ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಸಾಧಕಿಯರು | ಪಕ್ಷಿಗಳ ‘ಜೀವದಾತೆ’ ಗೌರಿ...

Published 8 ಮಾರ್ಚ್ 2024, 0:30 IST
Last Updated 8 ಮಾರ್ಚ್ 2024, 0:30 IST
ಅಕ್ಷರ ಗಾತ್ರ

ಬೆಂಗಳೂರಿನಲ್ಲಿ ಕೇಬಲ್‌ಗೆ ಸಿಲುಕಿದ್ದ ಪಕ್ಷಿಯೊಂದು ‘ಗರಿ’ ಕಳೆದುಕೊಂಡು ಉದ್ಯಾನದಲ್ಲಿ ಬಿದ್ದು ನರಳುತ್ತಿತ್ತು. ಮೇಲಕ್ಕೆ ಹಾರಲು ಅಸಾಧ್ಯವಾಗಿತ್ತು. ಆ ಪಕ್ಷಿಯನ್ನು ಮನೆಗೆ ತಂದು ಆರೈಕೆ ಮಾಡಿದರೂ ಚೇತರಿಕೆ ಕಾಣಲಿಲ್ಲ. ನೀರನ್ನೂ ಗುಟುಕಿಸಲಿಲ್ಲ; ನಿತ್ರಾಣಗೊಂಡ ಪಕ್ಷಿಯನ್ನು ಕಂಡ ಅವರು ಮನಸ್ಸಿನಲ್ಲೇ ಮರುಕಪಟ್ಟರು.

ಸ್ನೇಹಿತರೊಬ್ಬರ ನೆರವು ಪಡೆದು, ಕೆಂಗೇರಿಯ ಪೀಪಲ್ಸ್‌ ಫಾರ್‌ ಅನಿಮಲ್‌ಗೆ (ಪಿಎಫ್‌ಎ–ವನ್ಯಜೀವಿಗಳ ಆಸ್ಪತ್ರೆ) ಕರೆ ಮಾಡಿ, ಪಕ್ಷಿಯ ಸ್ಥಿತಿಗತಿ ವಿವರಿಸಿದರು. ಸ್ಥಳಕ್ಕೆ ಬಂದ ಪಿಎಫ್‌ಎ ‌ಸಿಬ್ಬಂದಿ ಪಕ್ಷಿಯನ್ನು ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆ ನೀಡಿದರು. ಎರಡು ದಿನಗಳ ಬಳಿಕ ಆ ಪಕ್ಷಿ ಮೊದಲಿನಂತೆಯೇ ‘ಗರಿಬಿಚ್ಚಿ’ ಹಾರಾಟ ನಡೆಸಿತ್ತು.

ಮತ್ತೊಂದು ಘಟನೆ; ಧೋ... ಎಂದು ಬಿರುಗಾಳಿಯೊಂದಿಗೆ ಮಳೆ ಸುರಿಯುತ್ತಿತ್ತು. ಬಿರುಗಾಳಿಗೆ ಬೆದರಿದ ಪಕ್ಷಿಗಳು ಅತ್ತಿತ್ತ ಹಾರಾಡುತ್ತಿದ್ದವು. ಬಿರುಗಾಳಿಯ ಹೊಡೆತದಿಂದ ಕೆಲವು ಪಕ್ಷಿಗಳ ರೆಕ್ಕೆಗೆ ಪೆಟ್ಟು ಬಿದ್ದಿತ್ತು. ಕೆಲವು ಹಕ್ಕಿಗಳು ಗರಿ ಕಳೆದುಕೊಂಡು ಹಾರಲಾಗದ ಸ್ಥಿತಿಗೆ ತಲುಪಿದ್ದವು. ಅವುಗಳ ಸಂಕಷ್ಟ ನೋಡಲು ಆಗುತ್ತಿರಲಿಲ್ಲ. ಆ ಪಕ್ಷಿಗಳ ಆರೈಕೆ ಮಾಡಿ ಬದುಕಿಸಿದ್ದರು.

ಸಾಫ್ಟ್‌ವೇರ್‌ ಎಂಜಿನಿಯರ್ ಗೌರಿ ಶಿವಯೋಗಿ, ಹೀಗೆ ಸಂಕಷ್ಟದಲ್ಲಿ ಸಿಲುಕಿದ್ದ ನೂರಾರು ಪಕ್ಷಿಗಳಿಗೆ ಎರಡು ದಶಕಗಳಿಂದ ಆರೈಕೆ ಮಾಡಿದ್ದಾರೆ. ಕೆಲವು ಪಕ್ಷಿಗಳಿಗೆ ಮರುಜೀವ ನೀಡಿದ್ದಾರೆ. ವೈದ್ಯ ತಂಡದ ಜೊತೆಗೂಡಿ ಮಾನವೀಯ ಕೆಲಸ ಮಾಡುತ್ತಿದ್ದಾರೆ. ಇವರ ಸಾಮಾಜಿಕ ಕಾರ್ಯದಿಂದ ಪ್ರೇರಣೆ ಪಡೆದು ಬೆಂಗಳೂರಿನ ಹಲವು ಬಡಾವಣೆ ಮಕ್ಕಳು, ಹಿರಿಯರೂ ಪಕ್ಷಿಗಳ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.

ಶಿವಪ್ಪ–ಶಶಿಕಲಾ ಅವರ ಪುತ್ರಿ ಗೌರಿ ಅವರಿಗೆ ಬಾಲ್ಯದಿಂದಲೂ ಪಕ್ಷಿಗಳ ಮೇಲೆ ಪ್ರೀತಿ, ಕಾಳಜಿ. ಗೌರಿ ಅವರ ಪತಿ, ಸಾಫ್ಟ್‌ವೇರ್‌ ಎಂಜಿನಿಯರ್‌ ಶಿವಯೋಗಿ ಸಹ ಈ ಮಾನವೀಯ ಕೆಲಸಕ್ಕೆ ಬೆಂಬಲ ನೀಡುತ್ತಿದ್ದಾರೆ. ಗೌರಿ ಅವರ ತಂದೆ ಉತ್ತರಕನ್ನಡ ಜಿಲ್ಲೆಯ ಕಾರವಾರ, ಯಲ್ಲಾಪುರ, ದಾಂಡೇಲಿ ಭಾಗದಲ್ಲಿ ಎಂಜಿನಿಯರ್‌ ಆಗಿ ಕೆಲಸ ಮಾಡಿದ್ದರು. ಕಾಡಿನ ಪರಿಸರದಲ್ಲಿದ್ದ ಗೌರಿಯವರಿಗೆ ಪಕ್ಷಿಗಳ ಮೇಲೆ ಆಗಲೇ ಪ್ರೀತಿ ಬೆಳೆಯಿತು. ಪ್ರೀತಿ ಕಾಳಜಿಯತ್ತ ತಿರುಗಿತು. ವಿದ್ಯಾಭ್ಯಾಸ ಮುಗಿಸಿ, ಬೆಂಗಳೂರಿಗೆ ಬಂದು ಸಾಫ್ಟ್‌ವೇರ್‌ ವೃತ್ತಿಗೆ ಸೇರಿದ ಮೇಲೆಯೂ ‘ಪಕ್ಷಿ ಕಾಳಜಿ’ ಮುಂದುವರಿಯಿತು.

ಬೆಂಗಳೂರಿನಲ್ಲಿ ವಿವಿಧ ಕಾರಣಗಳಿಂದ ಪಕ್ಷಿಗಳು ಅಘಡಕ್ಕೆ ಸಿಲುಕಿ ಸಂಕಟ ಅನುಭವಿಸುತ್ತಿದ್ದುದನ್ನು ಕಂಡು, ತಾವೂ ನೋವನ್ನು ಅನುಭವಿಸಿದ್ದಾರೆ. ಬೆಂಗಳೂರಲ್ಲಿ ಎಲ್ಲೇ ಪಕ್ಷಿಗಳು ಸಮಸ್ಯೆಗೆ ಸಿಲುಕಿದ್ದು ತಿಳಿದರೆ, ಸ್ಥಳಕ್ಕೆ ತೆರಳಿ ಅವುಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

ಕೇಬಲ್, ಬಹುಮಹಡಿ ಕಟ್ಟಡಗಳು, ನೆಟ್‌ವರ್ಕ್ ಟವರ್‌ಗಳಿಗೆ ಸಿಲುಕಿ ಗಾಯಗೊಳ್ಳುತ್ತಿರುವ ಪಕ್ಷಿಗಳ ಸಂಖ್ಯೆ ನಗರ ಪ್ರದೇಶದಲ್ಲಿ ಹೆಚ್ಚುತ್ತಿವೆ. ಈ ರೀತಿಯ ದುರಂತಗಳಲ್ಲಿ ಪಕ್ಷಿಗಳು ಗರಿ ಕಳೆದುಕೊಳ್ಳುತ್ತವೆ. ರೆಕ್ಕೆಗೆ ಪೆಟ್ಟು ಬಿದ್ದು ಗಾಯಗೊಂಡರೆ ಹಾರಾಟ ನಡೆಸುವುದು ಕಷ್ಟ. ಅಂತಹ ಪಕ್ಷಿಗಳನ್ನು ಪತ್ತೆಹಚ್ಚಿ ಪಿಎಫ್‌ಎಗೆ ಕಳುಹಿಸುತ್ತಾರೆ ಗೌರಿ. ಜತೆಗೆ, ರಸ್ತೆಬದಿ, ಉದ್ಯಾನಗಳಲ್ಲಿ ಬಿದ್ದಿರುವ ಗರಿಗಳನ್ನು ಸಂಗ್ರಹಿಸಿ ಆಸ್ಪತ್ರೆಗೆ ನೀಡುತ್ತಿದ್ದಾರೆ. ಅಲ್ಲಿ ಹಕ್ಕಿಗಳಿಗೆ ಗರಿಕಸಿ ಮಾಡಿ ಪಕ್ಷಿಗಳನ್ನು ಮೊದಲಿನಂತೆಯೇ ಹಾರಾಟಕ್ಕೆ ಅಣಿಗೊಳಿಸಲಾಗುತ್ತದೆ.

ಉದ್ಯಾನದಲ್ಲಿ ‘ಗರಿಬ್ಯಾಂಕ್‌’ ಸ್ಥಾಪನೆ

ಗೌರಿ ಅವರಷ್ಟೇ ಗರಿ ಸಂಗ್ರಹಿಸಿ ಪಿಎಫ್‌ಎಗೆ ಹಸ್ತಾಂತರಿಸುತ್ತಿಲ್ಲ. ಅಕ್ಕಪಕ್ಕದವರಲ್ಲೂ ಜಾಗೃತಿ ಮೂಡಿಸುವ ಕಾಯಕದಲ್ಲಿ ನಿರತರಾಗಿದ್ದಾರೆ. ವಿಜಯನಗರ ಸೇರಿದಂತೆ ಸುತ್ತಮುತ್ತಲಿನ ಬಡಾವಣೆಗಳ ಉದ್ಯಾನಗಳಲ್ಲಿ ಗರಿಬ್ಯಾಂಕ್‌ ಸ್ಥಾಪಿಸಿದ್ದಾರೆ. ವಾಯುವಿಹಾರಿಗಳು, ಪಾದಚಾರಿಗಳು, ಶಾಲಾ–ಕಾಲೇಜು ವಿದ್ಯಾರ್ಥಿಗಳು ಹೆಕ್ಕಿ ತಂದು ಗರಿಗಳನ್ನು ಬಾಕ್ಸ್‌ಗೆ ಹಾಕುತ್ತಿದ್ದಾರೆ.

‘ಪಕ್ಷಿಗಳ ಪ್ರಾಥಮಿಕ ಚಿಕಿತ್ಸೆಗೆ ಬೇಕಾಗುವ ಸಣ್ಣ ಕಿಟ್ ನನ್ನ ಬಳಿಯಿದೆ. ಕುಡಿಯಲು ನೀರು ಸಿಗದೆ ಪಕ್ಷಿಗಳು ನಿತ್ರಾಣಗೊಂಡಿದ್ದರೆ, ಸಣ್ಣ ಪ್ರಮಾಣದ ಗಾಯವಾಗಿದ್ದರೆ ನಾನೇ ಉಪಚರಿಸುತ್ತೇನೆ. ಟಿ.ವಿ ಕೇಬಲ್‌ಗಳೇ ಪಕ್ಷಿಗಳಿಗೆ ದೊಡ್ಡ ಶತ್ರುಗಳು. ಕೇಬಲ್‌ಗಳಿಗೆ ಪಾರಿವಾಳಗಳು ಹೆಚ್ಚು ಸಿಲುಕಿಕೊಳ್ಳುತ್ತವೆ. ಪಾರಿವಾಳಕ್ಕೆ ರಾಜಾಜಿನಗರದಲ್ಲೇ ಪ್ರತ್ಯೇಕ ಆಸ್ಪತ್ರೆಯಿದ್ದು ಚಿಕಿತ್ಸೆಗೆ ಅಲ್ಲಿಗೆ ರವಾನೆ ಮಾಡುತ್ತೇನೆ’ ಎನ್ನುತ್ತಾರೆ ಗೌರಿ.

‘ಹೆದ್ದಾರಿಗಳಲ್ಲಿ ಸಂಭವಿಸುವ ಅಪಘಾತದಲ್ಲಿ ನಾಯಿಗಳು ಸಾಯುತ್ತವೆ. ಸತ್ತ ನಾಯಿಗಳ ಕಳೇಬರ ತಿನ್ನಲು ರಣಹದ್ದುಗಳು ಸ್ಥಳಕ್ಕೆ ಬರುತ್ತವೆ. ರಣಹದ್ದುಗಳ ತೂಕ ಹೆಚ್ಚಿರುವ ಕಾರಣಕ್ಕೆ ಮೇಲಕ್ಕೆ ಹಾರಲು ಹೆಚ್ಚಿನ ಸಮಯ ಬೇಕು. ಆಗ ವಾಹನಗಳಿಗೆ ಸಿಲುಕಿ ರಣಹದ್ದುಗಳು, ರತ್ನಪಕ್ಷಿಗಳು ಸಾಯುತ್ತಿವೆ. ಸತ್ತ ಪಕ್ಷಿಗಳ ಗರಿಗಳನ್ನು ತಂದು, ಗಾಯಗೊಂಡ ಪಕ್ಷಿಗಳಿಗೆ ಗರಿಕಸಿ ಮಾಡಿಸಲಾಗುತ್ತಿದೆ’ ಎಂದೂ ಹೇಳಿದರು.

ಗಾಯಗೊಂಡ ಪಕ್ಷಿಗೆ ಗರಿಕಸಿ ಮಾಡುತ್ತಿರುವ ವೈದ್ಯರು

ಗಾಯಗೊಂಡ ಪಕ್ಷಿಗೆ ಗರಿಕಸಿ ಮಾಡುತ್ತಿರುವ ವೈದ್ಯರು

ಪಕ್ಷಿಗಳ ಅಧ್ಯಯನದಲ್ಲಿ ಆಸಕ್ತಿ...

