
ಅವಳ ಸಾಧನೆ ಸಂಭ್ರಮಿಸೋಣ ನಮ್ಮ ಜಗವ ಬೆಳಗೋಣ...
ನಮ್ಮ ಸಮಾಜದ ಚಾಲಕ ಶಕ್ತಿಯಾದ ಮಹಿಳೆಯರ ನಿಸ್ವಾರ್ಥ ಸೇವೆ ಮತ್ತು ಸಾಧನೆಯನ್ನು ಗುರುತಿಸಲು ಕಳೆದ ವರ್ಷ ಆರಂಭಿಸಲಾದ ‘ಪ್ರಜಾವಾಣಿ ಸಾಧಕಿಯರು’ ಪ್ರಶಸ್ತಿಗೆ ಇದೀಗ ಸಾರ್ಥಕ ಎರಡನೇ ವರ್ಷಕ್ಕೆ ಕಾಲಿಟ್ಟ ಸಂಭ್ರಮ. ಪುರುಷ ಪ್ರಧಾನ ವ್ಯವಸ್ಥೆಗೆ ಸಡ್ಡು ಹೊಡೆದು ನಿಂತ ಸಹೋದರಿಯರು, ಪುರುಷರಷ್ಟೇ ಮಾಡಬಲ್ಲರು ಎನ್ನುವ ಲಾರಿ ಕವಚ ಕಟ್ಟುವ ಕ್ಷೇತ್ರದಲ್ಲಿ ಹೆಜ್ಜೆ ಗುರುತು ಮೂಡಿಸಿದವರು, ಅಂಧ ಕ್ರಿಕೆಟ್ ತಂಡದಲ್ಲಿ ಸಾಧನೆ ಮೆರೆದವರು, ಕ್ಯಾನ್ಸರ್ ಚಿಕಿತ್ಸಾ ಕ್ಷೇತ್ರದಲ್ಲಿ ನಕ್ಷತ್ರವಾಗಿ ಮಿನುಗಿದವರು... ಇಂತಹ ಸಾಧಕಿಯರನ್ನು ಎಲೆಮರೆಯಿಂದ ಹೆಕ್ಕಿ ತೆಗೆದು, ಗುರುತಿಸಿ, ಗೌರವಿಸಿದ ಶ್ರೇಯ ಈ ಪ್ರಶಸ್ತಿಯದು.
ನಮ್ಮ ಸುತ್ತಲಿನ ಸಮಾಜ ಇಂದು ಇಷ್ಟು ಸಹ್ಯವಾಗಿ ಉಳಿಯುವಲ್ಲಿ ಸ್ತ್ರೀಶಕ್ತಿಯೇ ಪ್ರಧಾನ ಕಾರಣ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಆ ಶಕ್ತಿ ಅಷ್ಟೊಂದು ಢಾಳಾಗಿ ಪ್ರಕಟಗೊಳ್ಳದೆ ‘ಅದೃಶ್ಯ’ವಾಗಿ ಉಳಿದಿದಿದೆ. ಶಿಕ್ಷಣತಜ್ಞೆಯಾಗಿ, ಸಮಾಜ ಪರಿವರ್ತನೆಯ ಹರಿಕಾರಳಾಗಿ, ಆವಿಷ್ಕಾರಗಳ ಮುಂದಾಳಾಗಿ, ನ್ಯಾಯಪರ ಹೋರಾಟಗಾರ್ತಿಯಾಗಿ, ನಮ್ಮ ಭವಿಷ್ಯದ ಪೋಷಕಿಯಾಗಿ ಅವಳ ಪಾತ್ರದ ಹಿರಿಮೆಗೆ ಎಲ್ಲೆಯೇ ಇಲ್ಲ. ಸುತ್ತಲ ಸಮಾಜದ ಪರಿವರ್ತನೆಗೆ ಕಾರಣರಾದ ಅಸಾಮಾನ್ಯ ಸಾಧಕಿಯರ ಯಶೋಗಾಥೆಗಳನ್ನು ಸಮಾಜಕ್ಕೆ ಪರಿಚಯಿಸುವ ಉದ್ದೇಶವನ್ನು ತಲೆಯ ಮೇಲೆ ಹೊತ್ತುಕೊಂಡಿರುವ ಈ ಪ್ರಶಸ್ತಿಯು ಅಂತಹ ಮತ್ತೊಂದು ಸಾಧಕಿಯರ ತಂಡದೊಂದಿಗೆ ಈಗ ನಿಮ್ಮ ಮುಂದೆ ಬಂದಿದೆ.
ತಮ್ಮ ಪ್ರತಿಭೆಯಿಂದ ಜಗದಗಲ ಬೆಳೆದು ನಿಂತ ಸಾಧಕಿಯರು ನಮ್ಮ ನಡುವೆ ಬೇಕಾದಷ್ಟು ಮಂದಿ ಇದ್ದಾರೆ. ಅವರೆಲ್ಲ ಸದ್ದಿಲ್ಲದೆ ತಮ್ಮ ಕಾಯಕದಲ್ಲಿ ನಿರತರಾಗಿದ್ದಾರೆ. ಬನ್ನಿ, ಸಮಾಜ ಪರಿವರ್ತನೆಗೆ ಕಾರಣರಾದ ಅಂತಹ ಸಾಧಕಿಯರನ್ನು ಒಟ್ಟಾಗಿ ಗೌರವಿಸೋಣ.
ರವೀಂದ್ರ ಭಟ್
ಕಾರ್ಯನಿರ್ವಾಹಕ ಸಂಪಾದಕ
ಗೌರವಾನ್ವಿತ ತೀರ್ಪುಗಾರರು