ಇದೇ ಮೊದಲ ಬಾರಿಗೆ ಭಾರತದಲ್ಲಿ ಎಎಂಆರ್ ಕುರಿತ ಸಮಗ್ರ ಕಾರ್ಯತಂತ್ರ ರೂಪಿಸಲಾಗಿದೆ. ಸಹಾನುಭೂತಿ ಹಾಗೂ ವಾಸ್ತವಿಕತೆಯೇ ಈ ಕಾರ್ಯತಂತ್ರದ ಬುನಾದಿಯಾಗಿದೆ.
–ಡಾ.ಶ್ವೇತವಲ್ಲಿ ರಾಘವನ್, ಸಲಹೆಗಾರ್ತಿ ಎಎಂಆರ್ ಕುರಿತ ಕಾರ್ಯತಂತ್ರ ಕರ್ನಾಟಕ
ದಿನದಿಂದ ದಿನಕ್ಕೆ ಆಹಾರದ ಕಲಬೆರಕೆ ಹೆಚ್ಚುತ್ತಿದೆ. ಇದರಿಂದ ಮನುಷ್ಯನಲ್ಲಿರುವ ರೋಗ ನಿರೋಧಕ ಶಕ್ತಿ ಕ್ಷೀಣಿಸುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಆ್ಯಂಟಿಬಯೋಟಿಕ್‌ಗಳಿಗೆ ಬ್ಯಾಕ್ಟೀರಿಯಾಗಳು ಪ್ರತಿರೋಧ ಬೆಳೆಸಿಕೊಂಡಾಗ ಚಿಕಿತ್ಸೆ ಕಠಿಣವಾಗುವುದು. ರೋಗಿಗಳಿಗೆ ಹೆಚ್ಚು ಶಕ್ತಿಶಾಲಿ ಆ್ಯಂಟಿಬಯೋಟಿಕ್‌ಗಳನ್ನು ನೀಡಬೇಕಾಗುತ್ತದೆ. ಇದು ಆರ್ಥಿಕ ಹೊರೆಯನ್ನೂ ಹೆಚ್ಚಿಸುತ್ತದೆ.
–ಡಾ.ಶಂಕರ್ ಸಿರಾ, ಹಿರಿಯ ವೈದ್ಯಾಧಿಕಾರಿ ಬೆಂಗಳೂರು ಆಸ್ಪತ್ರೆ
ಜಗತ್ತಿನಾದ್ಯಂತ ಕೋವಿಡ್ ಅವಧಿಯಲ್ಲಿ ಮೃತಪಟ್ಟ ಜನರಿಗಿಂತ ದುಪ್ಪಟ್ಟು ಪ್ರಮಾಣದಲ್ಲಿ ಪ್ರತಿ ವರ್ಷ ಆ್ಯಂಟಿಬಯೋಟಿಕ್ ಪ್ರತಿರೋಧ ಬೆಳೆಸಿಕೊಳ್ಳುವುದರಿಂದ ಸಾಯುತ್ತಿದ್ದಾರೆ. ಇತ್ತೀಚೆಗೆ ಸಮುದಾಯದಲ್ಲಿ ಆ್ಯಂಟಿಬಯೋಟಿಕ್ ಪ್ರತಿರೋಧ ಹೆಚ್ಚಾಗುತ್ತಿದೆ. ಒಂದು ರೀತಿ ಗಂಡಾಂತರ ಎದುರಿಸುತ್ತಿದ್ದೇವೆ. ಕುಕ್ಕುಟೋದ್ಯಮ, ಪಶು ಸಂಗೋಪನೆ ಕ್ಷೇತ್ರದಲ್ಲೂ ಆ್ಯಂಟಿಬಯೋಟಿಕ್ ಹಾವಳಿ ಹೆಚ್ಚಾಗಿದ್ದು, ಇದರಿಂದ ಮನುಷ್ಯರ ಜೊತೆಗೆ, ಪರಿಸರದ ಮೇಲೂ ದುಷ್ಪರಿಣಾಮಬೀರುತ್ತಿದೆ. ಔಷಧ ಕಂಪನಿಗಳು ಜಾಹಿರಾತಿನ ಮೂಲಕ ಜನರನ್ನು ತಪ್ಪು ದಾರಿಗೆ ಎಳೆಯುತ್ತಿವೆ. ಇದಕ್ಕೆ ಪರಿಹಾರವೆಂದರೆ, ಕಂಪನಿಗಳ ಆ್ಯಂಟಿಬಯೋಟಿಕ್ ಬಳಕೆಯ ಉತ್ತೇಜನದ ಪ್ರಚಾರದ (ಜಾಹಿರಾತು) ಮೇಲೆ ಸರ್ಕಾರ ನಿಯಂತ್ರಣ ಹೇರಬೇಕು. ‘ಪ್ರಚಾರ’ದಲ್ಲಿ ಕೇವಲ ವೈಜ್ಞಾನಿಕ ಅಂಶಗಳಷ್ಟೇ ಇರಬೇಕೆಂಬ ನಿಬಂಧನೆ ವಿಧಿಸಬೇಕು. ಮುಖ್ಯವಾಗಿ, ಆ್ಯಂಟಿಬಯೋಟಿಕ್ ಕುರಿತು ಮಾಧ್ಯಮಗಳ ಮೂಲಕ ಜನರಲ್ಲಿ ಅರಿವು ಮೂಡಿಸಬೇಕು.
-ಡಾ. ಗೋಪಾಲ ದಾಬಡೆ, ಅಧ್ಯಕ್ಷರು, ಡ್ರಗ್ ಆಕ್ಷನ್ ಫೋರಂ – ಕರ್ನಾಟಕ