ಹಾವೇರಿ: ‘1965ಕ್ಕೂ ಮುನ್ನ ನಮ್ಮ ಹಿರಿಯರು ಸಾಂಪ್ರದಾಯಿಕ ಬೆಳೆಗಳ ಬೀಜೋತ್ಪಾದನೆ ಮಾಡುತ್ತಿದ್ದರು. ಆದರೆ, ಅದು ನಮ್ಮೂರಿನ ಬಿತ್ತನೆ ಬೀಜವೆಂಬುದು ಯಾರಿಗೂ ಗೊತ್ತಾಗುತ್ತಿರಲಿಲ್ಲ. 1965ರ ಹಸಿರು ಕ್ರಾಂತಿ ಸಮಯದಲ್ಲಿ ಹೈಬ್ರೀಡ್ ಬೀಜಗಳು ಬಂದಾಗ ನಮ್ಮೂರಿನಲ್ಲೇ ಮೊದಲಿಗೆ ಬೀಜೋತ್ಪಾದನೆ ಶುರು ಆಯಿತು. ಅಂದಿನಿಂದ ಆರಂಭವಾದ ಬೀಜೋತ್ಪಾದನೆ ಕೆಲಸ, ಇಂದು ಹೆಮ್ಮರವಾಗಿ ಬೆಳೆದಿದೆ. ರಾಜ್ಯ–ಹೊರ ರಾಜ್ಯವಷ್ಟೇ ಅಲ್ಲದೇ ವಿಶ್ವದ ಹಲವು ದೇಶಗಳಿಗೆ ನಮ್ಮೂರಿನ ಬೀಜಗಳು ರಫ್ತಾಗುತ್ತಿದೆ. ನಮ್ಮ ಬದುಕಿನಲ್ಲೂ ಸುಧಾರಣೆ ಕಂಡಿದ್ದೇವೆ’...

ಏಷ್ಯಾ ಖಂಡದಲ್ಲಿಯೇ ಬೀಜೋತ್ಪಾ ದನೆಗೆ ಹೆಸರುವಾಸಿಯಾದ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ರೈತ ಶಂಭು ಶೆಟ್ಟರ ಅವರ ಅನುಭವದ ಮಾತಿದು.

ಹಸಿರು ಕ್ರಾಂತಿಗೆ ಮುನ್ನುಡಿ ಬರೆದ 1965ರಲ್ಲಿ ಹೆಚ್ಚಿನ ಇಳುವರಿ ನೀಡುವ ಹೈಬ್ರೀಡ್ ತಳಿ ಪರಿಚಯಿಸಲು ಸಜ್ಜಾಗಿದ್ದ ಕೃಷಿ ವಿಜ್ಞಾನಿಗಳು, ಗಂಡು–ಹೆಣ್ಣು ಸಸಿಗಳನ್ನು ಕೃತಕ ಪರಾಗ ಸ್ಪರ್ಶದಿಂದ ಬೆಳೆಸಲು ಮೊಟ್ಟಮೊದಲ ಬಾರಿಗೆ ರಾಣೆಬೆನ್ನೂರು ಆಯ್ಕೆ ಮಾಡಿಕೊಂಡರು. ‘ವಾತಾವರಣವೇ ವರದಾನ’ವಾಗಿದ್ದ ಈ ಪ್ರದೇಶದಲ್ಲಿ ಆರಂಭವಾದ ಬೀಜೋತ್ಪಾದನೆ, ಈಗ ಉದ್ಯಮವಾಗಿಯೂ ಮಾರ್ಪಟ್ಟಿದೆ. ಹೊರ ರಾಜ್ಯ ಮತ್ತು ವಿದೇಶಗಳಲ್ಲಿ ಮೊಳಕೆ ಒಡೆದು ಫಲ ನೀಡುತ್ತಿವೆ. ಬೀಜಗಳ ತವರೂರು ಆಗಿಯೂ ರಾಣೆಬೆನ್ನೂರು ಪ್ರಸಿದ್ಧಿ ಪಡೆದಿದೆ.

ಮೆಕ್ಕೆಜೋಳ, ಜೋಳ, ಸಜ್ಜಿ, ಮೇವಿನ ಜೋಳ, ಟೊಮೆಟೊ, ಚವಳಿಕಾಯಿ, ಬೆಂಡೆಕಾಯಿ, ಹಾಗಲ ಕಾಯಿ, ಹಿರೇಕಾಯಿ, ಸೌತೆಕಾಯಿ, ಮೆಣಸಿನಕಾಯಿ, ಕುಂಬಳಕಾಯಿ, ಕರಬೂಜ, ಕ್ಯಾರೆಟ್, ಕ್ಯಾಬೇಜ್, ಹೂಕೋಸು, ತರಹೇವಾರಿ ಹೂವುಗಳ ಬೀಜೋತ್ಪಾದನೆಗೆ ಹೇಳಿ ಮಾಡಿಸಿದ ವಾತಾವರಣ
ವಿರುವ ರಾಣೆಬೆನ್ನೂರಿನಲ್ಲಿ 200ಕ್ಕೂ ಹೆಚ್ಚು ಕಂಪನಿಗಳು ಮೊಕ್ಕಾಂ ಹೂಡಿವೆ. ಇಲ್ಲಿ ಉತ್ಪಾದನೆ ಯಾಗುವ ಬೀಜಗಳು, ಭಾರತ ಮಾತ್ರವಲ್ಲದೇ ಚೀನಾ, ಜಪಾನ್, ಆಸ್ಟ್ರೇಲಿಯಾ, ಇಂಡೋನೇಷ್ಯಾ, ದಕ್ಷಿಣ ಕೊರಿಯಾ, ವಿಯೆಟ್ನಾಂ, ಸಿಂಗಪುರ, ನ್ಯೂಜಿಲೆಂಡ್, ತೈವಾನ್, ಮ್ಯಾನ್ಮಾರ್, ಥಾಯ್ಲೆಂಡ್, ಮಲೇಷ್ಯಾ, ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ, ಭೂತಾನ್ ಸೇರಿದಂತೆ ಹಲವು ದೇಶಗಳಿಗೆ ರಫ್ತಾಗುತ್ತಿದೆ.

ವರ್ಷದಿಂದ ವರ್ಷಕ್ಕೆ ಬೀಜಗಳ ಉತ್ಪಾದನೆಯೂ ಹೆಚ್ಚಾಗುತ್ತಿದೆ. ಏಷ್ಯಾ ಖಂಡದ ದೇಶಗಳ ರೈತರು ವಾರ್ಷಿಕ 2.05 ಲಕ್ಷ ಕೋಟಿ ಕೆ.ಜಿ.ಯಷ್ಟು ಬೀಜ ಬಿತ್ತನೆ ಮಾಡುತ್ತಿದ್ದು, ಇದರಲ್ಲಿ ಬಹುಪಾಲು ಬೀಜ ರಾಣೆಬೆನ್ನೂರಿನದ್ದು ಎಂಬುದು ವಿಶೇಷ.

