2026ನೇ ಸಾಲಿನ ಪ್ರತಿಷ್ಠಿತ ಕ್ವಾಕ್ಕರೇಲಿ ಸೈಮಂಡ್ಸ್ ವಿಶ್ವವಿದ್ಯಾಲಯದ (ಕ್ಯುಎಸ್) ಜಾಗತಿಕ ರ್ಯಾಂಕಿಂಗ್ ಪಟ್ಟಿ ಬಿಡುಗಡೆಯಾಗಿದೆ. ಐಐಟಿ ದೆಹಲಿ, ಐಐಟಿ ಬಾಂಬೆ, ದೆಹಲಿ ವಿಶ್ವವಿದ್ಯಾಲಯ, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಸೇರಿದಂತೆ ದೇಶದ ಕೆಲವು ವಿದ್ಯಾಸಂಸ್ಥೆಗಳು ಅದರಲ್ಲಿ ಸ್ಥಾನ ಪಡೆದಿವೆ. ಹಿಂದಿನ ವರ್ಷಗಳ ರ್ಯಾಂಕಿಂಗ್ಗೆ ಹೋಲಿಸಿದರೆ, ಕೆಲವು ಸಂಸ್ಥೆಗಳ ಶ್ರೇಣಿಯಲ್ಲಿ ಏರಿಕೆಯಾಗಿದ್ದರೂ, ಏಷ್ಯಾ ಮಟ್ಟದಲ್ಲಾಗಲಿ, ಜಾಗತಿಕ ಮಟ್ಟದಲ್ಲಾಗಲಿ ಭಾರತದ ವಿಶ್ವವಿದ್ಯಾಲಯಗಳ ಒಟ್ಟಾರೆ ಸಾಧನೆಯು ತೃಪ್ತಿಕರವಾಗಿಲ್ಲ.

ಜಾಗತಿಕ ಮಟ್ಟದ ವಿಶ್ವವಿದ್ಯಾಲಯಗಳನ್ನು ರೂಪಿಸಲೆಂದೇ ಕೇಂದ್ರ ಸರ್ಕಾರವು 2017ರಲ್ಲಿ ಉತ್ಕೃಷ್ಟ ಶಿಕ್ಷಣ ಸಂಸ್ಥೆ (ಇನ್ಸ್ಟಿಟಿಟ್ಯೂಷನ್ಸ್ ಆಫ್ ಎಮಿನೆನ್ಸ್– ಐಒಇ) ಯೋಜನೆಯನ್ನು ಜಾರಿ ಮಾಡಿತು. ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದ ಉನ್ನತ ಶಿಕ್ಷಣವು ದೇಶದಲ್ಲಿಯೇ ದೊರೆಯುವಂತೆ ಮಾಡಬೇಕು ಎನ್ನುವ ಆಶಯ ಸರ್ಕಾರ ದ್ದಾಗಿತ್ತು. ‘ದೇಶದ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಅತ್ಯುನ್ನತ ಬೋಧನೆ ಮತ್ತು ಸಂಶೋಧನೆಯ ಸ್ಥಳಗಳನ್ನಾಗಿ ರೂಪಿಸಲು ಅಗತ್ಯ ನೆರವು ನೀಡುವುದಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ. ಇದು ಸಾಮಾನ್ಯ ಭಾರತೀಯನಿಗೂ ಅತ್ಯುನ್ನತ ಗುಣಮಟ್ಟದ ಶಿಕ್ಷಣ ದೊರೆಯುವ ಅವಕಾಶಗಳನ್ನು ಹೆಚ್ಚಿಸುತ್ತದೆ’ ಎಂದು 2016-17ರ ಬಜೆಟ್ ಭಾಷಣದಲ್ಲಿ ಅಂದಿನ ಹಣಕಾಸು ಸಚಿವ ಅರುಣ್ ಜೇಟ್ಲಿ ಯೋಜನೆ ಬಗ್ಗೆ ವಿವರಿಸಿದ್ದರು.

ಯೋಜನೆಯ ಭಾಗವಾಗಿ ಆರಂಭದಲ್ಲಿ ಅತ್ಯುತ್ತಮವಾದ 20 (10 ಖಾಸಗಿ ಮತ್ತು 10 ಸರ್ಕಾರಿ) ಶಿಕ್ಷಣ ಸಂಸ್ಥೆಗಳನ್ನು ಗುರುತಿಸುವುದು; ಅಗತ್ಯ ನೆರವು ನೀಡುವ ಮೂಲಕ ಅವುಗಳನ್ನು ಮತ್ತಷ್ಟು ಅಭಿವೃದ್ಧಿ ಪಡಿಸಿ, ವಿಶ್ವದರ್ಜೆಯ ಶೈಕ್ಷಣಿಕ ಗುಣಮಟ್ಟ ಸಾಧಿಸುವ ಗುರಿ ಹೊಂದಲಾಗಿತ್ತು. ವಿಶ್ವದರ್ಜೆಯ ಶಿಕ್ಷಣ ಸಂಸ್ಥೆಗಳ ಯೋಜನೆ ಎಂದೂ ಅದನ್ನು ಕರೆಯಲಾಗಿತ್ತು. ಯೋಜನೆಗೆ ಆಯ್ಕೆಯಾದ ಸರ್ಕಾರಿ ವಿಶ್ವವಿದ್ಯಾಲಯಗಳಿಗೆ ಐದು ವರ್ಷಗಳಲ್ಲಿ ಹೆಚ್ಚುವರಿಯಾಗಿ ₹1,000 ಕೋಟಿ ಧನಸಹಾಯ ಮಾಡಲಾಗುವುದು ಮತ್ತು ಖಾಸಗಿ ಸಂಸ್ಥೆಗಳಿಗೆ ಸಂಪೂರ್ಣ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಸ್ವಾಯತ್ತೆ ನೀಡಲಾಗುವುದು ಎಂದು ಕೇಂದ್ರವು ತಿಳಿಸಿತ್ತು.

ಐಒಇ ಸ್ಥಾನಮಾನ ಪಡೆಯಲು ಶಿಕ್ಷಣ ಸಂಸ್ಥೆಗಳು ಅರ್ಜಿ ಸಲ್ಲಿಸಬೇಕು. ಆ ಅರ್ಜಿಗಳನ್ನು ಉನ್ನತಾಧಿಕಾರಿ ಸಮಿತಿ (ಇಇಸಿ) ಪರಿಶೀಲಿಸಿ ವಿಶ್ವವಿದ್ಯಾಲಯ ಧನಸಹಾಯ ಆಯೋಗಕ್ಕೆ (ಯುಜಿಸಿ) ವರದಿ ನೀಡುತ್ತದೆ. ಅದರ ಆಧಾರದಲ್ಲಿ ಯುಜಿಸಿ ಕೇಂದ್ರ ಉನ್ನತ ಶಿಕ್ಷಣ ಇಲಾಖೆಗೆ ಶಿಫಾರಸು ಮಾಡುತ್ತದೆ. ಉನ್ನತ ಶಿಕ್ಷಣ ಇಲಾಖೆಯು ಆ ಶಿಕ್ಷಣ ಸಂಸ್ಥೆಗಳಿಗೆ ಐಒಇ ಸ್ಥಾನಮಾನ ನೀಡಿ, ಅವುಗಳೊಂದಿಗೆ ಒಪ್ಪಂದ (ಎಂಒಯು) ಮಾಡಿಕೊಳ್ಳುತ್ತದೆ ಎಂದು ಸರ್ಕಾರ ತಿಳಿಸಿತ್ತು. ಆದರೆ, ಉನ್ನತಾಧಿಕಾರ ಸಮಿತಿಯ ಮೂರು ವರ್ಷದ ಅವಧಿ ಅಂತ್ಯಗೊಂಡು ನಾಲ್ಕು ವರ್ಷ ಕಳೆದಿದ್ದರೂ ಹೊಸ ಸಮಿತಿ ರಚನೆಯಾಗಿಲ್ಲ. ಹೀಗಾಗಿ ತಾಂತ್ರಿಕವಾಗಿ ಯೋಜನೆ ಮುಂದುವರೆಯಬೇಕಾದ ಪ್ರಕ್ರಿಯೆಯು ಎಂಒಯು ಹಂತದಲ್ಲಿಯೇ ಸ್ಥಗಿತಗೊಂಡಿದೆ.

12 ಸಂಸ್ಥೆಗಳಿಗೆ ಮಾತ್ರ ಐಒಇ ಸ್ಥಾನಮಾನ: ಯೋಜನೆ ಘೋಷಣೆಯಾದ ನಂತರ, 2018ರಲ್ಲಿ ಮೂರು ಸರ್ಕಾರಿ ಮತ್ತು ಮೂರು ಖಾಸಗಿ ಶಿಕ್ಷಣ ಸಂಸ್ಥೆಗಳು ಸೇರಿ ಆರು ಸಂಸ್ಥೆಗಳಿಗೆ ಐಒಇ ಸ್ಥಾನಮಾನ ನೀಡುವುದಾಗಿ ಘೋಷಿಸಲಾಯಿತು. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ), ಐಐಟಿ ದೆಹಲಿ ಮತ್ತು ಐಐಟಿ ಬಾಂಬೆ ಸರ್ಕಾರಿ ಸಂಸ್ಥೆಗಳಾದರೆ, ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್, ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಸೈನ್ಸ್ (ಬಿಐಟಿಎಸ್) ಪಿಳನಿ ಮತ್ತು ರಿಲಯನ್ಸ್ ಫೌಂಡೇಷನ್ನ ಜಿಯೊ ಇನ್ಸ್ಟಿಟ್ಯೂಟ್ ಖಾಸಗಿ ಸಂಸ್ಥೆಗಳಾಗಿದ್ದವು.

2018 ಮತ್ತು 2020ರ ನಡುವೆ, ಜಿಯೊ ಇನ್ಸ್ಟಿಟ್ಯೂಟ್ ಹೊರತುಪಡಿಸಿ, ಘೋಷಣೆಯಾಗಿದ್ದ ಇತರೆ ಸಂಸ್ಥೆಗಳಿಗೆ ಐಒಇ ಸ್ಥಾನಮಾನ ನೀಡಿ ಎಂಒಯು ಮಾಡಿಕೊಳ್ಳಲಾಯಿತು. ಇದೇ ಅವಧಿಯಲ್ಲಿಯೇ, ಮತ್ತೆ ಆರು ಶಿಕ್ಷಣ ಸಂಸ್ಥೆಗಳಿಗೆ ಐಒಇ ಸ್ಥಾನಮಾನ ನೀಡಲಾಯಿತು. ಅವುಗಳೆಂದರೆ, ಐಐಟಿ ಮದ್ರಾಸ್, ಐಐಟಿ ಖರಗ್ಪುರ, ದೆಹಲಿ ವಿಶ್ವವಿದ್ಯಾಲಯ, ಹೈದರಾಬಾದ್ ವಿಶ್ವವಿದ್ಯಾಲಯ, ಬನಾರಸ್ ಹಿಂದೂ ವಿಶ್ವವಿದ್ಯಾಲಯ ಮತ್ತು ಓಪಿ ಜಿಂದಾಲ್ ಗ್ಲೋಬಲ್ ಯೂನಿವರ್ಸಿಟಿ.

ಯೋಜನೆಯ ಆರಂಭದಲ್ಲಿ ಹೇಳಿದಂತೆ, 20 ಸಂಸ್ಥೆಗಳ ಬದಲು ಕೇವಲ 12 (ಎಂಟು ಸರ್ಕಾರಿ ಮತ್ತು ನಾಲ್ಕು ಖಾಸಗಿ) ಶಿಕ್ಷಣ ಸಂಸ್ಥೆಗಳನ್ನು ಮಾತ್ರ ಯೋಜನೆಗೆ ಆಯ್ಕೆ ಮಾಡಲಾಗಿದೆ. ಪಟ್ಟಿಯಲ್ಲಿ ಕರ್ನಾಟಕದ ಎರಡು ಶಿಕ್ಷಣ ಸಂಸ್ಥೆಗಳಿದ್ದು, ಒಂದು ಸರ್ಕಾರಿ ಸ್ವಾಮ್ಯದ ಸಂಸ್ಥೆಯಾಗಿದ್ದರೆ (ಭಾರತೀಯ ವಿಜ್ಞಾನ ಸಂಸ್ಥೆ–ಐಐಎಸ್ಸಿ), ಮತ್ತೊಂದು (ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್) ಖಾಸಗಿ ಸಂಸ್ಥೆಯಾಗಿದೆ.

ಯೋಜನೆಯ ಆರಂಭಿಕ ಯಶಸ್ಸು

ಯೋಜನೆ ಆರಂಭಿಸುವಾಗ ಅದರ ಬಗ್ಗೆ ಕೇಂದ್ರ ಸರ್ಕಾರಕ್ಕೆ ನಿರ್ದಿಷ್ಟ ಗುರಿ ಹೊಂದಿತ್ತು. 10 ವರ್ಷಗಳಲ್ಲಿ ವಿಶ್ವದ ಶ್ರೇಷ್ಠ 500 ವಿಶ್ವವಿದ್ಯಾಲಯಗಳಲ್ಲಿ ಸ್ಥಾನ ಪಡೆಯಲು ಭಾರತದ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ನೆರವಾಗುವುದು; ಹಾಗೆಯೇ ಕ್ರಮೇಣ ಅವು ಶ್ರೇಷ್ಠ 100 ವಿಶ್ವವಿದ್ಯಾಲಯಗಳಲ್ಲಿ ಸ್ಥಾನ ಪಡೆಯುವಂತೆ ಮಾಡುವುದು ಪ್ರಮುಖ ಗುರಿಯಾಗಿತ್ತು. ಅದಕ್ಕಾಗಿ ಅವುಗಳಿಗೆ ಹೆಚ್ಚಿನ ಸ್ವಾಯತ್ತೆ, ವಿದ್ಯಾರ್ಥಿಗಳ ಪ್ರವೇಶ, ಅಧ್ಯಾಪಕರ ನೇಮಕ ಮುಂತಾದ ವಿಚಾರಗಳಲ್ಲಿ ಸ್ವಾತಂತ್ರ್ಯವನ್ನು ನೀಡಲಾಗಿತ್ತು. ವಿದೇಶಗಳಲ್ಲಿ ತನ್ನ ಕ್ಯಾಂಪಸ್ಗಳನ್ನು ತೆರೆದು ವಿದೇಶಿ ವಿದ್ಯಾರ್ಥಿಗಳನ್ನೂ ಸೆಳೆಯಲು ಅವಕಾಶ ಕಲ್ಪಿಸಲಾಗಿತ್ತು.

ಐಒಇ ಪಟ್ಟಿಗೆ ಸೇರಿದ ನಂತರ ಕೆಲವು ಶಿಕ್ಷಣ ಸಂಸ್ಥೆಗಳ ಗುಣಮಟ್ಟದಲ್ಲಿ ಗಮನಾರ್ಹ ಬೆಳವಣಿಗೆ ಆಗಿರುವುದು ಕಂಡುಬಂದಿದೆ; ಜಾಗತಿಕ ರ್ಯಾಂಕಿಂಗ್ ಹೆಚ್ಚಾಗಿದೆ. ಪ್ರತಿಷ್ಠಿತ ಕ್ವಾಕ್ಕರೇಲಿ ಸೈಮಂಡ್ಸ್ ವಿಶ್ವವಿದ್ಯಾಲಯದ (ಕ್ಯುಎಸ್) ರ್ಯಾಂಕಿಂಗ್ ಪಟ್ಟಿಯಲ್ಲಿ ಐಐಟಿ ಬಾಂಬೆ, ಐಐಟಿ ದೆಹಲಿ, ಐಐಟಿ ಖರಗ್ಪುರ, ಐಐಟಿ ಮದ್ರಾಸ್, ಐಐಟಿ ದೆಹಲಿ ಮತ್ತು ಬೆಂಗಳೂರಿನ ಐಐಎಸ್ಸಿ ತಮ್ಮ 2025ರ ರ್ಯಾಂಕಿಂಗ್ ಅನ್ನು ಉತ್ತಮಪಡಿಸಿಕೊಂಡಿವೆ. 2025 ಮತ್ತು 2026ರ ರ್ಯಾಂಕಿಂಗ್ ಪಟ್ಟಿಯಲ್ಲಿ ಇವು 500ರ ಒಳಗಿನ ರ್ಯಾಂಕಿಂಗ್ ಪಡೆದಿವೆ. ಆದರೆ, ಉಳಿದ ಸಂಸ್ಥೆಗಳು 800ರ ರ್ಯಾಂಕಿಂಗ್ ಮೇಲೆ ಇವೆ. ಕೆಲವು ಸಂಸ್ಥೆಗಳು ಐದು ವರ್ಷದಲ್ಲಿ ಉತ್ತಮ ಪ್ರಗತಿ ದಾಖಲಿಸಿವೆ. 2021ರ ಕ್ಯುಎಸ್ ರ್ಯಾಂಕಿಂಗ್ನಲ್ಲಿ 172 ಸ್ಥಾನ ಪಡೆದಿದ್ದ ಐಐಟಿ ಬಾಂಬೆ 2025ರ ರ್ಯಾಂಕಿಂಗ್ನಲ್ಲಿ 118ನೇ ಸ್ಥಾನಕ್ಕೇರಿದೆ. ಶಿವ್ ನಾಡಾರ್ ವಿ.ವಿ.ಯ ಇತ್ತೀಚಿನ ರ್ಯಾಂಕಿಂಗ್ ಅಷ್ಟೇ ಲಭ್ಯವಿದೆ. ಇಷ್ಟಾದರೂ, ದೇಶದ ಯಾವ ವಿಶ್ವವಿದ್ಯಾಲಯವೂ ಜಗತ್ತಿನ ಉತ್ಕೃಷ್ಟ 100 ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿಲ್ಲ.

ಹಣಕಾಸು ಕೊರತೆ

ಉತ್ಕೃಷ್ಟ ಶಿಕ್ಷಣ ಸಂಸ್ಥೆಗಳ ಮನ್ನಣೆ ಪಡೆದ 10 ವಿಶ್ವವಿದ್ಯಾಲಯಗಳಿಗೆ ಯೋಜನೆಯ ಗುರಿಯನ್ನು ತಲುಪಲು ಐದು ವರ್ಷದ ಅವಧಿಯಲ್ಲಿ ತಲಾ ₹1,000 ಕೋಟಿ ಹೆಚ್ಚುವರಿ ಧನಸಹಾಯ ಒದಗಿಸಲಾಗುವುದು ಎಂದು ಸರ್ಕಾರ ಘೋಷಿಸಿತ್ತು. ಆದರೆ, ಯೋಜನೆಗೆ ಆಯ್ಕೆ ಆಗಿದ್ದು 8 ಸರ್ಕಾರಿ ಶಿಕ್ಷಣ ಸಂಸ್ಥೆಗಳು ಮಾತ್ರ. ಐದು ವರ್ಷಗಳ ಅವಧಿಯಲ್ಲಿ 8 ವಿಶ್ವವಿದ್ಯಾಲಯಗಳಿಗೆ 8,000 ಕೋಟಿ ನೀಡಬೇಕಿತ್ತು. ಈ ಅವಧಿಯಲ್ಲಿ ಕೇಂದ್ರವು (2024ರ ನ.30ರವರೆಗೆ) ₹6,090 ಕೋಟಿ ಬಿಡುಗಡೆ ಮಾಡಿದೆ.

ಶಿಕ್ಷಣ, ಮಹಿಳೆ, ಮಕ್ಕಳು, ಯುವಜನ ಮತ್ತು ಕ್ರೀಡೆಗೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿಯು (2025–26) ತನ್ನ ವರದಿಯಲ್ಲಿ ಐಒಇಗಳ ಬಗ್ಗೆ ವಿಸ್ತೃತವಾಗಿ ಉಲ್ಲೇಖಿಸಿದೆ. ಐದು ವರ್ಷದಲ್ಲಿ ನಿಗದಿತ ಮೊತ್ತಕ್ಕಿಂತ ಕಡಿಮೆ ನೀಡಲಾಗಿದೆ. 2025–26ರ ಬಜೆಟ್ ಅಂದಾಜಿನಲ್ಲಿ ₹475 ಕೋಟಿ ಮೀಸಲಿಡಲಾಗಿದ್ದು, ಅದು 2024–25ರ ಸಾಲಿನ ಬಜೆಟ್ ಅಂದಾಜು (₹1,800 ಕೋಟಿ) ಮತ್ತು 2023–24ರ ಬಜೆಟ್ ಅಂದಾಜಿಗಿಂತಲೂ (1,471) ತೀರಾ ಕಡಿಮೆಯಾಗಿದೆ ಎಂದು ವರದಿ ಉಲ್ಲೇಖಿಸಿದೆ. ಯೋಜನೆಗೆ ಆಯ್ಕೆಯಾದ 8 ಸಂಸ್ಥೆಗಳ ಪೈಕಿ ಐಐಟಿ ಮದ್ರಾಸ್ಗೆ ಮಾತ್ರ ಘೋಷಿಸಿದಷ್ಟು ಧನಸಹಾಯ (₹1,000 ಕೋಟಿ) ನೀಡಲಾಗಿದೆ.

ಸರ್ಕಾರದ ಹೆಚ್ಚುವರಿ ಧನಸಹಾಯವನ್ನು ಶಿಕ್ಷಣ ಸಂಸ್ಥೆಗಳಲ್ಲಿ ಮೂಲಸೌಕರ್ಯ ವೃದ್ಧಿ, ಅತ್ಯಾಧುನಿಕ ಪ್ರಯೋಗಾಲಯ, ಸಂಶೋಧನೆಗೆ ನೆರವು, ಸಂಶೋಧನಾ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲು ಬಳಸಿಕೊಳ್ಳಲಾಗಿದೆ ಎಂದು ವಿಶ್ವವಿದ್ಯಾಲಯಗಳು ತಿಳಿಸಿವೆ. ಯೋಜನೆಯ ಅಡಿಯಲ್ಲಿ ವಿಶ್ವವಿದ್ಯಾಲಯಗಳು ಗುರಿ ಸಾಧನೆಯ ಹಾದಿಯಲ್ಲಿ ಸಾಗುತ್ತಿದ್ದವು. ಆದರೆ, ಹಣಕಾಸು ಕೊರತೆಯಿಂದ ಶಿಕ್ಷಣದ ಗುಣಮಟ್ಟ ಹೆಚ್ಚಳದ ಕಾರ್ಯಚಟುವಟಿಕೆಗಳಿಗೆ ಅಡ್ಡಿಯಾಗಿದೆ ಎನ್ನುವುದು ವಿಶ್ವವಿದ್ಯಾಲಯಗಳ ದೂರು.

ಯೋಜನೆಯ ವಿಚಾರದಲ್ಲಿ ಸರ್ಕಾರಿ ಸಂಸ್ಥೆಗಳು ಧನಸಹಾಯದ ಕೊರತೆ ಎದುರಿಸಿದರೆ, ಖಾಸಗಿ ಶಿಕ್ಷಣ ಸಂಸ್ಥೆಗಳು ಆಡಳಿತ ವ್ಯವಸ್ಥೆಯೊಂದಿಗೆ ಹೆಣಗಬೇಕಾಗಿದೆ ಎನ್ನುವ ಅಸಮಾಧಾನ ವ್ಯಕ್ತವಾಗಿದೆ. ಯೋಜನೆಗೆ ಆಯ್ಕೆಯಾದ ಖಾಸಗಿ ವಿಶ್ವವಿದ್ಯಾಲಯಗಳಿಗೆ ಹಣಕಾಸು ಸಹಾಯ ಮಾಡುವುದಿಲ್ಲ. ಬದಲಿಗೆ, ಹೆಚ್ಚಿನ ಸ್ವಾಯತ್ತೆ ಮತ್ತು ಆಡಳಿತಾತ್ಮಕವಾಗಿ ಮುಕ್ತ ಅವಕಾಶಗಳನ್ನು ಒದಗಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ, ಐಒಇ ಮನ್ನಣೆಯು ತಮ್ಮ ಬ್ರ್ಯಾಂಡಿಂಗ್ಗೆ ನೆರವಾಗಿದ್ದು ಬಿಟ್ಟರೆ, ಸರ್ಕಾರದ ಮಟ್ಟದಲ್ಲಿ ಆಡಳಿತಾತ್ಮಕ ಕೆಲಸಗಳು ಹಿಂದಿನ ವೇಗದಲ್ಲಿಯೇ ನಡೆಯುತ್ತಿವೆ ಎನ್ನುವುದು ಖಾಸಗಿ ಶಿಕ್ಷಣ ಸಂಸ್ಥೆಗಳ ಅಭಿಪ್ರಾಯವಾಗಿದೆ.

ಹಳೆಯ ವಿವಿಗಳ ಸೇರ್ಪಡೆಗೆ ಶಿಫಾರಸು

ಮುಖ್ಯ ವಿಚಾರ ಎಂದರೆ, ಯೋಜನೆಯು ಕೇಂದ್ರ ಸರ್ಕಾರದ ಅನುದಾನದಲ್ಲಿ ನಡೆಯುವ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ಅನ್ವಯವಾಗುತ್ತದೆ. ರಾಜ್ಯಗಳ ಅನುದಾನದಲ್ಲಿ ನಡೆಯುತ್ತಿರುವ ವಿಶ್ವವಿದ್ಯಾಲಯಗಳನ್ನು ಈ ಯೋಜನೆಯ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಕೇಂದ್ರದ ಸರ್ಕಾರಿ ಸ್ವಾಮ್ಯದ ಅನೇಕ ವಿಶ್ವವಿದ್ಯಾಲಯಗಳನ್ನೂ ಈ ಯೋಜನೆ ಒಳಗೊಂಡಿಲ್ಲ ಎಂದು ಸಂಸತ್ನ ಸ್ಥಾಯಿ ಸಮಿತಿ ಅಭಿಪ್ರಾಯಪಟ್ಟಿದೆ. ನಿದರ್ಶನಕ್ಕೆ, ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ ಸಮಾಜ ವಿಜ್ಞಾನ, ಮಾನವಿಕ ಮತ್ತು ಅಭಿವೃದ್ಧಿ ಅಧ್ಯಯನದಲ್ಲಿ ಜಾಗತಿಕ ಮಟ್ಟದಲ್ಲಿ ಹೆಸರು ಪಡೆದಿದೆ.

ಜತೆಗೆ, ಅತ್ಯಂತ ಹಳೆಯ ವಿದ್ಯಾಸಂಸ್ಥೆಗಳಾದ ಅಲಹಾಬಾದ್ ವಿವಿ, ಕಲ್ಕತ್ತಾ ವಿವಿ, ಬಾಂಬೆ ವಿವಿ, ಡಾ ಹರಿಸಿಂಗ್ ಗೌರ್ ವಿವಿ, ಮದ್ರಾಸ್ ವಿವಿ ದೇಶದ ಶಿಕ್ಷಣ, ವಿಜ್ಞಾನ ಮತ್ತು ಸಾಂಸ್ಕೃತಿಕ ರಂಗಗಳ ಬೆಳವಣಿಗೆಗೆ ಅಪಾರವಾದ ಕೊಡುಗೆ ನೀಡಿದ್ದು, ಉತ್ಕೃಷ್ಟ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಇವುಗಳನ್ನೂ ಒಳಗೊಳ್ಳಬೇಕು ಇಲ್ಲವೇ ಇವುಗಳಿಗಾಗಿ ಪ್ರತ್ಯೇಕ ಯೋಜನೆಯನ್ನಾದರೂ ಜಾರಿ ಮಾಡಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.

ಯೋಜನೆ ಸ್ಥಗಿತಗೊಂಡಿದೆಯೇ?

ಐಒಇಗಳನ್ನು ಆಯ್ಕೆ ಮಾಡುವುದರಿಂದ ಎಂಒಯುವರೆಗಿನ ಪ್ರಕ್ರಿಯೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ಉನ್ನತಾಧಿಕಾರ ಸಮಿತಿಯ ಮೂರು ವರ್ಷದ ಅವಧಿ 2021ರ ಫೆಬ್ರುವರಿಗೆ ಅಂತ್ಯಗೊಂಡಿದೆ. ನಂತರ ಮತ್ತೊಂದು ಸಮಿತಿಯ ರಚನೆ ಆಗಿಯೇ ಇಲ್ಲ. ಇದರಿಂದ ಈಗಾಗಲೇ ಯೋಜನೆಗೆ ಆಯ್ಕೆಯಾಗಿರುವ ನಾಲ್ಕು ಶಿಕ್ಷಣ ಸಂಸ್ಥೆಗಳ ಪ್ರಕ್ರಿಯೆ ಅರ್ಧದಲ್ಲೇ ನಿಂತಿದೆ. ಯೋಜನೆಗೆ ಅಗತ್ಯವಾದ ಧನಸಹಾಯ ಒದಗಿಸುವುದರಿಂದ ಹಿಡಿದು ಆಡಳಿತಾತ್ಮಕ ಅನುಕೂಲ ಒದಗಿಸುವವರೆಗೆ ಬಹುತೇಕ ಎಲ್ಲ ಸೌಲಭ್ಯಗಳೂ ಅನಿರೀಕ್ಷಿತವಾಗಿ ಬಂದ್ ಆಗಿವೆ. ಹಣಕಾಸಿನ ಕೊರತೆಯಿಂದ ಯೋಜನೆ ಮುಂದುವರಿಯುವುದು ಅನುಮಾನ ಎನ್ನಲಾಗುತ್ತಿದೆ. ಐಒಇಗಳೂ ಸೇರಿದಂತೆ ಉನ್ನತ ಶಿಕ್ಷಣಕ್ಕೆ ಖರ್ಚು ಮಾಡುವ ಮನೋಭಾವ ಕಾಣುತ್ತಿಲ್ಲ ಎನ್ನುತ್ತಿದ್ದಾರೆ ಶಿಕ್ಷಣ ತಜ್ಞರು.

ವಿ.ವಿ.ಗಳು ಹೆಚ್ಚಳ; ಆದರೆ, ಗುಣಮಟ್ಟ?

ದೇಶದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳು ಭಾರಿ ಪ್ರಮಾಣದಲ್ಲಿ (ಶೇ 13.8) ಹೆಚ್ಚಾಗುತ್ತಿವೆ. 2014–15ರಲ್ಲಿ 51,534 ಇದ್ದ ಇವುಗಳ ಸಂಖ್ಯೆ ಮೇ 2025ಕ್ಕೆ 70,683 ಏರಿಕೆಯಾಗಿದೆ. ಇದೇ ಅವಧಿಯಲ್ಲಿ ವಿಶ್ವವಿದ್ಯಾಲಯಗಳ ಸಂಖ್ಯೆಯು 760 ರಿಂದ 1,334ಕ್ಕೆ ಏರಿದೆ; ಐಐಟಿಗಳ ಸಂಖ್ಯೆ 16ರಿಂದ 23ಕ್ಕೆ, ಐಐಎಂಗಳ ಸಂಖ್ಯೆ 13ರಿಂದ 21ಕ್ಕೆ, ಎಐಐಎಂಎಸ್ಗಳ ಸಂಖ್ಯೆ 7ರಿಂದ 23ಕ್ಕೆ ಏರಿದೆ. ಆದರೆ, ಸಂಖ್ಯೆಯಲ್ಲಿ ಹೆಚ್ಚಳ ಆದಂತೆ ಗುಣಮಟ್ಟದಲ್ಲಿ ಅಭಿವೃದ್ಧಿಯಾಗಿಲ್ಲ ಎನ್ನುವ ದೂರು ವ್ಯಾಪಕವಾಗಿದೆ.

2013-14ರಲ್ಲಿ 3.2 ಕೋಟಿ ಇದ್ದ ಉನ್ನತ ಶಿಕ್ಷಣದ ವಿದ್ಯಾರ್ಥಿಗಳ ಸಂಖ್ಯೆ 2021-22ಕ್ಕೆ, 4.33, 2022–23ರಲ್ಲಿ 4.46 ಕೋಟಿಗೆ ಏರಿದೆ. ಇದರಲ್ಲಿ ಎಸ್ಸಿ, ಎಸ್ಟಿ, ಒಬಿಸಿ ವಿದ್ಯಾರ್ಥಿಗಳ ಸಂಖ್ಯೆಯೇ ಹೆಚ್ಚು. ಇವರು ಸರ್ಕಾರಿ ಸ್ವಾಮ್ಯದ ವಿಶ್ವವಿದ್ಯಾಲಯಗಳನ್ನೇ ಹೆಚ್ಚಾಗಿ ಅವಲಂಬಿಸಿರುವವರು. ಈ ವಿಶ್ವವಿದ್ಯಾಲಯಗಳ ಗುಣಮಟ್ಟ ಹದಗೆಟ್ಟರೆ, ಅದು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ.

ಪ್ರಸ್ತುತ ದೇಶದಲ್ಲಿ ಉನ್ನತ ಶಿಕ್ಷಣದ ಸ್ಥಿತಿ ಅಷ್ಟೇನೂ ಆಶಾದಾಯವಾಗಿಲ್ಲ. ಕೇಂದ್ರ ಬಜೆಟ್ನಲ್ಲಿ ಶಿಕ್ಷಣದ ಹಂಚಿಕೆ ಶೇ 4ರಿಂದ ಕೇವಲ ಶೇ 2.5ಕ್ಕೆ ಇಳಿದಿದೆ. ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿನ ಬೋಧಕ ಹುದ್ದೆಗಳ ಪೈಕಿ ಮೂರನೇ ಒಂದರಷ್ಟು ಇನ್ನೂ ಖಾಲಿ ಇವೆ. ಇನ್ನೊಂದೆಡೆ, ಉನ್ನತ ಶಿಕ್ಷಣ ಪಡೆದವರಿಗೆ ಉದ್ಯೋಗಾವಕಾಶಗಳು ಕ್ಷೀಣಿಸುತ್ತಿವೆ. ಐಐಟಿಗಳಲ್ಲಿ ಓದಿದವರಲ್ಲಿಯೂ ನಿರುದ್ಯೋಗ ಪ್ರಮಾಣ ಹೆಚ್ಚಾಗುತ್ತಿದೆ.

ರಾಷ್ಟ್ರೀಯ ಡಿಜಿಟಲ್ ವಿಶ್ವವಿದ್ಯಾಲಯ ಮತ್ತು ರಾಷ್ಟ್ರೀಯ ಕೌಶಲ ವಿಶ್ವವಿದ್ಯಾಲಯವನ್ನು ಆರಂಭಿಸಲಾಯಿತಾದರೂ, 2025–26ರ ಸಾಲಿನಲ್ಲಿ ಕೇವಲ 25 ಕೋಟಿ ಅನುದಾನ ಮೀಸಲಿಡಲಾಗಿದ್ದು, ಅದು ಅತ್ಯಲ್ಪವಾಗಿದೆ ಎಂದು ಸಂಸದೀಯ ಸ್ಥಾಯಿ ಸಮಿತಿ ವರದಿ ಹೇಳಿದೆ.

ಭಾರತದಲ್ಲಿ ಸಂಶೋಧನೆಗೆ ಮೀಸಲಿಟ್ಟ ವೆಚ್ಚ ಜಿಡಿಪಿಯ ಶೇ 0.64ಕ್ಕೆ ಕುಸಿದಿದೆ. ಸಂಶೋಧಕರ ಸಾಂದ್ರತೆ ಜಾಗತಿಕ ಸರಾಸರಿಗಿಂತ ಐದು ಪಟ್ಟು ಕಡಿಮೆ ಇದೆ. ವಿಜ್ಞಾನ, ತಂತ್ರಜ್ಞಾನಗಳ ನಾಗಾಲೋಟದ ಕಾಲದಲ್ಲಿ ಯುವಜನತೆಗೆ ಭವಿಷ್ಯದ ದಾರಿ ತೋರುವ ಶಕ್ತಿಯನ್ನು ಭಾರತೀಯ ವಿಶ್ವವಿದ್ಯಾಲಯಗಳು ಕಳೆದುಕೊಳ್ಳುತ್ತಿದ್ದು, ಇದರಲ್ಲಿ ಕೇಂದ್ರ–ರಾಜ್ಯ ಸರ್ಕಾರಗಳ ಪಾತ್ರವೂ ಇದೆ ಎನ್ನುವುದು ಮೈಸೂರು ವಿಶ್ವವಿದ್ಯಾಲಯ ನಿವೃತ್ತ ಕುಲಪತಿ ಪ್ರೊ.ರಂಗಪ್ಪ ಅವರ ವಿಶ್ಲೇಷಣೆ.

ರಾಜ್ಯಗಳಲ್ಲಿಯೂ ಇದೇ ಪರಿಸ್ಥಿತಿ ಇದೆ. ಜಿಲ್ಲಾವಾರು, ವಿಷಯವಾರು ವಿಶ್ವವಿದ್ಯಾಲಯಗಳು ಆರಂಭವಾಗುತ್ತಿವೆ. ಅವುಗಳಲ್ಲಿ ಮೂಲಸೌಕರ್ಯಗಳ ಕೊರತೆ ಇದೆ. ಅಧ್ಯಾಪಕರ ಕೊರತೆ ಅಂತೂ ತೀವ್ರವಾಗಿದೆ. ಇದಕ್ಕೆ ಮುಖ್ಯ ಕಾರಣ, ಆರ್ಥಿಕ ನೆರವಿನ ಕೊರತೆ. ಇದರಿಂದ ವಿಶ್ವವಿದ್ಯಾಲಯಗಳ ಮೂಲ ಆಶಯವೇ ಈಡೇರುತ್ತಿಲ್ಲ ಎನ್ನುತ್ತಾರೆ ಅವರು.

ಜಿಯೋ ಉತ್ಕೃಷ್ಟ ವಿವಿ ವಿವಾದ

ಮುಕೇಶ್ ಅಂಬಾನಿಯ ರಿಲಯನ್ಸ್ ಫೌಂಡೇಷನ್ನ ಜಿಯೊ ಇನ್ಸ್ಟಿಟ್ಯೂಟ್ಗೆ ಐಒಇ ಸ್ಥಾನಮಾನ ನೀಡುವುದಾಗಿ ಕೇಂದ್ರ ಸರ್ಕಾರವು ಘೋಷಣೆ ಮಾಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಇನ್ನೂ ಆರಂಭವೇ ಆಗದ ವಿಶ್ವವಿದ್ಯಾಲಯವನ್ನು ಯಾವ ಮಾನದಂಡಗಳ ಆಧಾರದಲ್ಲಿ ಉತ್ಕಷ್ಟ ಶಿಕ್ಷಣ ಸಂಸ್ಥೆ ಎಂದು ಗುರುತಿಸಲಾಗಿದೆ ಎಂದು ಶಿಕ್ಷಣ ತಜ್ಞರು ಪ್ರಶ್ನಿಸಿದ್ದರು.

ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆಗಳು ನಡೆದ ಹಿನ್ನೆಲೆಯಲ್ಲಿ ಈ ಬಗ್ಗೆ ಕೇಂದ್ರ ಸರ್ಕಾರವು ಸ್ಪಷ್ಟೀಕರಣ ನೀಡಿತು. ಜಿಯೊ ಇನ್ಸ್ಟಿಟ್ಯೂಟ್ಗೆ ಹೊಸ ಶಿಕ್ಷಣ ಸಂಸ್ಥೆಗಳ ಅಥವಾ ಗ್ರೀನ್ಫೀಲ್ಡ್ ಸಂಸ್ಥೆಗಳ ವಿಭಾಗದಲ್ಲಿ ಐಒಎ ಸ್ಥಾನಮಾನ ನೀಡಿರುವುದಾಗಿಯೂ, ಯೋಜನೆಯ ಮಾನದಂಡಗಳ ಅನುಸಾರವಾಗಿಯೇ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದೂ ಹೇಳಿತ್ತು.

ಆದರೆ, ಜಿಯೊ ಇನ್ಸ್ಟಿಟ್ಯೂಟ್ಗೆ ಐಒಎ ಸ್ಥಾನಮಾನ ನೀಡುವ ಪ್ರಕ್ರಿಯೆಯು ಇದುವರೆಗೂ ಪೂರ್ಣಗೊಂಡಿಲ್ಲ. ಕೇಂದ್ರ ನೇಮಿಸಿದ್ದ ಉನ್ನತಾಧಿಕಾರ ಸಮಿತಿ (ಇಇಸಿ) ಅವಧಿ ಮುಗಿದಿದ್ದು, ಇದುವರೆಗೂ ಮತ್ತೊಂದು ಸಮಿತಿ ರಚನೆಯಾಗಿಲ್ಲ. ಹೀಗಾಗಿ ಪ್ರಕ್ರಿಯೆಯು ಎಂಒಯು ಹಂತದಲ್ಲಿಯೇ ಸ್ಥಗಿತಗೊಂಡಿದೆ.

‘ಅನುಷ್ಠಾನದಲ್ಲಿ ಎಡವಿದ ಕೇಂದ್ರ’

‘ಕೇಂದ್ರ ಸರ್ಕಾರವು ತನ್ನ ಮಹತ್ವಾಕಾಂಕ್ಷಿ ಯೋಜನೆಯ (ಐಒಇ) ಜಾರಿಯಲ್ಲಿ ಎಡವಿದೆ. ಅಧಿಕಾರಿಶಾಹಿಯ ಜಡತ್ವ, ಹಣಕಾಸಿನ ಕೊರತೆ ಮತ್ತು ಸ್ವಾಯತ್ತೆಯ ಸಮಸ್ಯೆಗಳಿಂದ ವಿಶ್ವದರ್ಜೆಯ ಶಿಕ್ಷಣ ಸಂಸ್ಥೆಗಳನ್ನು ರೂಪಿಸುವ ಕೇಂದ್ರದ ಪ್ರಮುಖ ಯೋಜನೆಯು ಎಂಟು ವರ್ಷಕ್ಕೇ ಸ್ಥಗಿತಗೊಂಡಿದೆ’ ಎನ್ನುವುದು ರಾಯಚೂರಿನ ಸಂಸದ ಜಿ.ಕುಮಾರ ನಾಯಕ ಅವರ ಅಭಿಪ್ರಾಯ.

ಯೋಜನೆಯ ಪ್ರಗತಿಯ ಬಗ್ಗೆ ಅವರು ಲೋಕಸಭೆಯಲ್ಲಿ ಪ್ರಶ್ನೆ ಕೇಳಿದ್ದರು. 2017ರಿಂದ ದೇಶದ 114 ವಿ.ವಿ.ಗಳು ಐಒಇ ಮನ್ನಣೆಗಾಗಿ ಅರ್ಜಿ ಸಲ್ಲಿಸಿದ್ದು, ಅವುಗಳಲ್ಲಿ 11 ಗ್ರೀನ್ಫೀಲ್ಡ್ (ಇನ್ನೂ ಕಾರ್ಯಾರಂಭ ಮಾಡದ) ಸಂಸ್ಥೆಗಳು ಎಂದು ಶಿಕ್ಷಣ ಸಚಿವರು ಉತ್ತರಿಸಿದ್ದರು. ಆದರೆ, ಜವಾಹರಲಾಲ್ ನೆಹರೂ ವಿ.ವಿಯಂಥ ಹಲವು ಸಂಸ್ಥೆಗಳು ಐಒಇ ಮನ್ನಣೆ ಪಡೆಯಲು ಅರ್ಹವಾಗಿವೆ ಎನ್ನುವುದು ಸಂಸದ ನಾಯಕ ಅವರ ನಿಲುವು.

‘2026ರ ಕ್ಯು.ಎಸ್.ರ್ಯಾಂಕಿಂಗ್ನಲ್ಲಿ ದೇಶದ ಆರು ವಿ.ವಿಗಳು ಮಾತ್ರ 500ರ ಒಳಗೆ ಸ್ಥಾನ ಪಡೆದಿವೆ. ಆದರೆ, ಇವುಗಳ ಪೈಕಿ ಐದು ವಿ.ವಿಗಳು 2012ರಲ್ಲೇ ಪಟ್ಟಿಯಲ್ಲಿದ್ದವು. ಬಿಜೆಪಿ ಆಡಳಿತಕ್ಕೆ ಬಂದ ನಂತರ ಬೆಂಗಳೂರಿನ ಐಐಎಸ್ಸಿಯೂ ಪಟ್ಟಿಯಲ್ಲಿ ಸ್ಥಾನ ಪಡೆಯಿತು. ಆದರೆ, ವರ್ಷದಿಂದ ವರ್ಷಕ್ಕೆ ಅದರ ಸ್ಥಾನವೂ ಕುಸಿಯುತ್ತಿದೆ; 2016ರಲ್ಲಿ 147ನೇ ಸ್ಥಾನದಲ್ಲಿದ್ದ ಐಐಎಸ್ಸಿ, 2026ರ ಪಟ್ಟಿಯಲ್ಲಿ 219ನೇ ಸ್ಥಾನ ಪಡೆದಿದೆ’ ಎಂದು ವಿವರಿಸಿದರು.

‘2017ರಲ್ಲಿ ನಿಯಮ ಬದಲಾವಣೆ ಮಾಡಲಾಗಿದ್ದು, ಅನುದಾನದ ಬದಲು ಸಾಲ ನೀಡಲಾಗುತ್ತಿದೆ. ಇದರಿಂದ ಉನ್ನತ ಶಿಕ್ಷಣವು ದುಬಾರಿಯಾಗುತ್ತಿದೆ. ಜತೆಗೆ ಶಿಕ್ಷಣ ಸಂಸ್ಥೆಗಳಿಗೂ ಹೊರೆಯಾಗುತ್ತಿದೆ. ಚೀನಾ ಡೀಪ್ಸೀಕ್ನಂಥ ತಾಂತ್ರಿಕತೆ ಸೃಷ್ಟಿಸುವ ಮೂಲಕ ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಅದ್ಭುತ ಪ್ರಗತಿ ಸಾಧಿಸಿ ಮುನ್ನಡೆಯುತ್ತಿದ್ದರೆ, ನಾವು ವಿ.ವಿಗಳಲ್ಲಿ ಬೋಧಕರ ಹುದ್ದೆ ಭರ್ತಿ ಮಾಡಲು ಹೆಣಗಾಡುತ್ತಿದ್ದೇವೆ’ ಎಂದರು.

ವಿದ್ಯಾರ್ಥಿಗಳ ಚಿತ್ತ ವಿದೇಶಗಳತ್ತ

ಭಾರತದಲ್ಲೇ ವಿಶ್ವದರ್ಜೆಯ ಉತ್ಕೃಷ್ಟ ಶಿಕ್ಷಣ ಸಂಸ್ಥೆಗಳನ್ನು ರೂಪಿಸುವ ಯೋಜನೆ ಅರ್ಧದಲ್ಲೇ ನಿಂತಿದೆ. ಭಾರತಕ್ಕೆ ವಿದೇಶಿ ವಿಶ್ವವಿದ್ಯಾಲಯಗಳನ್ನು ಸೆಳೆಯುವ ದಿಕ್ಕಿನಲ್ಲಿ ಕೇಂದ್ರ ಸರ್ಕಾರವು ಪ್ರಯತ್ನ ನಡೆಸಿತಾದರೂ, ಅದು ಕೂಡ ಯಶ ಕಾಣಲಿಲ್ಲ. ಭಾರತದ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡಲು ವಿದೇಶಗಳ ವಿದ್ಯಾರ್ಥಿಗಳನ್ನು ಸೆಳೆಯುವ (ಸ್ಟಡಿ ಇನ್ ಇಂಡಿಯಾ) ಪ್ರಯತ್ನ ಮಾಡಿತು. ಆದರೆ, ಅದಕ್ಕೆ ವಿದೇಶಿ ವಿದ್ಯಾರ್ಥಿ ಗಳಿಂದ ಉತ್ತಮ ಸ್ಪಂದನೆ ಸಿಗಲಿಲ್ಲ.

ಭಾರತದಿಂದ ಹೆಚ್ಚಿನ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗುತ್ತಿದ್ದು, ಈ ಪಟ್ಟಿಯಲ್ಲಿ ದೇಶವು ಜಗತ್ತಿನಲ್ಲಿ ಎರಡನೇ (ಚೀನಾ ಮೊದಲು) ಸ್ಥಾನದಲ್ಲಿದೆ. ಕೇಂದ್ರ ಸರ್ಕಾರದ ಅಂಕಿಅಂಶಗಳ ಪ್ರಕಾರ, ಭಾರತದಿಂದ 2020ರಲ್ಲಿ 6.85 ಲಕ್ಷ ವಿದ್ಯಾರ್ಥಿಗಳು, 2021ರಲ್ಲಿ 11.58 ಲಕ್ಷ, 2022ರಲ್ಲಿ 9 ಲಕ್ಷ, 2023ರಲ್ಲಿ 13.18 ಲಕ್ಷ ಮತ್ತು 2024ರಲ್ಲಿ 13.35 ಲಕ್ಷ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ವಿದೇಶಗಳಿಗೆ ತೆರಳಿದ್ದಾರೆ. ಕೆನಡಾ, ಬ್ರಿಟನ್, ಆಸ್ಟ್ರೇಲಿಯಾ ಮತ್ತು ಅಮೆರಿಕ ಭಾರತದ ವಿದ್ಯಾರ್ಥಿಗಳ ನೆಚ್ಚಿನ ರಾಷ್ಟ್ರಗಳಾಗಿವೆ. ಸಾಲಸೋಲ ಮಾಡಿ ವಿದೇಶಗಳಿಗೆ ಉನ್ನತ ಶಿಕ್ಷಣಕ್ಕೆ ಹೋಗುತ್ತಿರುವ ಪ್ರವೃತ್ತಿಗೆ ಹಲವು ಕಾರಣಗಳಿದ್ದು, ಅದರಲ್ಲಿ ದೇಶದ ಉನ್ನತ ಶಿಕ್ಷಣ ವ್ಯವಸ್ಥೆಯು ಸಮಸ್ಯೆಗಳೂ ಕಾರಣ ಎನ್ನುವ ವಿಶ್ಲೇಷಣೆ ಇದೆ.

ಅಮೆರಿಕ, ಕೆನಡಾ ಸೇರಿದಂತೆ ಹಲವು ದೇಶಗಳು ತಮ್ಮ ನಿಯಮಗಳನ್ನು ಬಿಗಿಗೊಳಿಸುತ್ತಿದ್ದು, ಭಾರತದ ವಿದ್ಯಾರ್ಥಿಗಳಿಗೆ ದಿನೇ ದಿನೇ ಹೊಸ ಸಂಕಷ್ಟ, ಸವಾಲುಗಳು ಎದುರಾಗುತ್ತಿವೆ. ಭಾರತದಲ್ಲಿಯೇ ಉತ್ತಮ ವಿಶ್ವವಿದ್ಯಾಲಯಗಳು ರೂಪುಗೊಂಡರೆ, ವಿದೇಶಗಳಿಗೆ ವಿದ್ಯಾಭ್ಯಾಸಕ್ಕಾಗಿ ತೆರಳುವವರ ಸಂಖ್ಯೆ ಕಡಿಮೆಯಾಗಿ, ಅದಕ್ಕಾಗಿ ಅವರು ಮಾಡುವ ವೆಚ್ಚ ಉಳಿಯಲಿದೆ. ಐಒಇಗಳನ್ನು ರೂಪಿಸುವ ಯೋಜನೆ ಯಶಸ್ಸಿಯಾಗಿ ಮುಂದುವರಿಸಿದ್ದರೆ ದೇಶದ ಯುವಜನರು ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶಗಳಿಗೆ ಹೋಗುವುದನ್ನು ತಡೆಯಬಹುದಿತ್ತು, ವಿದೇಶಗಳ ವಿದ್ಯಾರ್ಥಿಗಳನ್ನೂ ಸೆಳೆಯಬಹುದಿತ್ತು ಎನ್ನುತ್ತಾರೆ ಪ್ರೊ. ರಂಗಪ್ಪ.

ಪಾರದರ್ಶಕ ಆಡಳಿತ, ಸಮರ್ಪಕ ಹಣಕಾಸು ಹಾಗೂ ನಿಜವಾದ ಸ್ವಾಯತ್ತೆಯ ಮೂಲಕ ಮಾತ್ರವೇ ಭಾರತದಲ್ಲಿ ಜಾಗತಿಕ ಮಟ್ಟದ ವಿಶ್ವವಿದ್ಯಾಲಯಗಳನ್ನು ರೂಪಿಸಲು, ಯುವಜನಾಂಗದ ಕನಸುಗಳು ಸಾಕಾರಗೊಳ್ಳುವಂಥ ಶೈಕ್ಷಣಿಕ ವಾತಾವರಣ ನಿರ್ಮಿಸಲು ಸಾಧ್ಯ ಎನ್ನುವುದು ಶಿಕ್ಷಣ ತಜ್ಞರ ಅಭಿಮತವಾಗಿದೆ.

ಪರಿಕಲ್ಪನೆ: ಯತೀಶ್ ಕುಮಾರ್ ಜಿ.ಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.