್ಪುವುದು ಬೇಡ ಎಂಬ ಸ್ಥಿತಿಗೆ ಕೆಲವು ಪೋಷಕರು ತಲುಪಿಸಿದ್ದಾರೆ.

‘ಎಲ್ಲ ವಸತಿಶಾಲೆಗಳಿಗೂ ಕನಿಷ್ಠ ತಿಂಗಳಿಗೊಮ್ಮೆಯಾದರೂ ಉನ್ನತ ತಜ್ಞರು ಭೇಟಿ ನೀಡಬೇಕು. ಎಲ್ಲ ವಸತಿ ಶಾಲೆಗಳಲ್ಲಿ ಕಡ್ಡಾಯವಾಗಿ ದೂರು ಪೆಟ್ಟಿಗೆ ಇರಬೇಕು ಮತ್ತು ಆ ಪೆಟ್ಟಿಗೆಯ ಹೊಣೆಯನ್ನು ಹಿರಿಯ ಅಧಿಕಾರಿಗಳೇ ನಿಭಾಯಿಸಬೇಕು. ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಈ ಕ್ರಮಗಳನ್ನು ತೆಗೆದುಕೊಂಡರೆ ಮಾತ್ರ ವಸತಿ ನಿಲಯಗಳು ಮತ್ತು ವಸತಿ ಶಾಲೆಯ ಒಂದಿಷ್ಟಾದರೂ ಬದಲಾಗಬಹದು. ಇವುಗಳನ್ನು ಆಶ್ರಯಿಸಿರುವ ವಿದ್ಯಾರ್ಥಿಗಳ ಬದುಕು– ಭವಿಷ್ಯ ಸುರಕ್ಷಿತ ಆಗಬಹುದು. ಇಲ್ಲವಾದರೆ, ಈ ವಸತಿ ಶಾಲೆಗಳೇ ಈ ಮಕ್ಕಳ ಭವಿಷ್ಯವನ್ನು ನುಂಗಿ ಹಾಕಬಹುದು’ ಎನ್ನುವ ಆತಂಕ ಪೋಷಕರದ್ದು.

ಗಮನಿಸಬೇಕಾದ ಅಂಕಿ ಅಂಶ

1,972–––ರಾಜ್ಯದಲ್ಲಿರುವ ವಿದ್ಯಾರ್ಥಿನಿಲಯಗಳು

1,87,200––ವಿದ್ಯಾರ್ಥಿನಿಲಯಗಳಲ್ಲಿ ದಾಖಲಾಗಿರುವ ವಿದ್ಯಾರ್ಥಿಗಳು

860––ರಾಜ್ಯದಲ್ಲಿರುವ ವಸತಿ ಶಾಲೆಗಳು

2.43––ಲಕ್ಷ ವಸತಿ ಶಾಲೆಗಳಲ್ಲಿ ದಾಖಲಾಗಿರುವ ವಿದ್ಯಾರ್ಥಿಗಳು

₹ 1,850–– ಪ್ರತಿ ತಿಂಗಳು ಊಟದ ವೆಚ್ಚಕ್ಕೆ ವಿದ್ಯಾರ್ಥಿಗೆ ನೀಡುವ ಮೊತ್ತ

‘ಎಸಿ’ಗೆ ಅಧಿಕಾರ, ಅಧಿಕಾರಿ ವರ್ಗಕ್ಕೆ ಬೇಸರ

ಕ್ರೈಸ್ ಅಧೀನದಲ್ಲಿರುವ ವಸತಿ ಶಾಲೆ ಕಾಲೇಜುಗಳ ಮೇಲ್ವಿಚಾರಣೆ ಹೊಣೆಯನ್ನು ಆಯಾ ಜಿಲ್ಲೆಗಳ ಉಪ ವಿಭಾಗಾಧಿಕಾರಿಗೆ ವಹಿಸಿ ರಾಜ್ಯ ಸರ್ಕಾರ ಇದೇ ಫೆ. 28ರಂದು ಆದೇಶ ಹೊರಡಿಸಿದೆ. ವಿದ್ಯಾರ್ಥಿಗಳ ಅಕಾಲಿಕ ಮರಣ ಆತ್ಮಹತ್ಯೆ ಅಪಘಾತ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ (ಪೋಕ್ಸೊ) ಕಳಪೆ ಆಹಾರ ಪೂರೈಕೆ ವಿದ್ಯುತ್ ಸಮಸ್ಯೆ ಕಲುಷಿತ ನೀರು ಕುಡಿಯುವ ನೀರಿನ ಸಮಸ್ಯೆ ಸ್ವಂತ ಕಟ್ಟಡ ಹೊಂದಿಲ್ಲದ ವಸತಿ ಶಾಲೆಗಳಿಗೆ ಸ್ಥಳೀಯ ನಿವೇಶನವನ್ನು ಗುರುತಿಸುವುದು ಇತ್ಯಾದಿ ವಿಚಾರಗಳಲ್ಲಿ ಆಡಳಿತಾತ್ಮಕ ಮತ್ತು ಆರ್ಥಿಕ ತೀರ್ಮಾನಗಳನ್ನು ತೆಗೆದುಕೊಳ್ಳುವ ‘ಆಡಳಿತಾಧಿಕಾರಿ’ ಜವಾಬ್ದಾರಿಯನ್ನು ಅವರಿಗೆ ನೀಡಲಾಗಿದೆ. ಶಾಲೆಗಳಿಗೆ ಅನಿರೀಕ್ಷಿತವಾಗಿ ಭೇಟಿ ನೀಡುವುದು ಆಹಾರ ಗುಣಮಟ್ಟ ಪರೀಕ್ಷಿಸುವುದು ಕರ್ತವ್ಯಲೋಪ ಎಸಗಿದ ಸಿಬ್ಬಂದಿಯನ್ನು ಅಮಾನತುಗೊಳಿಸುವುದು ತೆಗೆದುಹಾಕುವುದು ಶಿಸ್ತು ಕ್ರಮಕ್ಕೆ ಶಿಫಾರಸು ಮಾಡುವ ತಪಾಸಣಾ ಪ್ರಾಧಿಕಾರಿ ಕೆಲಸವನ್ನೂ ನೀಡಲಾಗಿದೆ. ಅಲ್ಲದೆ ಶಾಲಾ ನಿರ್ವಹಣೆಗೆ ಪ್ರಾಂಶುಪಾಲರಿಗೆ ನೀಡಿರುವ ಬ್ಯಾಂಕ್ ಖಾತೆಯನ್ನು ಹೊರತುಪಡಿಸಿ ಇತರೆ ಖರ್ಚು ವೆಚ್ಚಗಳಿಗೆ (₹ 5 ಲಕ್ಷದವರೆಗೆ) ಉಪ ವಿಭಾಗಾಧಿಕಾರಿ ಅನುಮೋದನೆ ನೀಡಬೇಕು. ಈವರೆಗೆ ತಮ್ಮ ಬಳಿ ಇದ್ದ ಕೆಲವು ‘ಅಧಿಕಾರ’ಗಳನ್ನು ಉಪ ವಿಭಾಗಾಧಿಕಾರಿಗಳಿಗೆ ವಹಿಸಿದ ಸರ್ಕಾರ ನಡೆ ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾಮಟ್ಟದ ಕೆಲವು ಅಧಿಕಾರಿಗಳಿಗೆ ಬೇಸರ ತರಿಸಿದೆ.

ಶಿಫಾರಸಿಗೆ ಮಣೆ ಹಾಕದೆ ವಿದ್ಯಾರ್ಥಿಗಳ ಪ್ರವೇಶಕ್ಕೆ ಸಮಿತಿ

ಕ್ರೈಸ್ ಅಡಿಯಲ್ಲಿರುವ ವಸತಿ ಶಾಲೆಗಳಲ್ಲಿ 6ನೇ ತರಗತಿಯ ಪ್ರವೇಶಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಪರೀಕ್ಷೆ ನಡೆಸಿ ಅಂಕಗಳ (ಮೆರಿಟ್) ಆಧಾರದಲ್ಲಿ ಪ್ರವೇಶ ನೀಡಲಾಗುತ್ತಿದೆ. ಉಳಿಕೆಯಾಗುವ ಸೀಟುಗಳನ್ನು ಸಮಾಜ ಕಲ್ಯಾಣ ಇಲಾಖೆಯ ಸ್ಥಳೀಯ ಜಂಟಿ ನಿರ್ದೇಶಕರು ಉಪ ನಿರ್ದೇಶಕರ ಶಿಫಾರಸು ಪತ್ರದ ಮೇಲೆ ಯಾವುದೇ ಅಂಕಗಳನ್ನು ಪರಿಗಣಿಸದೆ ಪ್ರವೇಶ ನೀಡುತ್ತಿರುವ ಬಗ್ಗೆ ಆಕ್ಷೇಪಣೆಗಳು ವ್ಯಕ್ತವಾದ ಕಾರಣ 6ನೇ ತರಗತಿ ಮತ್ತು ಇತರ ಯಾವುದೇ ತರಗತಿಯಲ್ಲಿ ಖಾಲಿ ಇರುವ ಸೀಟುಗಳಿಗೆ ಮೀಸಲಾತಿಗಳ ಅನ್ವಯ ಆಯ್ಕೆ ಮಾಡಲು ಆಯಾ ಜಿಲ್ಲೆಗಳ ಉಪ ವಿಭಾಗಾಧಿಕಾರಿಯ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಸರ್ಕಾರ ಇದೇ ಮೇ 13ರಂದು ಸುತ್ತೋಲೆ ಹೊರಡಿಸಿದೆ. ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಸಂಬಂಧಪಟ್ಟ ಶಾಲೆಯ ಪ್ರಾಂಶುಪಾಲರು ಹಿರಿಯ ಶಿಕ್ಷಕ್ಷರೊಬ್ಬರು ಸಮಿತಿಯ ಸದಸ್ಯರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿ ಇರಲಿದ್ದಾರೆ. ಶಿಫಾರಸುಗಳನ್ನು ಪರಿಗಣಿಸದೆ ಪಾರದರ್ಶಕವಾಗಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಬೇಕು. ಆಕ್ಷೇಪಣೆ ಲೋಪವಾದರೆ ಪ್ರಾಂಶುಪಾಲರನ್ನು ಹೊಣೆಯಾಗಿಸಿ ಶಿಸ್ತುಕ್ರಮ ತೆಗೆದುಕೊಳ್ಳಲಾಗುವುದು ಎಂದೂ ಸುತ್ತೋಲೆಯಲ್ಲಿ ಎಚ್ಚರಿಕೆ ನೀಡಲಾಗಿದೆ.

₹ 213 ಕೋಟಿಯಲ್ಲಿ ನಾನಾ ಸೌಲಭ್ಯ

ವಸತಿ ಶಾಲೆ ಕಾಲೇಜುಗಳಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಶುಚಿ ಸಂಭ್ರಮ ಕಿಟ್ ಸಮವಸ್ತ್ರ ಶೂ ಸಾಕ್ಸ್ ಟೈ ಬೆಲ್ಟ್ ನೋಟ್ ಬುಕ್ ಮತ್ತು ಲೇಖನಾ ಸಾಮಗ್ರಿ ಪಠ್ಯಪುಸ್ತಕ ನ್ಯಾಪ್ಕಿನ್ ನೀಡಲಾಗುತ್ತಿದೆ. ಡೆಸ್ಕ್ ಕಂ ಬೆಂಚ್ ಟು–ಟಯರ್ ಕಾಟ್ ಹಾಸಿಗೆ ದಿಂಬು ಡೈನಿಂಗ್ ಟೇಬಲ್ ಮತ್ತು ಇತರ ಮೂಲಸೌಲಭ್ಯಗಳನ್ನು ಹಂತ ಹಂತವಾಗಿ ಅನುದಾನದ ಲಭ್ಯತೆಯ ಆಧಾರದಲ್ಲಿ ಒದಗಿಸಲಾಗುತ್ತಿದೆ. ಬೇಡಿಕೆ ಇರುವ ವಸತಿ ಶಾಲೆ ಕಾಲೇಜುಗಳ ವಿದ್ಯಾರ್ಥಿಗಳಿಗೆ ಡೆಸ್ಕ್ ಕಂ ಬೆಂಚ್ (ಐವರು ಕುಳಿತುಕೊಳ್ಳುವ) ಟು –ಟಯರ್ ಮಂಚ ಹಾಸಿಗೆ ದಿಂಬು ಹೊದಿಕೆ ತಟ್ಟೆ ಲೋಟಗಳು ಪಾತ್ರೆ ಪರಿಕರಗಳು ನೀರು ಶುದ್ದೀಕರಣ ಘಟಕ ಪಾಠೋಪಕರಣ ನರ್ಸಿಂಗ್ ಕಿಟ್ ಗ್ರೈಂಡರ್ ಪ್ರಯೋಗಾಲಯ ಸಾಮಗ್ರಿ ಹಾಗೂ ಪ್ರಾಜೆಕ್ಟರ್ ಮತ್ತು ಸ್ಕ್ರೀನ್ ಸೇರಿದಂತೆ 13 ವಿವಿಧ ಬಗೆಯ ಪರಿಕರಗಳನ್ನು ಒಂದೇ ಬಾರಿಗೆ ಒದಗಿಸಲು ಒಟ್ಟು ₹ 213 ಕೋಟಿ ವೆಚ್ಚದಲ್ಲಿ ಟೆಂಡರ್ ಆಹ್ವಾನಿಸಿ ನೀಡಲು ಆರ್ಥಿಕ ಇಲಾಖೆ ಸಮಿತಿ ನೀಡಿದೆ.

ಗುಣಮಟ್ಟದ ಆಹಾರ ಪೂರೈಕೆಗೆ ವ್ಯವಸ್ಥೆ

ವಸತಿ ಶಾಲೆ ಕಾಲೇಜು ವಸತಿ ನಿಲಯಗಳಲ್ಲಿ ಒಳ್ಳೆ ಊಟ ಸಿಗುತ್ತಿಲ್ಲ ಎಂಬ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಸಮಾಜ ಕಲ್ಯಾಣ ಇಲಾಖೆ ‘ಆಹಾರ ಪಾರದರ್ಶಕತೆ ಮತ್ತು ಸಾಮಾಜಿಕ ಪರಿಶೋಧನೆ’ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ವಿದ್ಯಾರ್ಥಿಗಳಿಗೆ ಬೆಳಗಿನ ಉಪಾಹಾರ ಮಧ್ಯಾಹ್ನ ಊಟ ರಾತ್ರಿ ಊಟಕ್ಕೆ ಏನನ್ನು ಕೊಡಲಾಗುತ್ತಿದೆ ಎಂಬುದರ ಬಗ್ಗೆ ವಾರ್ಡನ್ಗಳು ಚಿತ್ರ ತೆಗೆದು ಅದನ್ನು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ (ಟ್ವಿಟರ್)ನಲ್ಲಿ ಶಿಕ್ಷಕರು ವಾರ್ಡನ್ಗಳು ಪ್ರಕಟಿಸಬೇಕು. ಪೋಸ್ಟ್ ಪರಿಶೀಲಿಸಲಿರುವ ಅಧಿಕಾರಿಗಳು ಮೆನು ಶುಚಿತ್ವ ಗುಣಮಟ್ಟ ಪರಿಶೀಲಿಸಿ ಜಿಲ್ಲೆಗಳಿಗೆ ರ್ಯಾಂಕಿಂಗ್ ಕೊಡುತ್ತಾರೆ. ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್ ಅವರು ಈ ವ್ಯವಸ್ಥೆಗೆ ಮುನ್ನುಡಿ ಬರೆದಿದ್ದಾರೆ. ಕಳೆದ ವರ್ಷ ನವೆಂಬರ್ನಲ್ಲಿ ಚಾಮರಾಜನಗರ ಬೀದರ್ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಪ್ರಾಯೋಗಿವಾಗಿ ಈ ಪದ್ಧತಿಯನ್ನು ಜಾರಿಗೊಳಿಸಲಾಗಿತ್ತು. ಇದೇ ಜನವರಿಯಲ್ಲಿ ಬೆಂಗಳೂರು ನಗರ ಉಡುಪಿ ಮೈಸೂರು ಬಾಗಲಕೋಟೆ ಕೋಲಾರ ಬೆಳಗಾವಿ ತುಮಕೂರು ಜಿಲ್ಲೆಗಳಿಗೆ ವಿಸ್ತರಣೆಗೊಂಡಿತು. ಫೆ. 6ರಂದು ಹೊಸ ಆದೇಶ ಹೊರಡಿಸಿರುವ ಸಮಾಜ ಕಲ್ಯಾಣ ಇಲಾಖೆ ಉಳಿದ 21 ಜಿಲ್ಲೆಗಳಲ್ಲೂ ಅನುಷ್ಠಾನಗೊಳಿಸಿದೆ.

ಯಾರು ಏನೆನ್ನುತ್ತಾರೆ?

‘‘ವಸತಿ ಶಾಲೆಗಳಲ್ಲಿ ಮೂಲಸೌಲಭ್ಯಗಳ ಕೊರತೆ ನಿವಾರಿಸಲು ಈಗಾಗಲೇ ಕ್ರಮ ತೆಗೆದುಕೊಳ್ಳಲಾಗಿದೆ. ಬಾಡಿಗೆ ಮತ್ತು ಸ್ವಂತ ಕಟ್ಟಡಗಳಲ್ಲಿ ನಡೆಯುತ್ತಿರುವ ವಸತಿ ಶಾಲೆಗಳು ಸಲ್ಲಿಸಿರುವ ಬೇಡಿಕೆಗಳ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ವಿದ್ಯಾರ್ಥಿಗಳಿಗೆ ಬೇಕಾಗುವ 13 ಬಗೆಯ ಪರಿಕರಗಳ ಪೈಕಿ 7 ಪರಿಕರಗಳ ಖರೀದಿಗೆ ಈಗಾಗಲೇ ಕೆಟಿಟಿಪಿ ಕಾಯ್ದೆಗೆ ಅನುಗುಣವಾಗಿ ಟೆಂಡರ್ ಆಹ್ವಾನಿಸಲಾಗಿದೆ. ಉಳಿದ ವಸ್ತುಗಳ ಖರೀದಿಗೆ ಟೆಂಡರ್ ಆಹ್ವಾನಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ‘‘

–ಪಿ.ಎಸ್. ಕಾಂತರಾಜು ಕಾರ್ಯನಿರ್ವಾಹಕ ನಿರ್ದೇಶಕ ಕ್ರೈಸ್

ಒಳನೋಟ ಪರಿಕಲ್ಪನೆ– ಜಿ.ಡಿ. ಯತೀಶ್ ಕುಮಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.