ಉತ್ತರ ಕರ್ನಾಟಕದ ಹೆಬ್ಬಾಗಿಲು ಎನಿಸಿಕೊಂಡಿರುವ ಹಾವೇರಿ ಜಿಲ್ಲೆಯ ಪ್ರಮುಖ ತಾಲ್ಲೂಕು ಕೇಂದ್ರವಾಗಿರುವ ರಾಣೆಬೆನ್ನೂರಿನಲ್ಲಿ ಬೀಜೋತ್ಪಾದನೆ ಹೇಗೆ ಶುರುವಾಯಿತು? ಅದಕ್ಕೆ ಕಾರಣ ಯಾರು? ರೈತರು ಮತ್ತು ಕಂಪನಿಗಳ ನಡುವಿನ ಸಂಬಂಧ ಹೇಗಿದೆ? ಎಂಬುದನ್ನು ತಿಳಿಯುತ್ತ ಹೋದಾಗ, ಸಣ್ಣದೊಂದು ಊರಿನ ರೈತರು ವಿಶ್ವಮಟ್ಟದಲ್ಲಿ ಪ್ರಸಿದ್ಧಿ ಪಡೆದಿದ್ದಾರೆ ಎನ್ನುವುದು ಅರಿವಾಗುತ್ತದೆ.

ಬ್ರಿಟಿಷ್ ಆಳ್ವಿಕೆಯಲ್ಲೂ ಬೀಜೋತ್ಪಾದನೆ:

ರಾಣೆಬೆನ್ನೂರು ತಾಲ್ಲೂಕಿನ ಜೋಯಿಸರಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭೂ ಪ್ರದೇಶ, ಸಮಪ್ರಮಾಣ ವಾತಾವರಣವಿರುವ ಪ್ರದೇಶ. ಮಳೆಗಾಲದಲ್ಲಿ ನಿಗದಿಯಂತೆ ಮಳೆ, ಚಳಿಗಾಲದಲ್ಲಿ ನಿಗದಿಯಂತೆ ಚಳಿ ಹಾಗೂ ಬೇಸಿಗೆಯಲ್ಲಿ ನಿಗದಿಯಂತೆ ಬಿಸಿಲು ಇರುತ್ತದೆ. ಯಾವುದೇ ಕಾಲದಲ್ಲೂ ವಾತಾವರಣದಲ್ಲಿ ಬದಲಾವಣೆ ಆಗುವುದಿಲ್ಲ. ಹೆಚ್ಚು ಮಳೆಯಾಗಿ ಭೂಮಿಯೂ ಚೌಗು ಹಿಡಿಯಲ್ಲ. ಈ ಪ್ರದೇಶದಲ್ಲಿ ಮಳೆಯಾಶ್ರಿತ ಸಾಂಪ್ರದಾಯಿಕ ‘ಬೀಜ ಕೃಷಿ’ ಮಾಡಿದರೆ ಫಲ ನಿಶ್ಚಿತವೆಂಬುದು ಬ್ರಿಟಿಷರಿಗೂ ಗೊತ್ತಿತ್ತು.

ಮುಂಬೈ ಪ್ರಾಂತ್ಯದ ಆಡಳಿತಕ್ಕೆ ಒಳಪಟ್ಟಿದ್ದ ಈ ಪ್ರದೇಶದ ರೈತರಿಂದ ಬೀಜೋತ್ಪಾದನೆ ಮಾಡಿಸುತ್ತಿದ್ದ ಬ್ರಿಟಿಷರು, ಅದೇ ಬೀಜಗಳನ್ನು ವಿದೇಶಿ ಕಂಪನಿಗಳ ಹೆಸರಿನಲ್ಲಿ ಹೊರ ದೇಶಕ್ಕೆ ರಫ್ತು ಮಾಡುತ್ತಿದ್ದರು. ಜೋಳ, ಹತ್ತಿ ಬೆಳೆಯ ಬೀಜಗಳು ಪ್ರಸಿದ್ಧಿ ಪಡೆದಿದ್ದವು. 1 ಕೆ.ಜಿ ಮೂಲ ಬೀಜ ಬಿತ್ತಿದ್ದರೆ, 2 ಕ್ವಿಂಟಲ್ನಿಂದ 4 ಕ್ವಿಂಟಲ್ವರೆಗೂ ಬಿತ್ತನೆ ಬೀಜಗಳು ಲಭ್ಯವಾಗುತ್ತಿತ್ತು. ಇದನ್ನು ಅರಿತಿದ್ದ ಬ್ರಿಟಿಷರು, ರೈತರು ಬೆಳೆದ ಬೀಜಗಳನ್ನು ತಮಗಷ್ಟೇ ನೀಡುವಂತೆ ಕಟ್ಟಪ್ಪಣೆ ಹೊರಡಿಸಿದ್ದರು. ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೆಚ್ಚಾದಾಗ, ಈ ವಹಿವಾಟಿನ ಮಾಹಿತಿ ರೈತರಿಗೆ ಲಭ್ಯವಾಯಿತು. ನಂತರ ಬೀಜ ಕೊಡುವುದನ್ನು ನಿಲ್ಲಿಸಿದರು.

ಬ್ರಿಟಿಷರ ಆದೇಶವನ್ನು ಧಿಕ್ಕರಿಸಿ, ಬೀಜಗಳನ್ನು ಖುದ್ದಾಗಿ ಮಾರಲಾರಂಭಿಸಿದರು. ಕೃಷಿ ಬೀಜಗಳ ಮೂಲಕವೂ ಸ್ವಾತಂತ್ರ್ಯ ಹೋರಾಟ ಆರಂಭವಾದ ದಿನಗಳನ್ನು ಜೋಯಿಸರಹಳ್ಳಿ ಗ್ರಾಮದ ಹಿರಿಯರು ನೆನಪು ಮಾಡಿಕೊಳ್ಳುತ್ತಾರೆ.

‘ಬ್ರಿಟಿಷರ ಕಾಲದಿಂದಲೂ ನಮ್ಮಲ್ಲಿ ಬೀಜೋತ್ಪಾದನೆ ಬೆಳೆದು ಬಂದಿರುವುದಾಗಿ ತಂದೆ ನೂರುಲ್ಲಾ ಹೇಳುತ್ತಿದ್ದರು. ರಾಣೆಬೆನ್ನೂರಿಗೆ ಬಂದ ಕಂಪನಿಗಳು ಸಹ ತಂದೆಯ ಮಾರ್ಗದರ್ಶನದಲ್ಲಿ ಬೀಜೋತ್ಪಾದನೆ ಆರಂಭಿಸಿದ್ದವು. ಅವರು ಇತ್ತೀಚೆಗಷ್ಟೇ ನಿಧನರಾದರು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಬೋಜೋತ್ಪಾದನೆ ಕೆಲಸವನ್ನು ನಾವು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ’ ಎಂದು ‘ಅಮೃತ ಬೀಜ ಸಂಸ್ಕರಣ ಘಟಕ’ದ ಮಾಲೀಕ ಜಾವೀದ್ ನವಾಜ್ ಕಿಲ್ಲೇದಾರ ಹೇಳುತ್ತಾರೆ.

‘ನನಗೆ ತಿಳಿವಳಿಕೆ ಬಂದಾಗಿನಿಂದಲೂ ತಂದೆ ಜತೆ ಬೀಜೋತ್ಪಾದನೆ ಕೆಲಸ ಮಾಡುತ್ತಿದ್ದೇನೆ. ರೈತರಿಗೆ ಮೂಲ ಬೀಜ ಕೊಟ್ಟು, ಅದರಿಂದ ಬೀಜಗಳನ್ನು ಉತ್ಪಾದಿಸಿ ಅದನ್ನು ಖರೀದಿಸಿ ಕಂಪನಿಗಳಿಗೆ ನೀಡುತ್ತಿದ್ದೇವೆ. ಹೊರ ರಾಜ್ಯ ಹಾಗೂ ವಿದೇಶಕ್ಕೂ ಇಲ್ಲಿಂದ ಬೀಜಗಳು ರಫ್ತಾಗುತ್ತಿವೆ. ಕೆಲ ಕಂಪನಿಗಳು ಮಾತ್ರ ರಾಣೆಬೆನ್ನೂರು ಹೆಸರು ನಮೂದಿಸುತ್ತಿವೆ. ಇಡೀ ಏಷ್ಯಾ ಖಂಡದಲ್ಲಿ ರಾಣೆಬೆನ್ನೂರು ಬೀಜಕ್ಕೆ ಬೇಡಿಕೆಯಿದೆ’ ಎಂದು ಬೀಜೋತ್ಪಾದನೆ ಮಾರುಕಟ್ಟೆ ಸ್ಥಿತಿ–ಗತಿ ಬಿಚ್ಚಿಟ್ಟರು.

ಬೀಜ ಪರೀಕ್ಷೆ ನಂತರ ಹಣ ಪಾವತಿ:

‘12 ವರ್ಷಗಳಿಂದ ಬೀಜ ಕೃಷಿ ಮಾಡುತ್ತಿದ್ದೇನೆ. ಸೌತೆ, ಬೆಂಡಿ, ಟೊಮೆಟೊ, ಕರಬೂಜ, ಕುಂಬಳ... ಹೀಗೆ, ಕಂಪನಿಗಳ ಒಪ್ಪಂದದ ಪ್ರಕಾರ ಬೀಜೋತ್ಪಾದನೆ ಮಾಡುತ್ತೇನೆ. ಗಂಡು–ಹೆಣ್ಣು ಸಸಿಗಳನ್ನು ಕಂಪನಿಯವರು ಕೊಡುತ್ತಾರೆ. ಅದನ್ನು ನಾಟಿ ಮಾಡಿ, ಬೆಳೆಸಿ ಪರಾಗ ಸ್ಪರ್ಶ ಮಾಡುವ ಹೊಣೆ ನಮ್ಮದು’ ಎಂದು ಜೋಯಿಸರಹಳ್ಳಿಯ ರೈತ ಕೆಂಚಪ್ಪ ಸಣ್ಣಮನಿ ಹೇಳಿದರು.

‘ಪ್ರತಿಯೊಂದು ಬೆಳೆಗೂ ಅದರದ್ದೇ ಆದ ಪರಾಗ ಸ್ಪರ್ಶದ ಕ್ರಮವಿದೆ. ಪರಾಗ ಸ್ಪರ್ಶ ಚೆನ್ನಾಗಿ ನಡೆದರೆ ಮಾತ್ರ, ಇಳುವರಿ ಬರುತ್ತದೆ. ಬೀಜಗಳ ಶುದ್ಧತೆಯೂ ಶೇ 95ರಷ್ಟು ಬರುತ್ತದೆ. ಹೀಗಾಗಿ, ಬೀಜೋತ್ಪಾದನೆಯಲ್ಲಿ ಪರಾಗ ಸ್ಪರ್ಶವೇ ಮುಖ್ಯ’ ಎಂದರು.

‘10 ಗುಂಟೆ, 15 ಗುಂಟೆ ಹಾಗೂ 20 ಗುಂಟೆ ಲೆಕ್ಕದಲ್ಲಿ ಒಂದೊಂದು ಪ್ಲಾಟ್ ಮಾಡಿ ಬೀಜೋತ್ಪಾದನೆ ಮಾಡುತ್ತಾರೆ. ಒಂದೊಂದು ಕಂಪನಿಗೂ ಒಂದೊಂದು ಪ್ಲಾಟ್ ಮಾಡುವ ರೈತರೂ ಇದ್ದಾರೆ. ಕಾಲಕ್ಕೆ ತಕ್ಕಂತೆ ಬೆಳೆಯೂ ಬದಲಾಗುತ್ತದೆ. ನಾಟಿ ಕ್ರಮ ಹಾಗೂ ಪರಾಗ ಸ್ಪರ್ಶ ಚೆನ್ನಾಗಿದರೆ ಮಾತ್ರ ಹೆಚ್ಚು ಇಳುವರಿ ಬರುತ್ತದೆ’ ಎಂದರು.

‘ಸಸಿಗಳಲ್ಲಿ ಕಾಯಿಗಳು ಸಂಪೂರ್ಣ ಹಣ್ಣಾಗಿ ಬಣ್ಣ ಬದಲಿಸಿದ ನಂತರವೇ ಹರಿದು ಒಂದೆಡೆ ಹಾಕುತ್ತೇವೆ. ನಂತರ, ಹಣ್ಣುಗಳಿಂದ ಬೀಜಗಳನ್ನು ತೆಗೆದು ಬಿಸಿಲಿನಲ್ಲಿ ಒಣಗಿಸುತ್ತೇವೆ. ಪೊಳ್ಳು ಬೀಜಗಳನ್ನು ಬೇರ್ಪಡಿಸಿ, ಗಟ್ಟಿ ಕಾಳು ಬೀಜವನ್ನು ಮಾತ್ರ ಕಂಪನಿಗಳಿಗೆ ಕೊಡುತ್ತೇವೆ. ಕಂಪನಿಯವರು ಬೀಜಗಳ ಪರೀಕ್ಷೆ ನಡೆಸಿ, 3 ತಿಂಗಳ ನಂತರ ಹಣ ನೀಡುತ್ತಾರೆ. ಬೀಜ ಚೆನ್ನಾಗಿದ್ದರೆ ಮಾತ್ರ ಹಣ ಬರುತ್ತದೆ. ಇಲ್ಲದಿದ್ದರೆ, ಹಣ ಬರುವುದು ಖಾತ್ರಿಯಿಲ್ಲ’ ಎಂದು ಹೇಳಿದರು.

