ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದೋರ್ | ಕಾಂಗ್ರೆಸ್ ಅಭ್ಯರ್ಥಿ ಕಣದಿಂದ ಹಿಂದಕ್ಕೆ; ಬಿಜೆಪಿ ನಾಯಕಿಯ ಬೇಸರ

Published 4 ಮೇ 2024, 13:35 IST
Last Updated 4 ಮೇ 2024, 13:35 IST
ಅಕ್ಷರ ಗಾತ್ರ

ಭೋಪಾಲ್‌: ಇಂದೋರ್‌ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಕಾಂಗ್ರೆಸ್‌ ಅಭ್ಯರ್ಥಿ ಅಕ್ಷಯ್‌ ಕಂಟಿ ಬಾಮ್‌ ಅವರು ಕೊನೇ ಕ್ಷಣದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿರುವ ಬಗ್ಗೆ ಲೋಕಸಭೆಯ ಮಾಜಿ ಸ್ಪೀಕರ್‌ ಸುಮಿತ್ರಾ ಮಹಾಜನ್‌ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದು ನ್ಯಾಯಸಮ್ಮತವಲ್ಲ ಎಂದಿರುವ ಅವರು, ತಮ್ಮ ಕ್ಷೇತ್ರದ ಅಭ್ಯರ್ಥಿಯನ್ನು ಪ್ರಜಾಸತ್ತಾತ್ಮಕವಾಗಿ ಆಯ್ಕೆ ಮಾಡುವ ಹಕ್ಕು ಮತದಾರರಿಗೆ ಇದೆ ಎಂದು ಒತ್ತಿ ಹೇಳಿದ್ದಾರೆ.

ನಾಮಪತ್ರ ಹಿಂಪಡೆಯಲು ಕೊನೇ ದಿನವಾಗಿದ್ದ ಏಪ್ರಿಲ್‌ 29ರಂದು ಕಣದಿಂದ ಹಿಂದೆ ಸರಿದಿದ್ದ ಅಕ್ಷಯ್‌, ಕೇಸರಿ ಪಕ್ಷವನ್ನು ಸೇರಿದ್ದರು. ಇದರಿಂದ ಕಾಂಗ್ರೆಸ್‌ಗೆ ಭಾರಿ ಹಿನ್ನಡೆಯಾಗಿದೆ.

ಈ ಕುರಿತು ಸಂದರ್ಶನದಲ್ಲಿ ಮಾತನಾಡಿರುವ ಮಹಾಜನ್‌, 'ಪ್ರಮುಖ ವಿರೋಧ ಪಕ್ಷವಾಗಿರುವ ಕಾಂಗ್ರೆಸ್‌ ಅಭ್ಯರ್ಥಿ ಇಂದೋರ್‌ನಲ್ಲಿ ನಾಮಪತ್ರ ಹಿಂಪಡೆದಿರುವುದನ್ನು ಕೇಳಿ ಅಚ್ಚರಿಯಾಯಿತು. ಹೀಗಾಗಬಾರದಿತ್ತು. ಇಂದೋರ್‌ನಲ್ಲಿ ಬಿಜೆಪಿಯನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ ಎನ್ನುವಂತಹ ವಾತಾವರಣವಿದೆ. ಹಾಗಾಗಿ, ಈ ಬೆಳವಣಿಗೆ ಅಗತ್ಯವಿರಲಿಲ್ಲ' ಎಂದಿದ್ದಾರೆ.

ಮಧ್ಯಪ್ರದೇಶದ ವಾಣಿಜ್ಯ ರಾಜಧಾನಿಯಾಗಿರುವ ಇಂದೋರ್‌ ಬಿಜೆಪಿಯ ಭದ್ರಕೋಟೆಯಾಗಿದೆ. ಮಹಾಜನ್‌ ಅವರು ಈ ಕ್ಷೇತ್ರವನ್ನು 1989ರಿಂದ 2019ರ ವರೆಗೆ ಸತತ 8 ಅವಧಿಗೆ ಪ್ರತಿನಿಧಿಸಿದ್ದರು.

'ಕಾಂಗ್ರೆಸ್‌ ಅಭ್ಯರ್ಥಿ ಈ ರೀತಿ ಮಾಡಬಾರದಿತ್ತು. ಅವರು ತಮ್ಮ ಪಕ್ಷಕ್ಕೂ ಮೋಸ ಮಾಡಿದ್ದಾರೆ' ಎಂದು ಬೇಸರ ವ್ಯಕ್ತಪಡಿಸಿರುವ ಮಹಾಜನ್‌, ಈ ಪರಿಸ್ಥಿತಿಗೆ ಕಾರಣವೇನು ಎಂಬುದು ಗೊತ್ತಿಲ್ಲ ಎಂದೂ ಹೇಳಿದ್ದಾರೆ.

81 ವರ್ಷದ ಬಿಜೆಪಿ ನಾಯಕಿ, 'ವಾಸ್ತವವಾಗಿ ಏನಾಗಿದೆ ಎಂಬುದು ನನಗೆ ಗೊತ್ತಿಲ್ಲ. ಒಂದುವೇಳೆ ಇದನ್ನೆಲ್ಲ ನಮ್ಮವರೇ ಮಾಡಿದ್ದರೂ ಅದು ತಪ್ಪು. ಹಾಗೆ ಮಾಡುವ ಅಗತ್ಯವಿರಲಿಲ್ಲ. ಕಾಂಗ್ರೆಸ್‌ ಅಭ್ಯರ್ಥಿ ತಾನಾಗಿಯೇ ಹೀಗೆ ಮಾಡಿದ್ದರೂ, ಈ ರೀತಿ ಮಾಡಬಾರದಿತ್ತು ಎಂದು ಅವರಿಗೂ ಹೇಳುತ್ತೇನೆ' ಎಂದಿದ್ದಾರೆ.

'ಜನರು ತಮ್ಮಿಷ್ಟದ ಸರ್ಕಾರವನ್ನು ಆರಿಸುವುದಕ್ಕಾಗಿಯೇ ಪ್ರಜಾಪ್ರಭುತ್ವವಿರುವುದು. ಅದಕ್ಕಾಗಿಯೇ ಚುನಾವಣೆಗಳನ್ನು ನಡೆಸುವುದು' ಎಂದು ಹೇಳಿದ್ದಾರೆ.

'ಮತದಾರರಿಗೆ ಮನವರಿಕೆ ಮಾಡಿದ್ದೇನೆ'
'ನಾಮಪತ್ರ ವಾಪಸ್‌ ಬೆಳವಣಿಗೆಯು ಇಂದೋರ್‌ ಇತಿಹಾಸದಲ್ಲಿ ಇದೇ ಮೊದಲು' ಎಂದಿರುವ ಮಹಾಜನ್‌, 'ಕೆಲವು ವಿದ್ಯಾವಂತ ಮತದಾರರು ನನಗೆ ಕರೆ ಮಾಡುತ್ತಿದ್ದಾರೆ. ಬಿಜೆಪಿಯ ನಡೆಯಿಂದ ಬೇಸರವಾಗಿದೆ. ಚುನಾವಣೆಯಲ್ಲಿ NOTA ಚಲಾಯಿಸುತ್ತೇವೆ ಎಂದು ಹೇಳುತ್ತಿದ್ದಾರೆ' ಎಂದಿದ್ದಾರೆ.

'ಇದರಲ್ಲಿ ಬಿಜೆಪಿಯ ಪಾತ್ರವಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ನಮ್ಮ ಪಕ್ಷವು ಸೈದ್ಧಾಂತಿಕ ರಾಜಕಾರಣ ಮಾಡುತ್ತಿದೆ. ನಮ್ಮ ಅಭ್ಯರ್ಥಿ (ಶಂಕರ್‌ ಲಲ್ವಾಣಿ) ಕಣದಲ್ಲಿದ್ದು, ನೋಟಾ ಒತ್ತುವ ಬದಲು ಅವರಿಗೇ ಮತ ಚಲಾಯಿಸುವಂತೆ ಮನವರಿಕೆ ಮಾಡಿದ್ದೇನೆ' ಎಂದು ತಿಳಿಸಿದ್ದಾರೆ.

ಶಂಕರ್‌ ಅವರು 2019ರ ಚುನಾವಣೆಯಲ್ಲಿ ತಮ್ಮ ಪ್ರತಿಸ್ಪರ್ಧಿ, ಕಾಂಗ್ರೆಸ್‌ನ ಪಂಕಜ್‌ ಸಂಘ್ವಾನಿ ಅವರನ್ನು ಬರೋಬ್ಬರಿ 5 ಲಕ್ಷದ 48 ಸಾವಿರ ಮತಗಳ ಅಂತರದಿಂದ ಮಣಿಸಿದ್ದರು.

ರಾಜ್ಯದಲ್ಲಿ ಅತಿಹೆಚ್ಚು (25.13 ಲಕ್ಷ) ಅರ್ಹ ಮತದಾರರನ್ನು ಹೊಂದಿರುವ ಇಂದೋರ್‌ ಕ್ಷೇತ್ರಕ್ಕೆ ಮತ್ತೆ ಶಂಕರ್‌ ಅವರನ್ನೇ ಕಣಕ್ಕಿಳಿಸಿರುವ ಬಿಜೆಪಿ, ಈ ಬಾರಿ 8 ಲಕ್ಷ ಮತಗಳ ಅಂತರದಿಂದ ಗೆಲ್ಲಿಸುವಂತೆ ಮನವಿ ಮಾಡಿದೆ.

ಇಂದೋರ್‌ ಬೆಳವಣಿಗೆಗೂ ಮುನ್ನ, ಗುಜರಾತ್‌ನ ಸೂರತ್‌ನಲ್ಲಿ ಚುನಾವಣೆಗೂ ಮುನ್ನವೇ ಬಿಜೆಪಿ ಅಭ್ಯರ್ಥಿ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ನೀಲೇಶ್‌ ಕುಂಭಾನಿ ಅವರ ನಾಮಪತ್ರ ತಿರಸ್ಕೃತಗೊಂಡು, ಉಳಿದ 8 ಅಭ್ಯರ್ಥಿಗಳು ಕಣದಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ, ಬಿಜೆಪಿಯ ಮುಖೇಶ್ ದಲಾಲ್‌ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸೂರತ್‌ನಲ್ಲಿ ಏನಾಯಿತು ಎಂಬುದು ತಮಗೆ ಗೊತ್ತಿಲ್ಲ ಎಂದು ಮಹಾಜನ್‌ ಸ್ಪಷ್ಟಪಡಿಸಿದ್ದಾರೆ.

'ರಾಹುಲ್ ಕ್ಷೇತ್ರ ಬದಲಿಸಲಿ ಬಿಡಿ'
ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಕಳೆದ ಚುನಾವಣೆಯಲ್ಲಿ ಸೋಲು ಕಂಡಿದ್ದ ಅಮೇಠಿ ಬದಲು ಈ ಬಾರಿ ರಾಯ್‌ಬರೇಲಿಯಿಂದ ಸ್ಪರ್ಧಿಸುತ್ತಿದ್ದಾರೆ. ಈ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಹಾಜನ್‌, 'ರಾಹುಲ್‌ ಗಾಂಧಿ ಅವರು ರಾಷ್ಟ್ರವ್ಯಾಪಿ ಪ್ರವಾಸ ಮಾಡಿದ್ದು ಪ್ರಯೋಜನಕ್ಕೆ ಬರಲಿಲ್ಲವೇ?' ಎಂದು ಕೇಳಿದ್ದಾರೆ. ಹಾಗೆಯೇ, 'ಕ್ಷೇತ್ರ ಬದಲಿಸುತ್ತಿದ್ದಾರೆ ಎಂದರೆ ಬದಲಿಸಲಿ ಬಿಡಿ. ಅದು ಒಳ್ಳೆಯದೇ' ಎಂದಿದ್ದಾರೆ.

ವಿರೋಧ ಪಕ್ಷದಲ್ಲಿರುವ ರಾಹುಲ್‌ ಅವರು, ಸರಿಯಾದ ದೃಷ್ಟಿಕೋನದಲ್ಲಿ ಇಡೀ ದೇಶದ ಕಡೆಗೆ ನೋಡಬೇಕು. ಹಾಗಿದ್ದಾಗ ಮಾತ್ರ, ದೇಶದ ಮೂಲ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಲು ಹಾಗೂ ದೇಶಕ್ಕಾಗಿ ಧ್ವನಿ ಎತ್ತಲು ಸಾಧ್ಯ ಎಂದು ವಿವರಿಸಿದ್ದಾರೆ.

'ದೊಡ್ಡ ಗುರಿ ಇಟ್ಟುಕೊಳ್ಳದಿರುವುದೇ ಅಪರಾಧ'
ಈ ಬಾರಿ 400 ಸ್ಥಾನ ಗೆಲ್ಲುತ್ತೇವೆ ಎಂಬ ಬಿಜೆಪಿ ಘೋಷಣೆ ಕುರಿತು ವಿರೋಧ ಪಕ್ಷಗಳು ಮಾತನಾಡುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಾಜಿ ಸ್ಪೀಕರ್‌, 'ವರ್ಷಪೂರ್ತಿ ಶ್ರದ್ಧೆಯಿಂದ ಅಭ್ಯಾಸ ಮಾಡಿದ ವಿದ್ಯಾರ್ಥಿಯು ಪ್ರಥಮದರ್ಜೆಯಲ್ಲಿ ಉತ್ತೀರ್ಣನಾಗುತ್ತೇನೆ ಎಂದರೆ ಆತನ ಹೇಳಿಕೆಯನ್ನು ವಿಲಕ್ಷಣವಾಗಿ ನೋಡುವುದೇಕೆ?' ಎಂದು ಮರು ಪ್ರಶ್ನೆ ಹಾಕಿದ್ದಾರೆ. ಹಾಗೆಯೇ, 'ದೊಡ್ಡ ಗುರಿ ಇಟ್ಟುಕೊಳ್ಳದಿರುವುದೇ ಅಪರಾಧ' ಎಂದು ಪ್ರತಿಪಾದಿಸಿದ್ದಾರೆ.

ದೇಶದ ಅಭಿವೃದ್ಧಿ, ಪೌರತ್ವ ತಿದ್ದುಪಡಿ ಕಾಯ್ದೆಯ (ಸಿಎಎ) ಜಾರಿಗೊಳಿಸುವುದು ಹಾಗೂ ಸಂವಿಧಾನದ 370ನೇ ವಿಧಿ ಅಡಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆದಿರುವುದರ ಆಧಾರದ ಮೇಲೆ ಬಿಜೆಪಿಯು 400 ಕ್ಷೇತ್ರಗಳನ್ನು ಗೆಲ್ಲುವುದಾಗಿ ಘೋಷಿಸುತ್ತಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT