ಆಶಯ
ಚಂದನವನದ ಪ್ರತಿಭೆಗಳನ್ನು ಗುರುತಿಸಲು ಮತ್ತು ಕನ್ನಡ ಚಿತ್ರರಂಗದ ಅಭೂತಪೂರ್ವ ಪರಂಪರೆಯನ್ನು ಎತ್ತಿಹಿಡಿಯಲು ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ ವೇದಿಕೆಯಾಗಬೇಕೆಂಬುದೇ ಆಶಯ. ಸ್ಯಾಂಡ್‌ವುಡ್‌ನಲ್ಲಿರುವ ಅಸಾಧಾರಣ ಪ್ರತಿಭೆಗಳನ್ನು ಗುರುತಿಸಿ, ಪ್ರಶಂಸಿಸಿ ಚಿತ್ರರಂಗದ ಬೆಳವಣಿಗೆಗೆ ಉತ್ತೇಜನ ನೀಡುವ ಉದ್ದೇಶದಿಂದಲೇ ಮೂರನೇ ಆವೃತ್ತಿಗೂ ಅಣಿಯಾಗುತ್ತಿದೆ.
ಸಿದ್ಧತೆ ಹೀಗಿದೆ?
2024ರಲ್ಲಿ ಇನ್ನೂರಕ್ಕೂ ಅಧಿಕ ಕನ್ನಡ ಸಿನಿಮಾಗಳು ತೆರೆಕಂಡಿವೆ. ಚಿತ್ರರಂಗದ ಪಿಆರ್‌ಒಗಳ ಸಹಕಾರದೊಂದಿಗೆ ಈ ಚಿತ್ರಗಳ ನಿರ್ಮಾಪಕರು ಮತ್ತು ನಿರ್ದೇಶಕರನ್ನು ಸಂಪರ್ಕಿಸಲಾಗಿದೆ. ಸಿನಿಮಾಗಳ ಸಂಗ್ರಹ ಪ್ರಕ್ರಿಯೆ ಶುರುವಾಗಿದ್ದು, ಇಲ್ಲಿಯವರೆಗೆ ನೂರಕ್ಕೂ ಹೆಚ್ಚು ಸಿನಿಮಾಗಳನ್ನು ಸ್ವೀಕರಿಸಲಾಗಿದೆ. ಈ ಸಂದರ್ಭದಲ್ಲಿ ಆಡಿಟ್ ಪಾರ್ಟ್‌ನರ್ ಆಗಿ ‘ಇವೈ’ ಸಂಸ್ಥೆ ಜೊತೆಯಾಗಿದೆ.
ಆಯ್ಕೆ ಪ್ರಕ್ರಿಯೆ ಹೇಗೆ?
2024ರ ಜನವರಿ 1ರಿಂದ ಡಿಸೆಂಬರ್ 31ರವರೆಗೆ ಸೆನ್ಸಾರ್ ಮಂಡಳಿಯಿಂದ ಪ್ರಮಾಣೀಕೃತಗೊಂಡು ಬಿಡುಗಡೆಯಾದ ಚಿತ್ರಗಳನ್ನು ಮೂರನೇ ಆವೃತ್ತಿಗೆ ಪರಿಗಣಿಸಲಾಗಿದೆ. ಆಯ್ಕೆ ಪ್ರಕ್ರಿಯೆ ವಿಶಿಷ್ಟವಾಗಿದೆ. ಚಿತ್ರರಂಗದವರು ಹಾಗೂ ಪ್ರೇಕ್ಷಕರನ್ನು ಒಳಗೊಳ್ಳುವಂತಹ ಆಲೋಚನೆಯಿದು. ನಾಮನಿರ್ದೇಶಿತರ ಹಾಗೂ ವಿಜೇತರ ಕುರಿತಂತೆ ಯಾವುದೇ ಪೂರ್ವಗ್ರಹ ಇರಕೂಡದು ಎಂಬ ಎಚ್ಚರಿಕೆ ಇದಾಗಿದೆ. ಆಯ್ಕೆಯು ಯಾವುದೇ ವ್ಯಕ್ತಿಗಳು, ಸಂಸ್ಥೆಗಳ ಹಸ್ತಕ್ಷೇಪಕ್ಕೆ ಅವಕಾಶವಿಲ್ಲದಂತೆ ಅತ್ಯಂತ ಪಾರದರ್ಶಕ ಮತ್ತು ವೃತ್ತಿಪರವಾಗಿ ನಡೆಯುತ್ತದೆ. ಇಡೀ ಆಯ್ಕೆ ಪ್ರಕ್ರಿಯೆಯನ್ನು ಮೂರು ಸ್ತರಗಳಲ್ಲಿ ನಡೆಸಲಾಗುತ್ತದೆ. ಚಿತ್ರಗಳನ್ನು ಸುಮಾರು 21 ಪರಿಣತರ ತಾಂತ್ರಿಕ ತೀರ್ಪುಗಾರರ ಮಂಡಳಿ ವೀಕ್ಷಿಸಿದ್ದು, ಪ್ರತಿ ವಿಭಾಗದಲ್ಲಿ ತಲಾ ಐದು ನಾಮನಿರ್ದೇಶನ ಮಾಡಿದ್ದಾರೆ. ಇದು ಶೀಘ್ರದಲ್ಲೇ ಘೋಷಣೆಯಾಗಲಿದೆ.
ಖ್ಯಾತ ನಿರ್ದೇಶಕ ಟಿ.ಎಸ್.ನಾಗಾಭರಣ ಮುಖ್ಯ ತೀರ್ಪುಗಾರರ ಸಮಿತಿಯಲ್ಲಿ ಮುಖ್ಯಭೂಮಿಕೆಯಲ್ಲಿ ಇದ್ದಾರೆ. ಸತತ ಏಳು ಬಾರಿ ರಾಷ್ಟ್ರಪ್ರಶಸ್ತಿ ಪಡೆದ ಭಾರತದ ಏಕೈಕ ನಿರ್ದೇಶಕರಾದ ಪಿ. ಶೇಷಾದ್ರಿ, ನಟಿಯರಾದ ಅನು ಪ್ರಭಾಕರ್, ಪೂಜಾ ಗಾಂಧಿ, ನಿರ್ದೇಶಕಿ ಸುಮನಾ ಕಿತ್ತೂರು, ಸಂಗೀತ ನಿರ್ದೇಶಕ ವಿ.ಮನೋಹರ್ ಹಾಗು ಖ್ಯಾತ ನಟ ಕಿಶೋರ್ ಕುಮಾರ್ ಸಮಿತಿಯಲ್ಲಿರುವ ಮುಖ್ಯ ತೀರ್ಪುಗಾರರು. ಮೂರನೇ ಹಂತದಲ್ಲಿ ಮುಖ್ಯ ತೀರ್ಪುಗಾರರ ಮಂಡಳಿಯಿಂದ ನಾಮನಿರ್ದೇಶನಗಳಿಗೆ ಅಂತಿಮರೂಪ ದೊರೆಯಲಿದೆ. ಮೂರನೇ ಹಂತದಲ್ಲಿ, ವಿಜೇತರ ಆಯ್ಕೆಗಾಗಿ ಚಿತ್ರರಂಗದ ಸಾವಿರಕ್ಕೂ ಹೆಚ್ಚು ಜನರಿಂದ ಮತದಾನ ನಡೆಯಲಿದೆ. ಚಿತ್ರರಂಗದ ಪ್ರಮುಖ ಸಂಘ-ಸಂಸ್ಥೆಗಳ ಸದಸ್ಯರು ಮತದಾನದ ಮೂಲಕ ನಾಮನಿರ್ದೇಶಿತರಾದವರಲ್ಲಿ ಒಬ್ಬರನ್ನು ಆಯ್ಕೆ ಮಾಡುತ್ತಾರೆ. ನಂತರ ಮುಖ್ಯ ತೀರ್ಪುಗಾರರ ಮಂಡಳಿಯಿಂದ ಮೇಲಿನ ಮೂರು ಸ್ತರಗಳಿಂದಾದ ಆಯ್ಕೆಗೆ ಅಂತಿಮ ಅನುಮೋದನೆ ದೊರೆಯುತ್ತದೆ. ‘ಪ್ರಜಾವಾಣಿ ಸಿನಿ ಸಮ್ಮಾನ’ದ ಮೂರನೇ ಆವೃತ್ತಿಯ ಕಾರ್ಯಕ್ರಮ ಮತ್ತಷ್ಟು ವಿಜ್ರಂಭಣೆಯಿಂದ ಶೀಘ್ರದಲ್ಲೇ ನಡೆಯಲಿದೆ.