ತಂದೆಯಿಂದ ಕಲಿತ ಬೀಜ ಕೃಷಿ:

‘ನಮ್ಮ ತಂದೆಯವರು ಬೀಜ ಕೃಷಿ ಮಾಡುತ್ತಿದ್ದರು. ನಾನು ಸಹ 14 ವರ್ಷದಿಂದ ಈ ಕೃಷಿ ಮಾಡುತ್ತಿದ್ದೇನೆ. ಮೊದಲಿಗೆ ಈ ಕೃಷಿಯಲ್ಲಿ ಶೇ 50ರಷ್ಟು ಲಾಭವಿತ್ತು. ಆದರೆ, ಈಗ ಕಾರ್ಮಿಕರು ಸಿಗುವುದಿಲ್ಲ. ಸಿಕ್ಕರೂ ಹೆಚ್ಚು ಹಣ ಕೊಡಬೇಕು. ನಾವೇ ವಾಹನ ಮಾಡಿಕೊಂಡು ಕರೆತಂದು, ವಾಪಸು ಕಳುಹಿಸಬೇಕು. ಬೀಜೋತ್ಪಾದನೆಗಾಗಿ ರೈತರ ನಡುವೆಯೇ ಸ್ಪರ್ಧೆ ಹೆಚ್ಚಾಗಿದೆ. ಖರ್ಚು ಹೆಚ್ಚಾಗಿದೆ. ಇಳುವರಿಯೂ ಆಗಾಗ ಕಡಿಮೆಯಾಗುತ್ತದೆ. ಶೇ 25ರಷ್ಟು ಲಾಭ ಬಂದರೆ ಹೆಚ್ಚು’ ಎಂದು ಕದರಮಂಡಲಗಿ ರೈತ ಶಂಭು ಶೆಟ್ಟರ ತಿಳಿಸಿದರು.

‘ಮೊದಲಿಗೆ 18 ಎಕರೆ ಜಾಗದಲ್ಲಿ ಬೀಜ ಕೃಷಿ ಮಾಡಿದೆ. ಪ್ರಾಥಮಿಕ ಜ್ಞಾನದ ಕೊರತೆ ಹಾಗೂ ಹವಾಮಾನದ ಬದಲಾವಣೆಯಿಂದ ನಷ್ಟವಾಯಿತು. ಈಗ ಕದರಮಂಡಲಗಿಯಲ್ಲಿ 8 ಎಕರೆಯಲ್ಲಿ ಬೀಜೋತ್ಪಾದನೆ ಮಾಡುತ್ತಿದ್ದೇನೆ. 15 ಗುಂಟೆಗೊಂದು ಪ್ಲಾಟ್ ಮಾಡಿದ್ದೇನೆ. ಯಾವುದೇ ಬೆಳೆ ಬೆಳೆದರೂ ₹ 80 ಸಾವಿರದಿಂದ ₹ 1 ಲಕ್ಷದವರೆಗೂ ಖರ್ಚಾಗುತ್ತದೆ. ಇಳುವರಿ ಹೆಚ್ಚಾದರೆ ಮಾತ್ರ ಲಾಭ ಬರುತ್ತದೆ’ ಎಂದರು.

‘ಕೃತಕ ಪರಾಗ ಸ್ಪರ್ಶ ಮಾಡಿದರೆ ಇಳುವರಿ ಹೆಚ್ಚಾಗುತ್ತದೆ’ ಎಂಬ ತತ್ವದಡಿ ಹೈಬ್ರೀಡ್ ಬೀಜಗಳು ಪರಿಚಯವಾದವು. ನಾವು ವೈಜ್ಞಾನಿಕ ರೀತಿಯಲ್ಲಿ ಪರಾಗ ಸ್ಪರ್ಶ ಮಾಡಿದರೆ ಮಾತ್ರ ಉತ್ತಮ ಲಾಭ ಪಡೆಯಲು ಸಾಧ್ಯ. ಪರಾಗ ಸ್ಪರ್ಶದಲ್ಲಿ ಎಡವಟ್ಟಾದರೆ, ಇಳುವರಿ ಬರುವುದಿಲ್ಲ’ ಎಂದು ಹೇಳಿದರು.

‘ಹೈಬ್ರೀಡ್ ಬೀಜದ ಸಸಿ ನೀಡುವ ಮೊದಲೇ ಕಂಪನಿಯವರು, ಪರಾಗ ಸ್ಪರ್ಶದ ಬಗ್ಗೆ ತಿಳಿಸುತ್ತಾರೆ. ಹೊಸ ರೈತರು, ಪರಾಗ ಸ್ಪರ್ಶದ ಸಮಯದಲ್ಲಿ ತಪ್ಪು ಮಾಡಿ ನಷ್ಟ ಅನುಭವಿಸುತ್ತಾರೆ. ಅನುಭವಿ ರೈತರು ಮಾತ್ರ ಪರಾಗ ಸ್ಪರ್ಶವನ್ನು ಉತ್ತಮ ರೀತಿಯಲ್ಲಿ ಮಾಡಿ ಹೆಚ್ಚು ಲಾಭ ಗಳಿಸುತ್ತಾರೆ. ಗಂಡು ಸಸಿಯ ಹೂವಿನಲ್ಲಿರುವ ಸ್ಟಿಗ್ಮಾವನ್ನು ತೆಗೆದು, ಹೆಣ್ಣು ಸಸಿಯ ಪ್ರತಿಯೊಂದು ಹೂವಿನ ಜೊತೆ ಪರಾಗ ಸ್ಪರ್ಶ ಮಾಡುತ್ತೇವೆ. ಇಂಥ ಹೂವು ಅರಳಿ ಕಾಯಿ ಆಗುತ್ತದೆ. ಇದೇ ಕಾಯಿ, ಚೆನ್ನಾಗಿ ಬೆಳೆದು ಹಣ್ಣಾಗಿ ಬೀಜಕ್ಕೆ ಅರ್ಹವಾಗುತ್ತದೆ’ ಎಂದು ವಿವರಿಸಿದರು.

ನುರಿತ ಕಾರ್ಮಿಕರು:

‘ನಮ್ಮ ತಂದೆ 35 ವರ್ಷದಿಂದ ಬೀಜೋತ್ಪಾದನೆ ಮಾಡುತ್ತಿದ್ದಾರೆ. ಅವರ ಕೆಲಸಕ್ಕೆ ನಾನೂ ಕೈ ಜೋಡಿಸಿದ್ದೇನೆ. ಸೌತೆ, ಹಾಗಲಕಾಯಿ, ಟೊಮೆಟೊ... ಹೀಗೆ ವಿವಿಧ ಬೀಜಗಳ ಉತ್ಪಾದನೆ ಮಾಡುತ್ತೇವೆ. ಒಂದು ಪ್ಲಾಟ್ಗೆ ₹ 50 ಸಾವಿರದಿಂದ ₹ 60 ಸಾವಿರ ಖರ್ಚಾಗುತ್ತದೆ. ಬೀಜ ಕೊಟ್ಟ ಮೂರು ತಿಂಗಳ ನಂತರ ಕಂಪನಿಯವರು ಹಣ ನೀಡುತ್ತಾರೆ. ನಮಗೆ ಏನಾದರೂ ತುರ್ತು ಅಗತ್ಯವಿದ್ದರೆ, ಮುಂಗಡವಾಗಿ ಹಣ ಪಡೆಯುತ್ತೇವೆ’ ಎಂದು ಜೋಯಿಸರಹಳ್ಳಿಯ ರೈತ ನಾಗರಾಜ ಚಿಕ್ಕಪ್ಪ ಮ್ಯಾಗೇರಿ ತಿಳಿಸಿದರು.

‘ಬೀಜ ಕೃಷಿಯಲ್ಲಿ ಬೆಳೆಗೆ ಕಾಲಕ್ಕೆ ತಕ್ಕಂತೆ ರೋಗಗಳು ಬರುತ್ತವೆ. ಅದಕ್ಕೆ ಏನು ಮಾಡಬೇಕೆಂದು ಕಂಪನಿಯವರೇ ಹೇಳುತ್ತಾರೆ. ಆದರೆ, ನಮಗೆ ಅನುಭವ ಇರುವುದರಿಂದ ಕಂಪನಿಯವರು ಹೇಳುವ ಮುಂಚೆಯೇ ಔಷಧಿ ತಂದು ಸಿಂಪರಣೆ ಮಾಡುತ್ತೇವೆ. ರೋಗವನ್ನು ತ್ವರಿತವಾಗಿ ಹತೋಟಿಗೆ ತರುತ್ತೇವೆ. ಈ ಬೀಜೋತ್ಪಾದನೆಯಿಂದ ಆಗಾಗ ನಷ್ಟವಾದರೂ ಲಾಭದ ಪ್ರಮಾಣವೂ ಹೆಚ್ಚಿದೆ’ ಎಂದು ಹೇಳಿದರು.

ಸಂಸ್ಥೆಗಳ ಬೆಂಬಲ:

‘ರೈತರ ಮೂಲಕ ಬಿತ್ತನೆ ಬೀಜೋತ್ಪಾದನೆ ಜೊತೆಯಲ್ಲಿಯೇ ಕೃಷಿ ಇಲಾಖೆಯ ಕೇಂದ್ರಗಳಲ್ಲಿಯೂ ಬೀಜಗಳ ಉತ್ಪಾದನೆ ಆಗುತ್ತಿತ್ತು. ಬೀಜಗಳ ಉತ್ಪಾದನೆಗೆ, ಪರವಾನಗಿ ಉತ್ಪಾದಕರಿದ್ದರು. 1966ರಲ್ಲಿ ಬೀಜ ಕಾಯ್ದೆ, 1966ರಲ್ಲಿ ಬೀಜ ನಿಯಮಾವಳಿ, 1963-ರಲ್ಲಿ ರಾಷ್ಟ್ರೀಯ ಬೀಜ ನಿಗಮ, 1973ರಲ್ಲಿ ಕರ್ನಾಟಕ ಬೀಜ ನಿಗಮ, 1966ರಲ್ಲಿ ಹೆಬ್ಬಾಳದಲ್ಲಿ ಕೃಷಿ ವಿಶ್ವವಿದ್ಯಾಲಯ, 1974ರಲ್ಲಿ ರಾಜ್ಯ ಬೀಜ ಪ್ರಮಾಣ ಸಂಸ್ಥೆ ಸೇರಿದಂತೆ ಹಲವು ಸಂಸ್ಥೆಗಳು ಆರಂಭವಾದವು. ಇವುಗಳು ಸಹ ಬೀಜೋತ್ಪಾದನೆ ವೇಗ ನೀಡಿದವು’ ಎಂದು ಕೃಷಿ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಆರ್.ಜಿ. ಗೊಲ್ಲರ ಹೇಳಿದರು.

‘ಈಗ ಬೀಜೋತ್ಪಾದನೆ ಕ್ಷೇತ್ರ ಹಲವು ಕಡೆ ವ್ಯಾಪಿಸಿದೆ. ಬ್ಯಾಡಗಿ, ಹಿರೇಕೆರೂರು ಭಾಗದಲ್ಲಿಯೂ ರೈತರು ಬೀಜೋತ್ಪಾದನೆ ಮಾಡುತ್ತಿದ್ದಾರೆ. ರಾಜ್ಯದ ವಿವಿಧ ಭಾಗಗಳಲ್ಲಿಯೂ ಬೀಜ ಕೃಷಿ ಆರಂಭವಾಗಿದೆ’ ಎಂದು ಅವರು ಹೇಳಿದರು.

ಆದಾಯ ವೃದ್ಧಿಸಿದ ಬೀಜ ಕೃಷಿ:

ಸಾಂಪ್ರದಾಯಿಕ ಕೃಷಿ ಮಾಡುತ್ತಿದ್ದ ರೈತರು, ಕಡಿಮೆ ಇಳುವರಿ ಹಾಗೂ ಕಡಿಮೆ ಬೆಲೆ ಪಡೆದು ಆರ್ಥಿಕವಾಗಿ ಹಿಂದುಳಿದಿದ್ದರು. ಬೀಜೋತ್ಪಾದನೆ ಆರಂಭವಾದ ನಂತರ, ರೈತರ ಆದಾಯವೂ ವೃದ್ಧಿಸಿದೆ.

‘1979ರಲ್ಲಿ ತಿನ್ನಲು ಬಳಸುತ್ತಿದ್ದ ಜೋಳಕ್ಕೆ ಕ್ವಿಂಟಲ್ಗೆ ₹ 300 ಇತ್ತು. ಅದೇ ಬೀಜದ ಜೋಳಕ್ಕೆ ₹ 2,500ರಿಂದ ₹ 3,000 ಬೆಲೆಯಿತ್ತು. ಇದೇ ಕಾರಣಕ್ಕೆ ರೈತರು, ತಿನ್ನುವ ಜೋಳದ ಬದಲು ಬೀಜದ ಜೋಳದ ಕೃಷಿಯತ್ತ ವಾಲಿದರು’ ಎಂದು ರಾಜ್ಯ ಬೀಜ ಪ್ರಮಾಣನ ಸಂಸ್ಥೆ’ಯ ನಿವೃತ್ತ ನಿರ್ದೇಶಕ ಎಸ್.ಸಿ.ವಿ. ರೆಡ್ಡಿ ಹೇಳಿದರು.

‘ಇಂದಿಗೂ ರೈತರು ಉತ್ಪಾದಿಸುವ ಬೀಜಕ್ಕೆ ಉತ್ತಮ ದರವಿದೆ. ಸಾಮಾನ್ಯ ಕೃಷಿಗಿಂತವೂ ಬೀಜ ಕೃಷಿ ಭಿನ್ನವಾಗಿದೆ. ಪರಾಗ ಸ್ಪರ್ಶ ಹಾಗೂ ನಾಟಿ ಕ್ರಮಗಳ ಬಗ್ಗೆ ಮಾಹಿತಿ ಇದ್ದವರು, ಈ ಕೃಷಿಯಲ್ಲಿ ಯಶಸ್ವಿ ರೈತರಾಗಬಹುದು’ ಎಂದರು.

‘ಬೀಜೋತ್ಪಾದನೆಗೆ ಶಕ್ತಿ ತುಂಬಿದ ಹಸಿರು ಕ್ರಾಂತಿ’

ಸ್ವಾತಂತ್ರ್ಯದ ನಂತರ ಸ್ಥಾಪನೆಯಾದ ಅಖಂಡ ಧಾರವಾಡ ಜಿಲ್ಲೆ ವ್ಯಾಪ್ತಿಗೆ ರಾಣೆಬೆನ್ನೂರು ಸೇರ್ಪಡೆಯಾಯಿತು. ಈ ಸಂದರ್ಭದಲ್ಲೂ ತಕ್ಕಮಟ್ಟಿಗೆ ಮಳೆಯಾಶ್ರಿತ ಬೀಜೋತ್ಪಾದನೆ ಮುಂದುವರಿಯಿತು. ಸುಮಾರು ವರ್ಷಗಳ ಹಿಂದೆ ಗಡಿಗ್ರಾಮವಾದ ಜೋಯಿಸರಹಳ್ಳಿಯಲ್ಲಿ ಬೇಸಿಗೆ ಇರುವಾಗ, ನೀರಿಗೆ ತೀವ್ರ ಹಾಹಾಕಾರ ಎದುರಾಯಿತು. ಜಿಲ್ಲಾಡಳಿತ ಚಕ್ಕಡಿಯ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿತ್ತು. ಅವಾಗಲೇ ಗ್ರಾಮದಲ್ಲಿ ಕೊಳವೆ ಬಾವಿಯೊಂದನ್ನು ಕೊರೆಸಬೇಕೆಂಬ ಆಗ್ರಹ ಹೆಚ್ಚಾಯಿತು.

ಅಖಂಡ ಧಾರವಾಡ ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಜೋಯಿಸರಹಳ್ಳಿಯಲ್ಲಿ ಕೊಳವೆ ಬಾವಿ ಕೊರೆಸಿ, ಸ್ಥಳೀಯರಿಗೆ ನೀರು ಕೊಡಲಾಯಿತು. ವರ್ಷಗಳು ಕಳೆದಂತೆ ಕೊಳವೆ ಬಾವಿ ನೀರು ಸಹ ಬೀಜೋತ್ಪಾದನೆಗೆ ಸಹಕಾರಿಯಾಯಿತು. 1965ರಲ್ಲಿ ದೇಶದಲ್ಲಿ ಹಸಿರು ಕ್ರಾಂತಿಯ ಪರ್ವ ಶುರುವಾಗುತ್ತಿದ್ದಂತೆ, ರಾಣೆಬೆನ್ನೂರಿನ ಬೀಜ ಕೃಷಿಗೆ ವೈಜ್ಞಾನಿಕ ಸ್ಪರ್ಶ ಸಿಕ್ಕಂತಾಯಿತು. 1997 ಆಗಸ್ಟ್ 24ರಂದು ಹಾವೇರಿ ಜಿಲ್ಲೆಯಾದಾಗ, ಅದಕ್ಕೆ ರಾಣೆಬೆನ್ನೂರು ತಾಲ್ಲೂಕು ಕೇಂದ್ರವಾಗಿ ಸೇರ್ಪಡೆಗೊಂಡಿತು.

‘ದೇಶದಲ್ಲಿ ಶುರುವಾಗಿದ್ದ ಹಸಿರು ಕ್ರಾಂತಿ, ಬೀಜೋತ್ಪಾದನೆಯಲ್ಲಿ ಪಳಗಿದ್ದ ರಾಣೆಬೆನ್ನೂರಿನ ರೈತರ ಬದುಕಿನ ದಿಕ್ಕನ್ನೇ ಬದಲಾಯಿಸಿತು. ಬೀಜ ಉತ್ಪಾದಿಸಿ ಸ್ಥಳೀಯ ಮಟ್ಟಕ್ಕಷ್ಟೇ ಸೀಮಿತವಾಗಿದ್ದ ರೈತರು, ಜಾಗತಿಕ ಮಟ್ಟಕ್ಕೆ ಪರಿಚಯವಾದರು. ಹೊಸ ರೈತರು, ಹೊಸ ಕಂಪನಿಗಳು ಬರುತ್ತಲೇ ಇವೆ’ ಎಂದು ಕೃಷಿ ಇಲಾಖೆಯ ನಿವೃತ್ತ ಹೆಚ್ಚುವರಿ ನಿರ್ದೇಶಕರೂ ಆಗಿದ್ದ ರಾಜ್ಯ ಬೀಜ ಪ್ರಮಾಣ ಸಂಸ್ಥೆಯ ನಿವೃತ್ತ ನಿರ್ದೇಶಕ ಎಸ್.ಸಿ.ವಿ. ರೆಡ್ಡಿ ಹೇಳಿದರು.

‘ನಾನು ಕೃಷಿ ಇಲಾಖೆಯಲ್ಲಿ ವೃತ್ತಿ ಆರಂಭಿಸಿದಾಗ, 1978–79ರಲ್ಲಿ ಮೊದಲಿಗೆ ಬೀಜೋತ್ಪಾದನೆ ಕೆಲಸದ ಜವಾಬ್ದಾರಿ ನೀಡಿದರು. ಹನುಮನಮಟ್ಟಿ ಡಿಸಿಎಚ್–32 ವರಲಕ್ಷ್ಮಿ ಬೀಜ ಉತ್ಪಾದನೆಗಾಗಿ ರೈತರಿಗೆ ತರಬೇತಿ ನೀಡಿದೆವು. ದುಪ್ಪಟ್ಟು ಹಣ ಕೊಟ್ಟು ಬೀಜ ಖರೀದಿಸುವುದಾಗಿಯೂ ಘೋಷಿಸಿದ್ದೆವು. ಖಾಸಗಿ ಬೀಜ ಉತ್ಪಾದಕರು ಹಾಗೂ ಕೃಷಿ ಇಲಾಖೆಯಿಂದ ನಡೆಯುತ್ತಿದ್ದ ಬೀಜೋತ್ಪಾದನೆ ತಿಳಿದುಕೊಂಡ ಖಾಸಗಿ ಕಂಪನಿಯವರು, ರಾಣೆಬೆನ್ನೂರಿಗೆ ಲಗ್ಗೆ ಇಟ್ಟರು. ಇದರ ಜೊತೆಯಲ್ಲಿ ಚಿಕ್ಕಬಳ್ಳಾಪುರದಲ್ಲೂ ಕಂಪನಿಗಳ ಬೀಜೋತ್ಪಾದನೆ ಶುರುವಾಯಿತು’ ಎಂದು ಅವರು ಹೇಳಿದರು.

‘ರಾಣೆಬೆನ್ನೂರು ತಾಲ್ಲೂಕಿನ ಜೋಯಿಸರಹಳ್ಳಿ ಹಾಗೂ ಸುತ್ತಮುತ್ತಲಿನ ವಾತಾವರಣ, ಬೀಜ ಕೃಷಿಗೆ ಹೇಳಿ ಮಾಡಿಸಿದಂತಿದೆ. ರೈತರು ಪಳಗಿದ್ದಾರೆ. ಕೃಷಿ ವಿಜ್ಞಾನಿಗಳ ತಾಂತ್ರಿಕ ಸಹಾಯ, ರೈತರ ಸಹಕಾರ ಹಾಗೂ ಕೃಷಿ ಇಲಾಖೆಯ ಕ್ರಮಗಳಿಂದಾಗಿ ರಾಣೆಬೆನ್ನೂರು ಇಂದು ಬೀಜಗಳ ಹಬ್ ಆಗಿ ಬೆಳೆದಿದೆ’ ಎಂದರು.

ಏಜೆಂಟರ ಹಾವಳಿ

ರೈತರು ಹಾಗೂ ಕಂಪನಿಗಳ ನಡುವಿನ ವ್ಯವಹಾರದಲ್ಲಿ ಕೆಲ ಷರತ್ತುಗಳಿಗೆ ಚ್ಯುತಿ ಉಂಟಾಗಿದ್ದರಿಂದ, ಇತ್ತೀಚಿನ ದಿನಗಳಲ್ಲಿ ಏಜೆಂಟರ ಹಾವಳಿ ಹೆಚ್ಚಾಗಿದೆ. ಕಂಪನಿ ಹಾಗೂ ರೈತರ ನಡುವಿನ ಸಂಪರ್ಕ ಸೇತುವೆಯಾಗಿ ಕೆಲಸ ಮಾಡುತ್ತಿರುವ ಏಜೆಂಟರು, ಎರಡೂ ಕಡೆಯಿಂದಲೂ ಕಮಿಷನ್ ಪಡೆದುಕೊಂಡು ಲಾಭದ ದಾರಿಯಲ್ಲಿ ಸಾಗಿದ್ದಾರೆ.

‘ಕಂಪನಿಯವರು ನೀಡಿದ್ದ ಬೀಜಗಳನ್ನು ಉತ್ಪಾದಿಸಿದ್ದ ಕೆಲ ರೈತರು, ಅದನ್ನು ವಾಪಸು ಕಂಪನಿಗೆ ನೀಡದೇ ಮುಚ್ಚಿಟ್ಟುಕೊಂಡು ಖುದ್ದಾಗಿ ಮಾರಿದ್ದರು. ಹೀಗಾಗಿ, ಕಂಪನಿಯು ರೈತರ ಮೇಲಿನ ವಿಶ್ವಾಸ ಕಳೆದುಕೊಂಡಿತು. ಇದೇ ಏಜೆಂಟರ ಹುಟ್ಟಿಗೂ ಕಾರಣವಾಯಿತು. ಹಲವು ಕಂಪನಿಗಳು ರಾಣೆಬೆನ್ನೂರು ತೊರೆದು ಬೇರೆಡೆ ಹೋದವು. ಇದೊಂದು ಬೆಳವಣಿಗೆ, ಬೀಜಗಳ ತವರೂರಿಗೊಂದು ಕಪ್ಪುಚುಕ್ಕೆಯಾಯಿತು’ ಎಂದು ರೈತ ಮುಖಂಡ ರವೀಂದ್ರಗೌಡ ಪಾಟೀಲ ಹೇಳಿದರು.

‘ಕೆಲ ರೈತರು ಮಾತ್ರ ಇಂದಿಗೂ ಕಂಪನಿಯವರ ವಿಶ್ವಾಸ ಉಳಿಸಿಕೊಂಡು ಬೀಜೋತ್ಪಾದನೆ ಮಾಡುತ್ತಿದ್ದಾರೆ. ಉಳಿದೆಲ್ಲ ಕಂಪನಿಗಳು ಇಂದು ಏಜೆಂಟರ ಮೂಲಕ ವ್ಯವಹಾರ ಮಾಡುತ್ತಿವೆ. ಏಜೆಂಟರೇ ಕಂಪನಿ ಪರವಾಗಿ ಗಂಡು–ಹೆಣ್ಣು ಸಸಿ ಕೊಡುತ್ತಿದ್ದಾರೆ. ರೈತರು ಬೆಳೆದ ಬೀಜಗಳನ್ನು ಖರೀದಿಸಿ, ಕಂಪನಿಗೆ ನೀಡುತ್ತಿದ್ದಾರೆ’ ಎಂದು ತಿಳಿಸಿದರು.

ಕಳಪೆ ಬಿತ್ತನೆ ಬೀಜಗಳ ವಿರುದ್ಧ ಪ್ರಕರಣ: ಡಿಸಿ

ಹೊರ ಜಿಲ್ಲೆ, ಹೊರ ರಾಜ್ಯ ಹಾಗೂ ವಿದೇಶದಿಂದ ಬಂದು ರಾಣೆಬೆನ್ನೂರಿನಲ್ಲಿ ಬೀಜ ಖರೀದಿಸಿಕೊಂಡು ಹೋಗುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲವರು, ಕಳಪೆ ಬೀಜಗಳ ಮಾರಾಟದಲ್ಲಿ ತೊಡಗಿದ್ದಾರೆ. ಈ ಜಾಲಕ್ಕೆ ಸಿಲುಕಿ ನಷ್ಟ ಅನುಭವಿಸಿರುವ 639 ರೈತರು ಈಗಾಗಲೇ ಜಿಲ್ಲಾಡಳಿತಕ್ಕೆ ದೂರು ನೀಡಿದ್ದಾರೆ.

ಜಿಲ್ಲೆಯ ರಾಣೆಬೆನ್ನೂರಿನಲ್ಲಿರುವ ನಿಸರ್ಗ ಸೀಡ್ಸ್ ಕಂಪನಿಯವರು ರೈತರಿಗೆ ಮಾರಿದ್ದ ನಿಸರ್ಗ ಗೋಲ್ಡ್–3399, ನಿಸರ್ಗ–4555, ಎಸ್–25 ಹಾಗೂ ನಿಸರ್ಗ–99 ಹೆಸರಿನ ಮೆಕ್ಕೆಜೋಳದ ಬೀಜಗಳು ಕಳಪೆ ಎಂಬುದನ್ನು ಪ್ರಯೋಗಾಲಯದ ವರದಿ ಮೂಲಕ ಕೃಷಿ ಇಲಾಖೆ ಅಧಿಕಾರಿಗಳು ಪತ್ತೆ ಮಾಡಿದ್ದು, ಈ ಸಂಬಂಧ ಪ್ರಕರಣವನ್ನೂ ದಾಖಲಿಸಿದ್ದಾರೆ.

‘ಬೀಜಗಳ ಮಾರಾಟಕ್ಕೆ ರಾಣೆಬೆನ್ನೂರು ಹೆಸರುವಾಸಿಯಾಗಿದೆ. ಹಾವೇರಿ ಮಾತ್ರವಲ್ಲದೇ ದಾವಣಗೆರೆ, ವಿಜಯಪುರ, ವಿಜಯನಗರ, ಕೊಪ್ಪಳ, ಬಳ್ಳಾರಿ, ಧಾರವಾಡ, ಚಿತ್ರದುರ್ಗ, ಶಿವಮೊಗ್ಗ ಹಾಗೂ ಇತರೆ ಜಿಲ್ಲೆಗಳ ರೈತರು ರಾಣೆಬೆನ್ನೂರಿಗೆ ಬಂದು ಬೀಜ ಖರೀದಿಸಿಕೊಂಡು ಹೋಗುತ್ತಾರೆ. 150ಕ್ಕೂ ಹೆಚ್ಚು ಮಳಿಗೆಗಳು ರಾಣೆಬೆನ್ನೂರಿನಲ್ಲಿವೆ. ಈ ಪೈಕಿ 11 ಮಳಿಗೆಗಳಲ್ಲಿ ನಿಸರ್ಗ ಸೀಡ್ಸ್ ಕಂಪನಿಯ ಕಳಪೆ ಬೀಜಗಳನ್ನು ಮಾರಾಟ ಮಾಡಿರುವುದು ಪತ್ತೆಯಾಗಿದೆ’ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ‘ಪ್ರಜಾವಾಣಿ’ಗೆ ತಿಳಿಸಿದರು.

‘ರಾಣೆಬೆನ್ನೂರಿನ ಶಿವಂ ಸೀಡ್ಸ್, ಮರುಳಸಿದ್ದೇಶ್ವರ ಸೀಡ್ಸ್, ನಿಸರ್ಗ ಸೀಡ್ಸ್, ಸುರ್ಯೋದಯ ಸೀಡ್ಸ್, ಪ್ರಕಾಶ ಹೈಬ್ರೀಡ್ ಸೀಡ್ಸ್, ನಂದಿ ಸೀಡ್ಸ್, ಕೆ.ಬಿ. ಸೀಡ್ಸ್, ಮಣಿಕಂಠ ಸೀಡ್ಸ್, ಗುರು ಹೈಬ್ರೀಡ್ ಸೀಡ್ಸ್, ಗುರು ಶಾಂತೇಶ್ವರ ಅಗ್ರೊ ಸೆಂಟರ್ ಹಾಗೂ ಮಂಗಳಾ ಸೀಡ್ಸ್ ಮಳಿಗೆ ಮೇಲೂ ದಾಳಿ ಮಾಡಿ ಕಳಪೆ ಬೀಜಗಳನ್ನು ಜಪ್ತಿ ಮಾಡಲಾಗಿದೆ’ ಎಂದರು.

‘ಕಳಪೆ ಬೀಜಗಳಿಂದ ನಷ್ಟ ಅನುಭವಿಸಿದ್ದ ರೈತರಿಂದ ಅರ್ಜಿ ಆಹ್ವಾನಿಸಲಾಗಿತ್ತು. ಹಾವೇರಿ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ 639 ರೈತರು ಇದುವರೆಗೂ ಅರ್ಜಿ ಸಲ್ಲಿಸಿದ್ದಾರೆ. ಅವರೆಲ್ಲರೂ 9,392 ಪೊಟ್ಟಣ ಕಳಪೆ ಬೀಜ ಖರೀದಿಸಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ’ ಎಂದು ವಿಜಯ ಮಹಾಂತೇಶ ತಿಳಿಸಿದರು.

‘ಪರಾಗ ಸ್ಪರ್ಶ ಕ್ರಿಯೆಯೇ ಮುಖ್ಯ’

‘ಬೀಜ ಕೃಷಿಯಲ್ಲಿ ಪರಾಗ ಸ್ಪರ್ಶವೇ ಮಹತ್ವದ್ದು. ಸರಿಯಾದ ಸಮಯಕ್ಕೆ ಸರಿಯಾದ ರೀತಿಯಲ್ಲಿ ಪರಾಗ ಸ್ಪರ್ಶ ಮಾಡಿದರಷ್ಟೇ, ಇಳುವರಿ ಹೆಚ್ಚಾಗಿ ಲಾಭವಾಗುತ್ತದೆ. ಇಲ್ಲದಿದ್ದರೆ, ನಷ್ಟ ಅನುಭವಿಸಬೇಕಾಗುತ್ತದೆ’ ಎಂದು ಅಶೋಕ ಸೀಡ್ಸ್ ಕಂಪನಿಯ ಮೇಲ್ವಿಚಾರಕ ಸುರೇಶ ಮಡಿವಾಳರ ತಿಳಿಸಿದರು.

‘ಈಗ ಟೊಮೆಟೊ ಬೀಜ ಕೃಷಿ ಆರಂಭವಾಗಿದೆ. ರೈತರು ಪ್ಲಾಟ್ಗಳನ್ನು ಸಿದ್ಧಪಡಿಸಿಕೊಂಡಿದ್ದಾರೆ. ಅವರಿಗೆ, 1,500 ಹೆಣ್ಣು ಸಸಿಗಳಿಗೆ 500 ಗಂಡು ಲೆಕ್ಕದಲ್ಲಿ ಸಸಿ ನೀಡುತ್ತೇವೆ. ಅವರು ಮೂರು ತಿಂಗಳು ಬೆಳೆ ಬೆಳೆಸಿ, ಟೊಮೆಟೊ ಬೀಜವನ್ನು ನಮಗೆ ವಾಪಸು ಕೊಡುತ್ತಾರೆ. ಅದೇ ಬೀಜವನ್ನು ನಾವು ಬೆಂಗಳೂರಿನ ಕಂಪನಿಯ ಪ್ರಯೋಗಾಲಯಕ್ಕೆ ಕಳುಹಿಸುತ್ತೇನೆ. ಮೂರು ತಿಂಗಳ ನಂತರ, ರೈತರ ಖಾತೆಗೆ ಹಣ ಜಮೆ ಆಗುತ್ತದೆ. ಇತ್ತೀಚಿನ ದಿನಗಳಲ್ಲಿ ಅನುಭವಿ ಕಾರ್ಮಿಕರ ಕೊರತೆಯಿಂದ ಪರಾಗ ಸ್ಪರ್ಶ ಸರಿಯಾಗಿ ಆಗುತ್ತಿಲ್ಲ. ಇಳುವರಿಯೂ ಕಡಿಮೆಯಾಗುತ್ತಿದೆ’ ಎಂದು ಹೇಳಿದರು.

ರಾಣೆಬೆನ್ನೂರಿನ ಬಿತ್ತನೆ ಬೀಜ ಕೃಷಿಗೆ ಬೇಡಿಕೆಯಿದೆ. ಹೊಸಬರು ಈ ಕ್ಷೇತ್ರಕ್ಕೆ ಬರುತ್ತಿದ್ದು, ಸಾಂಪ್ರದಾಯಕ ಬೆಳೆಗಳಿಗಿಂತಲೂ ಬೀಜ ಕೃಷಿಯಲ್ಲಿ ಉತ್ತಮ ಆದಾಯ ಗಳಿಸುತ್ತಿದ್ದಾರೆ
ಬಿ.ಎಚ್. ಜಂಬೂರು, ವ್ಯವಸ್ಥಾಪಕ, ಅಶೋಕ ಸೀಡ್ಸ್ ಕಂಪನಿ

ಪರಿಕಲ್ಪನೆ: ಯತೀಶ್ ಕುಮಾರ್ ಜಿ.ಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.