ಭಾನುವಾರ, 2 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಓದು | ಕಾವೇರಿ ವಿವಾದದ ಮೂಲ ಬೆನ್ನತ್ತಿ...

Published 19 ಮೇ 2024, 0:10 IST
Last Updated 19 ಮೇ 2024, 0:10 IST
ಅಕ್ಷರ ಗಾತ್ರ

ನದಿ ನೀರು ಹಂಚಿಕೆ ಈಗ ಜಾಗತಿಕ ವಿಷಯ. ಇಂಥ ವಿವಾದದಲ್ಲಿರುವ ದಕ್ಷಿಣ ಭಾರತದ ಜೀವನದಿ ಕಾವೇರಿಯ ವಿವಾದ ಇಂದು, ನಿನ್ನೆಯದಲ್ಲ. ಆ ವಿವಾದದವನ್ನೇ ಬೆನ್ನು ಹತ್ತಿರುವ ನಿವೃತ್ತ ಐಪಿಎಸ್ ಅಧಿಕಾರಿ ಸಿ.ಚಂದ್ರಶೇಖರ್ ಅವರು, ‘ಕಾವೇರಿ ವಿವಾದ ಒಂದು ಐತಿಹಾಸಿಕ ಹಿನ್ನೋಟ’ ಎಂಬ ಕೃತಿಯನ್ನು ರಚಿಸಿದ್ದಾರೆ.

ಅದು 1807ರ ಸಮಯ. ಅಂದರೆ ಇಂದಿಗೆ 217 ವರ್ಷಗಳ ಹಿಂದೆ ಆಗಿನ ಮೈಸೂರು ಸಂಸ್ಥಾನ ಕೈಗೊಂಡ ಕೆರೆಗಳ ದುರಸ್ತಿಗೆ ತಂಜಾವೂರಿನ ರೈತರು ಆಕ್ಷೇಪ ವ್ಯಕ್ತಪಡಿಸಿದ್ದರಂತೆ. ಕರ್ನಾಟಕದ ಕೆರೆಗಳ ಹೂಳೆತ್ತುವುದರಿಂದ, ಅದರಲ್ಲಿ ನೀರು ಸಂಗ್ರಹ ಹೆಚ್ಚಾದರೆ, ತಮಗೆ ಬರಬೇಕಾದ ಕಾವೇರಿ ನದಿ ನೀರಿನ ಪಾಲು ಕಡಿಮೆಯಾಗಲಿದೆ ಎಂಬುದು ತಮಿಳುನಾಡಿನವರ ವಾದ. ಇಂದು ಸಾಮಾಜಿಕ ಹಾಗೂ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿರುವ ಕಾವೇರಿ ವಿವಾದದ ಮೂಲವೂ ಇದೇ ಎಂದೆನ್ನಲಾಗುತ್ತದೆ. 

ತಮ್ಮ ಬದುಕಿನುದ್ದಕ್ಕೂ ನದಿಗಳೊಂದಿಗಿನ ಬಾಂಧವ್ಯ ಹಾಗೂ 1970ರಲ್ಲಿ ಮೈಸೂರಿಗೆ ಇಸ್ರೇಲಿ ವಿಜ್ಞಾನಿಗಳ ತಂಡದ ಭೇಟಿಯಲ್ಲಿ ಆದ ಅನುಭವ ಕಾವೇರಿ ಕುರಿತು ಅಧ್ಯಯನ ನಡೆಸಲು ಪ್ರೇರಣೆ ಎಂದು ಲೇಖಕರು ಬರೆದುಕೊಂಡಿದ್ದಾರೆ. ಹೀಗಾಗಿ ಕಾವೇರಿ ಕುರಿತ ಆಸಕ್ತಿಕರ ಅಧ್ಯಯನದ ಜತೆಗೆ, ಅದರ ವಿವಾದ ಸುತ್ತಲೂ ಲೇಖಕರು ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದಾರೆ. ಇದಕ್ಕಾಗಿ ಅವರು ಹಲವು ಗ್ರಂಥಗಳು, ವರದಿಗಳು, ನ್ಯಾಯಾಲಯ ಮತ್ತು ನ್ಯಾಯಮಂಡಳಿಗಳ ಆದೇಶಗಳು, ಕೇರಳ, ತಮಿಳುನಾಡು, ಪುದುಚೇರಿ ಜತೆ ಕರ್ನಾಟಕವು ಕಾವೇರಿ ನದಿ ನೀರನ್ನು ಹಂಚಿಕೊಳ್ಳಬೇಕಾದ ಪ್ರಮಾಣ, ರಾಜ್ಯದಿಂದ ವರ್ಷವಾರು ನೀರು ಹರಿದ ಪ್ರಮಾಣ ಹೀಗೆ ಎಲ್ಲಾ ಆಯಾಮಗಳಿಂದಲೂ ನೋಡುವ ಪ್ರಯತ್ನವನ್ನು ಲೇಖಕರು ನಡೆಸಿದ್ದಾರೆ.

ಕಾವೇರಿ ನದಿ ಪಾತ್ರದ ಇತಿಹಾಸದೊಂದಿಗೆ ಆರಂಭವಾಗುವ ಈ ಕೃತಿ ಭಾರತದ ಭೌಗೋಳಿಕ ರಚನೆ, ಹವಾಮಾನ ಬದಲಾವಣೆಯ ವಿಷಯಗಳ ಜತೆಗೆ, ರಾಜಕೀಯದ ಚರಿತ್ರೆಯೂ ಅಷ್ಟೇ ಸೊಗಸಾಗಿ ಮೂಡಿಬಂದಿದೆ. ಕಾವೇರಿಗಾಗಿ ಮೈಸೂರು ಅರಸರ ಯತ್ನ, 1794ರಲ್ಲಿ ಟಿಪ್ಪುವಿನಿಂದ ಕನ್ನಂಬಾಡಿ ಕಟ್ಟಡಕ್ಕೆ ಅಡಿಪಾಯ, ಬ್ರಿಟಿಷರು ಈ ವಿವಾದವನ್ನು ನೋಡಿದ ಬಗೆ, ಸರ್ ರಿಚರ್ಡ್‌ ಸ್ಯಾಂಕಿ ಎಂಬ ಇಂಗ್ಲಿಷ್ ಎಂಜಿನಿಯರ್ ಕರ್ನಾಟಕದಲ್ಲಿ ಉಂಟಾದ ಭೀಕರ ಬರಗಾಲಕ್ಕೆ ನೆರವಾದ ರೀತಿ, ಕಾವೇರಿಗೆ ಅಡ್ಡಲಾಗಿ ಕಟ್ಟಿರುವ ಆಣೆಕಟ್ಟೆ, ಬ್ಯಾರೇಜ್‌ ಮತ್ತು ಕಾಲುವೆ ಇತ್ಯಾದಿ ವಿಷಯಗಳನ್ನು ಸಿ.ಚಂದ್ರಶೇಖರ್ ಅವರು ಅತ್ಯಂತ ಪರಿಶ್ರಮ ಮತ್ತು ಶ್ರದ್ಧೆಯಿಂದ ಈ ಕೃತಿಯಲ್ಲಿ ದಾಖಲಿಸಿದ್ದಾರೆ.

ಇದರೊಂದಿಗೆ ಸ್ವಾತಂತ್ರ್ಯ ನಂತರದಲ್ಲಿ ಕಾವೇರಿ ನದಿ ನೀರು ಹಂಚಿಕೆ ಕುರಿತ ವಿವಾದ ನ್ಯಾಯಾಲಯದ ಅಂಗಳದಲ್ಲಿ ಹೇಗೆ ಮುಂದುವರಿಯಿತು ಎಂಬುದನ್ನು ದಾಖಲೆ ಸಹಿತ ವಿವರಿಸಿದ್ದಾರೆ. ಸಾಮಾನ್ಯ ವ್ಯಕ್ತಿಯ ದೃಷ್ಟಿಕೋನದಿಂದ ವಿವಾದವನ್ನು ನೋಡುವುದರ ಜತೆಗೆ, ಕಾನೂನಿನ ಚೌಕಟ್ಟಿನೊಳಗೆ ವಿವಾದ ಹೇಗೆ ಸಾಗಿದೆ ಎಂಬುದನ್ನು ತಿಳಿಸುವ ಲೇಖಕರ ಪ್ರಯತ್ನದಿಂದಾಗಿ ಕಾವೇರಿಯ ಇತಿಹಾಸ, ಹರಿಯುವ ಪ್ರದೇಶ, ವಿವಾದದ ಮೂಲ ಹಾಗೂ ಇಂದಿನ ಪರಿಸ್ಥಿತಿ ಕಣ್ಣಮುಂದೆ ಬರುತ್ತದೆ. ಹೀಗಾಗಿ ಸಂಶೋಧಕರು, ವಿದ್ಯಾರ್ಥಿಗಳು, ಆಸಕ್ತರು, ಹೋರಾಟಗಾರರು, ರಾಜಕಾರಣಿಗಳಿಗೆ ಉತ್ತಮ ಆಕರವಾಗಬಹುದು.

‘ಕಾವೇರಿ ವಿವಾದ’ವನ್ನು ಬೆನ್ನುಹತ್ತುವುದಕ್ಕೂ ಮೊದಲು ಆರಂಭದಲ್ಲಿರುವ ನಿವೃತ್ತ ಐಪಿಎಸ್ ಅಧಿಕಾರಿ ಚಿರಂಜೀವಿ ಸಿಂಘ್‌ ಅವರ ಮುನ್ನುಡಿ ದಿಕ್ಸೂಚಿಯಂತೆ ಓದಿನುದ್ದಕ್ಕೂ ನೆರವಾಗುವಂತಿದೆ. ಹಲವು ಅಪರೂಪದ ಚಿತ್ರಗಳು ಹಾಗೂ ನಕ್ಷೆಗಳು ಕೃತಿಗೆ ಪೂರಕವಾಗಿವೆ. 

ಕಾವೇರಿ ವಿವಾದ: ಒಂದು ಐತಿಹಾಸಿಕ ಹಿನ್ನೋಟ

ಲೇ: ಸಿ.ಚಂದ್ರಶೇಖರರ್

ಪ್ರ: ಅಭಿರುಚಿ ಪ್ರಕಾಶನ

ಸಂ: 99805 60013

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT