ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
2024ರ ಯುಗಾದಿ ವರ್ಷ ಭವಿಷ್ಯ: ಕ್ರೋಧಿ ಸಂವತ್ಸರದಲ್ಲಿ ಯಾವ ರಾಶಿಯವರ ಭವಿಷ್ಯ ಏನು?
Published 8 ಏಪ್ರಿಲ್ 2024, 19:30 IST
ಡಾ. ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
author
ಜ್ಯೋತಿಷ್ಯ ವಿಶಾರದ, ಮಾದಾಪುರ ಸಂಪರ್ಕ ಸಂಖ್ಯೆ: 8197304680
ಮೇಷ
ಗುರು ಮೇಷದಲ್ಲಿದ್ದು ಮೇ 1ನೇ ತಾರೀಖಿನಂದು ವೃಷಭಕ್ಕೆ ಬರುತ್ತಾನೆ. ಗುರುವಿನಿಂದ ಆರ್ಥಿಕ ಪರಿಸ್ಥಿತಿ ಉತ್ತಮ. ಆದರೆ, ದುಡ್ಡು ಉಳಿಯುವುದಿಲ್ಲ. ಕೋರ್ಟ್, ಕಚೇರಿ ಕೆಲಸಗಳಲ್ಲಿ ಮುನ್ನಡೆ ಇರುತ್ತದೆ. ಗುರುಬಲ, ಶನಿ ಬಲ ಇರುತ್ತದೆ. ವೈವಾಹಿಕ ಜೀವನದಲ್ಲಿ ಉತ್ತಮ ಬದಲಾವಣೆ ಇರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳುವವರಿಗೆ ಹೆಚ್ಚು ಅನುಕೂಲವಿರುತ್ತದೆ. ಶನಿಯಿಂದ ಸರ್ವಾಭೀಷ್ಟ ಫಲಪ್ರದವಾಗುತ್ತದೆ. ಮಾರಕ ದೋಷಗಳ ನಿವಾರಣೆಯಾಗುತ್ತದೆ. ಹೊಸ ಅಧಿಕಾರ ಪ್ರಾಪ್ತಿ ಆಗುತ್ತದೆ. ಉದ್ಯೋಗದಲ್ಲಿ ಅಭಿವೃದ್ಧಿ, ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ. ಕೋಪ ತಾಪಗಳನ್ನು ಕಡಿಮೆ ಮಾಡಿಕೊಳ್ಳಿರಿ. ಯಾರನ್ನೋ ನಂಬಿ ಹಣ ಹೂಡುವುದು ಒಳಿತಲ್ಲ. ಅರ್ಧಕ್ಕೆ ನಿಂತಿದ್ದ ಕೆಲಸಗಳು ಪೂರ್ಣವಾಗುತ್ತವೆ. ದೊಡ್ಡ ಹೂಡಿಕೆಗಳು ಬೇಡ, ಮೋಸವಾಗುವ ಸಾಧ್ಯತೆಗಳಿವೆ. ಡಿಜಿಟಲ್ ಮೀಡಿಯಾದವರಿಗೆ, ಟೆಲಿಕಾಂನವರಿಗೆ ಅಭಿವೃದ್ಧಿ ಕಡಿಮೆ. ಹಿರಿಯ ನಟರಿಗೆ ಆರೋಗ್ಯ ತೊಂದರೆ ಆಗಬಹುದು. ಹೆಚ್ಚಿನ ಒಳಿತಿಗಾಗಿ ಗುರು ಮತ್ತು ಈಶ್ವರರ ಧ್ಯಾನ ಮತ್ತು ದರ್ಶನ ಅಗತ್ಯ.
ವೃಷಭ
ಈ ರಾಶಿಗೆ ಮೇ 1ನೇ ತಾರೀಖಿನ ನಂತರ ಗುರು ಪ್ರವೇಶ ಮಾಡುತ್ತಾನೆ. ರಾಶಿಯಲ್ಲಿ ಗುರುವಿದ್ದಾಗ ಗೌರವ ದೊರೆಯುತ್ತದೆ. ಸಜ್ಜನರ ಸುಸಂಸ್ಕೃತರ ಸಹವಾಸಗಳು ದೊರೆಯುತ್ತವೆ. ಅದೃಷ್ಟವನ್ನು ಕೊಡುತ್ತಾನೆ, ಆಸ್ತಿಕತೆಯತ್ತ ಒಲವು ಹೆಚ್ಚಾಗುತ್ತದೆ. ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಎಚ್ಚರ ವಹಿಸಿರಿ, ಗರ್ಭಿಣಿಯರು ಹೆಚ್ಚು ಎಚ್ಚರದಿಂದ ಇರುವುದು ಒಳ್ಳೆಯದು. ಹೊಸ ಉದ್ಯೋಗ ದೊರೆಯುವ ಸಂದರ್ಭವಿದೆ. ವೃತ್ತಿಯಲ್ಲಿ ಸ್ಥಾನಮಾನದ ಏರಿಕೆ ಆಗುವ ಸಾಧ್ಯತೆಗಳಿವೆ. ಆರ್ಥಿಕ ಭಾಗ್ಯ ಇರುತ್ತದೆ. ಭೂಮಿಯನ್ನು ಹೊಂದುವ ಯೋಗವಿದೆ. ರೇಷ್ಮೆ ವ್ಯಾಪಾರಿಗಳು ಮತ್ತು ಕೃಷಿಕರಿಗೆ ಹೆಚ್ಚಿನ ಅನುಕೂಲವಿರುತ್ತದೆ. ನ್ಯಾಯಾಧೀಶರಿಗೆ ಉತ್ತಮ ನ್ಯಾಯದಾನ ಮಾಡುವ ಅವಕಾಶವಿದೆ. ಪತ್ರಕರ್ತರಿಗೆ, ವಿಜ್ಞಾನಿಗಳಿಗೆ ಹೆಚ್ಚು ಅನುಕೂಲವಿರುತ್ತದೆ. ರಾಜಕಾರಣಿಗಳಿಗೆ ಹೆಚ್ಚು ಅನುಕೂಲ ದೊರೆತು ಗುಂಪಿನ ನಾಯಕರಾಗಬಹುದು. ಹೆಚ್ಚಿನ ಒಳಿತಿಗಾಗಿ ಈಶ್ವರ ಧ್ಯಾನ ಮತ್ತು ದರ್ಶನ, ಗುರು ದತ್ತಾತ್ರೇಯರ ಧ್ಯಾನ ಅಗತ್ಯ.
ಮಿಥುನ
ಈ ರಾಶಿಯಲ್ಲಿ ಮೇ 1ನೇ ತಾರೀಖಿನವರೆಗೆ ಲಾಭಕಾರಕನಾಗಿ ಗುರು ಇರುತ್ತಾನೆ. ಬಳಿಕ ವ್ಯಯಕಾರಕನಾಗುತ್ತಾನೆ. ವಿವಾಹ ವಿಳಂಬದ ಸಾಧ್ಯತೆ ಇದೆ. ಪಾಲುದಾರಿಕೆ ವ್ಯವಹಾರಗಳಲ್ಲಿ ನಿಧಾನ ಗತಿ ಇರುತ್ತದೆ. ಪಾಲುದಾರರಲ್ಲಿ ಪರಸ್ಪರ ಅಪನಂಬಿಕೆ ಮೂಡುವ ಸಾಧ್ಯತೆಗಳಿವೆ. ಪ್ರಯಾಣದಲ್ಲಿ ಅಮೂಲ್ಯ ವಸ್ತುಗಳ ಕಳ್ಳತನ ಆಗಬಹುದು. ಭಾಗ್ಯಧಿಪತಿ ಶನಿಯು ನಿಮಗೆ ವೈರಾಗ್ಯವನ್ನು ಕೊಡುವರು. ತೀರ್ಥಯಾತ್ರೆಯ ಸೌಖ್ಯವನ್ನು ಕೊಡುತ್ತಾರೆ. ಆದಾಯ ವೃದ್ಧಿಯಾಗುತ್ತದೆ. ಪಿತೃ ದೋಷ ಇದ್ದವರಿಗೆ ಕಡಿಮೆಯಾಗುತ್ತದೆ. ವೃತ್ತಿಯಲ್ಲಿ ಅಭಿವೃದ್ಧಿ ಇರುತ್ತದೆ. ಆರೋಗ್ಯದಲ್ಲಿ ಸುಧಾರಣೆ ಇರುತ್ತದೆ. ಉದ್ಯೋಗದಲ್ಲಿ ಅಭಿವೃದ್ಧಿಯಾಗುತ್ತದೆ. ಉದ್ಯೋಗ ಬದಲಾವಣೆ ಮಾಡಬೇಕೆಂದಿರುವವರು ಮತ್ತು ಹಣವನ್ನು ಒಟ್ಟು ಮಾಡಬೇಕೆಂದಿರುವವರು ಮೇ 1ನೇ ತಾರೀಖಿನ ಒಳಗೆ ಮಾಡಿಕೊಳ್ಳುವುದು ಉತ್ತಮ. ಹಣದ ವಿಚಾರದಲ್ಲಿ ಹೆಚ್ಚು ಎಚ್ಚರ ವಹಿಸಿರಿ. ವಿದ್ಯಾರ್ಥಿಗಳಿಗೆ ಸಾಧಾರಣ ಅನುಕೂಲ ಇರುತ್ತದೆ. ತೆರಿಗೆ ತಜ್ಞರಿಗೆ ಬಹಳ ಅನುಕೂಲವಿರುತ್ತದೆ. ಕುಟುಂಬ ಸೌಖ್ಯ ಉತ್ತಮವಾಗಿರುತ್ತದೆ. ಭೂಮಿಯನ್ನು ಖರೀದಿಮಾಡುವ ಯೋಗವಿದೆ. ಹೆಚ್ಚಿನ ಒಳಿತಿಗಾಗಿ ಯಾವುದೇ ಗುರುವಿನ ಆರಾಧನೆ ಮತ್ತು ಶನಿ ದೇವರ ಆರಾಧನೆ ಬಹಳ ಮುಖ್ಯ.
ಕರ್ಕಾಟಕ
ಮೇ 1ನೇ ತಾರೀಖಿನವರೆಗೆ ಗುರು ಕರ್ಮಭಾವದಲ್ಲಿ ಇರುತ್ತಾನೆ. ಅಲ್ಲಿಯವರೆಗೆ ವೃತ್ತಿಯಲ್ಲಿ ಅಭಿವೃದ್ಧಿ ಇರುತ್ತದೆ. ನಂತರ ಗುರುವೂ ಲಾಭಕ್ಕೆ ಬರುತ್ತಾನೆ. ಆಗ ಸ್ವಲ್ಪ ಒದ್ದಾಟಗಳು ಕಡಿಮೆಯಾಗುತ್ತವೆ. ರಾಹು ಮತ್ತು ಕೇತುಗಳಿಂದ ಆರೋಗ್ಯವೃದ್ಧಿ ಮತ್ತು ಧನ ವ್ಯವಹಾರಗಳಲ್ಲಿ ಲಾಭವಿರುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಲಾಭವಿರುತ್ತದೆ. ಹೊಸ ಐಷಾರಾಮಿ ವಸ್ತುಗಳನ್ನು ಖರೀದಿ ಮಾಡುವಿರಿ. ಸಂತಾನ ಸೌಖ್ಯ ಇರುತ್ತದೆ. ವಿವಾಹ ಸಂಬಂಧಗಳು ಒದಗುತ್ತವೆ. ಕೋರ್ಟ್–ಕಚೇರಿ ವ್ಯವಹಾರಗಳಲ್ಲಿ ಜಯ ಇರುತ್ತದೆ. ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಬೇಕೆನ್ನುವವರಿಗೆ ಅನುಕೂಲವಿರುತ್ತದೆ. ನೂತನ ಗೃಹ ನಿರ್ಮಾಣದ ಯೋಗ ಇರುತ್ತದೆ. ಉದ್ಯೋಗದಲ್ಲಿ ಬದಲಾವಣೆ ಆಗುವ ಯೋಗವಿದೆ. ಶತ್ರುಗಳು ಸಹ ನಿಮಗೆ ಅನುಕೂಲ ಮಾಡಿಕೊಡುವರು. ಅಷ್ಟಮ ಶನಿಯಿಂದ ಸ್ವಲ್ಪ ವ್ಯತ್ಯಾಸಗಳಿರುತ್ತವೆ. ಕೆಲಸ ಕಾರ‍್ಯಗಳಲ್ಲಿ ನಿಧಾನ ಗತಿ ಇರುತ್ತದೆ. ವಾಹನ ಸೌಖ್ಯವಿರುತ್ತದೆ. ವೃತ್ತಿಯಲ್ಲಿ ಮುನ್ನಡೆಯನ್ನು ಸಾಧಿಸಬಹುದು. ಅನಿರೀಕ್ಷಿತ ಧನ ಲಾಭವಾಗುವ ಸಾಧ್ಯತೆಗಳಿವೆ. ಹೆಚ್ಚಿನ ಒಳಿತಿಗಾಗಿ ಸುಬ್ರಹ್ಮಣ್ಯ ಸ್ವಾಮಿ ನರಸಿಂಹ ಸ್ವಾಮಿ ಶನೇಶ್ಚರ ಆರಾಧನೆ ಮಾಡಿರಿ.
ಸಿಂಹ
ಕಳೆದ ವರ್ಷ ನಿಮಗೆ ಗುರುಬಲ ಇತ್ತು. ಮೇ 1ರಿಂದ ಗುರುಬಲ ಇರುವುದಿಲ್ಲ. ಗುರು ಕರ್ಮ ಭಾವದಲ್ಲಿ ಸಂಚರಿಸಿದಾಗ ವೃತ್ತಿಯಲ್ಲಿ ಅಭಿವೃದ್ಧಿ ಇರುತ್ತದೆ. ಧಾರ್ಮಿಕ ಪ್ರವೃತ್ತಿ ಜಾಗೃತವಾಗುತ್ತದೆ. ಹಣದ ನಿರ್ವಹಣೆ ಸರಿಯಾಗಿ ಆಗುತ್ತದೆ. ಬೀಜೋತ್ಪಾದನೆಯನ್ನು ಮಾಡುವವರಿಗೆ ಮತ್ತು ಅರಿಶಿಣ ಬೆಳೆಯುವವರಿಗೆ ಹೆಚ್ಚಿನ ಲಾಭವಿರುತ್ತದೆ. ದಿನಸಿ ವ್ಯಾಪಾರಿಗಳಿಗೆ, ಕೃಷಿಕರಿಗೆ ಲಾಭವಿರುತ್ತದೆ. ಉಪನ್ಯಾಸಕರಿಗೆ ಮತ್ತು ಉಪಾಧ್ಯಾಯರುಗಳಿಗೆ ಅನುಕೂಲವಿರುತ್ತದೆ. ಈವೆಂಟ್ ಮ್ಯಾನೇಜ್‌ಮೆಂಟ್‌ ನಡೆಸುವವರಿಗೆ ಹೆಚ್ಚು ಸಂಪಾದನೆ ಇರುತ್ತದೆ. ಶನಿಯ ದೃಷ್ಟಿ ನಿಮ್ಮ ರಾಶಿಯ ಮೇಲಿದ್ದು ಕುಟುಂಬದಲ್ಲಿ ಶಾಂತತೆ, ಕೆಲಸಗಳು ಆಗುತ್ತದೆ. ಕೆಲವರಿಗೆ ವಿವಾಹ ವಿಳಂಬವಾಗಬಹುದು. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸಗಳನ್ನು ಕಾಣಬಹುದು. ಭಾಗ್ಯೋದಯಗಳಿಗೆ ಸ್ವಲ್ಪ ಹೊಡೆತ ಬೀಳುತ್ತದೆ. ಸಮಸ್ಯೆಗಳನ್ನು ಶಾಂತ ರೀತಿಯಿಂದ ಪರಿಹರಿಸಿಕೊಳ್ಳಿರಿ. ಹೆಚ್ಚಿನ ಪರಿಹಾರಕ್ಕಾಗಿ ದಕ್ಷಿಣಾಮೂರ್ತಿಯ ಪ್ರಾರ್ಥನೆ ಮತ್ತು ಶನೇಶ್ಚರ ಪ್ರಾರ್ಥನೆ ಮಾಡಿರಿ.
ಕನ್ಯಾ
ಮೇ 1ನೇ ತಾರೀಖಿನಿಂದ ಗುರು ತನ್ನ ಪಂಚಮ ದೃಷ್ಟಿಯಿಂದ ನಿಮ್ಮನ್ನು ನೋಡುತ್ತಾನೆ. ಈ ಗುರುವೂ 4ನೇ ಮತ್ತು 7ನೇ ಮನೆ ಅಧಿಪತಿ. ವಿವಾಹ ಸಂಬಂಧಗಳು ಒದಗುವ ಸಾಧ್ಯತೆ ಇದೆ. ಗುರುವು ನವಮಾಧಿಪತಿಯಾಗಿದ್ದು ಆ ದೃಷ್ಟಿಯಿಂದ ಸಂತಾನವೃದ್ಧಿ ಇರುತ್ತದೆ. ಪಾಲುದಾರಿಕೆ ವ್ಯವಹಾರಗಳಲ್ಲಿ ಲಾಭ ಮತ್ತು ಸಂತೋಷ ಹೆಚ್ಚುವುದು. ಉಪಾಧ್ಯಾಯರು ಮತ್ತು ಪಂಡಿತರಿಗೆ ಬಹಳ ಅನುಕೂಲ. ಸಾತ್ವಿಕ ಗುಣ ಹೆಚ್ಚುತ್ತದೆ. ಕೀರ್ತಿ ದೊರೆಯುವ ಸಾಧ್ಯತೆ ಇದೆ. ಪ್ರಕೃತಿ ಸಂಬಂಧಿತ ಕೆಲಸಗಳು ಕೃಷಿ, ಹೂವು ಮತ್ತು ಹಣ್ಣು ಬೆಳಗಾರರಿಗೆ ಲಾಭವಿರುತ್ತದೆ. ನೀರಿನ ವ್ಯಾಪಾರಿಗಳು, ಹೋಟೆಲ್ ಉದ್ಯಮದವರಿಗೆ ಮತ್ತು ಈವೆಂಟ್ ಮ್ಯಾನೇಜ್‌ಮೆಂಟ್‌ ನಡೆಸುವವರಿಗೆ ಆದಾಯ ಹೆಚ್ಚುತ್ತದೆ. ಐಟಿ–ಬಿಟಿ ಉದ್ಯೋಗಿಗಳಿಗೆ ಮತ್ತು ಫೈನಾನ್ಸಿಯಲ್ ಅಡ್ವೈಸರ್‌ಗಳಿಗೆ ಲಾಭವಿರುತ್ತದೆ. ಮಾಧ್ಯಮದವರಿಗೆ ಮತ್ತು ಹಿರಿಯ ಅಧಿಕಾರಿಗಳಿಗೆ ಅಭಿವೃದ್ಧಿ ಇರುತ್ತದೆ. ಆರಕ್ಷಕರಿಗೆ ಮತ್ತು ಸೈನಿಕರಿಗೆ ಪದೋನ್ನತಿಯ ಯೋಗವಿರುತ್ತದೆ. ಲೋಕೋಪಯೋಗಿ ಕೆಲಸ ಮಾಡುವವರಿಗೆ, ಗುತ್ತಿಗೆದಾರರಿಗೆ ಅನುಕೂಲವಿರುತ್ತದೆ. ಹೆಚ್ಚಿನ ಒಳಿತಿಗಾಗಿ ಗಣೇಶ ಮತ್ತು ದುರ್ಗೆಯರನ್ನು ಆರಾಧನೆ ಮಾಡಿರಿ.
ತುಲಾ
ಮೇ 1ನೇ ತಾರೀಖಿನವರೆಗೆ ಮಾತ್ರ ಗುರುಬಲ. ಮೇ 1ನೇ ತಾರೀಖಿನಿಂದ ಅಷ್ಟಮ ಗುರುವಾಗಿ ಗುರು ಬಲ ಹೋಗುತ್ತದೆ. ಅಷ್ಟಮ ಗುರುವಿನಿಂದ ಆರೋಗ್ಯ ವ್ಯತ್ಯಾಸ, ವ್ಯಾಪಾರದಲ್ಲಿ ಹಿನ್ನಡೆ, ವ್ಯಾಪಾರದಲ್ಲಿ ಮೋಸ ಸಂಭವಿಸಬಹುದು. ಶನಿ ಶುಕ್ರರು ಮಿತ್ರರಾದ್ದರಿಂದ ತೊಂದರೆಗಳು ಸ್ವಲ್ಪ ಕಡಿಮೆಯಾಗುತ್ತವೆ. ಸಾಲಬಾಧೆ ಇರುತ್ತದೆ. ಖರ್ಚು ವಿಪರೀತ ಜಾಸ್ತಿ ಆಗುವ ಸಂದರ್ಭವಿದೆ. ವೃತ್ತಿಯಲ್ಲಿ ತೊಂದರೆ, ವಿದ್ಯೆಯಲ್ಲಿ ದ್ವಂದ್ವಗಳಿರುತ್ತವೆ. ಆಯಸ್ಸು ವೃದ್ಧಿಯಾಗುತ್ತದೆ. ವಿವಾಹ ವಿಚಾರದಲ್ಲಿ ಅನುಕೂಲಗಳು ಕಡಿಮೆ. ಅಡ್ಡ ದಾರಿಗಳಿಂದ ಧನ ಸಂಪಾದನೆ ಮಾಡುವ ಹಂಬಲ. ಮನೆ ಕಟ್ಟುವ ವಿಚಾರದಲ್ಲಿ ಸಾಕಷ್ಟು ಎಚ್ಚರ ವಹಿಸಿ. ಲೇವಾದೇವಿ ವ್ಯವಹಾರ ಮಾಡುವುದು, ಆಧಾರ ರಹಿತ ಸಾಲ ಕೊಡುವುದು, ಗ್ಯಾರಂಟಿ ಕೊಡುವುದು ಬಹಳ ದುಬಾರಿಯಾಗಬಹುದು. ಸಮೀಪದ ಬಂಧುಗಳೇ ಶತ್ರುಗಳಾಗುವ ಸಾಧ್ಯತೆ ಇದೆ. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಫಲವಿರುತ್ತದೆ. ಸಂಭಾವಿತರಿಗೆ ವಿವಾಹವಾಗಬಹುದು. ಹೆಚ್ಚಿನ ಅನುಕೂಲಕ್ಕಾಗಿ ಗುರುಗಳ ಆರಾಧನೆ ಮತ್ತು ಶಿವಾರಾಧನೆ, ಶನೇಶ್ಚರನ ಧ್ಯಾನ ಅಗತ್ಯ
ವೃಶ್ಚಿಕ
ವರ್ಷದ ಆರಂಭದಲ್ಲಿ ಗುರುಬಲ ಇರುವುದಿಲ್ಲ ಮತ್ತು ಅರ್ಧಾಮಷ್ಟಮಶನಿ ಇರುತ್ತದೆ. ಮೇ 1ರಿಂದ ಗುರು ಸಪ್ತಮಕ್ಕೆ ಬಂದು ಗುರುಬಲ ಬರುತ್ತದೆ. ಗುರುವಿನಿಂದ ಹೊಸ ಜೀವನವನ್ನು ಕಂಡುಕೊಳ್ಳಬಹುದು. ಆರೋಗ್ಯದಲ್ಲಿ ವೃದ್ಧಿ ಇರುತ್ತದೆ. ಹಿರಿಯರ ಆಶೀರ್ವಾದಗಳು ಸಹಕಾರಗಳು ದೊರೆಯುತ್ತವೆ. ಕೆಲವರಿಗೆ ಸಂತಾನ ಭಾಗ್ಯವಿರುತ್ತದೆ. ಧನಾದಿಪತಿ ಗುರು ಧನ ಹೆಚ್ಚಿಸುತ್ತಾನೆ. ಅವಿವಾಹಿತರಿಗೆ ವಿವಾಹ ಭಾಗ್ಯವಿರುತ್ತದೆ. ವಿದ್ಯೆಯಲ್ಲಿ ಅಭಿವೃದ್ಧಿ ಇರುತ್ತದೆ. ಮನೆಯಲ್ಲಿ ಶುಭ ಕಾರ್ಯಗಳಾಗುತ್ತವೆ. ಪಾಲುದಾರಿಕೆ ವ್ಯವಹಾರಗಳಲ್ಲಿ ಲಾಭವಿದ್ದು, ವ್ಯವಹಾರ ವಿಸ್ತರಿಸುತ್ತದೆ. ಸಂತಸದ ಜೀವನ ಇರುತ್ತದೆ. ಉಪಯೋಗ ಪಡೆದು ದೂರುವವರು ಜಾಸ್ತಿಯಾಗುವರು. ಇಂತಹವರ ಮುಂದೆ ಎದ್ದು ನಿಲ್ಲುವ ಅವಕಾಶವಿರುತ್ತದೆ. ಪೊಲೀಸರಿಗೆ ಮತ್ತು ವಕೀಲರಿಗೆ ಸಾಕಷ್ಟು ಅಭಿವೃದ್ಧಿ ಇರುತ್ತದೆ. ಭೂಮಿಯನ್ನು ಕೊಳ್ಳುವ ಅವಕಾಶಗಳು ಇವೆ. ಆದರೆ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಿರಿ. ವಿದೇಶಕ್ಕೆ ಹೋಗಿ ಬರುವ ಸಾಧ್ಯತೆಗಳಿವೆ. ವಿದ್ಯಾರ್ಥಿಗಳಿಗೆ ಶುಭ, ವಿದ್ಯಾಸಂಸ್ಥೆಗಳನ್ನು ನಡೆಸುತ್ತಿರುವವರಿಗೆ ಅಭಿವೃದ್ಧಿ ಇರುತ್ತದೆ. ಹೆಚ್ಚಿನ ಸಂತೋಷಕ್ಕಾಗಿ ದಕ್ಷಿಣಾಮೂರ್ತಿಯ ಪೂಜೆ ಮತ್ತು ಕಡಲೆ ಹಾರ ಹಾಕುವುದು, ಸರಸ್ವತಿ ಮತ್ತು ಶನೇಶ್ಚರ ಆರಾಧನೆ ಬಹಳ ಮುಖ್ಯ.
ಧನು
ಗುರು ಶನಿಗಳ ಪ್ರಭಾವಿರುತ್ತದೆ. ಮೇ 1ರಿಂದ ಗುರು ಆರನೆಯ ಮನೆಗೆ ಹೋಗುವುದರಿಂದ ದೇಹದಲ್ಲಿ ಅಸೌಖ್ಯ, ಅಜೀರ್ಣ ತೊಂದರೆ, ಕ್ಯಾಲ್ಸಿಯಂ ವ್ಯತ್ಯಾಸ ಆಗುವ ಸಾಧ್ಯತೆಗಳಿವೆ. ಕೆಲಸ ಕಾರ‍್ಯ ನಿಧಾನವಾಗುತ್ತದೆ. ದೈವಾನುಗ್ರಹ ಕಡಿಮೆ, ಮೂರನೇ ಮನೆಯಲ್ಲಿರುವ ಶನಿಯಿಂದ ಶನಿ ಬಲವಿರುತ್ತದೆ. ಶುಭ ಫಲ ದೊರೆಯುತ್ತದೆ. ಶತ್ರು ಧ್ವಂಸವಾಗುತ್ತದೆ. ರಾಜಕಾರಣಿಗಳಿಗೆ ಸ್ಥಾನಮಾನ ದೊರೆತು ಯಶಸ್ಸು ಇರುತ್ತದೆ. ರಾಜಕೀಯ ಮಾಡುವವರಿಗೆ ಸಾಕಷ್ಟು ಯಶಸ್ಸು ಇರುತ್ತದೆ. ಉದ್ಯೋಗ ವ್ಯವಹಾರಗಳಲ್ಲಿ ಲಾಭವಿರುತ್ತದೆ. ವ್ಯವಹಾರಗಳಲ್ಲಿ ಉತ್ತಮ ವಾತಾವರಣ ನಿರ್ಮಾಣವಾಗುತ್ತದೆ. ವಾಹನ ಲಾಭ, ಗೃಹ ನಿರ್ಮಾಣದಲ್ಲಿ ಸಫಲತೆ ಇರುತ್ತದೆ. ಕೆಲವು ಅಧಿಕಾರಿಗಳಿಗೆ ವರ್ಗಾವಣೆಯಿಂದ ಆನಂದ. ಧೈರ್ಯ ಹೆಚ್ಚಾಗುತ್ತದೆ, ಬುದ್ಧಿ ಚುರುಕಾಗುತ್ತದೆ. ಹಿರಿಯರ ಸಹಕಾರ ದೊರೆಯುತ್ತದೆ. ಸಹೋದರರಿಂದ ಸಹಾಯ ದೈವತಾರಾಧನೆಯಲ್ಲಿ ಅನುಕೂಲವಿರುತ್ತದೆ. ಹಳೆ ಬಾಕಿ ವಸೂಲಿ ಆಗುತ್ತದೆ. ಆಡಳಿತ ಅಧಿಕಾರಿಗಳಿಗೆ ಅನುಕೂಲ ಮತ್ತು ಆಡಳಿತಾತ್ಮಕ ಪರೀಕ್ಷೆ ತೆಗೆದುಕೊಳ್ಳುವವರಿಗೆ ಹೆಚ್ಚಿನ ಅನುಕೂಲ. ಇನ್ನೂ ಹೆಚ್ಚಿನ ಒಳಿತಿಗಾಗಿ ಶಿವನ ಆರಾಧನೆ ಮತ್ತು ಯಾವುದೇ ಗುರುವಿನ ಪೂಜೆ ಒಳ್ಳೆಯದು.
ಮಕರ
ಮೇ 1ನೇ ತಾರೀಖಿನಿಂದ ಗುರು ಬದಲಾವಣೆಗೊಂಡು ಹೆಚ್ಚು ಅನುಕೂಲವಿರುತ್ತದೆ. ಗುರುಬಲ ಆರಂಭವಾಗುತ್ತದೆ. ಜೀವನದಲ್ಲಿ ಸಂತಸವಿರುತ್ತದೆ. ಗುರು 5ನೇ ಮನೆಯಲ್ಲಿ ಕುಳಿತು ಸಂತಾನವನ್ನು ಕೊಡುವನು. ವಿದೇಶ ಪ್ರಯಾಣಕ್ಕೆ ಬಹಳ ಅನುಕೂಲ. ಆಯನ, ಶಯನ ಭೋಗವಿರುತ್ತದೆ. ಸಹೋದರರಿಂದ ಹೆಚ್ಚು ಸಹಾಯ ದೊರೆಯುತ್ತದೆ. ವಿದೇಶದಲ್ಲಿ ಓದಬೇಕೆನ್ನುವವರಿಗೆ ಹೆಚ್ಚಿನ ಅನುಕೂಲವಿರುತ್ತದೆ. ಧಾರ್ಮಿಕ ಚಿಂತನೆಗಳು ಹೆಚ್ಚುತ್ತವೆ. ಶಾಸ್ತ್ರಾಭಿವೃದ್ಧಿಯಾಗುತ್ತದೆ, ಕುಟುಂಬದಲ್ಲಿ ಸಂತೋಷ ಇರುತ್ತದೆ. ಅದೃಷ್ಟ ಒದಗಿ ಬರುತ್ತದೆ. ಜೀವನ ಮತ್ತು ಮನಸ್ಸಿಗೆ ಬಲ ಇರುತ್ತದೆ. ಮಂತ್ರದೀಕ್ಷೆ ಆಗಬಹುದು. ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಿರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳುವವರಿಗೆ ಹೆಚ್ಚು ಅನುಕೂಲವಿರುತ್ತದೆ. ಭಾಗ್ಯದ ಮೇಲೆ ದೃಷ್ಟಿ ಇದ್ದು, ಉದ್ಯೋಗ ವ್ಯಾಪಾರಗಳಲ್ಲಿ ಅಭಿವೃದ್ಧಿ ಇರುತ್ತದೆ. ನೂತನ ವ್ಯಾಪಾರ ವ್ಯವಹಾರಗಳಿಂದ ಲಾಭವಿರುತ್ತದೆ. ಆರ್ಥಿಕ ಸದೃಢತೆ ಇರುತ್ತದೆ. ಉದ್ದಿಮೆದಾರರಿಗೆ ಹೆಚ್ಚು ಅನುಕೂಲ. ಅನಾರೋಗ್ಯದಿಂದ ವಿಮುಕ್ತಿ, ಆಸ್ತಿ ಖರೀದಿ ಮಾಡುವ ಯೋಗ, ಶನಿ ದ್ವಿತೀಯ ಭಾವದಲ್ಲಿದ್ದಾರೆ. ಹಾಗಾಗಿ ಧನಸಂಪತ್ತು, ಕುಟುಂಬ ಸೌಖ್ಯವಿರುತ್ತದೆ. ಹೆಚ್ಚಿನ ಗೌರವ ದೊರೆಯುತ್ತದೆ. ಇರುವ ಉದ್ಯೋಗವನ್ನು ಮುಂದುವರಿಸಿರಿ. ನಂತರ ಹೊಸ ಉದ್ಯೋಗಕ್ಕೆ ಪ್ರಯತ್ನಿಸಿರಿ. ಹೆಚ್ಚಿನ ಒಳಿತಿಗಾಗಿ ಆದಿತ್ಯ ಹೃದಯ ಪಠಣೆ ಮತ್ತು ಈಶ್ವರ, ಶನೇಶ್ಚರ ಧ್ಯಾನ ಮಾಡಿರಿ.
ಕುಂಭ
ಸದ್ಯಕ್ಕೆ ಗುರುಬಲ ಶನಿ ಬಲ ಎರಡು ಸಹ ಇರುವುದಿಲ್ಲ. ಗುರು ದ್ವಿತೀಯ ಅಧಿಪತಿ ಮತ್ತು 11ನೇ ಅಧಿಪತಿ, ಈಗ ಮೇ 1ನೇ ತಾರೀಖಿನಿಂದ ಎಂಟನೇ ಮನೆ ಮತ್ತು ಹತ್ತನೇ ಮನೆಗೆ ದೃಷ್ಟಿ ಬರುತ್ತದೆ. ಇದರಿಂದ ಹಣಕಾಸಿನ ಅನುಕೂಲಗಳು ಸ್ವಲ್ಪ ಹೆಚ್ಚುತ್ತವೆ. ಹೊಸ ವ್ಯಾಪಾರದ ಆರಂಭ ಮತ್ತು ದೊಡ್ಡಮಟ್ಟದ ಹೂಡಿಕೆ ಖಂಡಿತ ಬೇಡ. ರಾಜಕೀಯದವರಿಗೆ ಹೆಚ್ಚಿನ ಅನುಕೂಲವಿರುತ್ತದೆ. ಸಿನಿಮಾದವರಿಗೆ ಸಹ ಅನುಕೂಲ. ಸ್ಥಿರಾಸ್ತಿ ಖರೀದಿ ಮಾಡುವ ಯೋಗವಿದೆ. ಉದ್ಯೋಗದಲ್ಲಿ ಬದಲಾವಣೆಯ ಸಾಧ್ಯತೆಗಳು ಕಾಣುತ್ತಿವೆ. ವಾಹನ ಸೌಖ್ಯದ ಯೋಗವಿದೆ. ಮಕ್ಕಳಿಂದ ನಿಮಗೆ ಗೌರವ ದೊರೆಯುತ್ತದೆ. ಹಿರಿಯ ಅಧಿಕಾರಿಗಳಿಗೆ ಉತ್ತಮ ಹೆಸರು ಲಭಿಸಿ ಇನ್ನೂ ಉನ್ನತ ಸ್ಥಾನಗಳು ದೊರೆಯಬಹುದು. ಪ್ರಯಾಣದಲ್ಲಿ ಅಮೂಲ್ಯ ವಸ್ತುಗಳು ಕಳವಾಗಬಹುದು. ವಿಶ್ವಕರ್ಮರಿಗೆ ಹೆಚ್ಚಿನ ಪ್ರಗತಿ ಇದೆ. ಬಲಿಷ್ಠವಾದ ರಾಶ್ಯಾಧಿಪತಿಯು ರಾಶಿಯಲ್ಲಿದ್ದರೆ ಬಹಳ ಒಳ್ಳೆಯದು. ಅವನೇ ರಾಶ್ಯಾಧಿಪತಿಯಾಗಿರುವುದರಿಂದ ಹೆಚ್ಚಿನ ಕೆಡುಕು ಇರುವುದಿಲ್ಲ. ಇನ್ನೂ ಹೆಚ್ಚಿನ ಒಳಿತಿಗಾಗಿ ಶಿವ, ಸುಬ್ರಹ್ಮಣ್ಯ ಮತ್ತು ಆಂಜನೇಯ ಆರಾಧನೆ ಮಾಡಿರಿ.
ಮೀನ
ಗುರು ಬಲ ಶನಿ ಬಲ ಇರುವುದಿಲ್ಲ. ಗುರುವೂ ಮೇಷ ರಾಶಿಯಲ್ಲಿ ಇರುವಾಗ ಧನ ವೃದ್ಧಿ ಇರುತ್ತದೆ. ಉದ್ಯೋಗದಲ್ಲಿ ಜಯವಿರುತ್ತದೆ, ಮಕ್ಕಳ ಬಗ್ಗೆ ಚಿಂತೆ ಹೆಚ್ಚಾಗುತ್ತದೆ. ಮೇ 1ನೇ ತಾರೀಖಿನ ನಂತರ ಗುರು ವೃಷಭ ರಾಶಿಗೆ ಬರುತ್ತಾನೆ. ಆಗ ಅನುಕೂಲಗಳು ಹೆಚ್ಚಾಗುತ್ತವೆ. ಸಾಲ–ಸೋಲದ ವ್ಯವಹಾರಗಳು ಖಂಡಿತ ಬೇಡ. ಸಾಲ ಕೊಟ್ಟಲ್ಲಿ ಮೋಸ ಹೋಗುವ ಸಾಧ್ಯತೆಗಳಿವೆ. ಒಡಹುಟ್ಟಿದವರಿಂದ ತೊಂದರೆ ಬರುವ ಸಾಧ್ಯತೆಗಳಿವೆ. ದಿಢೀರ್ ಧನ ಯೋಗವಿದೆ. ಕೆಲವರಿಂದ ಸಹಾಯಗಳು ದೊರೆಯುತ್ತವೆ. ಮೂರನೇ ಬಾರಿ ಸಾಡೇಸಾತಿ ಆಗಿರುವವರಿಗೆ ಶನಿಯು ಒಳಿತನ್ನು ಮಾಡುತ್ತಾನೆ. ವ್ಯಾಪಾರ ಮತ್ತು ವ್ಯವಹಾರಗಳು ಚೆನ್ನಾಗಿ ನಡೆಯುತ್ತವೆ. ಕಳೆದು ಹೋಗಿದ್ದ ವಸ್ತುಗಳು ಸಿಗುವ ಸಾಧ್ಯತೆಗಳಿವೆ. ಕೋರ್ಟ್– ಕಚೇರಿ ವ್ಯವಹಾರಗಳಲ್ಲಿ ನಿಧಾನಗತಿಯ ಜಯವಿರುತ್ತದೆ. ಧನ ನಷ್ಟ, ಸತ್ಕರ್ಮಗಳಿಗಾಗಿ ಹಣ ಖರ್ಚಾಗುತ್ತದೆ. ಸಜ್ಜನರ ಸಹವಾಸದಿಂದ ಅನುಕೂಲ. ಕುಟುಂಬದಲ್ಲಿ ಅಭಿವೃದ್ಧಿ ಇರುತ್ತದೆ. ಸುತ್ತಾಟಗಳು ಜಾಸ್ತಿ ಇರುತ್ತವೆ. ಇನ್ನೂ ಹೆಚ್ಚಿನ ಒಳಿತನ್ನು ಕಾಣಲು ಶನೇಶ್ಚರನಿಗೆ ತೈಲಾಭಿಷೇಕ, ಶನಿ ಧ್ಯಾನ ನರಸಿಂಹ ಧ್ಯಾನ ಮತ್ತು ಹಸಿದವರಿಗೆ ಊಟ ಕೊಡುವುದು ಉತ್ತಮ.