ಬೆಳಗಾವಿ: ಮಧ್ಯರಾತ್ರಿ 2 ಗಂಟೆಗೆ ಗ್ಯಾಂಗ್ವಾಡಿ ಪ್ರದೇಶಕ್ಕೆ ಹೊರಟೆವು. ಕಿರಿದಾದ ರಸ್ತೆ. ಮನೆ ಮುಂದೆ ಕುಳಿತಿದ್ದ ವ್ಯಕ್ತಿಯೊಬ್ಬ ಹುಬ್ಬು ಹಾರಿಸಿ ‘ಮಾಲ್’ ಬೇಕಾ ಎಂಬಂತೆ ಕೇಳಿದ. ಗೊತ್ತಿದ್ದವರಿಗೆ ಮಾತ್ರ ಅರ್ಥವಾಗುವ ಸನ್ನೆ ಅದು. ‘ಯಾವುದಿದೆ’ ಎಂದು ಕೇಳಿದೆ. ಯಾವುದು ಬೇಕಾದರೂ ಸಿಗುತ್ತದೆ. ಐನೂರು ರೂಪಾಯಿ ಎಕ್ಸ್ಟ್ರಾ ಅಂದ..

ಅಲ್ಲಿಂದ ತುಸು ಮುಂದಕ್ಕೆ ಸಾಗಿದಾಗ ಮತ್ತೆ ನಾಲ್ವರು ಬೈಕಿಗೆ ಮುತ್ತಿಕೊಂಡರು. ‘ಕುಟ್ಲ ಪಾಹಿಜೆ (ಯಾವುದು ಬೇಕು)’ ಎಂದು ಮರಾಠಿಯಲ್ಲಿ ಕೇಳಿದರು. ‘ಕುಟ್ಲಕುಟ್ಲ ಹೈ (ಯಾವುದ್ಯಾವುದು ಇದೆ)’ ಎಂದು ಕೇಳಿದೆ. ಅಷ್ಟರಲ್ಲಿ ಬಾಲಕನೊಬ್ಬ ವಿವಿಧ ಬ್ರ್ಯಾಂಡಿನ ನಾಲ್ಕು ಬಾಟಲಿ ತಂದ. ಅಂದಾಜು 14 ವರ್ಷ ವಯಸ್ಸಿನವ, ಬ್ರ್ಯಾಂಡಿನ ಹೆಸರು ಹಾಗೂ ದರ ಹೇಳಿದ. ದುಬಾರಿ ಎಂದು ನೆಪಹೇಳಿ ಮುಂದಕ್ಕೆ ಸಾಗಿದೆವು...

ತುಸು ಮುಂದೆ ಸಾಗಿ ಎಡಕ್ಕೆ ತಿರುಗಿದಾಗ ಐವರು ಯುವಕರಿದ್ದ ಕಾರು ನಿಂತಿತ್ತು. ವ್ಯಕ್ತಿಯೊಬ್ಬ ಮದ್ಯದ ಬಾಕ್ಸುಗಳನ್ನು ಕಾರಿಗೆ ತುಂಬುತ್ತಿದ್ದ. ನಮ್ಮ ಬೈಕು ಹತ್ತಿರ ಹೋಗುತ್ತಿದ್ದಂತೆಯೇ ಕಾರಿನ ಬಲ್ಬು ಆರಿಸಿದರು. ಗೋಪ್ಯ ವಿಡಿಯೊ ಮಾಡುತ್ತಿದ್ದಾರೆ ಎಂದು ನಮ್ಮ ಮೇಲೆ ಅನುಮಾನಗೊಂಡು, ಒಬ್ಬೊಬ್ಬರಾಗಿ ಗುಂಪುಗೂಡಲು ಶುರು ಮಾಡಿದ್ದರಿಂದ ಅಲ್ಲಿಂದ ಕಾಲ್ಕಿತ್ತೆವು.

ಒಂದು ಕಾಲದಲ್ಲಿ ಮದ್ಯದ ಅಕ್ರಮ ಮಾರಾಟಕ್ಕೆ ಹೆಸರಾಗಿದ್ದ ಬೆಳಗಾವಿಯ ಗ್ಯಾಂಗ್ವಾಡಿಯ ಹೆಸರು ರಾಮನಗರ ಎಂದು ಬದಲಾಗಿದೆ. ಆದರೆ, ಕಸುಬು ಬದಲಾಗಿಲ್ಲ. ಮದ್ಯ ಅಕ್ರಮ ಮಾರಾಟ ಈಗಲೂ ನಡೆದಿದ್ದು ಕುಟುಕು ಕಾರ್ಯಾಚರಣೆಯಲ್ಲಿ ಪತ್ತೆಯಾಯಿತು.

ಇಂಥದ್ದೇ ಕಸುಬಿಗೆ ಹೆಸರಾಗಿದ್ದು ಬಾದರವಾಡಿ. ‘ಪಾರ್ಟಿ’ ಮಾಡುವ ಸೋಗಿನಲ್ಲಿ ಅಲ್ಲಿಗೆ ಹೊರಟೆವು. ಆರಂಭದಲ್ಲೇ ಕಾಣಿಸಿದ ದೊಡ್ಡ ಬಂಗಲೆಗೆ ಹೋಗಿ ‘ಗೋವಾ ಮಾಲು?’ ಕೇಳಿದೆ. ಯುವಕನೊಬ್ಬ ಎಷ್ಟು ಬೇಕು ಅಂದ. ನೂರು ಜನರ ಪಾರ್ಟಿ ಇದೆ, ಜಾಸ್ತಿ ಬೇಕು ಎಂದೆ. ಸಾವಿರ ಜನರಿದ್ದರೂ ಕೊಡುತ್ತೇನೆ. ಯಾವುದು ಬೇಕು ಹೇಳು ಅಂದ. ರೊಕ್ಕ ತಂದಿಲ್ಲ ‘ಫೋನ್ ಪೆ’ ಮಾಡಬಹುದೇ ಎಂದೆ. ಅದೆಲ್ಲ ನಡೆಯುವುದಿಲ್ಲ ರೊಕ್ಕ ಮಾತ್ರ ಎಂದು ಹೊರಗೆ ಕಳುಹಿಸಿದ. ಅನುಮಾನದಿಂದ ನಮ್ಮನ್ನು ದೂರದವರೆಗೂ ಹಿಂಬಾಲಿಸಿದ...

ಗೋವಾದಿಂದ ಮದ್ಯ ತಂದು ಮಾರಾಟ ಮಾಡುವ ಕೆಲವರು ಇಲ್ಲಿದ್ದಾರೆ. ಇದೇ ದಂಧೆ ಮಾಡಿ ಬಂಗಲೆ ಕಟ್ಟಿಕೊಂಡಿದ್ದಾರೆ. ಅಬಕಾರಿ ಅಧಿಕಾರಿಗಳು ಸಾಕಷ್ಟು ಬಾರಿ ದಾಳಿ ಮಾಡಿ, ಪ್ರಕರಣ ದಾಖಲಿಸಿದ್ದಾರೆ. ಪೂರ್ಣ ನಿಲ್ಲಿಸಲು ಆಗಿಲ್ಲ.

‘ಕಳ್ಳರು ವೈವಿಧ್ಯಮಯ ತಂತ್ರಗಳನ್ನು ಅನುಸರಿಸುತ್ತಿದ್ದಾರೆ. ‘ಪುಷ್ಪ’ ಸಿನಿಮಾದಲ್ಲಿ ರಕ್ತಚಂದನ ಕಟ್ಟಿಗೆ ಅಕ್ರಮವಾಗಿ ಸಾಗಿಸುವ ದೃಶ್ಯಗಳಿವೆ. ಅದೇ ರೀತಿ ಲಾರಿಯೊಂದರಲ್ಲಿ ‘ಫ್ಲೈವುಡ್’ ಹೇರಿಕೊಂಡು ಅದರ ಮಧ್ಯೆ ಮದ್ಯದ ಬಾಕ್ಸ್ಗಳ ಸಾಗಿಸಲಾಗುತ್ತಿತ್ತು. ಇದು ನಮ್ಮ ಗೂಢಚರ್ಯ ಮೂಲದಿಂದ ಮಾಹಿತಿ ಸಿಕ್ಕಿತು. ವಾಹನ ನಂಬರ್ ಜಾಲಾಡಿ, ಮಾಲು ವಶಕ್ಕೆ ಪಡೆದೆವು’ ಎಂದು ಕಾರ್ಯಾಚರಣೆಯ ರೂಪ ವಿವರಿಸುತ್ತಾರೆ ಸ್ಥಳೀಯ ಅಬಕಾರಿ ಅಧಿಕಾರಿಗಳು.

ವಿದ್ಯುತ್ ಟ್ರಾನ್ಸ್ಫಾರ್ಮರ್ಗಳ ಒಳಭಾಗದಲ್ಲಿ ಮದ್ಯದ ಬಾಕ್ಸ್ಗಳನ್ನು ಮುಚ್ಚಿ ಸಾಗಿಸುವುದು, ಎಲೆಕ್ಟ್ರಾನಿಕ್ ತ್ಯಾಜ್ಯ ಸಾಗಣೆ ಮಾಡುವ ನೆಪದಲ್ಲಿ ಕಂಟೇನರ್ನಲ್ಲಿ ಮದ್ಯ ಸಾಗಿಸುವುದು, ಅಣಬೆ ಬೀಜ ಸಾಗಣೆ ನೆಪದಲ್ಲಿ ಲಾರಿಯಲ್ಲಿ ಮದ್ಯದ ಬಾಟಲಿ ಸಾಗಾಟ... ಹೀಗೆ ಹಲವು ತಂತ್ರಗಳನ್ನು ಖದೀಮರು ಅನುಸರಿಸುತ್ತಿದ್ದಾರೆ. ಈ ರೀತಿಯ ವಾಹನ ಗೋವಾ ಗಡಿ ದಾಟಿದ ತಕ್ಷಣವೇ ನಮಗೆ ಮಾಹಿತಿ ಬರುತ್ತದೆ. ಪ್ರತಿತಂತ್ರ ರೂಪಿಸಿ ಪತ್ತೆ ಮಾಡುತ್ತೇವೆ. ಅತ್ಯಂತ ನಾಜೂಕಿನಿಂದ ಕಾರ್ಯಾಚರಣೆ ಮಾಡಿದರೆ ಮಾತ್ರ ಹಿಡಿಯಲು ಸಾಧ್ಯ’ ಎನ್ನುವುದು ಅಧಿಕಾರಿಗಳ ಹೇಳಿಕೆ.

ರಾಜ್ಯದಲ್ಲಿ ಮದ್ಯಕ್ಕೆ ಕೊರತೆಯಿಲ್ಲ. ಪ್ರತಿಷ್ಠಿತ ಬ್ರ್ಯಾಂಡ್ ಸಿಗುವುದಿಲ್ಲ ಎಂಬ ದೂರುಗಳಿಲ್ಲ. ಆದರೆ, ಗೋವಾದ ಮದ್ಯ ಮಾತ್ರ ಬೇಕು. ಅಕ್ರಮವಾದರೂ ಸರಿಯೇ, ಗೋವಾದಿಂದ ಭಾರಿ ಪ್ರಮಾಣದಲ್ಲಿ ಮದ್ಯ ಸಾಗಣೆ ಆಗುತ್ತದೆ. ಕಡಿಮೆ ದರದಲ್ಲಿ ಸಿಗುತ್ತದೆ ಎಂಬ ಏಕೈಕ ಕಾರಣಕ್ಕೆ ಪೊಲೀಸರು ಮತ್ತು ಅಬಕಾರಿಯವರ ಕಣ್ತಪ್ಪಿಸಿ, ಬಗೆಬಗೆಯ ಕಸರತ್ತು ನಡೆಸಿ, ಮದ್ಯವನ್ನು ಕರ್ನಾಟಕದ ಮೂಲೆಮೂಲೆಗೆ ತಲುಪಿಸಲಾಗುತ್ತದೆ.

ಪ್ರತಿ ವಾರ ಅಥವಾ 15 ದಿನಕ್ಕೊಮ್ಮೆ ಅಬಕಾರಿ ಇಲಾಖೆಯವರು ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದಾಗಲೆಲ್ಲ, ಗೋವಾದಿಂದ ಮದ್ಯ ಅಕ್ರಮವಾಗಿ ಸಾಗಣೆ ಆಗುವುದು ದೃಢಪಡುತ್ತದೆ. ಬಗೆಬಗೆಯ ತಂತ್ರ–ಪ್ರತಿತಂತ್ರ ನಡೆಸಿದರೂ ಮದ್ಯದ ಅಕ್ರಮ ಸಾಗಣೆಗಾರರು ಬಹುತೇಕ ಸಂದರ್ಭದಲ್ಲಿ ಸಿಕ್ಕಿಬಿದ್ದಿದ್ದಾರೆ.

2024ರಿಂದ ಜುಲೈ 1ರಿಂದ ಈವರೆಗೆ ₹8 ಕೋಟಿಗೂ ಅಧಿಕ ಮೌಲ್ಯದ ಮದ್ಯವನ್ನು ಬೆಳಗಾವಿ ವಿಭಾಗದ ಪೊಲೀಸರು ವಶಕ್ಕೆ ಪಡೆದಿದ್ದಾರೆ. 4,862 ಪ್ರಕರಣ ದಾಖಲಾಗಿವೆ. ಇವು ಚೆಕ್ಪೋಸ್ಟ್, ದಾಳಿ ವೇಳೆಯ ಅಂಕಿ ಅಂಶ. ಆದರೆ, ಅಬಕಾರಿ ಸಿಬ್ಬಂದಿ ಮತ್ತು ಪೊಲೀಸರಿಗೆ ಗೊತ್ತಾಗದಂತೆ ಅಕ್ರಮ ಸಾಗಣೆ ಈಗಲೂ ನಡೆಯುತ್ತಲೇ ಇದೆ. ಒಬ್ಬ ವ್ಯಕ್ತಿ 2.6 ಲೀಟರ್ ಮದ್ಯವನ್ನು ಜತೆಗೆ ಒಯ್ಯಲು ಕಾನೂನಿನಲ್ಲಿ ಅವಕಾಶವಿದೆ. ಗೋವಾಗೆ ಪ್ರವಾಸಕ್ಕೆ ಬರುವ ಹಲವರು ವಿಮಾನದ ಮೂಲಕ ಹೆಚ್ಚುವರಿ ಮದ್ಯವನ್ನು ಕೊಂಡೊಯ್ಯುವುದು ಇದೆ.

ಗೋವಾದಲ್ಲಿ ಲೋಡ್ ಆಗುವ ಮದ್ಯವನ್ನು ಹೊರ ರಾಜ್ಯಗಳಿಗೆ ಸಾಗಣೆ ಮಾಡಲು ಬೆಳಗಾವಿ ಹಾಗೂ ಉತ್ತರಕನ್ನಡ ಜಿಲ್ಲೆಗಳೇ ಮುಖ್ಯ ಮಾರ್ಗ. ಬೆಳಗಾವಿ ಮಾರ್ಗವಾಗಿ ಸಾಗಿಸುವ ಮದ್ಯ ಮಹಾರಾಷ್ಟ್ರ, ಆಂಧ್ರ, ತೆಲಂಗಾಣ, ಗುಜರಾತ್, ಮಧ್ಯಪ್ರದೇಶ ಹಾಗೂ ಉತ್ತರ ಭಾರತದ ಕೆಲವು ರಾಜ್ಯಗಳ ಕಡೆಗೂ ಹೋಗುತ್ತದೆ. ಮದ್ಯ ಸಾಗಣೆ ವೇಳೆ ಸಿಕ್ಕಿಬಿದ್ದ ವಾಹನ ಚಾಲಕರು ಉತ್ತರ ಭಾರತದವರೇ ಆಗಿರುವುದು ಇದಕ್ಕೆ ಸಾಕ್ಷಿ ನೀಡುತ್ತದೆ.

ಕಾರವಾರ ಮೂಲಕ ಸಾಗಿಸುವ ಮದ್ಯ ಕೇರಳ, ತಮಿಳುನಾಡು ತಲುಪುತ್ತದೆ. ಗೋವಾದಿಂದ ನೇರವಾಗಿ ಸಮುದ್ರ ಮಾರ್ಗದ ಮೂಲಕವೂ ಕರಾವಳಿ ಪ್ರದೇಶಕ್ಕೆ ಮದ್ಯ ತಲುಪುತ್ತದೆ. ಇಂಥ ಸಾಕಷ್ಟು ಪ್ರಕರಣಗಳು ಪತ್ತೆಯಾಗಿವೆ. ಬಿಗಿ ಕ್ರಮದ ನಡುವೆಯೂ ಬೆಂಗಳೂರು, ಮಂಗಳೂರು, ಬೆಳಗಾವಿ, ಮುಂಬೈ, ಪುಣೆ, ಚೆನ್ನೈ, ಹೈದರಾಬಾದ್ ಮತ್ತಿತರ ಕಡೆಗೂ ಲೋಡ್ಗಟ್ಟಲೇ ಮದ್ಯ ಸಾಗಣೆ ಆಗುತ್ತಿದೆ.

ವಿಮಾನ, ಹಡಗು, ರೈಲು, ಲಾರಿ, ಟ್ರಕ್, ಆಯಿಲ್ ಟ್ಯಾಂಕರ್, ಟೆಂಪೊ, ಖಾಸಗಿ ಬಸ್, ಆಟೊ, ಬೈಕ್, ಸೈಕಲ್ ಮೂಲಕ ಮದ್ಯವನ್ನು ಸಾಗಿಸಲಾಗುತ್ತದೆ. ಗಡಿ ಗ್ರಾಮಗಳಲ್ಲಿ ಕೆಲವರು ಪಾತ್ರೆಗಳ ಮಾರಾಟ, ಮೇವಿನ ಹೊರೆ ಮಾರಾಟದ ನೆಪದಲ್ಲಿ ಚಿಲ್ಲರೆ ಬಾಟಲಿಗಳನ್ನು ಸಾಗಿಸುತ್ತಾರೆ. ಗೋವಾ ಮಾರ್ಗದಲ್ಲಿರುವ ಬೆಳಗಾವಿ, ಖಾನಾಪುರ ತಾಲ್ಲೂಕಿನ ಗ್ರಾಮಗಳ ಕೆಲವರು ಮನೆಯಲ್ಲೇ ಸಂಗ್ರಹಿಸಿ ಇಟ್ಟು ಮಾರುವುದೂ ಇದೆ. ರಸ್ತೆ ಮಾರ್ಗದಲ್ಲಿ ಕಾವಲು ಹೆಚ್ಚಿರುವ ಕಾರಣ ಅರಣ್ಯ ಮಾರ್ಗದಲ್ಲಿ ನುಸುಳುವುದು ಸಾಮಾನ್ಯ.

ಅಕ್ರಮ ಸಾಗಣೆಗೆ ಕಾರಣವೇನು?

ಮದ್ಯ ತಯಾರಿಸಲು ಸ್ಪಿರಿಟ್ ಬೇಕು. ಗೋವಾದಲ್ಲಿ ಒಂದು ಹನಿ ಸ್ಪಿರಿಟ್ ಕೂಡ ಉತ್ಪಾದನೆಯಾಗುವುದಿಲ್ಲ. ಕರ್ನಾಟಕ ಹಾಗೂ ಮಹಾರಾಷ್ಟ್ರಗಳಿಂದ ಅದು ಗೋವಾಗೆ ಹೋಗುತ್ತದೆ. ಅಲ್ಲಿ ಮದ್ಯ ತಯಾರಾಗಿ, ಮರಳುತ್ತದೆ. ಅಲ್ಲಿಂದ ಮದ್ಯ ಕೆಲ ಪ್ರಮಾಣದಲ್ಲಿ ಅಕ್ರಮವಾಗಿ ನುಸುಳಿದರೆ, ಇಲ್ಲಿಂದ ಸ್ಪಿರಿಟ್ ಸಹ ಅಕ್ರಮವಾಗಿ ಹೋಗುತ್ತದೆ.

ಎರಡು ಜಿಲ್ಲೆ, ಎರಡೇ ದೊಡ್ಡ ನಗರಗಳುಳ್ಳ ರಾಜ್ಯ ಗೋವಾ. ಮದ್ಯಪ್ರಿಯರಿಗೆ ಸ್ವರ್ಗ. ದೇಶದಲ್ಲೇ ಅತ್ಯಂತ ಕಡಿಮೆ ದರದಲ್ಲಿ ಮದ್ಯ ಸಿಗುವುದು ಇಲ್ಲೇ. ಹೀಗಾಗಿ ಮದ್ಯಪ್ರಿಯರ ಗೋವಾ ಅಕ್ಷರಶಃ ‘ಮದ್ಯದಾನಿ’ ಎಂಬ ಮಾತಿದೆ.

ಕರ್ನಾಟಕದಲ್ಲಿ 2024ರಿಂದ ಇಲ್ಲಿಯವರೆಗೆ ನಾಲ್ಕು ಬಾರಿ ಮದ್ಯದ ದರ ಹೆಚ್ಚಿಸಲಾಗಿದೆ. ವ್ಯಾಪಾರ ಪರವಾನಗಿ ಶುಲ್ಕ ದುಪ್ಪಟ್ಟು ಮಾಡಲಾಗಿದೆ. ಅಬಕಾರಿ ಶುಲ್ಕದ ಜತೆಗೆ ‘ಹೆಚ್ಚುವರಿ ಶುಲ್ಕ’ದ ದರವನ್ನೂ ಸರ್ಕಾರ ಹೆಚ್ಚಿಸಿದೆ. ಹೀಗಾಗಿ ಗೋವಾದಲ್ಲಿ ಮದ್ಯ ಕಡಿಮೆ ಹಣಕ್ಕೆ ಸಿಗುತ್ತದೆ.

ಒಂದು ಲೀಟರ್ ಮದ್ಯಕ್ಕೆ ₹50 ಅಬಕಾರಿ ಶುಲ್ಕವಿದ್ದರೆ; ₹450 ಹೆಚ್ಚುವರಿ ಶುಲ್ಕ ಇದೆ. ಗೋವಾ ರಾಜ್ಯದಲ್ಲಿ ಹೆಚ್ಚುವರಿ ಶುಲ್ಕವಿಲ್ಲ. ಇದರಿಂದ ಕರ್ನಾಟಕದಲ್ಲಿ ₹10 ಸಾವಿರಕ್ಕೆ ಸಿಗುವ ಸ್ಕ್ವಾಚ್ ವಿಸ್ಕಿ ಅಲ್ಲಿ ₹4,000ಕ್ಕೆ ಸಿಗುತ್ತದೆ. ಇಲ್ಲಿ ₹240ಕ್ಕೆ ಸಿಗುವ ‘ಚೀಪ್ ಲಿಕ್ಕರ್’ ಅಲ್ಲಿ ಕೇವಲ ₹120ಕ್ಕೆ ಅಲ್ಲಿ ಸಿಗುತ್ತವೆ. ಹೀಗಾಗಿ, ಅಲ್ಲಿ ಕಡಿಮೆ ದರಕ್ಕೆ ಖರೀದಿಸಿ, ಹೊರಗಡೆ ಹೆಚ್ಚಿನ ಲಾಭ ಮಾಡಿಕೊಳ್ಳಲು ವ್ಯಾಪಾರಿಗಳು ಅಡ್ಡದಾರಿ ಹಿಡಿದಿದ್ದಾರೆ.

ಮೂರು ರೀತಿಯ ಅಕ್ರಮ

ಗೋವಾದಲ್ಲೇ ತಯಾರಾಗುವ ‘ಗೋವಾ ಲಿಕ್ಕರ್’ ಎಂಬ ಲೇಬಲ್ ಇರುವ ಮದ್ಯ ಅಗ್ಗವಾಗಿದೆ. 750 ಎಂ.ಎಲ್ನ 12 ಬಾಟಲಿಗಳ ಒಂದು ಕೇಸ್ಗೆ ₹450 ಮಾತ್ರ. ಅಲ್ಲಿ ಮಾತ್ರ ಮಾರಲು ಅನುಮತಿ ಇರುವ ಈ ಅಗ್ಗದ ಮದ್ಯವನ್ನು ಕರ್ನಾಟಕ್ಕೆ ಕಳ್ಳದಾರಿಯಲ್ಲಿ ಸಾಗಣೆ ಮಾಡಲಾಗುತ್ತಿದೆ. ಇನ್ನೊಂದೆಡೆ ವಿಸ್ಕಿ, ಬಿಯರ್, ರಮ್, ವೋಡ್ಕಾ ಮುಂತಾದ ಕಂಪನಿ ಮದ್ಯವನ್ನು ಖರೀದಿಸಿ, ಹೊರಕ್ಕೆ ಸಾಗಿಸಲಾಗುತ್ತದೆ.

ಮೂರನೆಯದ್ದು ತುಂಬ ಗಂಭೀರ ಪ್ರಕರಣ; ಇಲ್ಲಿ ಮದ್ಯವೇ ನಕಲಿ. ಖಾಲಿ ಬಾಟಲಿಗಳ ಮೇಲೆ ಬ್ರ್ಯಾಂಡೆಡ್ ಲೇಬಲ್ಲುಗಳನ್ನು ಅಂಟಿಸಿ, ಅದರಲ್ಲಿ ನಕಲಿ ಮದ್ಯ ತುಂಬಿ ಸಾಗಿಸಲಾಗುತ್ತದೆ. ಒಮ್ಮೆ ಕಾರ್ಯಾಚರಣೆ ನಡೆಸಿದಾಗ, ₹50 ಲಕ್ಷಕ್ಕೂ ಅಧಿಕ ಮೌಲ್ಯದ ನಕಲಿ ಮದ್ಯ ಬೆಳಗಾವಿ ಬಳಿಯ ಹಿರೇಬಾಗೇವಾಡಿ ಹತ್ತಿರ ರಾಷ್ಟ್ರೀಯ ಹೆದ್ದಾರಿಯಲ್ಲಿ ಪತ್ತೆಯಾಗಿತ್ತು.

ಮಹಾರಾಷ್ಟ್ರದಿಂದಲೂ ಅಕ್ರಮ ದಾರಿ

ರಾಜ್ಯದಲ್ಲಿ ಕೆಲವು ದುಬಾರಿ ಬ್ರ್ಯಾಂಡಿನ ಮದ್ಯಕ್ಕೆ ಮಹಾರಾಷ್ಟ್ರದಲ್ಲಿ ಶೇ 35ರಷ್ಟು ಕಡಿಮೆಗೆ ದರವಿದೆ. ಎಂಸಿ ವಿಸ್ಕಿ, ಐ.ಬಿ 180 ಎಂ.ಎಲ್ನ (ಕ್ವಾರ್ಟರ್) ಬೆಲೆ ಇಲ್ಲಿ ₹235, ಮಹಾರಾಷ್ಟ್ರದಲ್ಲಿ ₹150. ಅಂದರೆ, ₹85 ವ್ಯತ್ಯಾಸ ಇದೆ. ಮಹಾರಾಷ್ಟ್ರದಲ್ಲಿ ಮಾರಾಟವಾಗುವ ರಾಯಲ್ ಚಾಲೆಂಜ್, ರಾಯಲ್ ಸ್ಟ್ಯಾಗ್ನ ಬೆಲೆ ₹190. ಇದೇ ಬ್ರ್ಯಾಂಡ್ಗಳ ಬೆಲೆಗಳು ಕರ್ನಾಟಕದಲ್ಲಿ ₹285ರ ಆಸುಪಾಸು. ಅಂದರೆ ₹95 ವ್ಯತ್ಯಾಸವಾಗುತ್ತದೆ. ಕೂಲಿ ಕಾರ್ಮಿಕರು ಕುಡಿಯುವ ಮದ್ಯಗಳಾದ ಒಟಿ., ಬಿಪಿ, ಒಸಿ ಮುಂತಾದವುಗಳ ದರ ₹120 ರಿಂದ ₹140. ಇದೇ ಮದ್ಯ ಮಹಾರಾಷ್ಟ್ರದಲ್ಲಿ ₹60 ರಿಂದ ₹80ಕ್ಕೆ ಸಿಗುತ್ತದೆ.

ಕಡಿವಾಣಕ್ಕೆ ಇಲ್ಲ ದಿಟ್ಟ ಕ್ರಮ

ಕರ್ನಾಟಕ– ಗೋವಾ ಮಧ್ಯ ಅನಮೋಡ್, ಮಾಚಾಳಿ ಹಾಗೂ ಕಣಕುಂಬಿ ಎಂಬಲ್ಲಿ ಮಾತ್ರ ಚೆಕ್ಪೋಸ್ಟ್ ಇವೆ. ಗೋವಾ– ಮಹಾರಾಷ್ಟ್ರ ಮಧ್ಯೆ ಗಡಹಿಂಗ್ಲಜ್ ಬಳಿ ಚೆಕ್ ಫೊಸ್ಟ್ ಇದೆ. ಇಲ್ಲಿ ಅಕ್ರಮ ಮದ್ಯ ತಪಾಸಣೆಗೆ ಇಬ್ಬರು ಸಿಬ್ಬಂದಿ ಇರುತ್ತಾರೆ. ಪ್ರತಿ ಗಂಟೆಗೂ 1,000ರಿಂದ 1,500 ವಾಹನಗಳು ಓಡಾಡುತ್ತವೆ. ಎಲ್ಲವನ್ನೂ ನಿಲ್ಲಿಸಿ ತಪಾಸಣೆ ಮಾಡಲು ಸಾಧ್ಯವಿಲ್ಲ. ನಿಖರ ಮಾಹಿತಿ ದೊರೆತರೆ ಮಾತ್ರ ಪೊಲೀಸರು ಹಿಡಿಯುತ್ತಾರೆ.

ಗೋವಾ, ಕರ್ನಾಟಕ, ಮಹಾರಾಷ್ಟ್ರ ಮಧ್ಯೆ ಚೆಕ್ಪೋಸ್ಟ್ ತಪ್ಪಿಸಿಯೂ ಅನ್ಯಮಾರ್ಗಗಳು ಸಾಕಷ್ಟಿವೆ. ಸಮುದ್ರ ಮಾರ್ಗ ಹಾಗೂ ಅರಣ್ಯ ಮಾರ್ಗದ ಮೂಲಕ ಉತ್ತರಕನ್ನಡ ಜಿಲ್ಲೆಗೆ ಅಕ್ರಮ ಸಾಗಣೆ ಮಾಡಲಾಗುತ್ತದೆ. ಅಬಕಾರಿ ಅಧಿಕಾರಿಗಳು ಕಳೆದ ವರ್ಷ ಇದರ ಪತ್ತೆಗೆ ‘ಡ್ರೋನ್ ಕಣ್ಗಾವಲು ಪಡೆ’ ಕಟ್ಟಿದ್ದರು. ಡ್ರೋನ್ ಕಣ್ಣುಗಳ ನಡುವೆಯು ಮದ್ಯ ಸಾಗಿಸುವುದು ನಡೆದೇ ಇದೆ.

ರಾಜ್ಯದ ಒಳಗೂ ಅಕ್ರಮ

ಗೋವಾದಿಂದ ಬರುವ ಮದ್ಯ ಕಳ್ಳಮಾರ್ಗದಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರವನ್ನು ಪ್ರವೇಶಿಸುತ್ತಿದೆ. ಇದರ ಜತೆಗೆ ರಾಜ್ಯದ ಮದ್ಯವೇ ಮಾರಾಟದ ಲೈಸೆನ್ಸ್ ಇಲ್ಲದ ರಾಜ್ಯದ ಮೂಲೆ ಮೂಲೆಯಲ್ಲಿರುವ ಅಂಗಡಿಗಳನ್ನು ಕಳ್ಳದಾರಿಯಲ್ಲಿ ತಲುಪುತ್ತಿದೆ. ಅಬಕಾರಿ ವಹಿವಾಟು ಹೆಚ್ಚಿಸಿ ಆದಾಯ ಹೆಚ್ಚಿಸಿಕೊಳ್ಳಲು, ತಿಂಗಳಿಗೆ ಇಂತಿಷ್ಟು ಮದ್ಯ ಮಾರಲೇಬೇಕೆಂದು ಇಲಾಖೆಯೇ ‘ಗುರಿ’ ನೀಡಿದೆ. ‘ಗುರಿ’ ಮುಟ್ಟದಿದ್ದರೆ ವ್ಯಾಪಾರಿಗೆ ನಷ್ಟ. ಹೀಗಾಗಿ ಆಟೊ, ಬೈಕುಗಳ ಮೇಲೆ ಚಿಲ್ಲರೆ ವ್ಯಾಪಾರಿಗಳು ಹಳ್ಳಿಹಳ್ಳಿಗೂ ಮದ್ಯವನ್ನು ತಲುಪಿಸುತ್ತಾರೆ. ನಗರ– ಪಟ್ಟಣಗಳಲ್ಲಿ ಖರೀದಿಸಿ ಹಳ್ಳಿಯ ಧಾಬಾ, ಹೋಟೆಲ್, ಕಿರಾಣಿ ಅಂಗಡಿ, ತಂಪುಪಾನೀಯ ಅಂಗಡಿಗಳಿಗೂ ಸರಬರಾಜು ಮಾಡುವುದು ಇದರ ಇನ್ನೊಂದು ಮುಖ. ‘ಟಾರ್ಗಟ್’ ನೀಡುವ ಮೂಲಕ ಇಲಾಖೆಯೇ ಅಕ್ರಮ ಸಾಗಣೆಗೆ ಪರೋಕ್ಷ ಪ್ರೋತ್ಸಾಹ ನೀಡುತ್ತಿದೆ ಎಂಬ ಮಾತಿದೆ.

ಹಳ್ಳಿಗಳಲ್ಲಿ ಅಕ್ರಮ ಮಾರಾಟ ಅವ್ಯಾಹತ

ರಾಜ್ಯದ ಬಹುಪಾಲು ಗ್ರಾಮೀಣ ಭಾಗದಲ್ಲಿ ಮದ್ಯ ಅಕ್ರಮ ಮಾರಾಟ ರಾಜಾರೋಷವಾಗಿ ನಡೆಯುತ್ತಿದೆ. ಚಿತ್ರದುರ್ಗ ಚಿಲ್ಲೆಯ ಚಳ್ಳಕೆರೆ, ಮೊಳಕಾಲ್ಮುರು ಮುಂತಾದ ಗಡಿ ಭಾಗಗಳು, ಮಲೆನಾಡಿನ ಸಾಗರ, ಸೊರಬ, ತೀರ್ಥಹಳ್ಳಿ, ಬೆಳಗಾವಿ, ಯಾದಗಿರಿ ಮುಂತಾದ ಜಿಲ್ಲೆಗಳ ಗಡಿಯಲ್ಲಿ ಅಂಗಡಿಗಳು ಹಾಗೂ ಪ್ರವಾಸಿ ತಾಣಗಳಲ್ಲಿ ಚಿಲ್ಲರೆ ವ್ಯಾಪಾರ ಜೋರಾಗಿದೆ.

ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಹಾವೇರಿ, ಹೊಸಪೇಟೆ, ಗದಗ, ವಿಜಯಪುರ ಹೀಗೆ ವಿವಿಧ ಜಿಲ್ಲೆಗಳಲ್ಲಿ ದಿನಸಿ ಹಾಗೂ ಗೂಡಂಗಡಿಗಳಲ್ಲಿ ಮದ್ಯ ಅಕ್ರಮ ಮಾರಾಟ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕುವಂತೆ ರೈತ, ಕನ್ನಡಪರ, ಮಹಿಳಾ ಹಾಗೂ ಸ್ಥಳೀಯ ಸಂಘಟನೆಗಳ ನೇತೃತ್ವದಲ್ಲಿ ನಿತ್ಯ ಒಂದಿಲ್ಲೊಂದು ಹೋರಾಟ, ಪ್ರತಿಭಟನೆಗಳು ನಡೆಯುತ್ತಲೇ ಇವೆ. ಆದರೂ ಅಕ್ರಮವಾಗಿ ಮದ್ಯ ಮಾರಾಟ ಅನಿಯಂತ್ರಿತವಾಗಿ ನಡೆಯುತ್ತಲೇ ಇದೆ. ಗೋವಾದಿಂದಲೂ ಮದ್ಯ ಅಕ್ರಮವಾಗಿ ರಾಜ್ಯವನ್ನು ಪ್ರವೇಶಿಸುತ್ತಲೇ ಇದೆ.

ಯಾರು ಏನು ಹೇಳುತ್ತಾರೆ?

‘ಪಂಚ ಗ್ಯಾರಂಟಿ’ ಯೋಜನೆಗಳಿಂದ ಮದ್ಯೋದ್ಯಮದ ಮೇಲೆ ಹೊರೆ ಹೆಚ್ಚಾಗಿದೆ. ಮದ್ಯದ ದರ ಪರವಾನಗಿ ಶುಲ್ಕ ಮಾರಾಟದ ಮಿತಿ ಹೆಚ್ಚಿಸಿದ್ದಾರೆ. ಗ್ಯಾರಂಟಿಗಳಿಗೆ ಹಣ ಹೊಂದಿಸಲು ಅಬಕಾರಿ ಉದ್ಯಮದ ಮೇಲೆ ಬರೆ ಎಳೆಯಲಾಗಿದೆ. ಇದು ಅಡ್ಡದಾರಿಗೆ ಆಸ್ಪದ ನೀಡುತ್ತದೆ‘

–ಗುರುಸ್ವಾಮಿ, ಅಧ್ಯಕ್ಷ ಫೆಡರೇಷನ್ ಆಫ್ ವೈನ್ ಮರ್ಚಂಟ್ಸ್ ಅಸೋಸಿಯೇಷನ್

‘20 ವರ್ಷಗಳ ಹಿಂದೆ ಶೇ 8ರಷ್ಟು ಲಾಭದ ಮಿತಿ (ಮಾರ್ಜಿನ್) ಇತ್ತು. ಈಗಲೂ ಅಷ್ಟೇ ಇದೆ. ಮದ್ಯದ ದರ– ಮಾರಾಟದ ಗುರಿ ಏರಿಸಿದ್ದಾರೆ. ಶೇ 20ರಷ್ಟು ಮಾರ್ಜಿನ್ ಕೊಡಬೇಕು ಎಂಬ ಬೇಡಿಕೆಗೆ ಸರ್ಕಾರ ಸ್ಪಂದಿಸಿಲ್ಲ‘

–ರಾಮುಲು ರೆಡ್ಡಿ ಉಪಾಧ್ಯಕ್ಷ ಕಲಬುರ್ಗಿ ವೈನ್ ಮರ್ಚಂಟ್ಸ್ ಅಸೋಸಿಯೇಷನ್

‘ಗಡಿಯಲ್ಲಿ ಚೆಕ್ಪೋಸ್ಟ್ ಬಿಗಿಗೊಳಿಸಲಾಗಿದೆ. ದಾಳಿ ಮುಂದುವರಿದಿದೆ. ಚೆಕ್ಪೋಸ್ಟ್ ತಪ್ಪಿಸಿ ಬರುವ ಮದ್ಯ ಹಿಡಿಯಲು ಹೆದ್ದಾರಿಗಳ ಗಸ್ತು ಮಾಡಲಾಗುತ್ತಿದೆ. ನಿಗಾ ಇಟ್ಟಿದ್ದೇವೆ. ನಿರೀಕ್ಷೆಗೂ ಮೀರಿ ಪ್ರಕರಣ ದಾಖಲಿಸಿದ್ದೇವೆ‘

–ಎಫ್.ಎಚ್.ಚಲವಾದಿ ಜಂಟಿ ಆಯುಕ್ತ ಅಬಕಾರಿ ಇಲಾಖೆ ಬೆಳಗಾವಿ ವಿಭಾಗ

ಶಿಕ್ಷೆ ಪ್ರಮಾಣ ಏನು?

ಮದ್ಯ ಅಕ್ರಮ ಸಾಗಣೆ ಅಪರಾಧ ಸಾಬೀತಾದರೆ ಗರಿಷ್ಠ 5 ವರ್ಷಗಳವರೆಗೆ ಜೈಲು ಶಿಕ್ಷೆ ಇದೆ. ಬಹಳಷ್ಟು ಪ್ರಕರಣ ಅಕ್ರಮ ಮದ್ಯ ವಶಪಡಿಸಿಕೊಂಡು ದಂಡ ಹಾಕಲು ಮಾತ್ರ ಸೀಮಿತವಾಗಿದೆ. ‘ಸಿಆರ್ಪಿಸಿ 41(ಎ)’ ಪ್ರಕಾರ, ಐದು ವರ್ಷಗಳವರೆಗೆ ಶಿಕ್ಷೆ ಆಗುವಂಥ ಪ್ರಕರಣಗಳಲ್ಲಿ ಮಾತ್ರ ಆರೋಪಿ ಬಂಧನಕ್ಕೆ ಅವಕಾಶವಿದೆ. ಅದಕ್ಕಿಂತ ಕಡಿಮೆ ಶಿಕ್ಷೆ ಆಗುವಂಥ ಪ್ರಕರಣವಿದ್ದರೆ ಜಾಮೀನು ಸಿಗುವ ಸಾಧ್ಯತೆ ಇದೆ. ಕಾನೂನು ಸಡಿಲವಾದುದು ಕಾರಣ ಎನ್ನುತ್ತಾರೆ ನಿವೃತ್ತ ಅಧಿಕಾರಿಯೊಬ್ಬರು.

₹42 ಸಾವಿರ ಕೋಟಿ ತೆರಿಗೆ!

‘ಈ ವರ್ಷ ₹42 ಸಾವಿರ ಕೋಟಿಗೂ ಅಧಿಕ ತೆರಿಗೆ ಮದ್ಯೋದ್ಯಮವೊಂದೇ ಸಂದಾಯ ಆಗಲಿದೆ. ಪಂಚಗ್ಯಾರಂಟಿ ಯೋಜನೆಗಳಿಗೆ ₹60 ಸಾವಿರ ಕೋಟಿ ಬೇಕು. ಶೇ 70 ಭಾಗದ ಹಣವನ್ನು ಇದೇ ಉದ್ಯಮ ನೀಡುತ್ತಿದೆ’ ಎನ್ನುತ್ತಾರೆ ಮದ್ಯದ ವ್ಯಾಪಾರಿಗಳು. ‘ಮೂರು ವರ್ಷಗಳ ಹಿಂದೆ ₹23 ಸಾವಿರ ಕೋಟಿ ಎರಡು ವರ್ಷಗಳ ಹಿಂದೆ ₹38 ಸಾವಿರ ಕೋಟಿ ತೆರಿಗೆ ಸಂಗ್ರಹವಾಗಿದೆ. ವರ್ಷದಿಂದ ವರ್ಷಕ್ಕೆ ‘ಟಾರ್ಗೆಟ್’ ಹೆಚ್ಚಳ ಮಾಡಿದ್ದರಿಂದ ಕಳೆದ ವರ್ಷ ತೆರಿಗೆ ಸಂಗ್ರಹಣೆ ₹40 ಸಾವಿರ ಕೋಟಿ ದಾಟಿದೆ. ಈಗ ಬಜೆಟ್ ಶೇ 16ರಷ್ಟು ಹಣ ಹೊಂದಿಸುವುದು ಮದ್ಯೋದ್ಯಮವೇ. ದರ ಮತ್ತು ಗುರಿ ಎರಡೂ ಹೆಚ್ಚಳ ಮಾಡಿದ್ದರಿಂದ ಜನರಿಗೆ ಹೆಚ್ಚು ಕುಡಿಸಬೇಕಾದ ಅನಿವಾರ್ಯವೂ ನಮಗಿದೆ. ಇದರಿಂದಾಗೇ ಹಳ್ಳಿ ಹಳ್ಳಿಗಳಲ್ಲಿ ಲೈಸೆನ್ಸ್ ಇಲ್ಲದೆ ಮದ್ಯ ಮಾರಾಟ ನಡೆಯುತ್ತಿದೆ ಎಂಬುದು ಕಲಬುರಗಿಯ ವ್ಯಾಪಾರಿಗಳ ಅಭಿಪ್ರಾಯ. ಕುಡಿಯುವುದು ಬಿಟ್ಟು ‘ಸೇದಲು’ ಶುರು ಎರಡು ವರ್ಷಗಳ ಹಿಂದೆ ₹80ಕ್ಕೆ ಸಿಗುತ್ತಿದ್ದ ಅಗ್ಗದ ಲಿಕ್ಕರ್ ಈಗ ₹150 ಆಗಿದೆ. ದಿನಕ್ಕೆ ₹500 ಕೂಲಿ ಪಡೆಯುವ ವ್ಯಕ್ತಿ ₹150 ಕುಡಿಯಲು ಖರ್ಚು ಮಾಡಲು ಆಗುವುದಿಲ್ಲ. ಅವರು ಗಾಂಜಾದತ್ತ ಹೊರಳುತ್ತಿದ್ದಾರೆ. ಗಡಿ ಭಾಗದಲ್ಲಿ ಈಗ ಗಾಂಜಾ ಪ್ರಕರಣಗಳು ಹೆಚ್ಚುತ್ತಿವೆ.

ಪತ್ತೆಗೆ ಇಲ್ಲ ತಂತ್ರಜ್ಞಾನ!

ಗಡಿಯಲ್ಲಿ ಮದ್ಯ ತುಂಬಿದ ವಾಹನಗಳನ್ನು ಪತ್ತೆ ಮಾಡುವಂಥ ಜಾಣ ತಂತ್ರಜ್ಞಾನ ಅನುಷ್ಠಾನ ಮಾಡಿಲ್ಲ. ಸದ್ಯಕ್ಕೆ ‘ಯುವಿ ಲ್ಯಾಂಪ್’ (ಅಲ್ಟ್ರಾವೈಲೆಟ್ ಲ್ಯಾಂಪ್) ಮಾತ್ರ ಬಳಕೆಯಲ್ಲಿದೆ. ಇದು ನಕಲಿ ಮದ್ಯವನ್ನು ಮಾತ್ರ ಖಾತ್ರಿಪಡಿಸಬಲ್ಲದು. ಅಲ್ಕೋಹಾಲ್ ಕಂಟೆಂಟ್ ಸ್ಕ್ಯಾನ್’ ಮಾಡುವಂಥ ಯಾವುದೇ ತಂತ್ರಜ್ಞಾನವನ್ನು ಬಳಸುವ ಗೋಜಿಗೇ ಇಲಾಖೆ ಹೋಗಿಲ್ಲ. ‘ಮದ್ಯ ಸೇವನೆ ಮಾಡಿ ವಾಹನ ಚಲಿಸುವವರ ಪತ್ತೆಗೆ ಯಂತ್ರಗಳಿವೆ. ಆದರೆ ಮದ್ಯ ತುಂಬಿದ ವಾಹನ ಪತ್ತೆಗೆ ಇದನ್ನು ಅಭಿವೃದ್ಧಿಪಡಿಸಿಲ್ಲ ಎಂಬುದೇ ಅಚ್ಚರಿ’ ಎಂಬುದು ವ್ಯಾಪಾರಿ ಪ್ರಮೋದ್ ಶೆಟ್ಟಿ ಮಾತು. ಶಿಕ್ಷೆ ಪ್ರಮಾಣ ಏನು? ಮದ್ಯ ಅಕ್ರಮ ಸಾಗಣೆ ಅಪರಾಧ ಸಾಬೀತಾದರೆ ಗರಿಷ್ಠ 5 ವರ್ಷಗಳವರೆಗೆ ಜೈಲು ಶಿಕ್ಷೆ ಇದೆ. ಬಹಳಷ್ಟು ಪ್ರಕರಣಗಳಲ್ಲಿ ಮಾಲು ಸೀಜ್ ಮಾಡಿ ದಂಡ ಹಾಕಲು ಮಾತ್ರ ಸೀಮಿತವಾಗಿದೆ. ‘ಸಿಆರ್ಪಿಸಿ 41(ಎ)’ ಪ್ರಕಾರ ಐದು ವರ್ಷಗಳವರೆಗೆ ಶಿಕ್ಷೆ ಆಗುವಂಥ ಪ್ರಕರಣಗಳಲ್ಲಿ ಮಾತ್ರ ಆರೋಪಿ ಬಂಧನಕ್ಕೆ ಅವಕಾಶವಿದೆ. ಅದಕ್ಕಿಂತ ಕಡಿಮೆ ಶಿಕ್ಷೆ ಆಗುವಂಥ ಪ್ರಕರಣವಿದ್ದರೆ ಜಾಮೀನು ಸಿಗುವ ಸಾಧ್ಯತೆ ಇದೆ. ಕಾನೂನು ಸಡಿಲತೆ ಕಾರಣ ಅಕ್ರಮಕ್ಕೆ ಭಯ ಇಲ್ಲ ಎನ್ನುವುದು ನಿವೃತ್ತ ಅಧಿಕಾರಿಯೊಬ್ಬರ ಮಾತು.

ಕಳ್ಳಬಟ್ಟಿ ಮಾಫಿಯಾ ನಿರಾತಂಕ

ಕಲ್ಯಾಣ ಕರ್ನಾಟಕ ಭಾಗದ ಗುಡ್ಡಗಾಡು ಹಾಗೂ ಕುರಚಲು ಅರಣ್ಯ ಪ್ರದೇಶಗಳಲ್ಲಿ ಬೆಲ್ಲದ ಕೊಳೆ ಬಳಸಿ ಕಳ್ಳಬಟ್ಟಿ ತಯಾರಿಸಿ ಮಾರುವುದು ಈಗಲೂ ಇದೆ. ಕಲಬುರಗಿ ವಿಜಯಪುರ ರಾಯಚೂರು ಬೀದರ್ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ 2020–21ರಿಂದ 2024 ನವೆಂಬರ್ ವರೆಗೆ 1007 ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ 594 ಆರೋಪಿಗಳನ್ನು ಬಂಧಿಸಲಾಗಿದೆ. ಆದರೆ ಶಿಕ್ಷೆಗೆ ಗುರಿಯಾದವರು ಕೇವಲ ಐವರು! ತೆಪ್ಪದ ಮೂಲಕ ಕಳ್ಳಸಾಗಣೆ: ಕೃಷ್ಣಾ ತುಂಗಭದ್ರಾ ನದಿಗಳಲ್ಲಿ ತೆಪ್ಪದ ಮೂಲಕ ಕರ್ನಾಟಕದ ಮದ್ಯವು ಆಂಧ್ರಕ್ಕೆ ಸಾಗಣೆಯಾಗುತ್ತದೆ. ಗಡಿ ಪ್ರದೇಶದಲ್ಲಿರುವ ಧಾಬಾಗಳಲ್ಲೂ ಕರ್ನಾಟಕದ್ದೇ ಮದ್ಯವೇ ಅಧಿಕ. ರಾಜ್ಯಕ್ಕೆ ಆದಾಯ ಬರುವ ಕಾರಣಕ್ಕೆ ಕರ್ನಾಟಕದ ಅಬಕಾರಿ ಇಲಾಖೆ ಅಧಿಕಾರಿಗಳು ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಚಿಕ್ಕಮಗಳೂರು ಬೆಳಗಾವಿ ಬಾಗಲಕೋಟೆ ವಿಜಯಪುರ ಹಾಗೂ ಉತ್ತರಕನ್ನಡ ಜಿಲ್ಲೆಯ ಕುಮಟಾದಲ್ಲಿ ಈಚೆಗೆ ಕಳ್ಳಬಟ್ಟಿ ಪ್ರಕರಣಗಳು ವರದಿಯಾಗಿದ್ದವು. ಆರೋಪಿಗಳನ್ನೂ ಬಂಧಿಸಲಾಗಿತ್ತು. ಆಂಧ್ರ ತೆಲಂಗಾಣದಲ್ಲಿ ಸೇಂದಿ ಕುಡಿಯಲು ನಿರ್ಬಂಧ ಇಲ್ಲ. ಹೀಗಾಗಿ ರಾಯಚೂರು ಭಾಗದವರು ಅಲ್ಲಿಗೇ ಹೋಗಿ ಸೇವಿಸಿ ಬರುವುದು ರೂಢಿ.

ಪರಿಕಲ್ಪನೆ: ಜೆ.ಡಿ.ಯತೀಶ್ಕುಮಾರ್, ಪೂರಕ ಮಾಹಿತಿ: ಪ್ರವೀಣ್ ಕುಮಾರ್ ಪಿವಿ, ಜಿ.ಶಿವಕುಮಾರ್, ಮಲ್ಲಿಕಾರ್ಜುನ ನಾಲವಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.