ಗೌರಿ ಅವರಿಗೆ ಚಾರಣ, ಪ್ರವಾಸವೆಂದರೆ ಅಚ್ಚುಮೆಚ್ಚು. ವರ್ಷಕ್ಕೊಮ್ಮೆ ಕಂಪ್ಯೂಟರ್‌, ಮೊಬೈಲ್‌ಗಳನ್ನು ಬದಿಗಿಟ್ಟು ಕುಟುಂಬದೊಂದಿಗೆ ಪ್ರಶಾಂತ ಸ್ಥಳಕ್ಕೆ ತೆರಳುತ್ತಾರೆ. ಅಲ್ಲಿಯೂ ಪಕ್ಷಿಯದ್ದೇ ಧ್ಯಾನ. ‘ಕಾಡು–ಮೇಡುಗಳಲ್ಲಿ ಅಲೆದಾಡುತ್ತಾ ಪಕ್ಷಿಗಳ ಅಧ್ಯಯನ ನಡೆಸುತ್ತೇನೆ. ಕಾಡಿನ ಸುತ್ತಾಟದಿಂದ ನನ್ನ ಕೆಲಸಕ್ಕೆ ಮತ್ತಷ್ಟು ಪ್ರೇರಣೆ ಸಿಗುತ್ತಿದೆ. ಸಮಾಜ ನಮಗೆ ಅಗಾಧ ಅನುಭವ, ಬದುಕು ನೀಡುತ್ತಿದೆ. ನಾವು ಸಮಾಜಕ್ಕೆ ಏನಾದರೂ ನೀಡಬೇಕು’ ಎಂದು ಹೇಳುತ್ತಾರೆ ಅವರು.

ಎರಡೇ ದಿನದಲ್ಲಿ ಚೇತರಿಕೆ...

‘ಗರಿ ಕಳೆದುಕೊಂಡ ಪಕ್ಷಿಯಲ್ಲಿ ಸಹಜವಾಗಿ ಗರಿ ಬೆಳೆಯುವುದಕ್ಕೆ ಬಹಳ ಸಮಯ ಬೇಕಿದೆ. ಪಕ್ಷಿಗೆ ಹಾರಾಟ ನಡೆಸಲು ಸಾಧ್ಯವಾಗದಿದ್ದರೆ ಆಹಾರ, ನೀರು ದೊರೆಯದೆ ಮೃತಪಡುವ ಸಾಧ್ಯತೆ ಇರುತ್ತದೆ. ‘ಗರಿಕಸಿ’ ಮಾಡಿ ಉಪಚರಿಸಿದರೆ, ಎರಡರಿಂದ ಮೂರು ದಿನಗಳಲ್ಲಿ ಗಾಯಗೊಂಡ ಪಕ್ಷಿ ಚೇತರಿಸಿಕೊಳ್ಳುತ್ತದೆ. ಸಂಗ್ರಹಿಸಿದ ಗರಿಗಳ ಗುರುತಿಸುವಿಕೆ ಬಹಳ ಮುಖ್ಯ. ಗರಿಬ್ಯಾಂಕ್‌ಗಳಿಗೆ ಬಂದ ಗರಿಗಳನ್ನು ಪ್ರತ್ಯೇಕಿಸಿ ಆಸ್ಪತ್ರೆಗೆ ನೀಡುತ್ತೇನೆ. ಪಾರಿವಾಳಕ್ಕೆ ಪಾರಿವಾಳದ ಗರಿಯನ್ನೇ ಕಸಿ ಮಾಡಲಾಗುತ್ತದೆ. ಪಿಎಫ್‌ಎ ವೈದ್ಯ ನವಾಜ್‌ ಶರೀಫ್‌ ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತಿದ್ದೇನೆ’ ಎಂದು ಗೌರಿ ಹೇಳುತ್ತಾರೆ.

ಪಕ್ಷಿಗಳ ಗರಿಗಳು

ಪಕ್ಷಿಗಳ ಗರಿಗಳು

__________________________________________________________________

ಇನ್ನಷ್ಟು ಲೇಖನಗಳನ್ನು ಇಲ್ಲಿ ಓದಿ... ಪ್ರಜಾವಾಣಿ ಸಾಧಕಿಯರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT