ಬೆಂಗಳೂರು: ಚಿಕ್ಕಬಳ್ಳಾಪುರ ಜಿಲ್ಲೆ ವೀರಮ್ಮನಹಳ್ಳಿಯ ರೈತ ತಿಮ್ಮಯ್ಯನಿಗೆ ಏನು ಮಾಡಬೇಕು ಎಂದೇ ತೋಚುತ್ತಿಲ್ಲ. ಮಳೆ ಬಿದ್ದಿದೆ. ಉಳಲು ಎತ್ತಿಲ್ಲ. ಟ್ರ್ಯಾಕ್ಟರ್ ಕರೆಸಿ ಹೊಲ ಉಳುಮೆ ಮಾಡಿಸಬೇಕು. ಬದು ಹಸನು ಮಾಡಬೇಕು, ಗೊಬ್ಬರ ಅಣಿ ಮಾಡಬೇಕು, ಬಿತ್ತನೆ ಬೀಜ ತರಬೇಕು. ಅವಕ್ಕೆಲ್ಲ ಹಣ ಹೊಂದಿಸಬೇಕು. ರಾಶಿ ರಾಶಿ ಕೆಲಸ. ವರ್ಷದ ಪ್ರತಿ ಋತುವಿನಲ್ಲೂ ಉಳುಮೆಗೆ ಸಂಬಂಧಿಸಿದ ಕೆಲಸಗಳು ಹೀಗೇ ಇರುತ್ತವೆ. ಆದರೆ, 60 ವರ್ಷ ಸಮೀಪಿಸುತ್ತಿರುವ ತಿಮ್ಮಯ್ಯನಿಗಾಗಲಿ, ಅವರ ಪತ್ನಿಗಾಗಲಿ, ಮೊದಲಿನಂತೆ ಕೆಲಸ ಮಾಡಲು ಆಗುತ್ತಿಲ್ಲ.

ದಂಪತಿಗೆ ಒಬ್ಬ ಮಗನಿದ್ದಾನೆ. ಡಿಗ್ರಿ ಪೂರೈಸಿ ಉದ್ಯೋಗದ ಹುಡುಕಾಟದಲ್ಲಿದ್ದಾನೆ. ವ್ಯವಸಾಯ ತನ್ನಿಂದಾಗದ, ತನಗೆ ಇಷ್ಟವಿಲ್ಲದ ಕೆಲಸ ಎಂದು ತೀರ್ಮಾನಿಸಿ, ಮನೆಯಲ್ಲಿ ಅದನ್ನು ಹೇಳಿಯೂ ಬಿಟ್ಟಿರುವ ಆತ, ಬೇಸಾಯದ ಚಟುವಟಿಕೆಗಳಿಂದ ದೂರವೇ ಇರುತ್ತಾನೆ. ಆದಕ್ಕೆ ಅನಿವಾರ್ಯವಾಗಿ, ತಿಮ್ಮಯ್ಯ ಮತ್ತು ಪತ್ನಿ ಸೇರಿ ತಮ್ಮಿಂದಾದಷ್ಟು ಮಟ್ಟಿಗೆ ಬೇಸಾಯದ ಬಂಡಿಯನ್ನು ಎಳೆಯುತ್ತಿದ್ದಾರೆ.

ಇದು ಒಬ್ಬ ರೈತನ, ಒಂದು ಊರಿನ ಕಥೆಯಷ್ಟೇ ಅಲ್ಲ; ಮಳೆಯಾಶ್ರಿತ ಬೇಸಾಯ ಆಗಿರಲಿ, ನೀರಾವರಿ ಆಗಲಿ, ಹೊಲ, ಗದ್ದೆ, ತೋಟಗಳಲ್ಲಿ ದುಡಿಯುವ ದೇಶದ ಬಹುತೇಕರು ಮಧ್ಯವಯಸ್ಕರು ಇಲ್ಲವೇ ಕೂದಲು ಹಣ್ಣಾದ ವೃದ್ಧರಾಗಿದ್ದಾರೆ. ಬೇಸಾಯದಲ್ಲಿ ಯುವಜನರನ್ನು ಕಾಣುವುದೇ ಅಪರೂಪ ಎನ್ನುವಂತಾಗಿದೆ.

ಜಗತ್ತಿನಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಭಾರತ. ದೇಶದ 146 ಕೋಟಿ ಮಂದಿಗೆ ಅಗತ್ಯವಾದ ಬೃಹತ್ ಪ್ರಮಾಣದ ಆಹಾರ ಧಾನ್ಯಗಳನ್ನು ಬೆಳೆಯುವುದು ಸುಲಭದ ಕಾರ್ಯ ಅಲ್ಲ. ಜತೆಗೆ, ಬೇಸಾಯ ಅತಿ ಹೆಚ್ಚು ದೈಹಿಕ ಶ್ರಮವನ್ನು ಬೇಡುವ ಕೆಲಸ. ಈ ದೃಷ್ಟಿಯಿಂದ ಕೃಷಿಗೆ ಯುವಜನರ ಅಗತ್ಯವಿದೆ. ಆದರೆ, ಸರ್ಕಾರದ ಅಂಕಿಅಂಶಗಳು, ವಿವಿಧ ಸಮೀಕ್ಷೆಗಳು ವ್ಯತಿರಿಕ್ತವಾದ ಕತೆಯನ್ನು ಹೇಳುತ್ತಿವೆ.

2003ರ ರಾಷ್ಟ್ರೀಯ ಯುವನೀತಿಯ ಪ್ರಕಾರ, ಯುವಜನತೆ ಎಂದರೆ, 13–35ರ ನಡುವಿನ ವಯಸ್ಸಿನವರು. 2014ರಲ್ಲಿ ಅದನ್ನು ಬದಲಾಯಿಸಿ, 15–29ರ ನಡುವಿನ ವಯಸ್ಸಿನವರನ್ನು ಯುವಜನ ಎನ್ನಲಾಯಿತು. ಭಾರತದ ಜನಸಂಖ್ಯೆಯಲ್ಲಿ ಸದ್ಯ ಶೇ 27.2ರಷ್ಟು (2021) ಮಂದಿ ಯುವಜನರಿದ್ದಾರೆ.

ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಇನ್ಪುಟ್ ಸರ್ವೆಯ ಭಾಗವಾಗಿ ರೈತರ ವಯಸ್ಸನ್ನು ಸಂಗ್ರಹಿಸಲಾಗಿತ್ತು. ದೇಶದ ರೈತರ ಪೈಕಿ 41–50ರ ವಯಸ್ಸಿನ ನಡುವೆ ಇರುವವರು ಶೇ 32.1ರಷ್ಟಿದ್ದರೆ, 50–60 ವರ್ಷ ವಯಸ್ಸಿನ ನಡುವೆ ಇರುವವರು ಶೇ 34.4ರಷ್ಟಿದ್ದಾರೆ. ಭಾರತದ ರೈತನ ಸರಾಸರಿ ವಯಸ್ಸು 51 ವರ್ಷ. ಇದು ದೇಶದ ಆಹಾರ ಭದ್ರತೆ ಮತ್ತು ಕೃಷಿಯ ಭವಿಷ್ಯದ ದೃಷ್ಟಿಯಿಂದ ಆತಂಕದ ವಿಚಾರವಾಗಿದೆ. ಭಾರತವಷ್ಟೇ ಅಲ್ಲ, ಅನೇಕ ದೇಶಗಳಲ್ಲಿ ಇದೇ ಸ್ಥಿತಿ ಇದೆ. ಜಪಾನ್ನಲ್ಲಿ ರೈತನ ಸರಾಸರಿ ವಯಸ್ಸು 68.7 ಆಗಿದ್ದರೆ, ಅಮೆರಿಕದಲ್ಲಿ 58.1 ವರ್ಷ ಆಗಿದೆ; ಯುರೋಪ್ನ ಪ್ರತಿ ಮೂವರು ರೈತರಲ್ಲಿ ಒಬ್ಬರ ವಯಸ್ಸು 65 ಆಗಿರುತ್ತದೆ.

ಕೃಷಿ ಒಲ್ಲೆ ಎನ್ನುತ್ತಿರುವವರ ಸಂಖ್ಯೆ ಹೆಚ್ಚಳ

12ನೇ ಶಿಕ್ಷಣ ಸ್ಥಿತಿಗತಿ ವಾರ್ಷಿಕ ವರದಿಗಾಗಿ ಸಮೀಕ್ಷೆ ಮಾಡುವಾಗ, ದೇಶದ ಯುವಜನರ ಭವಿಷ್ಯದ ಆಶಯಗಳ ಬಗ್ಗೆಯೂ ಪ್ರಶ್ನೆಗಳನ್ನು ಕೇಳಲಾಗಿತ್ತು. ಯುವಜನರ ಪೈಕಿ ಶೇ 42ರಷ್ಟು ಮಂದಿ ವಿವಿಧ ಉದ್ಯೋಗಗಳಲ್ಲಿ ತೊಡಗಿದ್ದು, ಅವರಲ್ಲಿ ಶೇ 79ರಷ್ಟು ಮಂದಿ ಕೃಷಿಯಲ್ಲಿ ತೊಡಗಿದ್ದಾರೆ. ಆದರೆ, ಅವರ ಪೈಕಿ ರೈತರಾಗಿ ಮುಂದುವರಿಯುವ ಬಯಕೆ ವ್ಯಕ್ತಪಡಿಸಿದ್ದವರು ಶೇ 1.2ಷ್ಟು ಮಂದಿ ಮಾತ್ರ. ಕೃಷಿಕರ ಪೈಕಿ ಬಹುತೇಕರು ಬೇರೆ ಕ್ಷೇತ್ರಗಳಿಗೆ ವಲಸೆ ಹೋಗುವ ಇರಾದೆ ಹೊಂದಿದ್ದರೆ, ಉಳಿದವರ ಪೈಕಿ ಕೆಲವರು ತಮ್ಮ ಪೂರ್ವಿಕರ ವೃತ್ತಿ ಎಂತಲೂ, ಕೆಲವರು ಜಮೀನು ಇದೆ ಎನ್ನುವ ಅನಿವಾರ್ಯದಿಂದಲೂ ಕಸುಬು ಮುಂದುವರಿಸುತ್ತಿದ್ದಾರೆ.

‘ಕೃಷಿ ಉತ್ಪನ್ನಗಳಿಗೆ ಸರಿಯಾದ ಧಾರಣೆ ಸಿಗದಿರುವುದು, ಕೃಷಿಯಿಂದ ಆದಾಯ ಇಲ್ಲದಿರುವುದೇ ಯುವಜನರು ಸಾಗುವಳಿಯಿಂದ ವಿಮುಖವಾಗಲು ಪ್ರಮುಖ ಕಾರಣ’ ಎನ್ನುತ್ತಾರೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಕಿಲ್ಲೂರು ಗ್ರಾಮದ ಬಂಗಾಡಿಯ ಭತ್ತದ ತಳಿ ಸಂರಕ್ಷಕ ಹಾಗೂ ಬೇಸಾಯ ತಜ್ಞ ಬಿ.ಕೆ.ದೇವರಾವ್.

ವರ್ಷದಿಂದ ವರ್ಷಕ್ಕೆ ಗ್ರಾಮೀಣ ಭಾಗದ ಯುವಜನರು ಹಳ್ಳಿಗಳನ್ನು ತೊರೆದು ಬದುಕು ಅರಸಿ ನಗರಗಳಿಗೆ ವಲಸೆ ಹೋಗುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಜಗತ್ತಿನ ಅನೇಕ ದೇಶಗಳಲ್ಲಿ ಇದೇ ಪರಿಸ್ಥಿತಿ ಇದೆ. ಆಫ್ರಿಕಾ, ಏಷ್ಯಾದ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ, ಕಡಿಮೆ ಮತ್ತು ಮಧ್ಯಮ ಆದಾಯದ ರಾಷ್ಟ್ರಗಳಲ್ಲಿ ಕೃಷಿ ತೊರೆಯುವವರ ಸಂಖ್ಯೆ ಹೆಚ್ಚಾಗಿದೆ. ಯುವಜನರು ಕೃಷಿಯ ಬಗ್ಗೆ ಆಸಕ್ತಿ ವಹಿಸದೇ ಹಿರಿಯರು, ವಯಸ್ಸಾದವರು ಮಾತ್ರ ಅನಿವಾರ್ಯವಾಗಿ ಕೃಷಿಗೆ ಅಂಟಿಕೊಂಡಿದ್ದಾರೆ. ಹೀಗಾಗಿ ಜಾಗತಿಕ ಮಟ್ಟದಲ್ಲಿ ರೈತರ ಸರಾಸರಿ ವಯಸ್ಸು ಹೆಚ್ಚಾಗುತ್ತಿದೆ.

‘ಕೃಷಿ ಬದುಕು ಅನಿಶ್ಚಿತ. ರೈತರಿಗೆ ಕನ್ಯೆ ಸಿಗುವುದೂ ಕಷ್ಟ ಎಂದು ಯುವಕರು ಕೃಷಿಯಲ್ಲಿ ತೊಡಗಿಕೊಳ್ಳಲು ಹಿಂದೇಟು ಹಾಕುತ್ತಾರೆ. ಕಸುಬು ಲಾಭದಾಯಕವಾದಾಗ ಮಾತ್ರ ಯುವಜನರು ಆಕರ್ಷಿತರಾಗುತ್ತಾರೆ’ ಎನ್ನುತ್ತಾರೆ ಧಾರವಾಡದ ‘ನೆಲ–ಜಲ ನಿರ್ವಹಣಾ ಸಂಸ್ಥೆ’ಯ ಸಮಾಲೋಚಕ ಸುರೇಶ ಕುಲಕರ್ಣಿ.

1970ರಲ್ಲಿ ಗ್ರಾಮೀಣ ಭಾಗದ ಕುಟುಂಬಗಳ ಒಟ್ಟು ಆದಾಯದಲ್ಲಿ ನಾಲ್ಕರಲ್ಲಿ ಮೂರನೇ ಭಾಗದಷ್ಟು ಕೃಷಿಯಿಂದ ಬರುತ್ತಿತ್ತು. 45 ವರ್ಷಗಳ ನಂತರ, 2015ರ ಹೊತ್ತಿಗೆ ಈ ಪ್ರಮಾಣವು ಮೂರನೇ ಒಂದಕ್ಕಿಂತಲೂ ಕಡಿಮೆ ಆಗಿತ್ತು. ಮತ್ತೊಂದು ಪ್ರಮುಖ ವಿಚಾರವೆಂದರೆ, ಕೃಷಿ ಆದಾಯದಲ್ಲಿಯೂ ಅತಿ ಸಣ್ಣ ಹಿಡುವಳಿದಾರರು, ಸಣ್ಣ ಹಿಡುವಳಿದಾರರು ಮತ್ತು ದೊಡ್ಡ ಹಿಡುವಳಿದಾರರ ನಡುವೆ ಭಾರಿ ಅಂತರ ಇದೆ ಎಂದು ಸಮೀಕ್ಷೆಯೊಂದು ಹೇಳಿದೆ.

ದೇಶದ ರೈತರಲ್ಲಿ ಶೇ 86ರಷ್ಟು ಮಂದಿ ಸಣ್ಣ ರೈತರಾಗಿರುವುದರಿಂದ (ಒಂದು ಹೆಕ್ಟೇರ್ಗಿಂತ ಕಡಿಮೆ ಇರುವವರು) ಕೃಷಿ ಅವಲಂಬಿತರ ಪೈಕಿ ಹೆಚ್ಚು ಮಂದಿ ಕಡಿಮೆ ಆದಾಯದಲ್ಲಿಯೇ ಬದುಕು ತ್ತಿದ್ದಾರೆ. ಇಂಥ ಸಂದರ್ಭಗಳಲ್ಲಿ ಕುಟುಂಬದ ವೆಚ್ಚಗಳನ್ನು ನಿಭಾಯಿಸಲು ರೈತ ಕುಟುಂಬಗಳು ಅನಿವಾರ್ಯವಾಗಿ ಸಾಲದ ಮೊರೆ ಹೋಗುತ್ತಿವೆ. ಸಮೀಕ್ಷೆಯ ಪ್ರಕಾರ, ಕೃಷಿ ಕುಟುಂಬಗಳ ಸಾಲದ ಪ್ರಮಾಣವು ಅವರ ತಿಂಗಳ ಆದಾಯಕ್ಕಿಂತ ಸುಮಾರು ಏಳು ಪಟ್ಟು ಹೆಚ್ಚಿದೆ. ಕೃಷಿ ಅಂದರೆ ಪ್ರತಿಫಲ ಇಲ್ಲದ ದುಡಿಮೆ ಮತ್ತು ಅದು ಗೌರವಯುತವಾದ ಕೆಲಸ ಅಲ್ಲ ಎನ್ನುವ ಭಾವನೆಯೂ ಅನೇಕ ಯುವಕರಲ್ಲಿದೆ.

‘ನಗರದಲ್ಲಿ ದುಡಿಯುವ ಯುವಕರಿಗೆ ಸಿಗುವ ಸಾಮಾಜಿಕ ಸ್ಥಾನಮಾನ ಹಳ್ಳಿಯಲ್ಲಿ ಕೆಲಸ ಮಾಡುವ ಯುವಕರಿಗೆ ಇಲ್ಲ. ಇದೇ ಕಾರಣಕ್ಕೆ ಯುವ ಪೀಳಿಗೆ ಕಡಿಮೆ ಸಂಬಳ ದೊರೆತರೂ, ನಗರಗಳತ್ತ ಮುಖ ಮಾಡುತ್ತಿದೆ. ಕೃಷಿ ಕೂಲಿ ಕಾರ್ಮಿಕರು ಕೃಷಿ ಕೆಲಸ ಬಿಟ್ಟು ನಗರಗಳಲ್ಲಿನ ಸಣ್ಣಪುಟ್ಟ ಕೆಲಸಗಳಿಗೆ ತೆರಳುತ್ತಿದ್ದಾರೆ’ ಎಂದು ಚನ್ನಗಿರಿಯ ರೈತ ಮುಖಂಡ ತೇಜಸ್ವಿ ಪಟೇಲ್ ವಿಶ್ಲೇಷಿಸುತ್ತಾರೆ.

ಭಾರತವು ಹೊಸ ಆರ್ಥಿಕ ನೀತಿಗಳನ್ನು ಅಳವಡಿಸಿಕೊಂಡ ನಂತರದ ಮೊದಲ ಎರಡು ದಶಕಗಳಲ್ಲಿ 1.5 ಕೋಟಿ ರೈತರು ಕೃಷಿಯಿಂದ ದೂರ ಸರಿದಿದ್ದಾರೆ. ದಿನಕ್ಕೆ 2,000 ರೈತರು ಬೇಸಾಯದಿಂದ ವಿಮುಖರಾಗುತ್ತಿದ್ದಾರೆ.

ಯುವಜನರ ಸಂಖ್ಯೆ ಇಳಿಮುಖ

ಗ್ರಾಮೀಣ ಭಾಗದ ಶೇ 60ರಷ್ಟು ಮಂದಿ ವ್ಯವಸಾಯದಿಂದಲೇ ಬದುಕುತ್ತಿದ್ದರೂ, ಶೇ 5ರಷ್ಟು ಗ್ರಾಮೀಣ ಯುವಕರು ಮಾತ್ರ ವ್ಯವಸಾಯದಲ್ಲಿ ತೊಡಗಿದ್ದಾರೆ. ದೇಶದಲ್ಲಿ ಯುವಜನರ ಸಂಖ್ಯೆ ಕುಸಿಯುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಯುವ ಕೃಷಿಕರ ಸಂಖ್ಯೆ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ. ಗ್ರಾಮೀಣ ಪ್ರದೇಶದ ಯುವಜನರು ಕೃಷಿಯಲ್ಲೂ ತೊಡಗುತ್ತಿಲ್ಲ. ಇನ್ನೊಂದೆಡೆ, ಅವರಿಗೆ ತಾವಿರುವ ಪ್ರದೇಶಗಳಲ್ಲಿ ಜೀವನೋಪಾಯದ ಆಯ್ಕೆಗಳು ಹೆಚ್ಚಾಗಿಲ್ಲ. ಇದು ಗ್ರಾಮೀಣ ಯುವಜನರ ನಿರುದ್ಯೋಗಕ್ಕೆ ಕಾರಣವಾಗುತ್ತಿದೆ.

ದೇಶದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯಗಳಾದ ಉತ್ತರ ಪ್ರದೇಶ ಮತ್ತು ಬಿಹಾರದಂಥ ರಾಜ್ಯಗಳ ಯುವಕರು ದೇಶದ ಬೇರೆ ಬೇರೆ ರಾಜ್ಯಗಳಿಗೆ ತೆರಳಿ ಕೂಲಿ ಕಾರ್ಮಿಕರಾಗಿ ಬದುಕುತ್ತಿರುವುದು ಇಂಥದ್ದೇ ಬೆಳವಣಿಗೆಯ ಫಲ. ಇದೇ ಕಾರಣಕ್ಕೆ 2030ರ ಹೊತ್ತಿಗೆ ಕೃಷಿಯೇತರ ವಲಯಗಳಲ್ಲಿ ವಾರ್ಷಿಕವಾಗಿ 78.5 ಲಕ್ಷ ಉದ್ಯೋಗ ಸೃಷ್ಟಿ ಮಾಡಬೇಕು ಎಂದು 2023–24ರ ಕೇಂದ್ರ ಸರ್ಕಾರದ ಆರ್ಥಿಕ ಸಮೀಕ್ಷೆಯೇ ಹೇಳಿದೆ. ಅವರನ್ನು ಯಾವ ವಲಯದಲ್ಲಿ ತೊಡಗಿಸಬೇಕು ಎನ್ನುವುದು ಸರ್ಕಾರದ ಮುಂದಿನ ದೊಡ್ಡ ಸವಾಲಾಗಿದೆ.

ಯುವಕರನ್ನು ಸೆಳೆಯುವುದು ಹೇಗೆ?

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೃಷಿ ಕ್ಷೇತ್ರವನ್ನು ಅಭಿವೃದ್ಧಿಯ ಎಂಜಿನ್ ಎಂದು 2025–26ರ ಬಜೆಟ್ನಲ್ಲಿ ಬಣ್ಣಿಸಿದ್ದರು. ಭಾರತವನ್ನು ವಿಶ್ವದ ಆಹಾರದ ಬುಟ್ಟಿಯನ್ನಾಗಿ (ಫುಡ್ ಬ್ಯಾಸ್ಕೆಟ್) ಮಾಡಬೇಕು ಎನ್ನುವ ಆಶಯವನ್ನೂ ವ್ಯಕ್ತಪಡಿಸಿ ದ್ದರು. ಆದರೆ, ಕೇಂದ್ರ ಸರ್ಕಾರದಿಂದಾಗಲಿ, ರಾಜ್ಯ ಸರ್ಕಾರದಿಂದಾಗಲಿ ನಿರ್ಣಾಯಕವಾದ ಕ್ರಮಗಳು ಆಗಿಲ್ಲ ಎಂದು ಪ್ರಗತಿಪರ ಕೃಷಿಕರು ಆರೋಪಿಸುತ್ತಿದ್ದಾರೆ.

‘ಕೃಷಿಯಿಂದ ಯುವಜನರು ದೂರವಾಗುವುದಕ್ಕೆ ಸರ್ಕಾರದ ನೀತಿ ಕಾರಣ. ಕೈಗಾರಿಕೆಗಳಿಗೆ ಪ್ರಾಧಾನ್ಯ ನೀಡುವ ಸರ್ಕಾರ ಕೃಷಿಯನ್ನು ಕಡೆಗಣಿಸಿದೆ. ಈ ಧೋರಣೆ ಮೊದಲು ಬದಲಾಗಬೇಕು. ವಿದ್ಯೆ ಕಲಿತವರೂ ಕೃಷಿಯತ್ತ ಆಕರ್ಷಿತರಾಗುವಂತೆ ನೀತಿ ರೂಪಿಸಬೇಕು’ ಎನ್ನುವುದು ಕೃಷಿ ತಜ್ಞ ಬಿ.ಕೆ. ದೇವರಾವ್ ಅವರ ಒತ್ತಾಯ.

ಒಂದು ಕಾಲಕ್ಕೆ ಪ್ರಕೃತಿಗೆ ಹತ್ತಿರವಾದ ಬದುಕಿನ ಶೈಲಿಯನ್ನೊಳಗೊಂಡಿದ್ದ ಕೃಷಿಯು ಇಂದು ಅತ್ಯಂತ ಸಂಕೀರ್ಣವಾದ ವೃತ್ತಿಯಾಗಿದೆ. ವ್ಯವಸಾಯ ಕ್ಷೇತ್ರ ಈ ಬಿಕ್ಕಟ್ಟಿನಿಂದ ಹೊರಬರಬೇಕಾದರೆ, ಸರ್ಕಾರದ ನೆರವು ಬೇಕು. ಮುಖ್ಯವಾಗಿ, ವ್ಯವಸಾಯ ಕ್ಷೇತಕ್ಕೆ ಹೆಚ್ಚು ಮಂದಿ ಯುವ, ಕೌಶಲಯುಕ್ತ ರೈತರ ಅಗತ್ಯವಿದೆ. ಯುವಜನರು ಕೃಷಿಯನ್ನು ನಂಬಿ ಘನತೆಯಿಂದ ಬದುಕಲು ಸಾಧ್ಯವಾಗುವಂಥ ವಾತಾವರಣ ನಿರ್ಮಿಸುವುದು ಮುಖ್ಯವಾಗಿದೆ.

‘ಸರ್ಕಾರಗಳು ಕೃಷಿಗೆ ಹೆಚ್ಚು ಒತ್ತು ಕೊಟ್ಟಿಲ್ಲ. ಅದಕ್ಕಾಗಿ ಯುವಕರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಬೇಸಾಯಕ್ಕೆ ಉತ್ತೇಜನ ಸಿಗಬೇಕು, ಅದರ ವಿವಿಧ ಆಯಾಮಗಳ ಬಗ್ಗೆ ಯುವಕರಿಗೆ ಪ್ರಾಯೋಗಿಕ ತರಬೇತಿ ನೀಡಬೇಕು’ ಎಂದು ಎಂ.ಎಸ್ಸಿ, ಎಂ.ಇಡಿ ಪದವೀಧರರಾಗಿರುವ ರಾಯಚೂರಿನ ಯುವ ರೈತ ಹರ್ಷಾ ಪೂರ್ತಿಪಲಿ ಹೇಳುತ್ತಾರೆ.

ಇಂದು ಜನರ ಜೀವನ ಶೈಲಿಯಲ್ಲಿ ಅಗಾಧವಾದ ಬದಲಾವಣೆಗಳಾಗಿವೆ. ಕುಟುಂಬಗಳ ವೆಚ್ಚದ ಪ್ರಮಾಣದಲ್ಲಿ ಆಹಾರದ ವೆಚ್ಚಕ್ಕಿಂತಲೂ ಇತರೆ ವೆಚ್ಚಗಳ ಪಾಲು ಹೆಚ್ಚಾಗುತ್ತಿದೆ. ತಾಂತ್ರಿಕತೆ ಮತ್ತು ತಾಂತ್ರಿಕ ಸಾಧನಗಳು ಜೀವನದ ಅವಿಭಾಜ್ಯ ಅಂಗವಾಗಿವೆ. ಮೊಬೈಲ್, ಟಿವಿ, ಫ್ರಿಜ್, ಬೈಕ್, ಕಾರು ಕೂಡ ಕುಟುಂಬದ ಅಗತ್ಯಗಳ ಸಾಲಿನಲ್ಲಿ ಸ್ಥಾನ ಪಡೆದಿವೆ. ಕೃಷಿಯಿಂದಲೂ ತಾವು ಬಯಸಿದ ಉತ್ತಮ ಜೀವನ ಸಾಧ್ಯ ಎಂದು ಭರವಸೆ ಮೂಡಿದರೆ ಯುವಕ ಯುವತಿಯರು ಕೃಷಿಯನ್ನು ಜೀವನ ಮಾರ್ಗವನ್ನಾಗಿ ಒಪ್ಪಿ, ಅಪ್ಪಿಕೊಂಡಾರು.

ಕೃಷಿಯು ಲಾಭದಾಯಕ ಎಂದು ಯುವ ಸಮುದಾಯಕ್ಕೆ ಮನವರಿಕೆಯಾದರೆ ಅವರು ಈ ಕ್ಷೇತ್ರಕ್ಕೆ ಬರಬಹುದು.
ರವೀಂದ್ರ ಗುಜ್ಜರಬೆಟ್ಟು, ಉಡುಪಿ ಜಿಲ್ಲಾ ಕೃಷಿಕ, ಸಂಘದ ಕಾರ್ಯದರ್ಶಿ

ಆರ್ಥಿಕವಾಗಿ ಸದೃಢರಾಗಿಸಬಲ್ಲ ಕೃಷಿ ಸಂಬಂಧಿತ ಕೈಗಾರಿಕೆಗಳು ಸ್ಥಾಪನೆಯಾದರೆ ರೈತರ ಮಕ್ಕಳು ಗುಳೇ ಹೋಗುವುದನ್ನು ತಡೆಯಬಹುದು.
ಕೆ.ಪಿ.ಭೂತಯ್ಯ, ರೈತ ಮುಖಂಡ, ದಾವಣಗೆರೆ

‘ಯಶೋಗಾಥೆ ಪರಿಚಯಿಸಿ’

ಕೃಷಿಯಲ್ಲಿ ತೊಡಗಿಕೊಂಡು ವರ್ಷಪೂರ್ತಿ ಆದಾಯ ಗಳಿಸುತ್ತಿರುವವರ ಯಶೋಗಾಥೆಗಳನ್ನು ಯುವಜನರಿಗೆ ಪರಿಚಯಿಸಬೇಕು. ಕೃಷಿಯಲ್ಲಿ ಲಾಭ ಗಳಿಸುವ ಕುರಿತು ಯುವಜನರಿಗೆ ತರಬೇತಿ ನೀಡಬೇಕು. ಅಲ್ಲದೇ ಉತ್ಪನ್ನಗಳ ಮೌಲ್ಯವರ್ಧನೆ ವಿಧಾನಗಳನ್ನು ತಿಳಿಸಬೇಕು; ಕೃಷಿ ಇಲಾಖೆ, ಸಂಸ್ಥೆಗಳು ಮಾದರಿಗಳ ಮೂಲಕ ತಿಳಿಸಬೇಕು. ಜೇನು, ಕುರಿ–ಕೋಳಿ ಸಾಕಣೆ, ಹೈನುಗಾರಿಕೆ ಇತ್ಯಾದಿ ಉಪಕಸಬುಗಳನ್ನು ನಿರ್ವಹಿಸುವುದರಿಂದ ಬೇಸಾಯವನ್ನು ಹೇಗೆ ಲಾಭದಾಯಕವನ್ನಾಗಿ ಮಾಡಿಕೊಳ್ಳಬಹುದು ಎನ್ನುವುದನ್ನು ತೋರಿಸಿಕೊಡಬೇಕು.

–ಸುರೇಶ ಕುಲಕರ್ಣಿ, ಸಮಾಲೋಚಕ, ನೆಲ–ಜಲ ನಿರ್ವಹಣೆ ಸಂಸ್ಥೆ, ಧಾರವಾಡ

‘ಸಮಗ್ರ ಕೃಷಿಗೆ ಯುವಕರನ್ನು ಸಜ್ಜುಗೊಳಿಸಬೇಕಿದೆ’

ಕೃಷಿ ಆಧಾರಿತ ಕೌಶಲ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಯುವಕರಿಗೆ ಹೆಚ್ಚು ಆಸಕ್ತಿ ಮೂಡಿಸಬೇಕು. ಸಮಗ್ರ ಕೃಷಿ ಪದ್ಧತಿಯತ್ತ ಯುವಕರನ್ನು ಸೆಳೆಯಲು ತರಬೇತಿ ಮೂಲಕ ಪ್ರೇರೇಪಿಸಬೇಕು. ಕೃಷಿ ಆಧಾರಿತ ಆಹಾರ ಸಂಸ್ಕರಣೆ ಘಟಕ ಆರಂಭಿಸಲು ಉತ್ತೇಜನ ನೀಡಬೇಕು.

ಕೃಷಿ ಯಂತ್ರೋಪಕರಣ ಖರೀದಿಸಲು ಸರ್ಕಾರ ಯುವಕರಿಗೆ ಸಾಲ ಸೌಲಭ್ಯ ಒದಗಿಸಬೇಕು. ಕೃತಕ ಬುದ್ಧಿಮತ್ತೆಗೆ ಆದ್ಯತೆ ಕೊಡಬೇಕು. ಡ್ರೋನ್ ತರಬೇತಿ, ತೋಟಗಾರಿಕೆ ಸಂರಕ್ಷಿತ ಕೃಷಿ ತರಬೇತಿ ಕೊಡಬೇಕು. ತಾಲ್ಲೂಕು ಮಟ್ಟದಲ್ಲಿ ಸಿರಿಧಾನ್ಯಗಳ ಸಂಸ್ಕರಣ ಘಟಕಗಳ ಸ್ಥಾಪನೆ ಮಾಡಬೇಕು.

–ಬಸವಣ್ಣೆಪ್ಪ ಎಂ.ಎ., ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ
ಸಾವಯವ ಕೃಷಿ ಸಂಶೋಧನಾ ಸಂಸ್ಥೆಯ ಮುಖ್ಯಸ್ಥ

‘ಕೃಷಿಯಲ್ಲಿ ಯಾವುದೂ ಗ್ಯಾರಂಟಿ ಇಲ್ಲ’

ಯುವಕರು ವ್ಯವಸಾಯದಿಂದ ದೂರ ಉಳಿಯಲು ಪ್ರಮುಖ ಕಾರಣ ಬೆಳೆದ ಬೆಳೆಗೆ ಸರಿಯಾಗಿ ಬೆಲೆ ಸಿಗದಿರುವುದು. ನಾನು ನಾಲ್ಕು ಎಕರೆಯಲ್ಲಿ ಹಸಿ ಮೆಣಸಿನಕಾಯಿ ಬೆಳೆದಿದ್ದೇನೆ. ಈಗ ಧಾರಣೆ ಬಿದ್ದು ಹೋಗಿದೆ. ಹಾಕಿದ ಬಂಡವಾಳವೂ ವಾಪಸ್ ಬರುತ್ತಿಲ್ಲ. ದುಡ್ಡು ಕೊಟ್ಟರೂ ಕೂಲಿ ಕಾರ್ಮಿಕರು ಸಿಗಲ್ಲ. ಸಿಕ್ಕರೂ ಹೆಚ್ಚು ಹಣ ಕೇಳುತ್ತಾರೆ. ಔಷಧಿ, ಗೊಬ್ಬರ ದರ, ಟ್ರ್ಯಾಕ್ಟರ್ ಬಾಡಿಗೆ ಹೆಚ್ಚಾಗಿದೆ. ಹೀಗಾಗಿ, ಯುವಕರು, ರೈತ ಕುಟುಂಬದವರು ಜಮೀನು ಪಾಳು ಬಿಟ್ಟು ಬೆಂಗಳೂರು, ನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಹೋಗಿ ಕಾರ್ಖಾನೆಗಳಲ್ಲಿ ಸಣ್ಣಪುಟ್ಟ ಕೆಲಸ ಮಾಡುತ್ತಿದ್ದಾರೆ.

ಉದ್ಯೋಗದಲ್ಲಿ ತಿಂಗಳ ಅಂತ್ಯದಲ್ಲಿ ವೇತನ ಗ್ಯಾರಂಟಿ ಇರುತ್ತದೆ. ಆದರೆ, ವ್ಯವಸಾಯದಲ್ಲಿ ಯಾವುದೂ ಗ್ಯಾರಂಟಿ ಇಲ್ಲ. ಬದಲಾಗಿ ನಷ್ಟ ಮಾಡಿಕೊಂಡು ಸಾಲದ ಸುಳಿಯಲ್ಲಿ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ. ಮಳೆ ಬಂದರೂ ಕಷ್ಟ, ಬಿಸಿಲು ಇದ್ದರೂ ಕಷ್ಟ. ಸರ್ಕಾರವಾಗಲಿ, ಸಂಘ ಸಂಸ್ಥೆಗಳಾಗಲಿ ನಮ್ಮ ನೆರವಿಗೆ ಯಾರೊಬ್ಬರೂ ಬರುತ್ತಿಲ್ಲ.

–ಸತೀಶ್, ರೈತ, ಹುತ್ತೂರು, ಕೋಲಾರ ಜಿಲ್ಲೆ

ಯುವಜನರು ಕೃಷಿ ತೊರೆಯಲು ಕಾರಣಗಳು

ಅತಿವೃಷ್ಟಿ, ಅನಾವೃಷ್ಟಿ, ರೋಗಬಾಧೆ ಮತ್ತಿತರ ಕಾರಣಗಳಿಂದ ಬೆಳೆ ಕೈಗೆ ಹತ್ತದಿರುವುದು

ಕಷ್ಟಪಟ್ಟು ಬೆಳೆದ ಬೆಳೆಗೆ ಮಾರುಕಟ್ಟೆ ವ್ಯವಸ್ಥೆ ಇಲ್ಲದೇ, ಸೂಕ್ತ ಬೆಲೆ ಸಿಗದಿರುವುದು

ಇತರೆ ಉದ್ಯೋಗಗಳಿಗೆ ಹೋಲಿಸಿದರೆ, ಕೃಷಿ ಆಕರ್ಷಕ ಆಯ್ಕೆಯಾಗಿ ಉಳಿಯದೇ ಇರುವುದು

ಸಾಮಾಜಿಕವಾಗಿ ಕೃಷಿಕರ ಸ್ಥಾನಮಾನ ಕುಸಿದಿರುವುದು

ಅತಿ ಹೆಚ್ಚು ದೈಹಿಕ ದುಡಿಮೆ, ಅತಿ ಹೆಚ್ಚು ಅನಿಶ್ಚಿತತೆ ಇರುವುದು

ಯುವಜನರನ್ನು ಕೃಷಿಯತ್ತ ಸೆಳೆಯಲು ಮಾಡಬೇಕಿರುವುದೇನು?

ಕೃಷಿಯನ್ನು ಲಾಭದಾಯಕ ವೃತ್ತಿಯನ್ನಾಗಿ ಮಾರ್ಪಡಿಸುವುದು

ಸರ್ಕಾರದಿಂದ ಕೃಷಿ ಮತ್ತು ಕೃಷಿಕರಿಗೆ ಹೆಚ್ಚು ಉತ್ತೇಜನ

ಯುವಕೇಂದ್ರಿತ ಯೋಜನೆಗಳ ಮೂಲಕ ಕೃಷಿಕರನ್ನು ಕೃಷಿ ಉದ್ಯಮಿಗಳನ್ನಾಗಿ ಮಾಡುವುದು

ಮೌಲ್ಯವರ್ಧನೆಯ ಮೂಲಕ ಕೃಷಿ ಉತ್ಪನ್ನಗಳ ಬೆಲೆ, ಮಾರುಕಟ್ಟೆ ಹೆಚ್ಚಿಸುವುದು

ಯುವಜನರ ಅಗತ್ಯ, ಆಸೆ, ಆಶಯಗಳಿಗೆ ತಕ್ಕಂತೆ ಕೃಷಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ನೀತಿ ನಿಯಮ ರೂಪಿಸುವುದು

ಹಿಡುವಳಿ ಮತ್ತು ರೈತರ ವಯಸ್ಸು

ಅತಿ ಸಣ್ಣ ಹಿಡುವಳಿದಾರರ ಸರಾಸರಿ ವಯಸ್ಸು (1 ಹೆಕ್ಟೇರ್ಗಿಂತ ಕಡಿಮೆ): 50.39

ಸಣ್ಣ ಹಿಡುವಳಿದಾರರ ಸರಾಸರಿ ವಯಸ್ಸು (1–2 ಹೆಕ್ಟೇರ್): 50.39

ಅರೆಮಧ್ಯಮ ಹಿಡುವಳಿದಾರರ ಸರಾಸರಿ ವಯಸ್ಸು (2–4 ಹೆಕ್ಟೇರ್): 51.21

ಮಧ್ಯಮ ಹಿಡುವಳಿದಾರರ ಸರಾಸರಿ ವಯಸ್ಸು (4–10 ಹೆಕ್ಟೇರ್): 51.92

ದೊಡ್ಡ ಹಿಡುವಳಿದಾರರ ಸರಾಸರಿ ವಯಸ್ಸು (10ಕ್ಕಿಂತ ಹೆಚ್ಚು ಹೆಕ್ಟೇರ್): 52.95

ಪರಿಕಲ್ಪನೆ: ಯತೀಶ್ ಕುಮಾರ್ ಜಿ.ಡಿ

ಪೂರಕ ಮಾಹಿತಿ: ರಾಯಚೂರಿನಿಂದ ಚಂದ್ರಕಾಂತ ಮಸಾನಿ, ಮಂಗಳೂರಿನಿಂದ ಉದಯ.ಯು, ಉಡುಪಿಯಿಂದ ನವೀನ್ಕುಮಾರ್, ಧಾರವಾಡದಿಂದ ಧನ್ಯಪ್ರಸಾದ್, ಕೋಲಾರದಿಂದ ಕೆ.ಓಂಕಾರ ಮೂರ್ತಿ, ದಾವಣಗೆರೆಯಿಂದ ಯೋಗೇಶ್ ಎಂ.ಎನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.