ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಸಾಧಕಿಯರು | ದಲಿತ ಚಳವಳಿಯ ಪ್ರಭಾವ; ಹೋರಾಟದ ಕೆಚ್ಚು

Published 8 ಮಾರ್ಚ್ 2024, 0:30 IST
Last Updated 8 ಮಾರ್ಚ್ 2024, 0:30 IST
ಅಕ್ಷರ ಗಾತ್ರ

‘ನಮ್ಮ ಗುರುತುಗಳು ನಮಗೆ ಅಡಚಣೆ ಆಗಬಾರದು. ಸಾಧಿಸುವ ಬಗ್ಗೆ ನಂಬಿಕೆ ಇರಬೇಕು. ಆ ಹಟವಿದ್ದರೆ ಯಾರೂ ನಮ್ಮನ್ನು ತಡೆಯಲು ಆಗಲ್ಲ...’

ಇದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ (ಯುಎನ್‌ಎಚ್‌ಆರ್‌ಸಿ) ವಿಷಯ ತಜ್ಞೆಯಾಗಿ ಕೆಲಸ ಮಾಡುತ್ತಿರುವ ಕರ್ನಾಟಕದ ಕೆ.ಪಿ.ಅಶ್ವಿನಿ ಅವರ ಮಾತು.

ಕೋಲಾರ ಜಿಲ್ಲೆಯ ಕುರುಬರಹಳ್ಳಿ ಗ್ರಾಮದ ಇವರು ದಲಿತ ಚಳವಳಿಯ ಹಿನ್ನೆಲೆಯ ಕುಟುಂಬದಿಂದ ಬಂದವರು. ಜಾತಿ ವಿರೋಧಿ ಹಾಗೂ ಮಹಿಳಾ ಪರ ಚಳವಳಿಗಳಲ್ಲಿ ಹೆಚ್ಚು ತೊಡಗಿಸಿಕೊಂಡವರು. ಇವರ ಮನೆಯಲ್ಲಿ ನಡೆಯುತ್ತಿದ್ದ ಚರ್ಚೆಗಳು, ತಂದೆ ವಿ.ಪ್ರಸನ್ನಕುಮಾರ್‌ ಅವರಿಗಿದ್ದ ದಲಿತ ಚಳವಳಿಯ ಒಡನಾಟ, ಇವರ ಮನೆಗೆ ಭೇಟಿ ನೀಡುತ್ತಿದ್ದ ಕೋಟಿಗಾನಹಳ್ಳಿ ರಾಮಯ್ಯ ಅವರಂಥ ಸಾಹಿತಿಗಳು, ದಲಿತ ಮುಖಂಡರು, ಹೋರಾಟಗಾರರ ಜೊತೆಗಿನ ಸಂವಾದ ಇತ್ಯಾದಿ ಅಂಶಗಳು ಮನಸ್ಸಿನ ಮೇಲೆ ಗಾಢ ಪ್ರಭಾವ ಬೀರಿದವು. ಬಾಲ್ಯದಲ್ಲೇ ಅಂಬೇಡ್ಕರ್‌ ಕುರಿತ ಓದು, ಸಿನಿಮಾ, ಸಾಮಾಜಿಕ ವಿಚಾರಗಳ ಬಗ್ಗೆ ಆಸಕ್ತಿ ಚಿಗುರೊಡೆಯಲು ಕಾರಣವಾದವು.

ಆನಂತರ, ನವದೆಹಲಿಯ ಪ್ರತಿಷ್ಠಿತ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ (ಜೆಎನ್‌ಯು) ಪಡೆದ ವ್ಯಾಸಂಗ ಹೋರಾಟದ ಕೆಚ್ಚು ಹೆಚ್ಚಿಸಿತು. ಯುನೈಟೆಡ್‌ ದಲಿತ್‌ ಸ್ಟೂಡೆಂಟ್‌ ಫ್ರಂಟ್‌ ಸದಸ್ಯೆ, ಬಿರ್ಸಾ ಅಂಬೇಡ್ಕರ್‌ ಫುಲೆ ಸ್ಟೂಡೆಂಟ್‌ ಅಸೋಸಿಯೇಷನ್‌ ಸಂಸ್ಥಾಪಕ ಸದಸ್ಯೆಯಾಗಿದ್ದರು. ಅಲ್ಲಿನ ವಿದ್ಯಾರ್ಥಿ ಹೋರಾಟಗಳಲ್ಲಿ ಪಾಲ್ಗೊಂಡಿದ್ದು, ಇವರ ಹೋರಾಟದ ಮನೋಭಾವಕ್ಕೆ ಸಾಣೆ ಹಿಡಿಯಿತು.

ಸಾಹಸಿ ಮನೋವೃತ್ತಿ ಇರುವ ಯುವತಿ ಅಶ್ವಿನಿ. ಏನಾದರೂ ಸಾಧನೆ ಮಾಡಬೇಕೆಂಬ ಗುರಿ ಅವರದ್ದು. ‘ಶಿಕ್ಷಣ ಪಡೆಯುವುದು ಎಂದರೆ 100ಕ್ಕೆ 100 ಅಂಕ ಪಡೆಯುವುದಷ್ಟೇ ಅಲ್ಲ. ಶಿಕ್ಷಣ ಎಂದರೆ ಮನುಷ್ಯತ್ವದ ಕಣ್ಣಿನಿಂದ ನೋಡುವ ಕ್ರಮ, ಜ್ಞಾನ ಪಡೆದುಕೊಳ್ಳುವ ಕ್ರಿಯೆ. ಜ್ಞಾನವೇ ಶಕ್ತಿ. ಸಾವಿತ್ರಿಬಾಯಿ ಫುಲೆ, ಜ್ಯೋತಿ ಬಾಫುಲೆ, ಡಾ.ಬಿ.ಆರ್‌.ಅಂಬೇಡ್ಕರ್‌ ಚಿಂತನೆಗಳನ್ನು ಓದುವುದು ಬಹಳ ಮುಖ್ಯ’ ಎಂದು ಅಶ್ವಿನಿ ಪ್ರತಿಪಾದಿಸುತ್ತಾರೆ.

‘ಕೋಲಾರ ಜಿಲ್ಲೆಯ ವ್ಯಕ್ತಿ ಎನ್ನಲು ನನಗೆ ಬಹಳ ಹೆಮ್ಮೆ ಇದೆ. ದಲಿತ ಸಮುದಾಯದಿಂದ ಹಲವು ಅಧಿಕಾರಿಗಳು ಈ ಜಿಲ್ಲೆಯಿಂದ ಬಂದಿದ್ದಾರೆ. ದಲಿತ ಚಳವಳಿಗೆ ಮಹತ್ತರ ಕೊಡುಗೆಯನ್ನೂ ನೀಡಿದೆ. ಕೆಜಿಎಫ್‌ಗೆ ಅಂಬೇಡ್ಕರ್ ಭೇಟಿ ನೀಡಿದ್ದರು. ನನ್ನ ಪೋಷಕರು ದಲಿತ ಚಳವಳಿಯಲ್ಲಿ ಇದ್ದವರು. ಇಂಥ ಶ್ರೀಮಂತ ದಲಿತ ಚಳವಳಿಯ ಕುಟುಂಬದಲ್ಲಿ ಬೆಳೆದಿರುವುದಕ್ಕೆ ಖುಷಿ ಇದೆ’ ಎನ್ನುತ್ತಾರೆ.

ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ದಲಿತರು, ಮಹಿಳೆಯರು, ಬಡವರ ಸಮಸ್ಯೆಗಳಿಗೆ ಪರಿಹಾರ ನೀಡಲು ಸಾಧ್ಯವಾಗಿಲ್ಲ. ಅನೇಕ ಕ್ಷೇತ್ರದಲ್ಲಿ ಇಲ್ಲಿಯವರೆಗೆ ಪ್ರವೇಶ ಮಾಡಲೂ ಸಾಧ್ಯವಾಗಿಲ್ಲ. ಅಂಥದ್ದರಲ್ಲಿ ಅಶ್ವಿನಿ ಯುಎನ್‌ಎಚ್‌ಆರ್‌ಸಿ ವಿಷಯ ತಜ್ಞೆಯಾಗಿ ಕೆಲಸ ಮಾಡುವ ಅವಕಾಶ ಗಿಟ್ಟಿಸಿಕೊಂಡು ಜಾತಿ ತಾರತಮ್ಯ, ಜನಾಂಗೀಯ ಭೇದ, ವರ್ಣಭೇದ ನೀತಿ, ಲಿಂಗಭೇದ ನೀತಿ, ಬುಡಕಟ್ಟು ಸಮುದಾಯದವರ ಮೇಲಿನ ದೌರ್ಜನ್ಯ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ.

ಇವರ ಕೆಲಸ ಭಾರತ ಅಥವಾ ಒಂದು ದೇಶಕ್ಕೆ ಸೀಮಿತವಾಗಿಲ್ಲ. ವಿಶ್ವದ ಯಾವುದೇ ಭಾಗದಲ್ಲಿ ಭೇದಭಾವ ಕಾಣಿಸಿದರೂ ಅಲ್ಲಿ ಹೋಗಿ ಕೆಲಸ ಮಾಡಬೇಕಾಗಿದೆ.

‘ನನ್ನ ಯಶಸ್ಸಿಗೆ ಅಂಬೇಡ್ಕರ್ ಆಶಯ ಮತ್ತು ಆದರ್ಶಗಳೇ ಕಾರಣ. ಆ ದಿಸೆಯಲ್ಲಿ ಅವರ ಆದರ್ಶ ಹಾಗೂ ಭಾರತದ ಸಂವಿಧಾನದ ಉದ್ದೇಶ ಜಾರಿ ಮಾಡಲು ಜಾಗತಿಕ ಮಟ್ಟದ ವೇದಿಕೆಯಲ್ಲಿ ಚರ್ಚಿಸುತ್ತೇನೆ. ಜಾತಿ, ವರ್ಣ ವ್ಯವಸ್ಥೆಯೊಳಗಿನ ಲಿಂಗ ತಾರತಮ್ಯದ ಬಗ್ಗೆ ಗಟ್ಟಿ ಧ್ವನಿ ಎತ್ತುವ ಬಯಕೆ ಇದೆ’ ಎಂದು ಹೇಳುತ್ತಾರೆ.

‘ಮೀಸಲಾತಿ ಬಗ್ಗೆ ನಗರ ಪ್ರದೇಶದ ಜನರ ಮನೋಭಾವ, ಅಪಸ್ವರ ಹಾಗೂ ಅವರ ಕುಹಕ ಮಾತುಗಳು ಬೇಸರ ತರಿಸುತ್ತವೆ. ನಾನು ವಿದ್ಯಾರ್ಥಿಯಾಗಿದ್ದಾಗಲೂ ಆ ಮಾತು ಕೇಳಿದ್ದೇನೆ, ನಂತರ ಉಪನ್ಯಾಸಕಿಯಾಗಿ ಕೆಲಸ ಮಾಡುವಾಗಲೂ ಈ ವಿಚಾರ ಪದೇಪದೇ ನನ್ನ ಕಿವಿಗೆ ಅಪ್ಪಳಿಸುತ್ತಿತ್ತು. ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದಾಗ ಪರಿಶಿಷ್ಟ ಜಾತಿಯವಳು ಎಂಬ ಕಾರಣಕ್ಕೆ ಕಾಲೇಜುವೊಂದರಲ್ಲಿ ನನ್ನ ಗುತ್ತಿಗೆ ನವೀಕರಿಸಲಿಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

ವಿಶ್ವಸಂಸ್ಥೆಯಲ್ಲಿ ಕನ್ನಡತಿ

ಕನ್ನಡತಿ ಕೆ.ಪಿ.ಅಶ್ವಿನಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ (ಯುಎನ್‌ಎಚ್‌ಆರ್‌ಸಿ) ವಿಷಯ ತಜ್ಞೆಯಾಗಿ (Special Rapporteur–SR) ಕೆಲಸ ಮಾಡುತ್ತಿದ್ದಾರೆ.

2022ರ ನ. 1ರಂದು ಅಧಿಕಾರ ಸ್ವೀಕರಿಸಿದ್ದು, ಈ ಹುದ್ದೆಗೆ ನೇಮಕವಾದ ಏಷ್ಯಾದ ಮತ್ತು ಭಾರತದ ಮೊದಲ ವ್ಯಕ್ತಿ. ಈ ಆಯ್ಕೆ ಪ್ರಕ್ರಿಯೆ ಕಠಿಣವಾಗಿತ್ತು. ಅವರ ಪ್ರಾತಿನಿಧ್ಯವನ್ನು 45 ದೇಶಗಳು ಅನುಮೋದಿಸಿವೆ.

ಜಾತಿ ತಾರತಮ್ಯ, ವರ್ಣಭೇದ ನೀತಿ ವಿಚಾರವಾಗಿ ಅವರು ಕೆಲಸ ಮಾಡುತ್ತಿದ್ದಾರೆ. ವಿವಿಧ ದೇಶಗಳಿಗೆ ತೆರಳಿ ಅಲ್ಲಿನ ಸ್ಥಿತಿಗತಿ ಅಧ್ಯಯನ ಮಾಡಿ ವರದಿ ಸಲ್ಲಿಸುತ್ತಾರೆ. ಈಗಾಗಲೇ ಅಮೆರಿಕದಲ್ಲಿ ವರ್ಣಭೇದ ನೀತಿ, ಜಾತಿ ತಾರತಮ್ಯ ಕುರಿತು ಅಧ್ಯಯನ ನಡೆಸಿದ್ದು, ವರದಿ ಸಲ್ಲಿಸಿದ್ದಾರೆ. ‘ಆನ್‌ಲೈನ್‌ನಲ್ಲಿ ದ್ವೇಷ ಭಾಷಣ’ ಕುರಿತ ವರದಿಯನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಗೆ ಮಂಡಿಸಿದ್ದಾರೆ. ‘ಕೃತಕ ಬುದ್ಧಿಮತ್ತೆ ಹಾಗೂ ವರ್ಣಭೇದ ನೀತಿ’ ಕುರಿತ ವರದಿಯನ್ನು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಗೆ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ವರ್ಣಭೇದ ನೀತಿ, ಜಾತಿ ತಾರತಮ್ಯ ಕುರಿತು ಜೆಎನ್‌ಯುನಲ್ಲಿ ಶೈಕ್ಷಣಿಕ ಸಂಶೋಧನೆ (ಎಂ‌.ಫಿಲ್‌, ಪಿ.ಎಚ್‌ಡಿ) ಮಾಡಿದ್ದಾರೆ. ಅಂತರರಾಷ್ಟ್ರೀಯ ದೃಷ್ಟಿಕೋನದಲ್ಲಿ ಭಾರತ ಹಾಗೂ ನೇಪಾಳದಲ್ಲಿ ದಲಿತರ ಹಕ್ಕುಗಳು ಕುರಿತ ಅಧ್ಯಯನ ಅವರ ಸಂಶೋಧನೆ ವಿಷಯ. ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಸಂಸ್ಥೆಯಲ್ಲಿ ಎರಡು ವರ್ಷ ಕಾರ್ಯ ನಿರ್ವಹಿಸಿದ್ದಾರೆ. ಛತ್ತೀಸಗಡ ಹಾಗೂ ಒಡಿಶಾ ರಾಜ್ಯಗಳ ಆದಿವಾಸಿಗಳ ಮೇಲೆ ಅಲ್ಲಿಯ ಗಣಿಗಾರಿಕೆಯಿಂದ ಆದ ಪರಿಣಾಮಗಳ ಬಗ್ಗೆ ವಿಶೇಷ ಆಧ್ಯಯನ ಮಾಡಿದ್ದಾರೆ. ಆದಿವಾಸಿಗಳ ಹೋರಾಟದಲ್ಲಿ ಕೈ ಜೋಡಿಸಿ ಕಾನೂನು ನೆರವು ನೀಡಿದ್ದಾರೆ.

ಇವರ ತಂದೆ ಸರ್ಕಾರಿ ಉದ್ಯೋಗಿಯಾಗಿದ್ದರಿಂದ ಶಿಕ್ಷಣ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಆಗಿದೆ. ರಾಮನಗರ, ಕೊಡಗು, ತುಮಕೂರು, ಹಾಸನ, ಮೈಸೂರು, ಮಂಗಳೂರು, ಕಲಬುರಗಿ ಹೀಗೆ ಹಲವೆಡೆ ಓದಿದ್ದಾರೆ. ಪದವಿಯನ್ನು ಬೆಂಗಳೂರಿನ ಮೌಂಟ್‌ ಕಾರ್ಮೆಲ್‌ ಕಾಲೇಜಿನಲ್ಲಿ, ಸ್ನಾತಕೋತ್ತರ ಪದವಿಯನ್ನು ರಾಜ್ಯಶಾಸ್ತ್ರ ವಿಷಯದಲ್ಲಿ ಸೇಂಟ್‌ ಜೋಸೆಫ್ಸ್ ಕಾಲೇಜಿನಲ್ಲಿ ಚಿನ್ನದ ಪದಕದೊಂದಿಗೆ ಪೂರೈಸಿದರು.

ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜು ಹಾಗೂ ಸೇಂಟ್‌ ಜೋಸೆಫ್ಸ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ನಿವೃತ್ತ ಕೆಎಎಸ್‌ ಅಧಿಕಾರಿ ವಿ.ಪ್ರಸನ್ನ ಕುಮಾರ್ ಹಾಗೂ ಜಯಮ್ಮ ಅಶ್ವಿನಿ ಪೋಷಕರು. ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

__________________________________________________________________

ಇನ್ನಷ್ಟು ಲೇಖನಗಳನ್ನು ಇಲ್ಲಿ ಓದಿ... ಪ್ರಜಾವಾಣಿ ಸಾಧಕಿಯರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT